ನಂಬ‌ರ್ ೧

ಈ ಪೈಪೋಟಿ ಜಗತ್ತಿನಲ್ಲಿ ನಂಬರ್ ಒನ್ ಸ್ಥಾನ ಗಿಟ್ಟಿಸಿ ಕೊಳ್ಳಲು ಎಲ್ಲ ರಂಗದವರೂ ಹವಣಿಸುತ್ತಾರೆ. ತಮ್ಮ ಗುರಿ ಮುಟ್ಟಲು ನಾನಾ ತಂತ್ರ-ಕುತಂತ್ರಗಳನ್ನು ನಡೆಸುತ್ತಲೇ ಇರುತ್ತವೆ. ದೇವದಾನವರಲ್ಲೇ ಅಮೃತಮಂಥನಕ್ಕೆ ಭಾರಿ ಘರ್ಷಣೆ ನಡೆದದ್ದನ್ನು, ಇಡೀ ಜಗತ್ತನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಡಬೇಕೆಂಬ ಹುಮ್ಮಸ್ಸಿನಿಂದ ಹೊರಟಾಗ ಮಹಾಯುದ್ಧಗಳೇ ಆಗಿ ಮಾನವಕುಲ ನಾಶವಾದುದ್ದನ್ನು ಇತಿಹಾಸ ಸಾರುತ್ತಲೇ ಇದೆ. ಈ ಕುರಿತು ಚಿಂತಿಸುತ್ತಲೇ ಮಕ್ಕಳ ಶಿಬಿರಕ್ಕೆ ತೆರಳಿದ ನಾನು, ಮಗುವೊಂದನ್ನು ಕರೆದು ಅವನ ಕೈಗೆ ಚಿತ್ರವೊಂದನ್ನು ನೀಡಿದೆ. ಎತ್ತರದ ಮರವೊಂದನ್ನು ಬರೆದು ‘ಇದು ನಂಬರ್ ೧’ ಎಂದು ಬರೆದಿದ್ದ ಚಿತ್ರವದು.

ಹುಡುಗ ತಕ್ಷಣ ಸ್ಕೆಚ್ ಪೆನ್ ತೆಗೆದುಕೊಂಡು ಆ ಮರದ ಪಕ್ಕದಲ್ಲಿ ಅದಕ್ಕಿಂತ ಎತ್ತರದ ಗಿಡದ ಚಿತ್ರ ಬರೆದು ಹೇಳಿ ಈಗ ಯಾವುದು ‘ನಂಬರ್ ಒನ್’ ಎಂದ. ಹಾಜರಿದ್ದ ನೂರು ಮಕ್ಕಳೂ ಹುಡುಗ ಬರೆದ ಗಿಡವನ್ನೇ ‘ನಂಬರ್ ಒನ್’ ಎಂದುವು. ನಾನು ಬರೆದಿದ್ದ ಚಿತ್ರ ‘ನಂಬರ್ ಟು’ ಎಂದಾಯಿತು.

ಹೀಗೆ, ಯಾವುದು ಯಾವಾಗ ‘ನಂಬರ್ ಒನ್’ ಆಗುತ್ತದೆ. ಯಾವುದು ‘ನಂಬರ್ ಟು’ ಆಗುತ್ತದೆ ಹೇಳುವುದು ಕಷ್ಟ. ಪ್ರಸಾರ ಸಂಖ್ಯೆಯಿಂದ ಪತ್ರಿಕೆ ‘ಫಸ್ಟ್’ ಎಂದಾಗ ನಂತರ ಮತ್ತೊಬ್ಬರು ಗುಣಮಟ್ಟದಿಂದ ‘ಯಾವುದು ಫಸ್ಟ್’ ಎಂದು ಸರ್ವೆ ಮಾಡ ಹೊರಡುತ್ತಾರೆ. ಅದು ಸಹಜ ಕೂಡಾ. ಅಂಥ ಸ್ಪರ್ಧೆ ಇದ್ದಾಗಲೇ ವೈವಿಧ್ಯ ಮೂಡಿಸಲು, ಸೃಜನಾತ್ಮಕತೆ ಬಿಂಬಿಸಲು ಪ್ರಾಮಾಣಿಕ ಪ್ರಯತ್ನಗಳಾಗುವುದು.

