೧
ಚಿಟ್ಟ, ಗುಬ್ಬಿ ಪುಟ್ಟಗುಬ್ಬಿ
ಮುಳ್ಳು ಬೇಲಿಯನ್ನು ತಬ್ಬಿ
ಚೀರಿ ಚೀರಿ ಗಂಟಲುಬ್ಬಿ –
ಒಡೆಯುವಂತೆ ಹಾಡಿತು;
ಕೇಳಲಿಲ್ಲ ಜಗದ ಕಿವಿ
ನೋಡಲಿಲ್ಲ ಬಾನ ರವಿ
ನೀನಾದರು ಬಾರೊ ಕವಿ
ಎಂದು ಅಂಗಲಾಚಿತು;
ಹಗಲು ದಿಗಿಲುಗೊಳಿಸುತಿರಲಿ
ಸುಗ್ಗಿ ಹೋಗಿ ಮಾಗಿ ಬರಲಿ
‘ಟಿವೂ ಟಿವೂ’ ಎಂದು ಒರಲಿ
ಕೊರಗಿ ಸಣ್ಣಗಾಯಿತು;
ತೆನೆಯ ಹಾಲುಗಾಳನುಳಿದು
ಗಗನ ಗಮನವನ್ನು ಹಳಿದು
ಗೂಡಿನಲ್ಲಿ ಮೌನ ತಳೆದು
ರೆಕ್ಕೆ ಮುದುರಿ ಕುಳಿತಿತು.
೨
ಏಕೆ ಇಂತು ಉದಾಸೀನ
(ಸದಾಶಿವನಿಗದೇ ಧ್ಯಾನ)
ನಿನ್ನ ಬಾಳಿಗಾವ ಊನ
ಹೇಳು ಪುಟ್ಟ ಹಕ್ಕಿಯೆ?
ಜಗವಪಾರ ನಾದಧುನಿ
ನಿನ್ನ ಧ್ವನಿಯದೊಂದು ಹನಿ
ಅದನೆ ಹಾಡಿ ಹಾಡಿ ತಣಿ
ವಿಶ್ವವೀಣೆ ತಂತಿಯೆ.
ಜನತೆಯೊಂದು ಮೂಢ ಸಂತೆ
ಕಲಹ ಕಪಟ ಕಂತೆ ಕಂತೆ
ನಿನಗೇತಕೆ ಅದರ ಚಿಂತೆ
ಮುನ್ನಿನಂತೆ ನೀನಿರು;
ಬೆಳಕಿನೆಡೆಗೆ ಕಣ್ಣ ತೆರೆ
ಜಗವ ಕಾವನೊಬ್ಬ ದೊರೆ
ಒಪ್ಪಿಸವನಿಗೆಲ್ಲ ಹೊರೆ
ನಿನ್ನಷ್ಟಕೆ ಹಾಡಿರು.
*****