ಪುಷ್ಪಾಂಜಲಿ

ಸ್ವಾಮಿಯಡಿಗೆ ಶಿರಬಾಗಿ ಬಂದೆವಿದೊ ಎಲ್ಲ ಸೀಮೆಯಿಂದ,
ಅರಿವು-ಮರೆವು ಕಣ್ದೆರೆದು ಕರೆದ ಆ ಪೂರ್‍ವಸ್ಮರಣೆಯಿಂದ.
ನೀಲದಲ್ಲಿ ತೇಲಾಡೆ ಗಾಳಿಪಟ ಕೃಪಾಸೂತ್ರದಿಂದ.
ಕಂಡೆವೇಸೊ ನೆಲ-ಜಲದ ಚೆಲುವ ನೀವಿತ್ತ ನೇತ್ರದಿಂದ.

ಎತ್ತರೆತ್ತರಕೆ ಹಾರಿ ಏರಿದರು ಕೋತಿ ಹೊಡೆಯದಂತೆ,
ದಿಕ್ಕು ದಿಕ್ಕುಗಳ ಗಾಳಿ ಜಗ್ಗಿದರು ಬಿಲ್ಲು ಮಣಿಯದಂತೆ,
ನೂರು ಸೊಲ್ಲು ಗುಲ್ಲಿನಲು ಎಲ್ಲೊ ಮಿಡಿದಿಹುದು ಏಕನಾದ
ಆ ನಾದ ಹಿಡಿದು ಬಂದೇವು ನಾವು ಕರುಣಿಸಿರಿ ತಮ್ಮ ಪಾದ.

ಶ್ರೀಮದಥಣಿ ಶಿವಯೋಗಿ ಸೇವೆಯಲಿ ಸಮೆದ ಭಾವಶುದ್ಧಿ
ಸಕಲಕೆಲ್ಲ ಶಿವಭಜನೆ, ಜೀವದಾಸೋಹ-ಕಾರ್‍ಯಸಿದ್ಧಿ.
ಧಾರವಾಡದುತ್ತರದಿ ಬಂದು ಬಿತ್ತರಕೆ ನೋಟ ಹರಿಸಿ
ಎಲ್ಲರನ್ನು ಹತ್ತಿರ ಕರೆದು ಹರಸಿದಿರಿ ಪರುಷವೆನಿಸಿ.

ಮನವ ನೆನಿಸಿ ಮಡಿಮಾಡಿ ಮತ್ತೆ ಮಾಡಿದಿರಿ ಕಂತಿಭಿಕ್ಷೆ.
ಆಕಾಶವನ್ನ ಜೋಳಿಗೆಯ ಮಾಡಿ ಬೇಡುವರೆ ಚಂದ್ರ ಚಿಕ್ಕೆ?
ಬಸವ ಪ್ರಮಥರಾ ಪುರಾತನರು ನೀಡಿರುವ ನೆರಳು-ನಕ್ಷೆ
ಅಲ್ಲೆ ಸಂಜೆ ಮುಂಜಾವಿನಲ್ಲಿ ತಂ ಪ್ರದಕ್ಷಿಣೆಯ ರಕ್ಷೆ.

ಭಕ್ತರಲ್ಲಿ, ನೆರೆ ಮುಕ್ತರಲ್ಲಿ, ಸಲೆ ಪರಿತ್ಯಕ್ತರಲ್ಲು
ಒಂದೆ ಉಕ್ತಿ, ಅವ್ಯಕ್ತ ಭಾವ ತೆರೆದಿಟ್ಟ ಹೃದಯದಲ್ಲು.
ಮುಖವು ಎಲ್ಲಿ? ಬರಿ ಮುಗ್ಧಹಾಸ, ಕಣ್ದೆರೆಯೆ ದುಗ್ಧಸಿಂಧು!
ಸಂಜೆಗಿರಣ ನೆಯ್ದಿರುವ ಕಾವಿ ಆ ಮೇಘಲಿಂಗಕೆಂದು!