ಪತ್ರಿಕಾರಂಗ ಮಾತ್ರವಲ್ಲ-ಚಿತ್ರರಂಗದಲ್ಲೂ ಈ ಪೈಪೋಟಿ ನಾವು ಕಾಣುತ್ತಲೇ ಇದ್ದೇವೆ. ಈಗಂತೂ ಹೀರೋ-ಹೀರೋಯಿನ್ಗಳಾಗಲು ಹೊರಟವರು-ನಾವು ನಂಬರ್ ಒನ್ ಆಗಬೇಕೆಂದು ಹಂಬಲಿಸುತ್ತಾ ಗಾಂಧೀನಗರಕ್ಕೆ ದೌಡಾಯಿಸುತ್ತಿರುವವರು ಬಹುಮಂದಿ. ಒಂದು ಕಾಲದಲ್ಲಿ ‘ಏ ವನ್ ಪಟ್ಟಿ’ ಗಳಿಸಿದ ನಾಯಕ-ನಾಯಕಿಯರು ಕ್ರಮೇಣ ಮಸುಕಾಗಿ ಹೊಸಬರು ಹೆಸರಾಗುತ್ತ ಬಂದಿದ್ದಾರೆ. ಈಗ ಆದರೂ ಸಿನಿ ಜಗತ್ತಿನ ಗ್ಲಾಮರನ್ನ ಬ್ಲಾಕ್ ಅಂಡ್ ವೈಟ್‌ನಲ್ಲಿ ದೊರಕುವ ದುಬಾರಿ ಸಂಭಾವನೆ ಕನಸುತ್ತ ಹೊಸ ಪೀಳಿಗೆಗೆ ಅವಕಾಶ ಬಿಟ್ಟುಕೊಡಲು ಮನಸಾಗದೆ ಡಬ್ಬಲ್ ರೋಲ್, ಟ್ರಿಬ್ಬಲ್ ರೋಲ್ ಮಾಡುತ್ತಾ ಚಿತ್ರರಂಗದಲ್ಲಿ ತಮ್ಮ ‘ನಂಬರ್ ಒನ್’ ಸ್ಥಾನ ಉಳಿಸಿಕೊಳ್ಳಲು ತಮ್ಮ ಮೂಗಿನ ನೇರಕ್ಕೆ ಒನ್’ ಸ್ಥಾನ ಉಳಿಸಿಕೊಳ್ಳಲು ತಮ್ಮ ಮೂಗಿನ ನೇರಕ್ಕೆ ಕಥೆ ಹೊಸೆಯಬಲ್ಲ ವ್ಯಕ್ತಿಯ ಹುಡುಕಾಟ ಇಂದೂ ನಿರಂತರ ನಡೆಸುತ್ತಲೇ ಬಂದಿದ್ದಾರೆ.

ನಂಬರ್ ಒನ್ ಪಟ್ಟ ಅಲಂಕರಿಸಿದ ನಾಯಕ, ನಿರ್ಮಾಪಕ ಜೀವ ಹಿಂಡುತ್ತಾ, ಕೂತರೆ ನಿಂತರೆ ನಖರಾ ಮಾಡುತ್ತ, ನಾಯಕಿಯೊಂದಿಗಿನ ಹನಿಮೂನ್‌ಗೆ ಫಾರಿನ್ ಲೋಕೇಷನ್ಸ್ ಸೂಚಿಸುತ್ತಾ ಹೋದಾಗ ‘ಇವರನ್ನು ಖುಶಿಪಡಿಸಲು ನಾನೇಕೆ ಮುಂಡಾಯಿಸಿಕೊಳ್ಳಬೇಕು’ ಎಂದು ಚಿಂತಿಸಿದ ನಿರ್ಮಾಪಕರು ಒಬ್ಬೊಬ್ಬೊರಾಗಿ ತಾವೇ ನಾಯಕರಾಗಿ ‘ನಂಬರ್ ಒನ್ ಸ್ಥಾನ’ ಗಿಟ್ಟಿಸುವ ಕನಸೂ ಈಗ ಒಂದೊಂದಾಗಿ ನಿಜವಾಗುತ್ತಿದೆ.

