ನೀವು ಅವಳನ್ನು ನೋಡಬೇಕು.. ಎನರ್ಜಿಯ ಕಡಲು ಅವಳು. ತುಂಬಾ ಬುದ್ಧಿವಂತೆ. ವರ್ಷಕ್ಕೆ ಮೂರು ಲಕ್ಷ ಸಂಬಳ ಬರುತ್ತೆ ಅವಳಿಗೆ. ತನ್ನ ಉಳಿತಾಯದ ಹಣದಲ್ಲೇ ಅಪಾರ್ಟ್‍ಮೆಂಟ್ ಕೊಂಡಿದ್ದಾಳೆ. ಜೊತೆ ಇರಲೀಂತ ಊರಿಂದ ತನ್ನ ಅಜ್ಜಿಯನ್ನು ತಂದಿಟ್ಟು ಕೊಂಡಿದ್ದಾಳೆ. ಆಗಾಗ ಒಳ್ಳೊಳ್ಳೆ ಕಥೇನೂ ಬರೀತಾಳೆ.. ತನ್ನ ಮನೆಗೆ ಹೆಸರನ್ನೂ ಇಟ್ಟಿದ್ದಾಳೆ.. ’ಕಥೆ’ ಅಂತಲೇ.
**********
’ಎಲ್ಲಿ ಹೋಗಿದ್ದೆ ಅಜ್ಜಿ..?’
’ದೇವಗಿರಿಯಲ್ಲಿ ಕೃಷ್ಣಮೂರ್ತಿಗಳ ಪ್ರವಚನ ಇತ್ತು.. ಹೋಗಿದ್ದೆ..’
’ಏನು ಹೇಳಿದ್ರು.. ಇವತ್ತು..?’
’ಜ್ಞಾನದ ಬಗ್ಗೆ ಮಾತಾಡಿದರು ಇವತ್ತು.. ಅಷ್ಟು ತುಂಡ ಚೆಡ್ಡಿ ಹಾಕ್ಕೋಬೇಡಾಂತ ನಿಂಗೆ ಎಷ್ಟು ಸಲ ಹೇಳಿದ್ದೇನೆ..’
’ಜ್ಞಾನದ ಬಗ್ಗೆ ಏನು ಹೇಳಿದ್ರು..?’
’ತುಂಬಾ ಚೆನ್ನಾಗಿ ಮಾತಾಡಿದ್ರು.. ಅವರು ಏನು ಹೇಳಿದ್ರು ನಂಗೆ ಹೇಳಕ್ಕೆ ಬರಲ್ಲ.. ಆದ್ರೆ ಜ್ಞಾನದ ಬಗ್ಗೆ ಚೆನ್ನಾಗಿ ಹೇಳಿದರು.’
’ಅಲ್ಲಾ.. ಅಜ್ಜಿ.. ನಿಜ ಹೇಳು ಅವರು ಹೇಳಿದ್ದು ನಿಂಗೆ ನಿಜವಾಗಿ ಅರ್ಥ ಆಯ್ತಾ.. ಅಥವಾ ದೇವಸ್ಥಾನದಲ್ಲಿ ಹೋಗಿ ಕೂತರೆ ಪುಣ್ಯ ಬರುತ್ತೆ ಅಂತ ಹೋಗಿದ್ಯಾ..?’
’ಅವರು ಜ್ಞಾನಿಗಳು.. ಅವರು ಹೇಳಿದ್ದೆಲ್ಲಾ ನಮಗೆ ಅರ್ಥ ಆಗಬೇಕೂಂದ್ರೆ ಹೇಗೆ..? ನನ್ನ ಬುದ್ಧಿಗೆ ನಿಲುಕುವಷ್ಟು ಅರ್ಥವಾಗುತ್ತೆ.. ಎಲ್ಲೋ ಕಾಡು ಹರಟೆ ಹೊಡೆಯೋದರ ಬದಲು ದೇವಸ್ಥಾನ ಒಳ್ಳೇ ಜಾಗ ಅಲ್ಲವೇ..?’
’ಕೃಷ್ಣ ಮೂರ್ತಿಗಳು ಚಿಕ್ಕಂದಿನಿಂದಲೇ ಜ್ಞಾನಿಗಳೋ.. ಅಥವಾ ಇತ್ತೀಚೆಗೆ ಆಗಿದ್ದೋ..? ನಮ್ಮ ಕೆಲಸದ ಹುಡುಗಿ ಭಾಗ್ಯ ದೊಡ್ಡೋಳ್ ಆದ್ಳಲ್ಲಾ ಆ ಥರಾ.. ದಿಢೀರನೇ.. ಹೇಳ್ದೇ.. ಕೇಳ್ದೇ..’
