ದೇಸೀಯತೆಯ ಪ್ರಶ್ನೆ

ಸುಳ್ಯದ ಸ್ವಂತಿಕಾ ಪ್ರಕಾಶನ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಇವರು ಸಂಯುಕ್ತವಾಗಿ ಏರ್ಪಡಿಸಿರುವ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಸಮಾರೋಪ ಭಾಷಣದ ಮೂಲಕ ನನ್ನ ಕೆಲವು ಆಲೋಚನೆಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಇಂದು ಬೆಳಗಿನಿಂದ ನಡೆದ ಸಂಕಿರಣದಲ್ಲಿ ಹಲವು ವಿದ್ವಾಂಸರು ಕನ್ನಡ ಸಾಹಿತ್ಯದಲ್ಲಿ ದೇಸೀಯತೆಯ ನೆಲೆಗಳನ್ನು ಕುರಿತು ವಿವಿಧ ದೃಷ್ಟಿಗಳಿಂದ ಪ್ರಬಂಧಗಳನ್ನು ಮಂಡಿಸಿದ್ದಾರೆ. ದೇಸೀಯತೆ ಮತ್ತು ರಾಷ್ಟ್ರೀಯತೆ ಎಂಬ ಕಲ್ಪನೆಗಳು ಹುಟ್ಟಿಸಿರುವ ಗೊಂದಲಗಳ ಬಗೆಗೂ ಚರ್ಚೆ ನಡೆಯಿತು. ಸಾಹಿತ್ಯಾಸಕ್ತರಾದ ತಾವೆಲ್ಲ ಇನ್ನೂ ಅನೇಕ ದಿನಗಳ ಕಾಲ ಮಂಥನವನ್ನು ನಡೆಸಲು ಇಂದಿನ ಸಂಕಿರಣದಲ್ಲಿ ಸಾಕಷ್ಟು ಸಾಮಗ್ರಿ ದೊರೆತಿದೆ ಎಂದು ಭಾವಿಸಿದ್ದೇನೆ. ನಾನು ಈಗ ದೇಸೀಯತೆಯ ಪ್ರಶ್ನೆಯನ್ನು ಸ್ವಲ್ಪ ವಿಶಾಲವಾದ ಚೌಕಟ್ಟಿನಲ್ಲಿ ಪರಿಶೀಲಿಸಲು ಬಯಸಿದ್ದೇನೆ.
ದೇಸೀ, ದೇಸೀಯತೆ ಎಂಬುವು ಕೇವಲ ಸಾಹಿತ್ಯಕ್ಕೆ ಸಂಬಂಧಿಸಿದ ಮಾತುಗಳು ಎಂದು ನಾನು ತಿಳಿದಿಲ್ಲ. ದೇಸೀ ಎಂಬುದು ಮನೋಧರ್ಮಕ್ಕೆ, ಬದುಕನ್ನು ಅರಿಯುವ ರೀತಿಗೆ ಸಂಬಂಧಪಟ್ಟ ಸಂಗತಿಯೂ ಹೌದು. ಶುದ್ಧ ದೇಸೀತನಕ್ಕೆ ಹಂಬಲಿಸುವುದು, ಅದನ್ನು ಒಂದು ಆದರ್ಶವೆಂದು ಬಗೆಯುವುದು ಇವತ್ತಿನ ದಿನಗಳಲ್ಲಿ ವ್ಯರ್ಥ ಹಳಹಳಿಕೆಯಾಗುತ್ತದೆ. ಅಥವಾ ನಾವು ನಮ್ಮ ತನವನ್ನು ಕಳೆದುಕೊಂಡುಬಿಟ್ಟಿದ್ದೇವೆ. ಎಂಬ ತಪ್ಪಿತಸ್ಥ ಭಾವದಿಂದ ಹುಟ್ಟುವ ಹಂಬಲವಾಗಿರುತ್ತದೆ. ಇಲ್ಲವೆ ನಾವು ಪಡೆದ ಶಿಕ್ಷಣಕ್ಕೂ ಆ ಶಿಕ್ಷಣ ರೂಪಿಸಿರುವ ನಮ್ಮ ಬದುಕಿನ ರೀತಿಗೂ ಸುತ್ತಲ ಅಸಂಖ್ಯಾತ ಜನರ ಬದುಕಿಗೂ ತಾಳೆಯಾಗದೆ ನಮ್ಮಲ್ಲಿ ಹುಟ್ಟಿದ ದಿಗ್ಭ್ರಮೆ ಹತಾಶೆಗಳಿಂದ ತಪ್ಪಿಸಿಕೊಳ್ಳಲು, ಸಮಾಧಾನ ಕಂಡುಕೊಳ್ಳಲು, ನಾವೇ ರೂಪಿಸಿಕೊಳ್ಳುವ ಕಟ್ಟಿಕೊಳ್ಳುವ ಆದರ್ಶವಾಗುತ್ತದೆ. ಆದ್ದರಿಂದಲೇ ದೇಸೀತನವನ್ನು ಕುರಿತ ಹುಡುಕಾಟಗಳು ‘ನಮ್ಮತನ’ದ ಹುಡುಕಾಟದ ಒಂದು ಭಾಗವೇ ಆಗಿವೆ. ದೇಸೀತನದ ಬಗೆಗಳನ್ನು ಕೇವಲ ಸಾಹಿತ್ಯದಲ್ಲಿ ಮಾತ್ರವಲ್ಲ. ಬದುಕಿನಲ್ಲೂ ಗುರುತಿಸಿ ಉಳಿಸಿಕೊಳ್ಳುವುದು ದೊಡ್ಡ ಸವಾಲೇ ಆಗಿದೆ.
ಹಾಗೇ ದೇಸೀ ಎಂಬುದು ಸಿದ್ಧವಾಗಿ ಬಳಕೆಗೆ ಲಭ್ಯವಿರುವ ವಸ್ತುವಲ್ಲ, ಏಕೆ ಎಂಬುದನ್ನು ಸ್ವಲ್ಪ ನೋಡೋಣ. ಮನುಷ್ಯ ಒಂದು ಸ್ಥಳದಲ್ಲಿ ಊರಿಕೊಂಡು, ಊರು ಮಾಡಿಕೊಂಡು, ಪರಸ್ಪರ ಸಂಪರ್ಕಕ್ಕೆ ಒಂದು ಭಾಷೆ ಮಾಡಿಕೊಂಡು, ಆ ಊರಿನ ಗಾಳಿ ಬಿಸಿಲು, ಪ್ರಾಣಿ ಮತ್ತು ಪರಿಸರ ಎಲ್ಲವುಗಳೊಂದಿಗೆ ನಿಕಟ ಆತ್ಮಿಯ ಸಂಬಂಧ ಇಟ್ಟುಕೊಂಡು ಬದುಕನ್ನು ‘ಹೊರಗಿನ ಯಾವ ಪ್ರಭಾವಕ್ಕೂ ಒಳಗಾಗದೆ’ ರೂಪಿಸಿಕೊಂಡು ದೇಸಿಗನಾಗುತ್ತಾನೆ. ಹಾಗಿರುವ ಸುದ್ಧ ದೇಸಿಗತನವನ್ನು ನಾವು ಕಲ್ಪಿಸಿಕೊಳ್ಳಲೂ ಇಂದು ಸಾಧ್ಯವಿಲ್ಲ. ನಾಗರಿಕತೆಯ ಬೆಳವಣಿಗೆಯೆ ದೇಸಿ ಮತ್ತು ಪರದೇಶಿಗಳ ಕೊಳುಕೊಡುಗೆಗಳ ವಿನ್ಯಾಸವಾಗಿದೆ. ತನ್ನದಲ್ಲದ, ತನ್ನ ದೇಸಿಯಲ್ಲದ ಬದುಕಿನ ವಿಧಾನಗಳ ಬಗ್ಗೆ ಕುತೂಹಲವೂ ಭಯ ಆತಂಕಗಳೂ ಮನುಷ್ಯನಿಗೆ ಇದ್ದೇ ಇರುತ್ತವೆ. ದೇಸಿಯಲ್ಲದ್ದನ್ನು ಅಳವಡಿಸಿಕೊಳ್ಳುವ, ಅನಾಮತ್ತಾಗಿ ಸ್ವೀಕರಿಸುವ ಅಥವಾ ತಿರಸ್ಕರಿಸುವ ಕೆಲಸವೂ ನಡೆಯುತ್ತಿರುತ್ತದೆ.
