ಸ್ಪರ್‍ಶ

ಕೂತಲ್ಲಿ ಕೂರದೆ ಅತ್ತಿತ್ತ ಹಾರಿ
ಬೇಲಿಯ ಮೇಲೆ ತೇಲಿ
ಇಳಿಯಿತು ಪಂಚರಂಗಿ ಚಿಟ್ಟೆ

ಅದು ಕೂರುವವರೆಗೆ
ಸದ್ದು ಮಾಡದೆ ಕಾದ ತರಳೆ
ರೆಕ್ಕೆಯ ನೋವಾಗದಂತೆ
ಹಿಡಿದಳು ಎರಡೇ ಬೆರಳಲ್ಲಿ

ಅವಳ ಮೈಯ ಮೇಲಿನ ಕಪ್ಪು
ಮಚ್ಚೆಯ ಚಿಕ್ಕ ಗೋಲಗಳು-
ಕೈಯ ಬೆರಳುಗಳ ನುಣುಪು-
ಚಿಟ್ಟೆಯ ಚಡಪಡಿಸುವ ರೆಕ್ಕೆಗಳಿಗೆ

ಸಡಿಲ ಬೆರಳುಗಳ ನಡುವಿನಿಂದ
ಯಾವ ಮಾಯದಲ್ಲೋ
ಜಾರಿ ತಪ್ಪಿಸಿಕೊಂಡ ಚಿಟ್ಟೆ
ಉಳಿಸಿಹೋಯಿತು ಅದೇ
ಬಣ್ಣದ ಗಳಿಗೆ

ಅವಳ ಮೈಯಲ್ಲೀಗ
ಚಿಟ್ಟೆಯ ಚಂಚಲತೆ
*****
ಭಾವನಾ ಏಪ್ರಿಲ್ ೨೦೦೦

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.