’ದೊಡ್ಡೋರನ್ನ ಆಡ್ಕೋಬಾರ್‍ದು.. ಚಿಕ್ಕೋರನ್ನ ಬೇಡ್ಕೋಬಾರ್‍ದು..’
’ಇದನ್ನೂ ಅವರೇ ಹೇಳಿದ್ದಾ ಅಥವಾ ನಿಂದಾ..’
’ಇಲ್ಲ.. ನಂಗೇ ಹೊಳೀತು..’
**********
’ಅಜ್ಜಿ.. ನಾನು ಚಿಕ್ಕ ವಯಸ್ಸಿಂದಾ ಅವರಿವರ ಬಾಯಲ್ಲಿ ಕೇಳ್ತಿದ್ದೇನೆ.. ಜ್ಞಾನ ಅನ್ನೋ ಪದಾನ.. ಜ್ಞಾನ ಅಂದ್ರೆ ಏನಜ್ಜಿ..?’
’ಗೊತ್ತಿಲ್ಲಮ್ಮ.. ನೀನು ಕೃಷ್ಣಮೂರ್ತಿಗಳನ್ನೇ ಕೇಳು ಒಂದ್ಸಲ.. ಅವರೇ ಸರಿ ನಿನ್ನ ಈ ಪ್ರಶ್ನೆಗೆ ಉತ್ತರಿಸಲಿಕ್ಕೆ..’
’ಅವರ ಮೊಬೈಲ್ ನಂಬರ್ ಏನು..?’
’ನಾನು ಯಾಕೆ ಇಸ್ಕೊಳ್ಲಿ.. ಅವರ ಮೊಬೈಲ್ ನಂಬರ್‌ನ..? ಅವರ ಮನೆ ಸರ್ಕಲ್ ಗಣೇಶನ ದೇವಸ್ಥಾನದ ಪಕ್ಕದಲ್ಲೇ.. ’
’ಎದ್ದಿರ್‍ತಾರಾ ಇಷ್ಟು ಹೊತ್ತಲ್ಲಿ..?’
’ರಾತ್ರಿ ಹತ್ತೂಕಾಲು ಈಗ ಹೋಗ್ತ್ಯಾ.. ಅವರ ಮನೇಗೆ..?’
’ಜ್ಞಾನಿಗಳನ್ನು ಎಷ್ಟು ಹೊತ್ನಲ್ಲಾದ್ರೂ ಎಬ್ಬಿಸಬಹುದು.. ಅಜ್ಞಾನಿಗಳನ್ನು ಎಷ್ಟು ಎಷ್ಟೋ ಹೊತ್ನಲ್ಲಿ ಎಬ್ಬಿಸಬಾರದು..’
**********
’ಸರ್.. ಜ್ಞಾನ ಅಂದ್ರೆ ಏನು..?’
ಜ್ಞಾನಿ ಕೃಷ್ಣಮೂರ್ತಿಗಳು ಏನೇನೋ ಕಂಡಿದ್ದಾರೆ ಜೀವನದಲ್ಲಿ.. ಈ ಥರಾ ರಾತ್ರಿ ಸರಿ ಹೊತ್ತಿನಲ್ಲಿ ಸುಂದರ ಯುವತಿ ಮನೆಗೆ ಬಂದು ಜ್ಞಾನದ ಬಗ್ಗೆ ಕೇಳೋದನ್ನು ಬಿಟ್ಟು..
’ಬೆಳಿಗ್ಗೆ ಹೇಳಿದರಾದೀತಾ..?’
’ಸರಿ.. ನೀವು ಹೋಗಿ ಮಲಗಿ.. ನಾನು ಇಲ್ಲೇ ಕೂತಿರ್‍ತೇನೆ.. ಬೆಳಿಗ್ಗೆ ನೀವು ಹೇಳಿದ ಮೇಲೆ ಕೇಳ್ಕೊಂಡು ಹೋಗ್ತೀನಿ..’
’ನಿನಗೆ ಜ್ಞಾನದ ಅರ್ಥ ಬೇಕಾ.. ಜ್ಞಾನವೇ ಬೇಕಾ..?’