ಮೊನ್ನೆ ಗಾಂಧೀ ಬಜಾರ್ ಜನಜಂಗುಳಿಯಲ್ಲಿ ಅಡ್ಡಾಡುವಾಗ ಗುಂಪಿನಲ್ಲಿ ನಾಲ್ಕು ಮಂದಿಗೆ ಡಿಕ್ಕಿ ಹೊಡೆಯಲೇಬೇಕಾಯಿತು. ಈ ನಾಲ್ವರಲ್ಲಿ ಮೂವರು ‘ಮುಂದಿನ ತಿಂಗಳು ಆರಂಭವಾಗೋ ಚಿತ್ರದಲ್ಲಿ ನಾನು ಹೀರೋ ಸಾರ್’ ಎಂದರು.

‘ಹೌದಾ’ ಎಂದೆ ಆಶ್ಚರ್ಯದಿಂದ.

‘ಫೋಟೋ ಸೆಷನ್ ಆಗಿದೆ. ನೋಡಿ ಸಾರ್ ಫೋಟೋಗಳು’ ಎಂದು ತೋರಿಸಿದರು.

ಸಾಕ್ಷಿ-ಪುರಾವೆಗಳ ಸಮೇತ ಅವರು ಮಾತನಾಡಿದಾಗ ನಾನು ಮೌನಿಯಾಗಬೇಕಿದ್ದದ್ದು ಅನಿವಾರ್ಯವಾಯಿತು. ಒಬ್ಬನಂತೂ ಮುಹೂರ್ತದ ಆಹ್ವಾನ ಪತ್ರಿಕೆಯೇ ನೀಡಿದ.

‘ಯಾರಯ್ಯ ಈ ಡೈರಕ್ಟರು ಹೆಸರೇ ಕೇಳಿಲ್ಲವಲ್ಲ’ ಎಂದೆ “ಫೆಂಟಾಸ್ಟಿಕ್ ಇಮ್ಯಾಜಿನೇಷನ್ ಇದೆ ಸಾರ್ ಅವರಿಗೆ. ಇದೇ ಫಸ್ಟ್ ಟೈಂ ಡೈರಕ್ಟ್ ಮಾಡ್ತಿದ್ದಾರೆ. ನಾನು ಫಸ್ಟ್ ಟೈಂ ಆಕ್ಟ್ ಮಾಡ್ತಿದ್ದೀನಿ. ಯೂನಿಟ್‌ನಲ್ಲಿ ಇರೋರೆಲ್ಲ ನ್ಯೂ ಕಮರ್ಸ್ ಸಾರ್. ಕಥೆ ಬೊಂಬಾಟ್ ‘ಯಜಮಾನ’ನನ್ನ ಮೀರಿಸೋ ಥರಾ ಹಿಟ್ ಆಗುತ್ತೆ ಫಿಲಮ್. ಮುಂದಿನ ವರ್ಷ ನಾನೇ ನಂಬರ್ ಒನ್. ಬೆಸ್ಟ್ ಆಕ್ಟರ್ ಅವಾರ್ಡು ನಂಗೇ” ಎಂದು ಗುರುರಾಜಲು ನಾಯಿಡು ಅವರನ್ನು ಮೀರಿಸುವಂತೆ ಹರಿಕಥೆ ಮಾಡಿದ. ಬೇಡ ಬೇಡವೆಂದರೂ ವಿದ್ಯಾರ್ಥಿ ಭವನದ ಮಸಾಲೆ ದೋಸೆ ಕೊಡಿಸಿ ‘ನಾನು ನಂಬರ್ ಒನ್ ಸ್ಟಾರ್ ಆಗ್ತಿನಿಂತ ಹೇಳಿದೀನಿ ಅಂತ ಬರೀರಿ ಸಾರ್’ ಎಂದ. ‘ಮುಂಚೆ ನಿನ್ನ ಚಿತ್ರ ತೆರೆಗೆ ಬರಲಿ. ಹ್ಯಾಗೆ ಅಭಿನಯಿಸಿದಿ ನೋಡಿ ಆಮೇಲೆ ಬರೆಯೋಣ’ ಎಂದೆ. ‘ಚಿತ್ರ ನೋಡಿದ ಮೇಲೆ ನಿಮಗನ್ನಿಸಿದ್ದು ಬರೀರಿ. ಚಿತ್ರ ಬಿಡುಗಡೆ ಆಗೋಕೆ ಮುಂಚೆ ಬೇರೆಯವರು ಹೇಳಿದ್ದೆಲ್ಲ ಬರೀತಾ ಬಂದಿದಾರಲ್ಲ ಎಲ್ರೂ, ಹಾಗೇ ನಂದೂ ಬರೀರಿ ಸಾರ್. ಮುಹೂರ್ತದ ದಿನ ಒಂದು ಭರ್ಜರಿ ಪಾರ್ಟಿ ಇರುತ್ತೆ- ಸ್ಟಾ‌ರ್ ಹೋಟೆಲಲ್ಲಿ’ ಅಂದ.

