ಪೋಗದಿರೆಲೊ ರಂಗಾ
ಬಾಗಿಲಿಂದಾಚೆಗೆ…..
ಥುತ್ ನಿನ್ಮನೆ ಹಾಳಾಗಾ
ಮುಚ್ಕೊಳೋ ಮೊದಲು
ಎಸೆಯೋ ಕೊಳಲು
ಕಿತ್ತೆಸೆ ಹರಿ
ಆ ನವಿಲುಗರಿ
ಹೋಗು ಹಾಳಾಗೇ ಹೋಗು
(ಉದ್ವೇಗಕ್ಕೆ ಕ್ಷಮೆಯಿರಲಿ ಕೃಷ್ಣಾ)
ಯಾಕೆ ಗೊತ್ತಾ?
ನಾನು ಕೇವಲ ನರಕುನ್ನಿ
ಪಚಪಚ ಕಿಲುಬು ನಾಲಗೆ ಕಿಸಿದು
ನೀನಿಟ್ಟು ಹೋದ ಪಾಂಚಜನ್ಯಕ್ಕೆ
ತುಕ್ಕು ತೊಡಿಸಿ ಶವವಾದವನು
ಬನ್ನಿರೈ ಹೊತ್ತೊಯ್ದಿರೈ-ಎಂದು
ಸನ್ನದ್ಧನಾದವನು
ನಿನ್ನ ಬಾಲ್ಯಗಳ ನೆಚ್ಚಿ ಹಾಯಾಗಿರದೆ
ಬರೇ ನಿನ್ನ ರಾಸಲೀಲಾವಿನೋದಗಳ
ಕಥೆಯಾಲಿಸಿ: ಅಸಹ್ಯ ಪರಿತಪಿಸಿದವನು
ಭಪ್ಪರೆ ಭಳಿರೆಂದು ಕುಪ್ಪಳಿಸಿ
ತೆರೆಯುರುಳುವ ಮೊದಲೇ ಮೀಸೆ ಕಿತ್ತವನು-
ಬಾ, ನೋಡಿಲ್ಲಿ
ಈ ನಾಚಿಕೆ ಈ ಹಗರಣ
ನಿನ್ನ ನೆನಪು ಒನಪುಗಳ ಭಲೇ ಹಚ್ಚಿಕೊಂಡು
ಮಾರಾಟಕ್ಕೆ ಬಿದ್ದು ಬಿಟ್ಟಿದ್ದೀನಪ್ಪ ನಾನು
ತರತರ ಅವಸ್ಥೆ ಮರ್‍ಯಾದೆಗಳ
ಆಜೀವ ಜನ್ಮಾಂತರದಲ್ಲಿ,
ನಿನ್ನ ಕಥೆಗಳಲ್ಲರಳುವ ನನ್ನಜ್ಜ ಮುತ್ತಾತನ
ಮನೋಧರ್‍ಮದಲ್ಲಿ ನಿನ್ನ ಅಶ್ಲೀಲಕ್ಕೂ
ಗುಲಾಬಿ ಪೂಸಿದ ಈ ಮನೆಯ ಸಂಸ್ಕಾರದಲ್ಲಿ
ಇಷ್ಟು ದಿನವೂ ಹಗಲನ್ನೆ ಇರುಳೆಂದೇ ತಿಳಿದಿದ್ದೆ
ನಿನ್ನಂತೆ ಆಗಲೆಂದೇ ಈ ಕಿಸಿದ
ಮಣ್ಣ ಬಿರುಕಲ್ಲೆಲ್ಲ ಹಸಿಬೀಜಗಳ
ಹುಡುಕಿ ಬಿಡಿಸಿ ಹೊರಗೆಳೆದು ಕಚ್ಚಿ ಮುತ್ತಿಕ್ಕಿ
ನೆಟ್ಟು ನೆಟ್ಟಿಸಿಕೊಂಡು ಬರೀ
ಬೋಳುಬೋಳಾಗಿ ಬಿಟ್ಟಿದ್ದೇನೋ ನಾನು
ಮಾರಾಯ
ಚರ್‍ಮಕ್ಕೂ ಹೃದಯಕ್ಕೂ
ಬದುಕಿಗೂ ವ್ಯವಹಾರಕ್ಕೂ
ಇಲ್ಲಿ ಇನ್ನೂ ಕಾವು ಬಲಿತೇ ಇಲ್ಲ
ಶ್ವಾಸದ ಮೇಲೂ ವಿಶ್ವಾಸ ಇಲ್ಲೋ ಇಲ್ಲ.
ಇಲ್ಲ ಕೃಷ್ಣಾ ಇಲ್ಲ
ನೀ ತಪ್ಪು ತಿಳಿದಿದ್ದೀ
ಅಥವಾ ಹಾದಿ ತಪ್ಪಿ ಈ ಮನೆ ಹೊಕ್ಕಿದ್ದೀ
ನಿನ್ನ ಸತ್ಕಾರಗೈದು
ನಾ ಪಾಪ ಕಟ್ಟಿಕೊಳ್ಳೆನೋ ದೇವಾ
ಹುಂ….. ಹೊರಡಪ್ಪ-
ಆ ಬೆಣ್ಣೆ ಒರೆಸಿಕೋ-ನಾಚಿಕೆಯಿಲ್ಲವೇನೋ
ಬೆಳೆದಿದ್ದೀಯೋ ನೀನು-ತೊಟ್ಟುಕೋ ಏನಾದರೂ
ಆ ಕೊಳಲು ಮಾಸಿದೆ ನೋಡು
ಗಲ್ಲ ಇಳಿದಿದೆ ನೋಡು
ಹುಂ… ಏಳು… ಹೊರ್ವು-
ಮೈತುಂಬ ನಿರಿಗೆ ಹೊದ್ದು ಬೊಚ್ಚು ಬಾಯಲ್ಲಿ
ಕವಳ ಕುಟ್ಟುತ್ತ ಕೂತ ನಿನ್ನಾ ಮುದಿ ಗೋಪಿಯರಿದ್ದಲ್ಲಿಗೆ
ಐಸೆ
ಗೆಟಾಽಽಽವ್ಟ್
*****