’ಸರಿ.. ಜ್ಞಾನವನ್ನೇ ಕೊಡಿ..’
’ಅದಕ್ಕೆ ನೀನು ಒಂದು ತಿಂಗಳು ಪರಿಶ್ರಮಿಸಬೇಕು.. ತಯಾರಾಗಿದಿಯಾ..?’
**********
ನಮ್ಮ ಹುಡುಗಿಯ ಮ್ಯಾನೇಜರ್, ಮನೇಲಿ ಟೀವಿ ನೋಡ್ತಿದ್ದಾನೆ.. ಅವನ ಮೊಬೈಲ್ ರಿಂಗ್ ಆಗುತ್ತದೆ.
’ಹೇಳು.. ಮಾನಸಿ..’
’ಸರ್.. ನಂಗೆ ಒಂದು ತಿಂಗಳು ರಜ ಬೇಕಿತ್ತು.. ನಾಳೆಯಿಂದ..’
’ಹೀಗೆ ದಿಢೀರ್ ಅಂತ ಹೇಳಿದ್ರೆ ಹೇಗೆ.. ನಾಳೆ ಆಫೀಸ್‌ಗೆ ಬರ್ತೀಯಲ್ಲಾ ಅಲ್ಲಿ ಮಾತಾಡೋಣಾ..’
’ಇಲ್ಲ ಸಾರ್.. ನಾಳೆಯಿಂದ ನಾನು ಒಂದು ತಿಂಗಳು ಆಫೀಸ್‌ಗೆ ಬರ್ತಿಲ್ಲ..’
’ಎಲ್ಲಿಗೆ ಹೋಗ್ತಿದ್ದೀ.. ಕೇಳಬಹುದಾ..?’
’ನಾನು ಹೇಳಿದ್ರೆ ನಿಮಗೆ ನಗು ಬರುತ್ತೆ..’
’ಇಲ್ಲ.. ನಗಲ್ಲ.. ಹೇಳು..’
’ಜ್ಞಾನ ಪಡೆಯೋಕೆ ಹೋಗ್ತಿದ್ದೇನೆ..’
’ವ್ಹಾಟ್..?’
*********
’ಸರಿ ಸಾರ್.. ಒಂದು ತಿಂಗಳು ರಜ ಹಾಕಿದ್ದೀನಿ.. ಎಲ್ಲಿ ಸಿಗುತ್ತೆ ಜ್ಞಾನ..?’
’ನೀನು ಹಿಮಾಲಯಕ್ಕೆ ಹೋಗು.. ಅಲ್ಲಿನ ಪರ್ವತದ ಸಾಲಿನಲ್ಲಿ ಬಲಗಡೆ ಕೊನೆಯಲ್ಲಿ ದೊಡ್ಡ ಬೆಟ್ಟವೊಂದಿದೆ.. ಅದನ್ನು ನೀನು ಹತ್ತಬೇಕು. ಆ ಬೆಟ್ಟದ ಎಂಟನೇ ಮೈಲಿಯಲ್ಲಿ ಅಘೋರಿಯೊಬ್ಬನಿದ್ದಾನೆ.. ನೀನು ಅವನನ್ನು ಭೇಟಿ ಮಾಡು. ನಿನಗೆ ಜ್ಞಾನ ಬೇಕೂಂತ ಅವನನ್ನು ಕೇಳು.. ಅವನು ಕೊಡ್ತಾನೆ.’
’ನಿಮ್ಮ ಮಾತುಗಳನ್ನು ನಾನು ನಂಬಬಹುದಾ..?’
’ನಂಬಿ ನೋಡು ಗೊತ್ತಾಗುತ್ತೆ..’
’ಉಪಕಾರವಾಯ್ತು.. ನಾನು ಬರ್ತೀನಿ..’
’ಸರಿ.. ಹೊರಡು ನಿನಗೆ ಒಳ್ಳೇದಾಗಲಿ.. ಹೂಂ.. ಇನ್ನೊಂದು ವಿಷ್ಯ.. ನೀನು ಹೋಗುವಾಗ ಒಳ್ಳೇ ಆಲೂಗೆಡ್ಡೆಗಳನ್ನು ಅವನಿಗೆ ತೊಗೊಂಡು ಹೋಗು. ಅವನು ಬೇಯಿಸಿದ ಆಲೂಗೆಡ್ಡೆಯನ್ನು ಬಿಟ್ಟು ಬೇರೇನನ್ನೂ ತಿನ್ನಲ್ಲ..’