ಇನ್ನೊಂದು ದಿಕ್ಕಿನಲ್ಲಿ ಸ್ವಲ್ಪ ನೋಡೋಣ. ಯಾವುದೋ ಒಂದು ಪ್ರದೇಶದ ಜನರಲ್ಲಿ ಅಪಾರ ವೈವಿಧ್ಯವಿರುತ್ತದೆ ತಾನೆ. ಯಾವ ಜನವರ್ಗದ ಬದುಕಿನ ರೀತಿಯನ್ನು ದೇಸಿ ಎಂದು ಪರಿಗಣಿಸಬೇಕು ಎಂಬ ಪ್ರಶ್ನೆ ಮೂಡುತ್ತದೆ. ಕನ್ನಡದ ದೇಸಿ ಎಂದರೆ ಕನ್ನಡ ನಾಡಿನ ಯಾವ ಜನವರ್ಗದ ದೇಸಿಯನ್ನು ಕುರಿತು ನಾವು ಮಾತನಾಡುತ್ತಿದ್ದೇವೆ? ಕವಿರಾಜಮಾರ್ಗದಲ್ಲಿ ‘ಕನ್ನಡಂಗಳ್’ ಎಂಬ ಮಾತು ಬರುತ್ತದಲ್ಲ. ಅದು ಕನ್ನಡದ ಭಾಷಿಕ ವೈವಿಧ್ಯವನ್ನು ಮಾತ್ರವಲ್ಲ, ಬದುಕಿನ ವೈವಿಧ್ಯಗಳನ್ನು ಕುರಿತದ್ದು. ಅಕ್ಷರಸ್ಥ ಜನ ಸಮುದಾಯ ಹಲವು ಭಾಷೆಗಳಿಗೆ ತನ್ನನ್ನು ತಾನು ತೆರೆದುಕೊಂಡಾಗ ಎದುರಿಸುವ ದೇಸಿ ಮತ್ತು ದೇಸಿಯಲ್ಲದ ಮಾರ್ಗದ ಪ್ರಶ್ನೆ ಒಂದು ರೂಪ ತಾಳುತ್ತದೆ. ನಮಗೆ ಪರಿಚಿತವಾಗಿರುವ ಪ್ರಶ್ನೆ ಅದು ಮಾತ್ರ. ಅಕ್ಷರ ವಂಚಿತರು, ಸಮಾಜದ ಅಧಿಕಾರ ಕೇಂದ್ರದಿಂದ ದೂರವಿರುವವರೂ ಆದ ಜನ ದೇಸಿಯ ಪ್ರಶ್ನೆಯನ್ನು ಹೇಗೆ ಕಲ್ಪಿಸಿಕೊಳ್ಳಬಹುದು? ತಮ್ಮ ದಿನ ದಿನದ ಬದುಕು ಸ್ವಲ್ಪವಾದರೂ ಸುಖಕರವಾಗುವಂತೆ ಮಾಡುವ ಎಲ್ಲವನ್ನೂ ಸ್ವೀಕರಿಸುತ್ತಾರೋ ಅಥವಾ ಬಳಕೆಯಾಗಿರುವ ಬದುಕಿನ ರೀತಿಯನ್ನು ಬದಲಾಯಿಸಲು ಒಪ್ಪದೆ ವಿರೋಧ ಸೂಚಿಸುತ್ತಾರೋ?
