ಮುಳುಗುತಿಹ ನೇಸರನು ಮುದಿಸಿಂಹನಂತಾಗಿ
ಪಶ್ಚಿಮಾದ್ರಿಯ ಗವಿಯ ಸೇರುತಿಹನು;
ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ
ಲೋಗರೆಡೆ ಕೆಕ್ಕರಿಸಿ ನೋಡುತಿಹನು!
ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ
ಕಪ್ಪು ಬಾವುಟವತ್ತಿ ತೋರಿಸಿಹುದು-
ಪಕ್ಷಿಸಂಕುಲ ಕೆಲೆದು ಬಿಡುಗಡೆಯ ಹಿಗ್ಗಿನಲಿ
ಹಾಡಿ ಜಯಜಯಕಾರ ಗೈಯುತಿಹುದು.
ಹಗಲ ಉರಿವಿಸಿಲ ಸಾಮ್ರಾಜ್ಯಶಾಹಿಯು ಉರುಳಿ
ಪಡುವ ಕಡಲಿನ ಹಡಗವೇರುತಿರಲು
ಸಂಧ್ಯಾ ಸಮೀರನದೂ ಸ್ವಾತಂತ್ರ್ಯ ಸಂದೇಶ
ಹೊತ್ತು ನಾಲ್ದೆಸೆಗಳಲಿ ಹರಡುತಿಹನು.
ಬಿತ್ತರದ ಬಾನಿನಲಿ ಮತ್ತೆ ಜನತಾ ರಾಜ್ಯ
ಮೆರೆಯುತಿದೆ ಚಿಕ್ಕೆಯ ಪ್ರಜಾಪ್ರಭುತ್ವ-
ವ್ಯಕ್ತಿ-ಶಕ್ತಿಯ ಗುಣವಿಕಾಸ ಪ್ರಕಾಶದಲಿ
ಜಗವ ಬೆಳಗುವುದದರ ಮೂಲತತ್ತ್ವ.
ಆಕಾಶಗಂಗೆ ಶಾಸನ ಸಭೆಯನೇರ್ಪಡಿಸಿ
ಮಂತ್ರಿ ಮಂಡಲವನ್ನು ನಿರ್ಮಿಸಿಹುದು;
ಬುಧ ಬ್ರಹಸ್ಪತಿ ಶುಕ್ರ ಶನಿ ಮಂಗಳಾದ್ಯರನು
ವಿವಿಧ ಮಂತ್ರಿಗಳಾಗಿ ನೇಮಿಸಿಹುದು.
ಕೃತ್ತಿಕೆಯು ಮೃಗಶಿರವು ಸಪ್ತರ್ಷಿ ಮಂಡಲವು
ರಾಜಕೀಯದ ಪಕ್ಷಪಂಗಡವೆನೆ
ದಕ್ಷಿಣೋತ್ತರ ಧ್ರುವದ ರಾಯಭಾರಿತ್ವದಲಿ
ಮುಖ್ಯಮಂತ್ರಿಯು ಚಂದ್ರನಾಗಿರುವನೆ?
ಬಿಡುಗಡೆಯ ಸೌಭಾಗ್ಯ ಪಡೆದ ಬಾನಿನೊಳಿಂತು
ಶಾಂತಿ ಸಮದರ್ಶಿತ್ವ ತಂಪಿನಿರುಳು-
ಬಡವ ಬಲ್ಲಿದರೆನದೆ ಸಮತೆಯಲಿ ತಣಿಸಿಹುದು
ಸರ್ವರಿಗೂ ಸಮಪಾಲು ಬೆಳದಿಂಗಳು.
*****