**********
ಮಾನಸಿ ಹಿಮಾಲಯದ ಕೃಷ್ಣಮೂರ್ತಿಗಳು ಹೇಳಿದ್ದ ಬೆಟ್ಟ ಹತ್ತುತ್ತಿದ್ದಾಳೆ.. ಕೈಲಿ ನಾಲ್ಕು ಕೇಜಿ ಆಲೂಗೆಡ್ಡೆ ಕವರ್ ಇದೆ. ನನ್ಮಗಂದು ಒದೊಂದು ಆಲೂಗೆಡ್ಡೆ ಕಾಲು ಕಾಲು ಕೇಜಿ ತೂಗುತ್ತೆ. ಮಾನಸಿಗೆ ಕಾಲು ನೋವು. ಜ್ಞಾನದ ಕಡೆಗೆ ಹೆಜ್ಜೆ ಹಾಕುವಾಗ ಕಾಲು ನೋವು ಸಹಜ. ಈತ ಬರೀ ಆಲುಗೆಡ್ಡೆ ತಿಂತಾನಲ್ಲ.. ಸಿಕ್ಕಾಪಟ್ಟೆ ಗ್ಯಾಸ್ ಆಗಲ್ವಾ.. ಅಥವಾ ಈ ವೆದರ್‌ಗೆ ಆಲೂಗೆಡ್ಡೆ ಅಮೃತಾನೇ ಇರಬಹುದು.. ಅವನು ಹೇಗಿರಬಹುದು..? ಕೃಷ್ಣಮೂರ್ತಿಗಳು ಇವನು ಈ ಅಡ್ರೆಸ್‌ನ ಹೇಗೆ ಕಂಡುಹಿಡಿದರು..? ಎಲ್ಲಾ ಜ್ಞಾನಿಗಳು.. ಗೊತ್ತಿರಬಹುದು.. ಜ್ಞಾನ ಬೇಕನ್ನೋರು ಇಲ್ಲೀವರ್‍ಗೂ ನಡ್ಕೊಂಡೇ ಬರಬೇಕಾ..? ಈತನಿಗೆ ಒಂದು ಮೊಬೈಲ್ ಕೊಡಿಸಿದರೆ ಮನುಕುಲಕ್ಕೆ ಅನುಕೂಲವಾದೀತಾ..? ಸಿಗ್ನ್‌ಲ್ ಸಿಗುತ್ತಾ..? ಇಲ್ಲಿ ಕರೆಂಟ್ ಕಂಬಗಳು ಕಾಣ್ತಿಲ್ಲ.. ಮೊಬೈಲ್ ಕೊಡಿಸಿದರೂ ಚಾರ್ಜ್, ರೀಚಾರ್ಜ್ ಹೇಗೆ ಮಾಡಿಸಿಯಾನು ಪಾರ್ಟಿ..? ಸೂರ್ಯನ ಬೆಳಕಿಂದ ಚಾರ್ಜ್ ಆಗೋ ಮೊಬೈಲ್‌ಗಳು ಮುಂದಿನ ವರ್ಷ ನಮ್ಮ ಕಂಪನೀನೇ ಮಾರ್ಕೆಟ್‍ಗೆ ಬಿಡುಗಡೆ ಮಾಡ್ತಿದೆ.. ಆಗ ಒಂದು ಸ್ಯಾಂಪಲ್ ಪೀಸ್ ಇವನಿಗೆ ಕೊಡೋಣಾ.. ಇವನು ನನಗೆ ಜ್ಞಾನವನ್ನು ಕೊಟ್ಟ ಪಕ್ಷದಲ್ಲಿ..
**********
ಇನ್ನು ಎರಡೇ ಮೈಲಿ. ಜ್ಞಾನವನ್ನು ಕೊಡುವವನನ್ನು ಭೇಟಿ ಮಾಡಲು. ಮೈಯೆಲ್ಲಾ ರೋಮಾಂಚನ. ಇದೆಲ್ಲಾ ಆದ ಮೇಲೆ ಇದನ್ನು ಬರೆದು ವಿಜಯಕರ್ನಾಟಕಕ್ಕೆ ಕಳಿಸಬೇಕು.. ಅವರು ಪ್ರಕಟಿಸ್ತಾರಾ..? ಬಹುಶ: ಕತೆ ವಿಭಾಗದಲ್ಲಿ ಹಾಕಬಹುದು.