ನಮ್ಮ ವರ್ತಮಾನಕಾಲದಲ್ಲಿ ಎಷ್ಟು ಬಗೆಯ ವೈವಿಧ್ಯಗಳು ವಿರೋಧಗಳು ಇವೆಯೋ ಅವೆಲ್ಲ ಹಿಂದಿನ ಕಾಲದಲ್ಲೂ ಇದ್ದೇ ಇತ್ತು. ಭೂತಕಾಲವನ್ನು ಸರಳವೂ ಅಖಂಡವೂ ಆದ ಒಂದು ಘಟಕ ಎಂದು ಕೊಳ್ಳುವುದು ಸರಿಯಲ್ಲ. ಪರಂಪರೆ ಎಂದು ನಾವು ಯಾವುದನ್ನು ಕರೆಯುತ್ತೇವೆಯೋ ಅದು ನಾವು ನಮ್ಮ ಇಂದಿನ ಅಗತ್ಯಕ್ಕೆ ತಕ್ಕಂತೆ ಭೂತಕಾಲದ ವಿವರಗಳನ್ನು ಆಯ್ದು ರಚಿಸಿಕೊಂಡ ಒಂದು ಪರಿಕಲ್ಪನೆ ಮಾತ್ರವಾಗಿರುತ್ತದೆ. ಚರಿತ್ರೆ ಮತ್ತು ಭೂತಕಾಲಗಳು ನಮ್ಮ ಇಂದಿನ ಬದುಕನ್ನು ಪರಿಣಾಮಿಸುತ್ತದೆ ಎನ್ನುವುದು ಅರ್ಧ ಸತ್ಯ ಮಾತ್ರ. ನಮ್ಮ ನಾಳಿನ ಕನಸು ಇಂದಿನ ನಮ್ಮ ಕ್ರಿಯೆಗಳನ್ನು ರೂಪಿಸುತ್ತದೆ. ಇಂದಿನ ಅಗತ್ಯ ನಮ್ಮ ಭೂತಕಾಲವನ್ನು ಇಂದು ನಾವು ಒಂದು ನಿರ್ಧಿಷ್ಟರೀತಿಯಲ್ಲಿ ಕಲ್ಪಿಸಿಕೊಳ್ಲಲು ಪ್ರಚೋದಿಸುತ್ತದೆ. ಪರಂಪರೆ ಮತ್ತು ಚರಿತ್ರೆ ನಮ್ಮ ಇಂದಿನ ಅಗತ್ಯಕ್ಕೆ ನಾವು ಕಟ್ಟಿಕೊಳ್ಳುವ ಆಕಾರಗಳು, ರಚನೆಗಳು, ಪರಿಕಲ್ಪನೆಗಳು.
ಆದ್ದರಿಂದಲೇ ದೇಸಿ ಎಂದರೆ ಯಾವ ದೇಸಿ? ನಮ್ಮ ಕನ್ನಡದ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸದ ಯಾವ ಭಾಗಗಳನ್ನು, ಅಂಶಗಳನ್ನು ಆಯ್ದು ನಾವು ನಮ್ಮ ದೇಸಿ ಎಂದು ಗುರುತಿಸುತ್ತೇವೆ? ಹಾಗೆ ಶುದ್ಧ ದೇಸಿ ಸುಲಭವಾಗಿ ಕೈಗೆ ಸಿಗುವ ವಸ್ತು ಎಂಬ ಭ್ರಮೆಯನ್ನು ಮೂಡಿಸುವುದು ಕೂಡ ಒಂದು ಬಗೆಯ ಸಾಂಸ್ಕೃತಿಕ ರಾಜಕಾರಣದಿಂದ ಹುಟ್ಟಿದ್ದಲ್ಲವೇ? ನಮ್ಮ ಬದುಕಿನ ಸಣ್ಣ ಸಣ್ಣ ವಿವರಗಳಲ್ಲೂ ‘ಪಶ್ಚಿಮ’ ತಾನೇ ತಾನಾಗಿರುವಾಗ ದೇಸಿಯನ್ನು ಮತ್ತೆ ಪ್ರತಿಷ್ಠಾಪಿಸುತ್ತೇವೆಂಬ ಹಂಬಲ, ಸಂಕೀರ್ಣತೆಯನ್ನು ಎದುರಿಸಲಾರದ ಮನಸ್ಥಿತಿಯಿಂದ ಹುಟ್ಟುವ ಅಪೇಕ್ಷೆಯಲ್ಲವೆ? ಈ ಪ್ರಶ್ನೆಗಳು ನಮಗೆ ಮುಖ್ಯವಾಗಬೇಕೆಂದು ತೋರುತ್ತದೆ.
