ಉಡುಪಿ

ಮಣಿಪಾಲದ ಗುಡ್ಡದಾಸ್ಪತ್ರೆಯಿಂ
ದಿಳಿದು ತೇಲಿ ಬರುವ ಘಂ ಘನ ಗಂಭೀರ
ಸ್ಪಿರಿಟ್‌’ ಲೈಸಾಲ್‌ ವಾಸನೆಗೂ
ಮೂಗು ಮುರಿದು ತೆಕ್ಕೆ ಮುದುಡಿ ಮುದುಡಿ
ಮಲಗಿ ಪಕ್ಕಾಗುವ ಅನಾದಿ ರೋಗಿ: ಉಡುಪಿ

ಈ ಉಡುಪಿಯಲ್ಲಿ
ನಾನಾ ಉಡುಪಿನಲ್ಲಿ
ಕುಸಿಯುತ್ತಿರುವ ಮೀಸೆ ಹುಡುಗರು
ಕ್ಲೀಷೆ ಹುಡುಗಿಯರು-ದಣಿಯುವದಿಲ್ಲ
ಮಠದ ಸುತ್ತಾಮುತ್ತಾ ಮಲ್ಲಿಗೆ ಮಾರಾಟ
ಗುಳ್ಳ ತುಂಬಿದ ಬುಟ್ಟಿ ಮತ್ತೆ ತುಳುವಲ್ಲಿ ಟುರ್ ಓಡುವ ರಿಕ್ಷಾ
ಧೋ ಧೋ ಯಾ ಹನಿ ಹನಿ ಮಳೆ
ಮತ್ತೆ ಎತ್ತಿ ಕಟ್ಟಿ ಚಿಟ್ಟೆ ಚಿಟ್ಟೆ ಥರ ನಡೆವ ಹೂವು ಕೊಡೆ
ಕುಪ್ಪುಸ ಕಂಕುಳತುಂಬ ನಕಾಶೆ ತೀಡುವ ಧಗೆ
ಇಲ್ಲಿಗೆ ಹೊಸತಲ್ಲ
ಟಿಸ್ ಪಿಸ್ ಚುಚ್ಚುವ ಕೊಚ್ಚುವ ಡಾಕ್ಟರು ನರ್‍ಸುಗಳ
ರೋಗಗ್ರಸ್ತ ಅಚ್ಚ ಬಿಳಿ ಉಡುಪುಗಳು ಡ್ಯೂಟಿ
ಮುಗಿಸಿ ಇಲ್ಲಿಗೆ ಹೋಗುವಾಗ ಥಕ ಥಕ ಬಣ್ಣ ತಾಳುತ್ತವೆ
ಬ್ಯಾಂಕಿನ ಕನಕನ ಕಿಂಡಿಗಳಲ್ಲಿ ಕೈಯಾಗಿ ಕಣ್ಣಾಗಿ ಇದ್ದವು
ಸಂಜೆ ಹೊರಬಿದ್ದು
ಓಡಿ ಓಡಿ ಬಸ್ಸು ಹಿಡಿದು
ಪ್ರಜೆಯಾಗುತ್ತವೆ

ನೆನಪುಗಳು ಇದಕ್ಕೆ ದಕ್ಕುವುದಿಲ್ಲ-ಉಬ್ಬಸ
ಹತ್ತಿ ತೇಕುವ ಉಡುಪಿಯ ಪುಟ್ಟ ಪುಟ್ಟ ರಸ್ತೆಗಳಿಗಲ್ಲಲ್ಲಿ
ಬ್ಯಾಂಡೇಜು ಟ್ಯೂಬುಗಳಾಹಾರ
ದಾರಿಗುಂಟ ಬಯಲಾಟ-ನೈಜವೂ ನಟನೆ
ಮುಖವಾಡವೇ ಮುಖವಾಗುವ ಚೋದ್ಯ
ಸ್ಟಾಪಿಗುಂಟ ಬಣ್ಣಗಳು ಕಿಕ್ಕಿರಿದು ಕಣ್ಣು ಬಿತ್ತುವ ದೃಶ್ಯ
ಗಂಟೆಲಂಗಗಳಲ್ಲಿ ಟಿಂಟಿಣಿಸುವ ಸಪ್ತಾಹದ ಭಕ್ಷ್ಯ