**********
ಗಾಳಿ ಜೋರಾಗೆ ಬೀಸುತ್ತಿದೆ.. ಹಿಮಾಲಯದ ಅದ್ಭುತ ನೋಟ.. ಊರಲ್ಲೇ ಕೂತಿದ್ರೆ ಈ ನೋಟ ಸಿಕ್ತಿತ್ತಾ..? ಹಿಮಾಲಯ.. ಶಿವನ ಆವಾಸ ಸ್ಥಾನ. ಶಿವ ನನ್ನ ಈ ಪ್ರಯತ್ನಗಳನ್ನು ನೋಡ್ತಿರಬಹುದಾ.. ಶಿವಾ.. ತುಂಬಾ ದೂರದಿಂದ ಬಂದಿದ್ದೇನೆ.. ಸಾಧ್ಯವಾದರೆ ನನಗೆ ದರ್ಶನ ಕೊಡು.. ನಾನು ಯಾರಿಗೂ ಹೇಳಲ್ಲ.. ನನ್ನ ಹಿಂದಿನಿಂದ ಬಂದು ನನ್ನನ್ನು ಚಕಿತಗೊಳಿಸು. ನಿನ್ನ ದಿವ್ಯ ಜಟೆ, ವಿಭೂತಿಮಯ ದೇಹ.. ಆ ಮೂರನೇ ಕಣ್ಣು.. ನಿನ್ನ ಮೆಚ್ಚಿನ ಸರೀಸೃಪ.. ಈ ಎಲ್ಲವನ್ನು ನನ್ನ ಕಣ್ಣು ತಡೆದುಕೊಳ್ಳಬಹುದಾ.. ನಿನ್ನ ವರ್ಚಸ್ಸು ನನ್ನನ್ನು ಹೆದರಿಸಿಬಿಡಬಹುದಾ..? ಹಿಂದೆ ತಿರುಗಿನೋಡ್ತಾಳೆ ಮಾನಸಿ.. ತನ್ನ ಜೀವನದಲಿ ಮಾನಸಿ ನೊಡಿರಲಾರದ ನೋಟ ಅದು.. ಜಟಾಧರ, ವಿಭೂತಿಮಯ, ಸಹಸ್ರ ಕೋಟಿ ಸೂರ್ಯ ತೇಜಸ್ಸಿನ ತ್ರಿಶೂಲಧಾರಿ ಶಿವ ಅಲ್ಲಲ್ಲ.. ಶಿವನ ತದ್ರೂಪಿ ಶಿವನ ತೇಜಸ್ಸಿನ ವ್ಯಕ್ತಿ ತನ್ನ ಹಿಂದೆಯೇ ನಿಂತಿದ್ದಾನೆ. ಶಾಂತ ಮೊಗದೊಂದಿಗೆ. ತೀಕ್ಷ್ಣ ಕಣ್ಣುಗಳಿಂದ ತನ್ನನ್ನೇ ದುರುಗುಟ್ಟಿಕೊಂಡು ನೋಡ್ತಿದ್ದಾನೆ.. ಶಿವಾ… ಮಾನಸಿ.. ತನಗರಿವೇ ಇಲ್ಲದಂತೆ ಅವನ ಕಾಲಿಗೆರಗಿ ಬಿಡ್ತಾಳೆ. ತಾನು ತಂದಿದ್ದ ಅಷ್ಟೂ ಆಲೂಗೆಡ್ಡೆ ಚದುರಿಹೋಗುತ್ತದೆ.. ಬೆಟ್ಟದ ಮೇಲಿಂದ ಕೆಳಕ್ಕೆ ಉರುಳಿ ಹೋಗುತ್ತದೆ.
**********
’ಯಾರು ನೀನು..?’ ಅವನ ಡಮರುಗಧ್ವನಿಯ ಪ್ರಶ್ನೆ.
ಅವನು ಕನ್ನಡದಲ್ಲಿ ಮಾತಾಡ್ತಿದ್ದಾನಾ..? ಅಥವಾ ಅದು ನನಗೆ ಹಾಗೆ ಕೇಳಿಸ್ತಿದೆಯಾ..?
’ನಾನು ಮಾನಸಿ..’
’ಇಲ್ಲಿಗೆ ಬಂದ ಉದ್ದೇಶ..?’
’ಕೃಷ್ಣಮೂರ್ತಿಗಳು ಕಳಿಸಿದರು.. ನಿಮಗೆ ಗೊತ್ತಿಲ್ಲದ್ದೇನಿದೆ..?’