ಕನ್ನಡದಂತಹ, ಸೀಮಿತ ಪ್ರದೇಶದಲ್ಲಿ ಬದುಕಿರುವ ಮತ್ತು ಪರಿಮಿತ ರಾಜಕೀಯ ಶಕ್ತಿಯಿರುವ ಭಾಷೆಗಳು ಇಂದು ತಮ್ಮತನವನ್ನು ಸ್ಥಾಪಿಸಿಕೊಳ್ಳುವ ಅನಿವಾರ್ಯತೆಯನ್ನು ಎದುರಿಸುತ್ತಿವೆ. ತಾಂತ್ರಿಕ ಯುಗದ ಬೆಳವಣಿಗೆಯ ಜೊತೆ ಜೊತೆಗೇ ಹೆಜ್ಜೆ ಹಾಕಬೇಕಾದ, ಹಾಗೆ ಹೆಜ್ಜೆಹಾಕಬೇಕಾದರೆ ಅಂತಾರಾಷ್ಟ್ರೀಯ ಪ್ರಭಾವಗಳಿಗೆ ಇತರ ಭಾಷೆಗಳ ಮೂಲಕ ತನ್ನನ್ನು ತಾನು ತೆರೆದುಕೊಳ್ಳಬೇಕಾದ ಅಗತ್ಯ ಒಂದೆಡೆಯಲ್ಲಿದೆ. ಇನ್ನೊಂದೆಡೆಯಲ್ಲಿ ಕನ್ನಡದ ಜನ ಇಷ್ಟು ಸಾವಿರ ವರ್ಷಗಳಲ್ಲಿ ಬೆಳೆಸಿಕೊಂಡು ಬಂದ ಅಸಂಖ್ಯಾತ ಬದುಕಿನ ರೀತಿ ನೀತಿಗಳು, ವೈಚಾರಿಕ ಆಕೃತಿಗಳು ಇವನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಸಾಗಿಸಬೇಕಾದ ಸವಾಲೂ ಇದೆ. ಅಂತೆಯೇ ಸಾಹಿತ್ಯ ವಿಮರ್ಶೆ ಇದುವರೆಗೆ ಯಾವುದನ್ನು ಕನ್ನಡದ ಪರಂಪರೆ ಎಂದು ಭಾವಿಸಲಾಗುತ್ತ ಬಂದಿದೆಯೋ ಅದನ್ನು ಮರುಪರಿಶೀಲಿಸಿ ದೇಸಿಯ ಬಗೆಗಳನ್ನು ಆವಿಷ್ಕರಿಸಿಕೊಳ್ಳಬೇಕಾಗಿದೆ.
ಇದು ಕೇವಲ ಕನ್ನಡ ಮತ್ತು ಇತರ ಭಾಷೆಗಳ ಸಂಬಂಧದ ಮೇಲ್ಪದರ ಅಧ್ಯಯನದಿಂದ ಸಾಧ್ಯವಾಗುವ ಸಂಗತಿಯಲ್ಲ. ಅಥವಾ ‘ಜಾನಪದ’ ಎಂದು ನಾವು ಪರಿಗಣಿಸುತ್ತಿರುವ ಅಧ್ಯಯನ ವಿಭಾಗಗಳಿಂದ ಆಗುವ ಕೆಲಸವೂ ಅಲ್ಲ. ಹಾಗೆ ಜಾನಪದ ಎಂಬ ಶಿಸ್ತೇ ಪಾಶ್ಚಾತ್ಯರಿಂದ ಅನಾಮತ್ತಾಗಿ ಎತ್ತಿಕೊಂಡು ನಮ್ಮ ವಿಶ್ವವಿದ್ಯಾಲಯಗಳಲ್ಲಿ ನಾವು ತಂದಿಟ್ಟುಕೊಂಡದ್ದು. ಅದು ಅಧ್ಯಯನ ಮಾಡಬೇಕಾದ, ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ ‘ವಸ್ತು’ ಎಂದೇ ನಮ್ಮ ಬಹುಜನ ವಿದ್ವಾಂಸರು ತಿಳಿದಿದ್ದಾರೆ. ಜಾನಪದದ ‘ಜನ’ ಅವರಿಗೆ ಮನುಷ್ಯರಾಗಿ ಕಾಣುವುದಕ್ಕಿಂತ ಅಧ್ಯಯನಕ್ಕೆ ಒದಗುವ ‘ವಸ್ತು’ಆಗಿದ್ದಾರೆ. ಜಾನಪದ ಕಲೆಯನ್ನು ಅಕ್ಷರ ಕಲಿತ, ಪಶ್ಚಿಮ ಬುದ್ಧಿಯ ನಮ್ಮ ನಿಮ್ಮಂಥವರು ‘ಕಲೆ’ ಎಂದು ಗುರುತಿಸಬಹುದು. ಆದರೆ ನಾವು ಯಾರನ್ನು ನಮ್ಮಿಂದ ಪ್ರತ್ಯೇಕವಾದ ‘ಜನ’ ಎಂದು ತಿಳಿದಿದ್ದೇವೋ ಅವರು ಅವುಗಳನ್ನು ಕಲೆ ಎಂದು ಖಂಡಿತ ತಿಳಿದಿಲ್ಲ. ಅದು ಅವರ ಬದುಕಿನ ಅನಿವಾರ್ಯ ಭಾಗ ಆಗಿದೆ. ದೇಸಿ ಎಂಬುದು ದೇಸಿಗನಿಗೆ ದೇಸಿಯಾಗಿ ಕಾಣುವುದೇ ಇಲ್ಲ. ಪಮೊ‌ಅನಿಗೆ ತನ್ನ ಕನ್ನಡ ಹಳಗನ್ನಡ ಅನ್ನಿಸಿರಲಿಲ್ಲವಲ್ಲ ಹಾಗೆ.
ಅಂದರೆ ನಾವು, ಕಲಿತ ಬುದ್ಧಿವಂತರು, ಒಟ್ಟು ಸಮುದಾಯದ ಬದುಕಲ್ಲಿ ಬೆರೆತಾಗ ದೇಸಿ ಎಂಬ ಕಲ್ಪನೆ ನಮ್ಮಲ್ಲಿ ಕಾಣುವ ಬಗೆಯೆ ಬೇರೆಯಾದೀತು. ಅದು ಕೇವಲ ಪಮಪ ಮತ್ತು ಸಂಸ್ಕೃತಕಾವ್ಯದ, ಬೇಂದ್ರೆ ಮತ್ತು ಜಾನಪದ ಸಾಹಿತ್ಯದ, ಕುವೆಂಪು ಮತ್ತು ಸಂಸ್ಕೃತ ಭೂಯಿಷ್ಠೆ ಭಾಷೆಯ, ಎಣ್ಣೆ ಮತ್ತು ತುಪ್ಪಗಳ, ಮೆಣಸು ಮುತ್ತುಗಳ ಪ್ರಶ್ನೆಯಾಗದೆ ಇಂಗ್ಲಿಷ್ ಮಾಧ್ಯಮ, ಕಾನ್ವೆಂಟು, ಅಮೇರಿಕೆಗೆ ಹಾರುವ ಆಸೆ, ಮಕ್ಕಲು ಡಾಕ್ಟರು, ಇಂಜಿನಿಯರಾಗದೆ ಬದುಕು ವ್ಯರ್ಥ ಎಂಬ ಭ್ರಮೆ, ನಮ್ಮ ಉಡುಪು, ನಮ್ಮ ಕೇಶ ಸೈಲಿ, ನಮ್ಮ ಮನೆಯ ವಿನ್ಯಾಸ, ಇತರರೊಡನೆ ನಾವು ಮಾತಾಡುವ ರೀತಿ ಹೀಗೆ ನಾವು ಕಲ್ಪಿಸದ ಎಲ್ಲೆಲ್ಲೂ ತಲೆ ಎತ್ತುವ ಸಂಗತಿಯಾಗಿದೆ.
