೧
ಇದೋ ಕಡಲು !
ಅದೋ ಮುಗಿಲು !
ಬಾಯ್ದೆರೆದಿವೆ ಒಂದಕೊಂದು ಅನಂತತೆಯ ಹೀರಲು!
ಎನಿತೆನಿತೋ ಹಗಲು ಇರುಳು
ತೆರೆಗಳ ಹೆಗಲೇರಿ ಬರಲು
ನೆಲವನಳಲ ಮಳಲಿನಲ್ಲಿ ಹುಗಿದು ಮುಂದೆ ಸಾಗಿವೆ!
ಋತು ಋತುಗಳು ಓತು ಬಂದು
ನದೀ ಮುಖದಿ ಕೂಗಿವೆ!
ಬೆಟ್ಟ ಬೆಟ್ಟ ಬೆಂಬಳಿಸಿವೆ-
ಗುಟ್ಟನರಿಯದಂತಿವೆ;
ಘಟ್ಟವೇರಿ ಘಟ್ಟವಿಳಿದು ಹಸಿರು ಪಟ್ಟವೇರಿದೆ !
ಬಾನಿನೆದೆಯ ಭವ್ಯತೆಗಿದೋ
ಕಡಲು ಹಿಡಿದ ಕನ್ನಡಿ !
ಬೇಡ ಬೇರೆ ಮುನ್ನುಡಿ.
೨
ಅಗೋ ಅಲ್ಲಿ !
ಉಸಿರ್ಕಟ್ಟಿ ದ್ವೀಪ ಮೇಲಕೆದ್ದಿವೆ
ನೀಲನಿದ್ದೆಗೈದಿವೆ.
ಹಾಯಿ ಬಿಚ್ಚಿ ಹಾಯಾಗಿವೆ ;
ದೋಣಿ ತೆರೆಯನೇರಿವೆ
ನೀರಿನಲ್ಲಿ ರಂಟೆ ಹೊಡೆದು ಹಡಗು ಕ್ಷಿತಿಜವನಡರಿದೆ !
ಕೊರೆದ ಹರಿದ ನೀರಘಾಯ
ಮಟಮಾಯವಾಗಿದೆ.
ಈ ಪಡುವಣ ತೀರದಲ್ಲಿ
ತೀರದಂಥ ಮೊರೆತವೊ!
ಆಖಾತವೊ ಭೂಶಿರವೊ
ತೇಲುತಿರುವ ತೆಪ್ಪವೊ
ದೇಶಾಂತರದಾಸೆವೀಚಿ ಇದರುದರದಿ ಬೆರೆತವೊ !
ತೆರ ತೆರೆಗಳು ಬಂದರದಲಿ ನೊರೆಯ ತೂರಿ ತೂರಿ
ಬರೆಯುತ್ತಿವೆ ದಿನಚರಿ!
೩
ಅಲೆ ಅಲೆ ಅಲೆ ತೇಲಿಬರುವದಲ್ಲ ದೋಣಿ ಬಿನದ!
ಅಂಬಿಗರುಲಿ ನಿನದ;
ತುಣುಕು ಮೀನು
ಮಿಣುಕು ಮೀನು
ಅಣಕಿಸಿ ಪಾರಾದವೇನು?
ಬಿದ್ದವದೋ ಬುಟ್ಟಿಗೆ
ರಾಶಿ ರಾಶಿ ಒಟ್ಟಿಗೆ !
ಮೀಂಬುಲಿಗನ ಹಕ್ಕಿ ಕೊಕ್ಕಿನಲ್ಲಿ ಕಚ್ಚಿ ಹಾರಿತು
ಬಲೆಗೆ ಬಿದ್ದ ಮೀನು ಮಾತ್ರ ವಿಲಿವಿಲಿ ಒದ್ದಾಡಿತು !
ಬೊಕ್ಕುದಲೆಯ ಬರಿಮೈಯ
ಮಕ್ಕಳು ಮುಗಿಬಿದ್ದಿವೆ.
ಅವರ ಪಾಲಿಗಷ್ಟು ಇಷ್ಟು ಕಡಲು ಕೊಟ್ಟ ಕಾಣಿಕೆ
ಮತ್ಸ್ಯಗಂಧಿ ಯೋಜನಸುಗಂಧಿಯಾದಳೆಂಬ ವಾಡಿಕೆ !
೪
ಮೊನ್ನೆ ಮೊನ್ನೆ ಯುದ್ಧವಾಯ್ತು ಮನುಕುಲದುದ್ದಾರಕೆ!
ಕಳೆಯಲೆಂದೆ ಬಂದಿತೆನ್ನಿ
ದೇಶ ದಿಗ್ದೇಶಗಳ
ಶಾಂತಿಯ ಬಾಯಾರಿಕೆ ;
ನೆಲ ಬಾನ್ಗಳು ಸಾಲಲಿಲ್ಲ
ಕಡಲಿಗು ಕಿಡಿ ಸಿಡಿಯಿತು
‘ಉದ್ಧರೇದಾತ್ಮನಾತ್ಮಾನಂ’
ಜಲಸುರಂಗ ಹಬ್ಬಿತು!
ಹಡಗು ಹಡಗು ಬುಡಮೇಲು
ಸುತ್ತು ತೋಪುಗಾವಲು;
ನಾಗರಿಕತೆ ಮುಗಿಲಿಗೇರಿ
ಬಾಂಬಿನ ಮಳೆಗರೆಯಿತು
ಆಗಸವೇ ಅದುರಿತು!
ಕಡಲು ದಂಡೆಗಪ್ಪಳಿಸಿತು
ಚಪ್ಪರಿಸಿತು ನಾಲಗೆ
ಈ ಯುದ್ದದ ಮದ್ದು ಗುಂಡು
ಸಾಲಬೇಕು ಅದರ ಯಾವ ಮೂಲೆಗೆ ?
೫
ಇದೋ ಕಡಲು
ಅದೋ ಮುಗಿಲು
ಬಾಯ್ದೆರೆದಿವೆ ಒಂದಕೊಂದು ಅನಂತತೆಯ ಹೀರಲು
ಉರುಳುತ್ತಿಹ ಭೂಗೋಲದ ಆಯುಷ್ಯವು ತೀರಲು
ಅದೂ ಬೊಕ್ಕು ಬೋರಲು !
*****