ಶ್ರೀ ಅರವಿಂದ ಮಹರ್‍ಷಿ

ಓಂ! ತಮೋಹಾರಿ ಜ್ಯೋತಿರ್‍ಮೂರ್‍ತಿ ಚಿಚ್ಛಕ್ತಿ

ಚಿತ್ತಪಶ್ಶಕ್ತಿಯಿಂ ಯೋಗಸಾಧನೆಗೈದ
ಅಧ್ಯಾತ್ಮದುನ್ನತಿಯನಂತರಾಳದಿ ಪಡೆದ

ಪರಮ ಭಗವನ್ಮುಕ್ತ, ಲೋಕತಾರಕ ಶಕ್ತಿ!
ಜೀವನ ಸರೋವರದಿ ದೈವತ್ವದರವಿಂದ-

ವರಳಿಸಿದ ದಿವ್ಯ ಜೀವನದಮರ ದಾರ್‍ಶನಿಕ
ಸರ್‍ವಾರ್‍ಪಣಂ ಬಲಿದ ಸಿದ್ಧಿ ಅತಿಮಾನಸಿಕ

ಪೂರ್‍ಣ ತೇಜೋವೃದ್ಧಿ; ತವನಿಧಿಯ ಮಕರಂದ
ಕಾವ್ಯ ಕುಸುಮದಿ ಕನತ್ಕನಕ ಕಾಂತಿಯ ಬೀರಿ

ಸ್ವೋಜ್ವಲಂ ಮೆರೆದತ್ತು; ಭರತ ಭೂಮಿಯಪಾರ
ಸಂಸ್ಕೃತಿಯ ಬಿಂಬಿಸುತ ಜಗದೆಲ್ಲ ಮಾನವರ

ಕಲ್ಯಾಣಕೀ ಬೆಳಕು ತೋರಲಿಹ ಹೆದ್ದಾರಿ.

ಸಾವಡಸಿತೆಂಬುವರೆ?- ಅದು ನಮ್ಮ ವಿದ್ಯೆ;
ವ್ಯಕ್ತಿತೆಯುಳಿದ ಭೂಮಾತ್ಮಕಿದು ಯೋಗನಿದ್ರೆ.
*****