ಅರಿತರೂ ಅರಿವುಗೊಡದಂತೆ ಕಪ್ಪು ಮುಸುಕನು
ಎಳೆದು, ಧಾತ್ರಿಯನು ತನ್ನೆದೆಗೆ ಸೆಳೆದುಕೊಂಡಿದೆ
ರಾತ್ರಿ. ಜಾರು ಬಂಡೆಯ ಮೇಲೆ ಕುಳಿತು ಜಾರಿದೆ
ಹೀಗೆ ಪ್ರತಿಸಲವು ಖಾತ್ರಿ. ಬೆಳಗು ಬೈಗನು
ದುಃಖ ಸುಖದ ಸಮಶೀತೋಷ್ಣದೊಳಗದ್ದಿ, ನಡು-
ವಗಲು ಕುದಿಸಿ, ಒಣಗಿಸಿ; ನಟ್ಟಿರುಳು ಮೆತ್ತಗೆ
ಹಾಸಿ ಮೈಮರೆಸಿ, ಸಣ್ಣಗೆ ದೀಪ ಜಿನುಮಿನುಗೆ-
ಏನೊ ತೀರದ ಅಥವ ತೋರಲಾರದ ಕುರುಡು
ದಂಡೆಯೊಳಾಟ. ನಡುನೀರ ತಿರುಗಣಿಗೆ ಕನಸು
ಕಾಣುವ ದೋಣಿ, ಮುಂದೆಲ್ಲೊ ಜಲಪಾತದಬ್ಬ-
ರ. ತಳದ ಸೆಳವಿನ ಗುಂಟ ಕರಂಟು, ಇವನೊಬ್ಬ-
ಕಣ್ಗಂಡ ಹಬ್ಬದಲಿ ಇವನಿಗೆಲ್ಲೋ ಮನಸು.
ಇರುಳಿನಲಿ ಬಾನಿಳೆಯ ಬಿಚ್ಚಲಾರದ ಬೆಸುಗೆ
ಹಗಲು ಹೆಚ್ಚಿದ ಹೋಳು, ಮುಚ್ಚಿಕೊಂಡುದು ಹೇಗೆ?
*****
