ಮಿಥುನ

ಅಂಥ ಅಚ್ಯುತ ಅಪೂರ್ಣನಂತೆ, ಪ್ರಿಯೆ, ತನ್ನವಳನ್ನು
ಮುದ್ದು ಮುದ್ದಾಗಿಯೇ ಮಳ್ಳ ಹೋಗುವುದಂತೆ
ಸಿಕ್ಕಿ ಸಿಗದಂತೆ ತಣಿಯದೇ ತುಯ್ಯುವುದಂತೆ, ನಮ್ಮಂತೆ
ಬೆವರಿ ಗದ್ಗದ ಬಿಕ್ಕಿ ಹೋಳಾಗರಂತೆ
ಕೂಡಿ ಇಮ್ಮೈಯಾಗಿ ಪಡೆಯರಂತೆ

ಅಲೆಯ ಮೇಲಲೆಯ ಸುಖವಂತೆ ಪಡುವಾಗ
ಕಣ್ಣಲ್ಲಿ ಕಣ್‌ನೆಟ್ಟ ಶೋಧವಂತೆ
ಕಣ್ ಮುಚ್ಚರಂತೆ ನಮ್ಮಂತೆ ಉಮ್ಮಳಿಸಿ
ಚಿಲುಮೆ ಚಿಮ್ಮಿಸಿಕೊಂಡು ಒಡೆಯರಂತೆ
ಪಡೆದು ಖಿನ್ನತೆಯಲ್ಲಿ ಕುಸಿಯರಂತೆ

ರಾಧೆ ದೊಡ್ಡವಳಂತೆ ಕೊಟ್ಟು ಕನ್ನಿಕೆಯಂತೆ
ಕಳ್ಳಿಗೂ ನಿನ್ನಂತೆ ಲಜ್ಜೆಯಂತೆ
ಮೊಲೆಗವನು ಮಗುವಂತೆ ತೊಡೆಗವನು ತಿದಿಯಂತೆ
ಗಂಡನೂ ಮಿಂಡನೂ ಭಗವಂತನಂತೆ
ಕುಸಿದು ಎರಡೆರಡಾಗಿ ಬಗೆಯರಂತೆ

ಅವಳು ಬಿಳಿಯಂತೆ ಇವನು ಕಪ್ಪಂತೆ, ಕೂಡಿರಲು
ಕಪ್ಪಾರು ಬಿಳಿಯಾರು ತಿಳಿಯದಂತೆ
ಹರಿಯಲೆಂದೇ ಕೂಡಿ ಕೂಡಲೆಂದೇ ಹರಿವ
ಸಂಗಮದ ಜಲದಂತೆ ನಿಜ ಮಿಥುನವಂತೆ
ನೀಡಿ ಇಡಿ ಹೊಕ್ಕವರು ಬಿಡಿ ಉಳಿಯರಂತೆ.


೨೦-೧೨-೯೧

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