ಸಿಗಲಿ ಪ್ರತಿಯೊಬ್ಬನಿಗೊಂದು ಗಟ್ಟಿ ತಲೆದಿಂಬು
ಅಥವಾ ದಿಂಬಿದ್ದವನಿಗೊಂದು ಗಟ್ಟಿತಲೆ
ಗಟ್ಟಿಯೆಂದರೆ ಗಟ್ಟಿ
ಮುಟ್ಟಾದ ತಲೆ ಕಲ್ಲಿನಂಥಾ
ಖರ್‍ಚಾದ ಬ್ಯಾಟರಿ ಸೆಲ್ಲಿನಂಥಾ ತಲೆ
ಮತ್ತೆ ಹಾಸಿರಲಿ ಮೆತ್ತನೆ ಮೆತ್ತೆ ಮಂಚ ಸುತ್ತಾ
ಹಾಯಾಗಿ ತೂಗಿ ಬಿದ್ದಿರಲಿ
ಮಾಯಾ ಮಚ್ಛರದಾನಿ
ಬೀಳಲೋ
ಹಾಯಾದ ನಾಲಿಗೆ
ಕತ್ತರಿಸಿಕೊಂಡ ಕಣ್ಣು ಕೀಳಿಸಿಕೊಂಡ
ಕಾಣದ ಕಬಂಧ ತೆಕ್ಕೆಗೆ
ಬೋಳೊಡ್ಡಿ ಹಾ
ಮಾಲೀಶಿಗೆ ಕೂತುಕೊಂಡ
ತತ್ಪರ ಕನಸು
ಏನೂ ತಟ್ಟದ ಚುಚ್ಚದ ಇಂಥ
ಬ್ರಹ್ಮಾನಂದದ
ತುರೀಯ ನಿದ್ರೆಯ
ಆ ಸ್ವಾತಂತ್ರ್ಯ ಸಗ್ಗದಲ್ಲಿ
ಹೇ ತಂದೆ ನನ್ನಾಡು ಕಣ್ದೆರೆಯಲಿ!
*****
