ಹೀಗೊಂದು ದಿನ ಕಾಯುತ್ತಾ

ನೆನಪಿನಾಳದಿಂದ ಘಂ ಎಂದಿತ್ತು
ಬೆಳ್ಳಿ ನೀಲಾಂಜನದ ಸುಟ್ಟ ತುಪ್ಪದ ಬುತ್ತಿ
ಬಾದಾಮಿ, ಖರ್ಜೂರ, ದ್ರಾಕ್ಷಿ, ಗೋಡಂಬಿ
ಚಿಗುಳಿ, ಎಳ್ಳುಂಡೆ; ತಟ್ಟೆ ತುಂಬ ತಿಂಡಿ
ಬಟ್ಟಲಲಿ ಕಾದ ಕೇಸರಿ ಹಾಲು…..

ಹನಿ ಹನಿ ಮಳೆ ಬಿದ್ದು
ತೇವವಾಗಿತ್ತು ನೆಲ
ಮಣ್ಣ ವಾಸನೆ ಘಂ ಎಂದು
ಗಾಳಿಯಲಿ ಹಬ್ಬಿ
ಸುಳಿದಿತ್ತು ಊರ ಕೇರಿಯ ತುಂಬ.

ಹೀಗೆ,
ಕಾಯುತ್ತಾ ನಿಮಿಷಗಳ
ಕೂಡುತ್ತಾ…. ಕಳೆಯುತ್ತಾ…..
ಕತ್ತಲ ಚತ್ರಗಳ ಜೋಡಿಸುತ್ತಿತ್ತು ಮನಸು
…. …. …. ….
….. ….. ….. …..
ಗಡಿಯಾರದಲ್ಲಿ ತಾಸು ಅಷ್ಟೇ
ಕುಂಟುವ ಮುಳ್ಳುಗಳಿಗೇಕಿಂದು
ಇಷ್ಟು ಸುಸ್ತು?

ಗೋಡೆ ಮೂಲೆಗೆ ಅಲ್ಲಿಂದಿಲ್ಲಿ
ಜೇಡ ನಡಿಗೆ ನೆಯ್ದ ಬಲೆ
ಸುಮೊ ಆಟಗಾರ ಜೀಕುಹಾಕಿ
ಇದರೊಳಕ್ಕೆ ಜಿಗಿದರೆ ಹೇಗೆ?
ನಿಮಿಷ ನಿಂತು, ಮುನ್ನಡೆದಳು
ಜೇಡನ ಜೇಡ್ತಿ.

ಬಿಸಿಗಾಲಿಗೆ ರೆಕ್ಕೆ ಬೆರೆಸಿ
ಬೆವರ ಸಿಂಪಡಿಸಿ
ತಿರುಗುತ್ತಿತ್ತು ಫ್ಯಾನು,
ಮೋಡ ಮುಚ್ಚಿದೆ ಹೊರಗೆ
ಒಳಗೆ ಚಾಚಿದೆ ಮಬ್ಬು…..

ಕಣ್ಣು ಮುಚ್ಚಿದ್ದೆ ತಡ
ಸರ ಸರ ಸರಿವ
ಮಿಂಚು ಹುಳುಗಳಂತೆ
ಏನೇನೋ ಚತ್ರಗಳು
ಒಂದರ ಮೇಲೊಂದರಂತೆ
ಹರಿದು ಹೊರಟ್ಟಿತ್ತು
ನೆನಪು
ಸರಿ ಸರಿದು ಸಾಗಿತ್ತು
ಕತ್ತಲಲಿ ಕಣ್ಣ ಮುಂದೆ.

ಮನೆಯ ಹೊರಗಿನ ಗೇಟು
ಕಿರ್‍ರೆಂದ ಸದ್ದು?
ಬಾಗಿಲಿಗೆ ಮನ ಕೊಟ್ಟೆ
ಬೆರಳು ಕುಟ್ಟಿದ ಸದ್ದು?
ಕರೆಗಂಟೆ ಕೆಟ್ಟಿದೆಯೊ?

ದಡಬಡಿಸಿ ಮೇಲೆದ್ದು
ತೆರೆದ ಬಾಗಿಲಿನಾಚೆ
ಕಪ್ಪಗೆ ಮಲಗಿತ್ತು ಖಾಲಿ ರಸ್ತೆ.
*****