ಹೃದಯದರವಿಂದವೇ ಮನದ ಮಂದಾರವೇ
ಒಳುಗುಂದದಮಲ ಸೌರಭಸಾರವೆ!
ಅರಳಿರುವ ದಲದಲದಿ ನಿನ್ನ ಪದತಲವಿರಿಸಿ
ಚಿತ್ತೈಸು ನನ್ನೊಲವೆ ನನ್ನ ಬಲವೆ!
ತೆಳ್ಳತೆಳ್ಳನೆ ತೀಡಿ ಮೆಲ್ಲಮಲ್ಲನೆ ಹಾಡಿ
ಒಯ್ಯನೊಯ್ಯನೆ ಒಲಿವ ತಂಗಾಳಿಯು
ನಿನ್ನುಸಿರ ನರುಗಂಪು ನಿಚ್ಚಪ್ರಸಾದವದು
ಪ್ರಣವನಾದವಗೈವ ಶೃಂಗಾಳಿಯು!
ಹಾಲು ಬೆಳದಿಂಗಳಿನ ಕೆನೆಯ ರುಚಿ ನೋಡಿದೊಲು
ಮನದ ಮೊನೆಯಲಿ ನಿನ್ನ ಹೆಸರ ಕುಸುರು;
ತಳಿರ ಜೊಂಪದ ಮರೆಗೆ ಕೋಗಿಲೆಯು ಹಾಡಿದೊಲು
ಸಾಧನಾರಾಧನೆಯ ಜೀವದುಸಿರು.
ಸೂರ್‍ಯಕಾಂತದ ಶಿಲೆಗೆ ಕಿರಣ ಕೇಂದ್ರೀಕರಣ
ಮನಸಿನೇಕಾಗ್ರತೆಯೆ ಚಿಜ್ಯೋತಿಯು;
ಶಾಂತ ಕಾಂತಿಯ ತಳೆದ ಕಣ್ಣೆ ಜ್ಯೋತಿರ್‍ಲಿಂಗ
ಅಂತರಂಗವನಂತ ಗರ್‍ಭಗುಡಿಯು.
ಧ್ಯಾನ ಮನನದ ವಾಣಿ ವೀಣಾ ವಿತಾನದಲಿ
ಜೀವ ತಳೆಯುವ ಭಾವಗೀತೆಯಂತೆ;
ಒಂದು ಬೆಳಕಿನ ಕಿರಣ ನೂರೊಂದು ದಲಗಳನು
ಪುಲಕಿಸುತ ಪಾವನತೆ ಬೀರುವಂತೆ.
ಅಲ್ಲಿಂದ ಇಲ್ಲಿಂದ ಎಲ್ಲಿಂದಲೂ ಬರಲಿ
ಬಂದುದೆಲ್ಲವು ನಿನ್ನ ಬೆಳಕಿನಿಂದ
ಅನುಭವವು ಅನುಭಾವವಾಗಿ ಜೀವನ ಮಾಗಿ
ಹೂವಾಗಿ ಹರಡಿರಲಿ ಆ ಸುಗಂಧ!
ನಿಲುವುಗನ್ನಡಿ ನೋಡಿ ತಿದ್ದಿ ತೀಡುವ ಯುವತಿ
ತನ್ನ ಚೆಲುವಿಗೆ ತಾನೆ ನಲಿಯುವಂತೆ
ಶಬ್ದ ಮುಕುರದಿ ಕವಿಯು ತನ್ನತನವನು ಕಂಡು
ಮುಗ್ಧ ಕಾವ್ಯಾನಂದ ಪಡೆಯುವಂತೆ,
ಎಲ್ಲೆಲ್ಲಿಯೂ ನಿನ್ನ ಇರವಿನನುಭವ ಬಂದು
ಒಳಗು ಹೊರಗೂ ಸಾಮರಸ್ಯ ನಿಂದು
ಎತ್ತ ಬಿದ್ದರು ನಿನ್ನ ಅಂಕಪರ್‍ಶಂಕದೊಳೆ
ತಳ್ಳಂಕಗೊಳ್ಳದಿಹ ಯೋಗವೆಂದು?
*****