“ವ್ಯರ್ಥವಲ್ಲ ಶಿವ ಕೊಟ್ಟ ವಸ್ತು ಕಸಬರಿಗಿ ಕಡ್ಡಿ ಕೂಡ.
ಅರ್‍ತಿಯಿಂದ ಪುಟ ತೆರೆಯಬೇಕು ಅಪನವರ ವಚನ ನೋಡ:
ಮಾವಿನೆಲೆಯ ನೀ ಮಾಡಬಲ್ಲೆಯಾ, ಯಾವ ಬಣ್ಣದಿಂದ?
ನಾನು ನೀನು, ಏನೇನೊ ಮೂಡಿ ಬಂತದೇ ಮಣ್ಣಿನಿಂದ.

“ದುಡಿಯಬೇಕು, ನೆಲ ಕಡಿಯಬೇಕು, ಹೋರಾಡಬೇಕು ಜೀವ
ಪಡೆದು-ಕೊಟ್ಟು ಕೊಂಡಾಡಬೇಕು ಸರ್‍ವಾಂಗಲಿಂಗ ಜಗವ.
ಕಟಕು ರೊಟ್ಟಿ ಮೆಣಸ್ಹಿಂಡಿ ತಿಂದು ಮೇಲೊಂದು ಗುಟುಕು ನೀರು-
ಕಟೆದ ಹಾಗೆ ಈ ಮೂರ್‍ತಿ-ಮಾಟ, ಆ ಮೇಲೆ ಗುಡಿಯು, ತೇರು”.

ನಿಮ್ಮ ಮಾತು ದಿಟಪುಟವು ಸ್ಫಟಿಕ ಅದಕಿಲ್ಲ ಬೇರೆ ತಂತ್ರ,
ತಮ್ಮ ಗೀತ ತಾ ಭಕ್ತಿಸ್ರೋತ ಚಿನ್ಮಯದ ಸುಪ್ರಭಾತ.
ನಂಬಿ ನಚ್ಚಿ ನಮ್ಮೆದೆಯ ಬಿಚ್ಚಿ ದಯಮಾಡಿಸಿದಿರಿ ಬುದ್ಧಿ
ನಿಮ್ಮ ಕರುಣೆ ಕಂಡರಿಸಿತೆಮ್ಮ, ನಾವೇನು ಮಣ್ಣಮುದ್ದಿ.

ತೆಂಗುಗರಿಯ ಚಾಮರವು, ಸುತ್ತು ಸಂಪಿಗೆಯ ತಂಪುಗಾಳಿ
ಚೆಂಗುಲಾಬಿ, ಮಲ್ಲಿಗೆಯು, ಬಕುಳ, ಸೇವಂತಿ ರಂಗುತಾಳಿ;
ನಡುವೆ ಬೆಳ್ಳಬೆಳಕಾಗಿ ಮಾಗಿ ಶಿವಯೋಗಿ ಕುಲುಕುಲೆಂದು
ನಗುತಲಿಹವು ಆ ಸೂರ್‍ಯ ಚಂದ್ರ ಸಾಷ್ಟಾಂಗದಲ್ಲಿ ಮಿಂದು.

ಎಲ್ಲಿ ನೋಡಿದರು ಬಿಲ್ವಪತ್ರಿ ಶಿವಕಳೆಯು ಚಿದ್ವಿಭೂತಿ
ಅಷ್ಟಕೋಟಿ ರೋಮಂಗಳೆಲ್ಲ ಶಿವಲಿಂಗವಾದ ರೀತಿ!
ಕೇಳು ಪ್ರಾರ್‍ಥನೆಯ ಗಂಟೆ, ಏಳು ಬರಲಿಹುದು ನಮ್ಮ ಸರತಿ
ಜಾತ್ರೆ ಮುಗಿದು ಶಿವರಾತ್ರಿಯಾಯ್ತು, ಶ್ರಾವಣಕೆ ತುಂಬುಭರತಿ.

