ಶ್ವೇತಪುತ್ರಿ

ಗಾಳಿಯ ಬೆರಳಿಗೆ ಬೆಳ್ಳಿಯ ಉಂಗುರ
ತೊಡಿಸುತ ಬರುತಿಹ ಒಯ್ಯಾರಿ!
ಹೊಗೆಯ ಸುರುಳಿಗಳ ಅರಳಿನ ಮಾಲೆಯ
ಕೊರಳಿಗೆ ಸೂಡುವ ಸುಕುಮಾರಿ!

ಬಿಳಿಯ ಪತ್ತಲದ ತೆಳ್ಳನೆಯುಡುಗೊರೆ
ಕೆಂಗಿಡಿ ಕೆಂಬರಳಿನ ನತ್ತು,
ನಿರಾಭರಣ ಸುಂದರಿ ಸುವಿಲಾಸಿನಿ
ಕಲಿಸಿದರಾರೀ ಹೊಸ ಗತ್ತು?

ಸುಳಿಗಾಳಿಗೆ ಬಲು ಬಳುಕುತ ನಟಿಸುವ
ಒಪ್ಪಿಡಿ ನಡುವಿನ ಹೊಗೆ ರಾಣಿ!
ಒಂದೇ ಸೆಳೆತಕ ತುಟಿಗಳ ಮುದ್ರಿಕೆ
ನಿನ್ನಯ ಹೆಸರೇ “ಜೇನುಹನಿ”.

ಮೊದಮೊದಲಿಗೆ ಹಿರಿಕಿರಿಯರಿಗಂಜುತ
ಕಟ್ಟೇಕಾಂತದಿ ನೀನೊಲಿದೆ;
ಕಿತ್ತಿಳೆ ತೊಳೆ-ತುಟಿ ಮಧುರಿಮೆ ಹೀರಲು
ಮುತ್ತಿನ ಸತ್ತಿಗೆ ನೀನಾದೆ!

ಎಂದಾದರು ನೀನಿರದಿರೆ ಬರದಿರೆ
ವಿರಹದಿ ಕೊರಗುವೆನೇಕಾಕಿ;
ಜುರಿಯೊಂದೆಳೆತಕೆ ಯೋಚನೆ ಮಾಲಿಕೆ
ಭಾವೋದ್ರೇಕವು ಧೂಮಾಕ್ಷಿ |

ಚಿತ್ರವಿಚಿತ್ರದ ಹೊಗೆಗೆರೆ ಮೂಡಿಸಿ
ಸೂತ್ರದ ಗೊಂಬೆಯನಾಡಿಸುವಿ,
ಬಯಲೊಳು ಧೂಮಸ್ತೂಪವ ನಿಲ್ಲಿಸಿ
ಬಾನ್ನೆಲವನ್ನಾಲಿಂಗಿಸುವಿ!

ಧೂಮ್ರಪಾನದೀ ಧೂಪಾರತಿಯೊಳೆ
ಜ್ಞಾನೋಪಾಸನೆಗೆಯ್ಯಿಸುವಿ
ಧ್ಯಾನದಿ ಮನನದಿ ವೈನತೇಯನೊಲು
ಅಮೃತಾಚಲವನ್ನೈದಿಸುವಿ!

ಗುರಿನಿರಿಯಿಲ್ಲದ ಗರಿಗರಿ ಮೋಡದ
ಸರಿದೊರೆಯಾಗಲು ಹಣಗುತಿಹೆ;
ಸುಂಟರಗಾಳಿಯ ಬಂಟನ ದಾಳಿಗೆ
ಕಂಟಣಿಸುತ ಕರಕರಗುತಿಹೆ!

ಮೋದದಿ ಸೇದಲು ಸೂದೆಯನು ಕುಡಿಸುವೆ
ಎದೆಯುರಿ ಸಹಿಸುತ ಕಲ್ಯಾಣಿ,
ಬಿಳಿ ಹೊಗೆ ಬೆಳ್ಗೊಡೆ ಚಾಮರದಡಿಯಲಿ
ಹಾಡಿ ಹರಸುವಳು ಗೀರ್ವಾಣಿ!

ಶಿವ ಶಿವ ಶಂಭೋ ಚಿಲುಮೆಯ ತುಂಬೋ
ನಾನೆ ಸ್ವಯಂಭೂ ಇನ್ನಿಲ್ಲ;
ಬಾರಿಸು ಡಮರುಗ, ಕುಣಿಯಲಿ ಭೃಂಗಿಯು
ಕೈಲಾಸದ ಸುಖ ಬೇರಿಲ್ಲ!
*****