’ನಿನ್ನ ಬಾಯಲ್ಲೇ ಕೇಳಬೇಕು..’
’ಜ್ಞಾನ.. ಜ್ಞಾನ ಬೇಕಿತ್ತು..’
’ನಾನದನ್ನ ನಿನಗೆ ಕೊಡಬಲ್ಲೆ.. ನೀನು ಅದಕ್ಕಾಗಿ ನನಗೆ ಏನನ್ನು ಕೊಡ್ತಿಯಾ..?’
’ಇಲ್ಲೂ ವ್ಯವಹಾರಾನಾ.. ನನ್ಹತ್ರ ಏನಿದೆ.. ನಿಮಗೆ ಕೊಡುವಂತದ್ದು.. ನಾನು ತಂದಿದ್ದ ಆಲೂಗೆಡ್ಡೆಯೂ ಚದುರಿ ಹೋಯಿತು..’
ಆ ವ್ಯಕ್ತಿ ಜೋರಾಗಿ ನಕ್ಕ.
’ಆಲೂಗೆಡ್ಡೆಗೆ ಜ್ಞಾನ ಸಮವಾ? ಇನ್ನೂ ದೊಡ್ಡದು ಬೇಕು..’
’ಊರಿಗೆ ಹೋದ ಮೇಲೆ ಕಳಿಸಿದರಾದೀತಾ..?’
’ಇಲ್ಲ ನಿನ್ನಲ್ಲೇ ಇದೆ..’
’ಏನು ಹೇಳ್ತಿದ್ದೀರಿ..’
’ಕೇಳು.. ನಾನು ಕಳೆದ ಇಪ್ಪತ್ತು ವರ್ಷದಿಂದ ಇಲ್ಲಿ ತಪಸ್ಸು ಮಾಡ್ತಿದ್ದೇನೆ.. ನನ್ನ ಕಾಮದ ತೃಷೆ ದೊಡ್ಡದು.. ಅದನ್ನು ನೀನು ನೀಗಿಸಿದ ಪಕ್ಷದಲ್ಲಿ ನಿನಗೆ ನಾನು ಜ್ಞಾನವನ್ನು ಕೊಡ್ತೀನಿ..’
ಮಾನಸಿ ನಿರ್‍ಈಕ್ಷಿಸದ ಏಟು ಇದು.. ಮಾನಸಿ ಮನಸ್ಸು ಯೋಚಿಸಲಾರಂಭಿಸಿತು.. ಎಲ್ಲಾ ದಿಕ್ಕುಗಳಲ್ಲಿ.. ಯೋಚಿಸುತ್ತಲೇ ಅವನ ಮುಖವನ್ನೊಮ್ಮೆ ನೋಡ್ತಾಳೆ. ಅವನು ಮಾನಸಿಯನ್ನೇ ತಿಂದು ಹಾಕುವವನಂತೆ ನೋಡ್ತಿದ್ದಾನೆ..
ಅಲ್ಲಾ.. ಜ್ಞಾನದ ಆಸೆಯಿಂದ ಅಲ್ಲಿಂದ ಇಲ್ಲೀವರ್‍ಗೂ ಬಂದೆ. ಜ್ಞಾನ ದೊಡ್ಡದು ಅಂತಾರೆ. ಅದಕ್ಕಾಗಿ ಅವನು ಕೇಳಿದ್ದನ್ನ ಅವನಿಗೆ ನಾನು ಕೊಟ್ಟು ಬಿಟ್ರೆ ಅವನು ಜ್ಞಾನವನ್ನು ಕೊಡ್ತಾನಾ..? ಯಾಮಾರಿಸಿ ಬಿಟ್ರೆ..? ಅಥವಾ ತನಗೆ ಬೇಕಾದನ್ನು ತೊಗೊಂಡು ಜ್ಞಾನವನ್ನು ಕೊಡ್ತಾನೆ ಅಂತಾನೇ ಇಟ್ಕೊಂಡ್ರೆ ಅವನು ಕೊಟ್ಟಿದ್ದೇ ಜ್ಞಾನ ಅಂತ ಹೇಗೆ ನಂಬೋದು? ಅದು ನನಗೆ ಮೊದಲೇ ಗೊತ್ತಿದ್ದೇ ಆಗಿರಬಹುದು.. ಅಥವಾ ಅದು ನನಗೆ ಗೊತ್ತಿಲ್ಲದ ವಿಚಾರ ಆಗಿದ್ರೆ.. ನಾನು ಶೀಲ ಒತ್ತಿ ಇಟ್ಟು ಸಂಪಾದಿಸಿದ್ರಿಂದ ಅದನ್ನೇ ನಾನು ಸಾಯುವವರೆವಿಗ್ಯೂ ಜ್ಞಾನಾಂತ ನಂಬೋ ಪರಿಸ್ಥಿತಿ ಬಂದುಬಿಡಲ್ವೇ..? ಇವನು ಕಂಡುಕೊಂಡಿದ್ದೇ ಜ್ಞಾನವಾ..?