ಮೈಕುಗಳಲ್ಲಿ ಭಜನೆ
ತೆಪ್ಪೋತ್ಸವದಾಚೆಗಿನ ಹಿತ್ತಿಲಲ್ಲೇ ಕತ್ತಲ ಕ್ಯಾಬರೆ
ರಥಬೀದಿಯಲ್ಲಿ ತಟ್ಟಿರಾಯ
ಅಜ್ಜರಕಾಡಿನಲ್ಲಿ ನಾಡಗೀತೆ
ಮಲ್ಲಿಗೆ ಕನಕಾಂಬರ ಬಣ್ಣದ ಬಲ್ಬು
ಲಕಲಕ ಬಸ್ಸುಗಳ ಒಳದೇವತೆಗೆ

ಒಂದು ಕಡೆ-ಗೋಪಿಗಳ ಛೇಡಿಸುವ ಕೃಷ್ಣನ ಲೀಲೆ
ಇನ್ನೊಂದು ಕಡೆ-ನೆರೆ ಸಿಕ್ಕಿ ನೂರು
ಚೂರಾದ ಭೂಮಿಗದ್ದೆ ಬಿರುಕಲ್ಲಿ ರಕ್ತಬೆವರಿನ ಸೆಲೆ
ಆದರೂ ಮೀರುವ ಜೀವನೋತ್ಸಾಹ

ರಾತ್ರಿ ಕತ್ತಲಲ್ಲಿ ಸೇತುವೆಗಳನ್ನೆಲ್ಲ ಹಿಂದೇ ಬಿಟ್ಟೋಡುವ
ನೈಟ್‌ ಬಸ್ಸುಗಳ ತುಂಬ ಜಾಗೃತ ಚಾಲಕರು-
ಎಂತೆಂಥದೋ ಲೋಕಕ್ಕೆ ಮಣ್ಣಿನ ವಿಲೇವಾರಿ

ಹಸಿಯೇ ಒಣಗಿ ಒಣವೇ ಹಸಿಯಾಗುವ ನಿರಂತರ
ರೀಲುರುಳುವ ಕಥೆಗೆ ಶೀರ್‍ಷಿಕೆಯಿಲ್ಲ ಇಲ್ಲಿಯ ಪೈ
ಸೆಗಳು ಪೈಸೆಗಳಾಗುಳಿಯುವುದಿಲ್ಲ
ಉರುಳುರುಳಿ ಚಲಾವಣೆ ಕಳೆಯುವ ನಾಣ್ಯಗಳೂ
ಕೋಟಿ ಚೆನ್ನಯ್ಯರ ಮುದ್ರೆ ಮರೆಯುವುದಿಲ್ಲ.

ಹೀಗಾಗಿ ಅಪರೂಪಕ್ಕೆ ಹೊರರೋಗಿಯಾಗಿ ಬಂದ ನನ್ನ ಪಾಲಿಗೆ
ಈ ಉಡುಪಿ ಬಿಂಬವಾಗುವುದಿಲ್ಲ ಪ್ರಶ್ನೆಯಾಗುವುದಿಲ್ಲ
ಆಗುವುದಿಲ್ಲ ಚೋದ್ಯ
ಬದಲಿಗೆ ಬಗೆಬಗೆ ಪ್ರತೀಕದೊಗ್ಗರಣೆಯ
ಅಪೂರ್‍ಣವಸ್ತುವಿನ ಸಂಕೀರ್‍ಣ ಕಾವ್ಯ
*****