ನಿಮ್ಮ ಬಯಕೆ ಬಂಗಾರ ಖಣಿಯು ಅಸರಂತ ಗ್ರಂಥಮಾಲೆ
ತೋಡಿದಷ್ಟು ಹೊರಮೂಡಿಬಂತು ಅದು ನಿಮಗೆ ಬಾಲಲೀಲೆ.
ಬೇರೆಯಲ್ಲ, ಶಿವಯೋಗಿ ಪ್ರೇರಣಾಭರಣ ಶರಣಸತಿಗೆ
ಪ್ರಣವರೂಪಕರ್‍ಪಣವು ಸರ್‍ವಸಮರಸವು ಲಿಂಗಪತಿಗೆ.

ದೊರೆಯಬಹುದೆ ದರುಶನವು ದಿವ್ಯಸ್ಪರ್‍ಶನದ ಜೀವನಾದ?
ಎರೆದು, ಹೊಚ್ಚಿ ಎದೆ ಹಾಲು ತೊರೆವ ಪಾದೋದಕ ಪ್ರಸಾದ?
ಇರವಿನಲ್ಲಿ ಆ ತೆರವು ತುಂಬಿ ತೆರೆಯಾಡುವಂತೆ ಕಡಲು
ಅರಿವಿನೊಂದು ಹೊಸ ಬರವಿಗಾಗಿ ಹಾತೊರೆಯುತಿಹುದು ಒಡಲು.

ಹೋದರತ್ತ, ಇದು ಬಂದರಿತ್ತ, ಇದಕೆಲ್ಲಿ ಗಟ್ಟಿ ನೆಲೆಯು?
ಬುಟ್ಟಿಹೊತ್ತು ಮಾರುವರ ಕರೆದು ಕೇಳಿದರೆ ತುಟ್ಟಿಬೆಲೆಯು!
ಹರಗಿ ಬಿತ್ತಿ, ಹಂತಿಯಲಿ ತಿರುಗಿ ನೀ ಸ್ವಂತ ರಾಶಿಮಾಡು,
ಇಷ್ಟು ದಿವಸ ಕಡಮಾಡಿ ಇನ್ನು ತಡಮಾಡಬಹುದೆ ಹೇಳು.

ಮರ್ತ್ಯವನ್ನೆ ಮಹಮನೆಯ ಗೈದ ಮೃತ್ಯುಂಜಯನ ಚರಣ
ಶರಣಭಾವದಲಿ ಕಿರಣಿಸಿಹುದು ಪುಷ್ಪಾಂಜಲಿಯ ಸ್ಮರಣ.
ಇರುಳು ಮೌನ ತಿಳಿಗೊಂಡು ಅರಳಿ ನರುಗಂಪು ನಸುಕು ಹರಿದು
ಕಿವಿಯೊಳಿಂತು ಉಚ್ಚರಿಸಿತಣ್ಣ ಎಚ್ಚರಿಸಿ ದೂರ ಕರೆದು.

ಆದಿ ಮಧ್ಯೆ ಮಂಗಳವು ಸರ್ವಮಂಗಳಕು ನೀವೆ ಮುಂದು
ಹಿಂದೆ ಎಂದು ಕಂಡಿರದ ಹೊಚ್ಚ ಹೊಸ ಪರ್‍ವಕಾಲವಿಂದು:
ತಂದೆ ಬಂದೆವಿದೊ ತುಂಬುನಂಬಿಗೆಯ ಹಡಗದಲ್ಲಿ ಕುಳಿತು
ಜಯಾಜಯ ನಮಃ ಪಾರ್ವತೀಪತೇ ಮಹಾದೇವ ಜಯತು.
*****
ಧಾರವಾಡ ಮುರುಘಾಮಠದ ಲಿಂ. ಮೃತ್ಯುಂಜಯ ಮಹಾಸ್ವಾಮಿಗಳ ೭ಂನೆಯ ವರ್‍ಧಂತ್ಯುತ್ಸವದ ಸಂದರ್‍ಭ.