’ತುಂಬಾ ಯೋಚಿಸ್ತಿರೋ ಹಾಗೆ ಕಾಣ್ತಿದೆ..’
ಒತ್ತಡ ಹೇರ್‍ತಿದ್ದಾನೆ.. ಅವನ ಅವಶ್ಯಕತೆ ದೊಡ್ಡದಿದೆ.. ಅದು ಅವನ ಕಣ್ಣುಗಳಲ್ಲೇ ಕಾಣ್ತಿದೆ.. ತುಂಬಾ ಬುದ್ಧಿವಂತ ಇವನು.. ಗಮನಿಸಿದರೆ ಗೊತ್ತಾಗ್ತಿದೆ.. ಈತ ಇಪ್ಪತ್ತು ವರ್ಷಗಳಲ್ಲಿ ಒಪ್ಪತ್ತೂ ಸ್ನಾನ ಮಾಡಿರೋಹಾಗೆ ಕಾಣ್ತಿಲ್ಲ.. ಅವನ ದೊಡ್ಡ ಮೀಸೆ ಭಂಗಿ ಸೇದೀ ಸೇದೀ ಕೆಂಚಾಗಿದೆ.. ಅದರ ವಾಸನೆ ಮೂಗಿಗೆ ಬಡೀತಿದೆ.. ಅದನ್ನೆಲ್ಲಾ ಹೇಗೆ ಸಹಿಸಿಕೊಳ್ಳೋದು.. ನಾನು ಕೊಡೋಕೆ ತಯಾರಾದ್ರೂ ಮನ:ಪೂರ್ವಕವಾಗಿ ಕೊಡಬಲ್ಲನೇ.. ಅಥವಾ ನಾನು ನಾಟಕ ಮಾಡಿದರೆ ಆತನಿಗೆ ತಿಳಿದು ಬಿಟ್ಟು ನೀನು ಮನ:ಪೂರ್ವಕವಾಗಿ ಕೊಡಲಿಲ್ಲ.. ಅದಕ್ಕಾಗಿ ನಾನು ಜ್ಞಾನವನ್ನು ಕೊಡಲ್ಲ ಅಂದು ಬಿಟ್ರೆ..? ಮಾನಸಿಯ ಮನಸ್ಸು ಪ್ರಶ್ನೆ ಪತ್ರಿಕೆ.
’ನನಗೆ ತುಂಬಾ ಕೆಲಸಗಳಿವೆ.. ಬೇಗ ಹೇಳಬೇಕು..ನೀನು..’
ನನ್ನ ಮ್ಯಾನೇಜರ್‌ಗಿಂತ ಸ್ಮಾರ್ಟ್ ಈತ. ಇನ್ನೊಂದು ಆಂಗಲ್‌ನಿಂದ ಒತ್ತಡ ಹೇರ್‍ತಿದ್ದಾನೆ.. ಟೈಂ ಪ್ರೆಶರ್. ಏನು ಮಾಡಲಿ ಈಗ ಭಗವಂತಾ..?
ಮಾನಸಿಯ ತುಮಲಗಳನ್ನು ಅರ್ಥ ಮಾಡಿಕೊಂಡವನಂತೆ ಅವನೇ ಮಾತನಾಡಲಾರಂಭಿಸಿದ..
**********
’ಕೇಳು ಮಗಳೇ..’
ಮಾನಸಿಗೆ ತನ್ನ ಕಿವಿಗಳನ್ನೇ ನಂಬಲಾಗಲಿಲ್ಲ.. ಆತ ತನ್ನನ್ನು ಮಗಳೇ ಅಂತ ಸಂಭೋದಿಸ್ತಿದ್ದಾನೆ.. ಮಾನಸಿ ಅವನ ಮುಖವನ್ನೊಮ್ಮೆ ನೋಡ್ತಾಳೆ..