ರಾಷ್ಟ್ರೀಯ ಮಾರ್ಗದ ಸುಲಭ ಯಾನದ ಸೌಕರ್ಯವನ್ನೂ ದೇಸಿ ಕಾಲುದಾರಿಗಳ ಜಟಿಲ ಸಂಬಂಧ ಆಕರ್ಷಣೆಯನ್ನೂ ಒಂದು ಸಮತೋಲನದಲ್ಲಿ ಅಳವಡಿಸಿಕೊಳ್ಳುವುದು ತುಂಬ ಕಷ್ತದ ಕೆಲಸ. ದೇಸಿಗೆ ಮನ್ನಣೆ ಸಿಗಬೇಕಾದರೆ ಮಾರ್ಗದ ಅವಲಂಬನೆಯೂ, ಮಾರ್ಗದ ಯಾನಕ್ಕೆ ನಮ್ಮನ್ನು ತಲುಪಿಸುವ ಕಾಲುದಾರಿಗಳ ಜಾಲವೂ ಪರಸ್ಪರ ಪೂರಕವೆಂದೇ ತಿಳಿದಿದ್ದೇನೆ. ಮಾರ್ಗದಲ್ಲಿ ಗಂಟೆಗೆ ಎಪ್ಪತ್ತು ಮೈಲಿ ವೇಗದಲ್ಲಿ ಸಾಗುವಾಗ ಬಂಡಿ ಜಾಡಿನಲ್ಲಿ ಕುಲುಕುತ್ತ ವಿರಾಮವಾಗಿ ಸಾಗುವ ಯಾನ ರಮ್ಯವಾಗಿ ಕಂಡರೆ, ಕಲ್ಲು-ಮುಳ್ಳು ತುಳಿಯುವಾಗ ಹೆದ್ದಾರಿಯ ಸುಖ ಸೌಲಭ್ಯಗಳನ್ನು ಹಂಬಲಿಸುವಂತಾಗುತ್ತದೆ. ಕಾಲು ಹಾದಿಯ ಜಾಲದಲ್ಲಿ ಸಿಕ್ಕಿರುವ ಜನಪದಗಳೆಲ್ಲ ಹೆದ್ದಾರಿ ಬದಿಯಲ್ಲಿ ಊರಿಕೊಳ್ಳುವುದು ಎಷ್ಟು ಅಸಾಧ್ಯ! ಜನಪದಗಳನ್ನೆಲ್ಲ ಕೂಡಿಸುವ ಕಾಲುದಾರಿಗಳೆಲ್ಲ ಹೆದ್ದಾರಿಗಳೇ ಆಗುವುದೂ ಅಸಾಧ್ಯ ಮತ್ತು ದುರಂತ.
ಹೊಸ ತಾಂತ್ರಿಕತೆ ಎಲ್ಲೆಲ್ಲೂ ಹೆದ್ದಾರಿಗಳನ್ನೇ ನಿರ್ಮಿಸಲು ಬಯಸುತ್ತದೆ. ಅದನ್ನು ತಪ್ಪಿಸಿಕೊಳ್ಳಲು, ವಿರೋಧಿಸಲು ಅಥವಾ ಸೂಕ್ತ ರೀತಿಯಲ್ಲಿ ಅಳವಡಿಸಲು ಕಲೆ, ಸಾಹಿತ್ಯ, ವಿಮರ್ಶೆ ಇತ್ಯಾದಿಗಳು ಬಯಸುತ್ತವೆ. ಅದಕ್ಕೇ ದೇಸಿಯನ್ನು ಕುರಿತು ಚಿಂತಿಸುವುದು ಅಗತ್ಯವಾಗುತ್ತದೆ. ಇಂದಿನ ಈ ಸಂಕಿರಣ ದೇಸಿಯತೆಯ ಪ್ರಶ್ನೆಗಳನ್ನು ಹಲವು ಮಗ್ಗುಲುಗಳಿಂದ ಪರಿಶೀಲಿಸಲು ನಮಗೆಲ್ಲ ಒಂದು ಅವಕಾಶ ಒದಗಿಕೊಟ್ಟಿದೆ. ನಿಮ್ಮೊಂದಿಗೆ ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಲು ಅವಕಾಶ ದೊರೆತದ್ದಕ್ಕೆ ನನಗೆ ಸಂತೋಷವಾಗಿದೆ, ನಮಸ್ಕಾರ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.