ನಂಬರ್ ಒನ್ ಬೌಲರ್, ಬ್ಯಾಟ್ಸ್‌ಮನ್, ಫೀಲ್ಡರ್‌ಗಳಾಗಬೇಕೆಂಬ ಕನಸು ಎಲ್ಲರಿಗೂ ಇದ್ದದ್ದೆ. ಒನ್ ಡೆ ಕ್ರಿಕೆಟ್ ಮ್ಯಾಚ್ ಆದಾಗ ಅದು ಅಂದೇ ನಿರ್ಧಾರವಾಗುತ್ತದೆ. ಬದುಕೆಂಬ ಕ್ರಿಕೆಟ್ ಆಟದಲ್ಲಿ ಫಲಿತಾಂಶ ಬರುವುದು ನಿಧಾನ.

ಹೀಗೆ ಎಲ್ಲೆಡೆ ನಂಬರ್ ಒನ್ ಹುಚ್ಚು. ನಂಬರ್ ಒನ್ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಂದಿದೆ ಇಂಗ್ಲೀಷ್ ಪತ್ರಿಕೆ. ಟೀವಿ ಸಿರಿಯಲ್‌ನವರನ್ನು ಯಾರನ್ನೇ ಕೇಳಿ ‘ನಮ್ಮ ಟಿಆರ್‌ಪಿಲಿ ಫಸ್ಟ್ ಬರೋದು ಹ್ಯಾಗೆ ಅಂತ ನಂಗೊತ್ತು’ ಎಂದು ಮೀಸೆ ತಿರುವವರೂ ಇದ್ದಾರೆ.

ಸಿನಿಮಾ ಹಾಡುಗಳಲ್ಲಿ ‘ಟಾಪ್ ಟೆನ್’ ಕಥೆಯೂ ಹೀಗೆ ವಿಚಿತ್ರ.

ಕೆಲವು ಪ್ರಕಾಶಕರೂ ಈಗ ಟಾಪ್‌ ಟೆನ್ ಗೀತೆ ಹಾಡುತ್ತ ತಮಗೆ ಬೇಕಾದ ಲೇಖಕರನ್ನು ‘ನಂಬರ್ ಒನ್’ ಮಾಡುವ ಪ್ರಯತ್ನಗಳೂ ಈಗ ಸಾಮಾನ್ಯ.

ಶಿಬಿರದ ಹುಡುಗ ಒಬ್ಬ ಹೇಳಿದ ‘ನಾನು ಕ್ಲಾಸಿನಲ್ಲಿ ಫಸ್ಟ್’. ಕೂಡಲೇ ಮತ್ತೊಬ್ಬ ಅಬ್ಬರಿಸಿದ ‘ನಾನು ಸ್ಕೂಲಿಗೆ ಫಸ್ಟ್’. ಕೂಲಾಗಿ ನಿಂತ ಹುಡುಗಿ ಹೇಳಿದಳು. ‘ನಾನು ಸ್ಟೇಟ್‌ಗೆ ಫಸ್ಟ್’. ‘ಕಾಲ ಬದಲಾದಂತೆ ಹಗಲು ರಾತ್ರಿಯಂತೆ ಫಸ್ಟ್ ಸೆಕೆಂಡ್‌ಗಳು ಬದಲಾಗುತ್ತಿರುತ್ತವೆ.

ಯಾವುದೇ ರಂಗದಲ್ಲಿರಲಿ ಇರುವಷ್ಟು ಕಾಲ ಪ್ರಾಮಾಣಿಕವಾಗಿ ದುಡಿದು ಫಸ್ಟ್ ಆದರೆ ಚೆನ್ನ ಎಂದರು ವೃದ್ಧರೊಬ್ಬರು.

ಈಗ ಹೇಳಿ ನೀವು ಯಾವುದರಲ್ಲಿ ಫಸ್ಟ್?
*****
(೨೬-೦೪-೨೦೦೨)