ಯಾವ ಭಾವಗಳೂ ಇಲ್ಲದ ಶಾಂತ ಮುಖದಲ್ಲಿ ಆತ ತುಂಬ ಹಿಂದೆಯೇ ತೀರಿಕೊಂಡ ತನ್ನ ತಂದೆಯೆಂತೆಯೇ ಕಾಣ್ತಿದ್ದಾನೆ..
ಮಾನಸಿಯ ಕಣ್ಣಲ್ಲಿ ನೀರು ಮಡುಗಟ್ಟುತ್ತದೆ..
’ನೋಡು ಮಗಳೇ.. ನೀನು ಇಲ್ಲಿ ಬರುವವರೆವಿಗೂ ನಿನ್ನಲ್ಲಿ ಪ್ರಶ್ನೆಗಳಿರಲ್ಲಿಲ್ಲ.. ಕಳೆದ ಇಪ್ಪತ್ತು ನಿಮಿಷಗಳಲ್ಲಿ ನಿನ್ನಲ್ಲಿ ಎಷ್ಟೋಂದು ಪ್ರಶ್ನೆಗಳು.. ಅವು ನಿನ್ನಲ್ಲೇ ಹುಟ್ಟಿದ್ದು.. ನಿನಗೆ ಗೊತ್ತಿರಲಿ ಮಗಳೇ.. ಜ್ಞಾನ ಪ್ರಶ್ನೆಗಳ ಗುಲಾಮ.. ಇನ್ನೂ ಹೇಳಬೇಕಂದ್ರೆ ಪ್ರಶ್ನೆಗಳ ಕಂಬಗಳ ಹಿಂದೆ ಜ್ಞಾನ ಅವಿತುಕೊಂಡು ನಿಂತಿರುತ್ತೆ.. ಅದನ್ನು ನಾವುಗಳು ನಮ್ಮ ಪ್ರಶ್ನೆಗಳ ಮೂಲಕವೇ ಹುಡುಕಿಕೊಳ್ಳಬೇಕು.. ನಮ್ಮಲ್ಲಿ ಹುಟ್ಟುವ ಯಾವ ಪ್ರಶ್ನೆಗಳನ್ನೂ ನಾವು ಕೊಲ್ಲಬಾರದು.. ಅದು ಜ್ಞಾನವನ್ನೇ ಕೊಂದಂತೆ..ಇಷ್ಟು ಸಾಕು.. ಹೊರಡು..’
ಮಾನಸಿ ಅವನ ವ್ಯಕ್ತಿತ್ವಕ್ಕೆ ಮಾರು ಹೋಗಿ ತನಗೆ ಅರಿವೇ ಇಲ್ಲದಂತೆ ಕೈಮುಗಿದು, ಕಣ್ಣೊರೆಸಿಕೊಂಡು ಹೊರಡಲಾರಂಭಿಸುತ್ತಾಳೆ..
’ಮಗಳೇ..’ ಏನೋ ಹೇಳಲು ಮರೆತವನಂತೆ ಆತ ಆತ್ಮೀಯವಾಗಿ ಥೇಟ್ ಅಪ್ಪನ ಧ್ವನಿಯಲ್ಲೇ ಕೂಗ್ತಾನೆ..
ಮಾನಸಿ ತಿರುಗಿ ಅವನನ್ನು ನೋಡ್ತಾಳೆ..
’ಇನ್ನೊಂದು ವಿಚಾರ.. ಜ್ಞಾನಿಯ ಜೊತೆ ಮಲಗಿದ ಮಾತ್ರಕ್ಕೆ ಬೇಡದ ಶಿಶು ಹುಟ್ಟಬಹುದೇನೋ.. ಜ್ಞಾನದ ಹಲ್ಲು ಹುಟ್ಟಲ್ಲ.. ಗೊತ್ತಿರ್‍ಲಿ..’
ಮಾನಸಿ ನಗುತ್ತಾಳೆ.
************
ಊರಿಗೆ ಬಂದ ಕೂಡಲೇ ಇದನ್ನೆಲ್ಲಾ ಬರೆದು ಪತ್ರಿಕೆಗಳಿಗೆ ಕಳಿಸ್ತಾಳೆ.. ಯಾವ ಪತ್ರಿಕೆಯೋರು ಇದನ್ನು ಪ್ರಕಟಿಸೋದಿಲ್ಲ..
*****