ಸಾವಿರದ ಸಾಸಿರಂಬರಿಸ ಪೂರ್‍ವದಲಿ ಭುವ-
ನದ ಭಾಗ್ಯದಿಂ ಪುಟ್ಟಿ ಮುದುವೊಳಲ ಬಳೆಗಾರ
ಬೀರ ಕಡಗವ ತೊಟ್ಟು ಇಹಪರದ ರಸಸಾರ-
ವೆನೆ ನಿಮಿರ್‍ಚಿದ ಕಾವ್ಯ ರನ್ನಕೃತಿ! ಪರಿಕಿಸುವ-
ಗಂಟೆರ್‍ದೆಯೆ? ಒಂದರಲಿ ಶಾಂತ ಮತ್ತೊಂದರಲಿ
ವೀರ ರಸಮೊತ್ತರಿಸಿ ಪುಟಿಯುತಿರೆ ಚಲಕಿರಿದ
ಆ ಸುಯೋಧನನ ಘನತೆಯ ರುದ್ರನಾಟಕದ
ದೃಶ್ಯ!- ಗದೆ ಗದೆಯ ಸಂಘಟ್ಟಣೆ-ಮಹಾ ಶೈಲಿ!
ಅತ್ತಿಮಬ್ಬೆಯ ದಾನಚಿಂತಾಮಣಿಯ ಪೆಸರ-
ನುಳಿಸಿ, ರಾಯಗೆ ನಮಿಸಿ, ಪಂಪ ಪೊನ್ನರ ಕೃತಿಯ
ತಿರುಳ ಮಹಿಮೋನ್ನತಿಯ ಬಗೆ ಹೀರಿ, ಜಿನ ಸಮಯ
ದೀಪಕಂ ಒಡೆದನೊಡೆದಂ ನುಡಿಯ ಭಂಡಾರ!
ಸುಭಗದಲಿ ಎರ್‍ದೆಗೊಂಬ ಗಂಡುಕವಿ ಕೃತಾರ್ಥಂ
ನಿಲ್ಗೆ ನಿನ್ನಯ ಪೆಸರ್ ಚಂದ್ರತಾರಂಬರಂ!
*****