ಇಲ್ಲಿ!
ಎರಡು ಬಂಡೆಗಳ ಬಿರುಕಲ್ಲಿ
ನುಸುಳಿದರೆ ಮೆಲ್ಲಗೆ….
ಎಲ್ಲಿ ಕೊಂಡೊಯ್ಯುತ್ತದೋ ಈ ಕತ್ತಲು
ತನ್ನೊಳಗೆ ಅವಿಸಿಕೊಂಡು
ಹನಿ ಹನಿ ಹುಲ್ಲು ಹುಲ್ಲೆ
ಜೀವ ಜಂತುಗಳ ವಾಸನೆಯ ಆಘ್ರಾಣ
ತೆರೆಯ ಬಿಟ್ಟರೆ
ಕಣ್ಣಿಗೆ
ಕತ್ತಲ ಮೈದಡವುತ್ತಾ ತೆವಳುವ ಕಸುಬು
ಬಿರುಕು ಮೈ, ಒರಟು ಕೈ……
ಬಂಡೆಗಳ ಅಪ್ಪುಗೆಯ ತಪ್ಪಿ
ಜಾರುವ ತುಂತುರು ಬೆಳಕಲ್ಲಿ
ಹೊಳೆವ ಹನಿ ಹನಿ ಬೆವರು.
ಮತಂಗ ಪರ್ವತಕ್ಕೆ
ಅಂಗಾಂಗನ್ನೇ ಹೀರಿ ಬಿಡುವ ವ್ಯಾಮೋಹ
ಉತ್ತುಂಗ ಶಿಖರದ
ತುತ್ತ ತುದಿಯ ತಳಕ್ಕೆ
ಕಾಣುವುದು,
ಪಾಳು ಬಿದ್ದ (ವಿಜಯನಗರದ)
ವೇಶ್ಯಾವಾಟಿಕೆಯ ವೈಭವ.
*****