ಬಾಳಕೊಳಗುಳದಲ್ಲಿ ಚೀರಾಡಿ ಬೋರಾಡಿ
ಬಡಬಡಿಸಿ ಅಟ್ಟುಂಡುದೇನು ಜೀವ?
ದಿನಬೆಳಗು ಅವರಿವರ ಬಾಯಮಾತಿನ ಕಂತೆ
ಮೋಡಿಯಲಿ ಕಳೆದರೇನೆದೆಯ ನೋವ?
ತಲೆಗೊಂದು ನುಡಿಯುವರು, ಪಂಥವನೆ ಹೂಡುವರು
ತಾವೆ ಅತಿರಥರೆಂತದು ಸಾರುತಿಹರು;
ಅರೆಗೊಡದ ಬುಡುಬುಡಿಕೆ ಅಲ್ಪತೆಯ ತೋರ್ಪಡಿಕೆ
ತಥ್ಯವಿಲ್ಲದ ಹೊಟ್ಟ ತೂರುತಿಹರು.
ಗಂಭೀರ ಗಿರಿಯೆದುರು ಬಿರುಗಾಳಿ ಗುಲ್ಲು.
ತುಂಬಿದಂಬರದಲ್ಲು ಶಾಂತಮಯ ಸೊಲ್ಲು.
ಮೌನ-ಗಾನ-ಧ್ಯಾನ ತವಸಿಯಂತಾಗು
ಬಾಳಿನುಯ್ಯಾಲೆಯನು ತಾಳ್ಮೆಯಲ್ಲಿ ತೂಗು.
*****