ಅದು ಹೇಗೋ
ಏಕಕಾಲಕ್ಕೆ ಬೆಣಚಿಕಲ್ಲುಜ್ಜಿ
ಬೆಂಕಿ ಕಿಡಿ ಹೊಳೆದ ಹಾಗೆ
ತಿಳಿದೇ,
ತಿಳಿಯದ ಹಾಗೆ
ಭುಜಕ್ಕೆ ಭುಜ ತಾಗಿಸಿ
ಮೈಯ್ಯೆಲ್ಲ ಮಕಮಲ್ಲು.
ರಾತ್ರಿ ಸಣ್ಣಗೆ ಗಾಳಿ
ಬೆನ್ನಹುರಿಯಲ್ಲಿ ಸಿಳ್ಳೆ ಹೊಡೆದಂತೆ.
ಶವರ್‍ರಿನಡಿ ಕಪ್ಪು ಗುಂಗುರ ಬಳಸಿ
ಮೈಯ್ಯೆಲ್ಲ ಮುತ್ತಿಟ್ಟು
ಕೆಳಗೆ ಜಾರುವ ನೀರು.
ಹೆಗಲಿಗೆ ಹೆಗಲ ಕೊಟ್ಟು
ಹೊಕ್ಕುಳ ಬಿಸಿಗೆ ಕೆನ್ನೆಯಿಟ್ಟು
ಕಣ್ಣಲ್ಲೇ ಖುಷಿಪಟ್ಟ ಕನಸಿನಂಥ
ನನಸುಗಾರ
ಮತ್ತೆ ಬಂದಾನು,
ಮಾತನಾಡದೆ ಮುತ್ತಿಟ್ಟು
ಬೂದಿ ಕೆದಕಿ ಕಿಚ್ಚು ಹಚ್ಚುವುದಕ್ಕೆ.
ಹಾಸಿಗೆಯ ತುಂಬ ಹರಡಿ ನೆನಪುಗಳ
ಅರಿವೆ ತಪ್ಪಿ ಕಾಯುವ ಹಾದಿ
ಎದೆಯೊಳಗೆ ಬಿಕ್ಕುಗಳು ತಣ್ಣಗೆ
ಮೈ ನಡುಗಿ ಸಣ್ಣಗೆ,
ಮೂಗ ತುದಿಯಲ್ಲಿ ಹೊಳೆವ ನತ್ತು
ಕತ್ತಿನ ಸುತ್ತ ಸಣ್ಣ ಮುತ್ತಿನಹಾರ.
*****