ನೆಹರು : ಶ್ರದ್ಧಾಂಜಲಿ

ಬಾನ ನೀಲಿಯ ಕುಡಿದು, ನಕ್ಷತ್ರಗಳ ಮುಡಿದು
ಮೋಡ-ಕುಡಿ ಮಿಂಚುಗಳ ಧಾರೆ ಹಿಡಿದು
ನದಿನದಿಗೆ ಧುಮುಕಿಸಿದ ಆ ಹಿಮಾದ್ರಿಯ ಶಿಖರ
ನೆಲಕೊರಗಿ ನಿದ್ರಿಸಿತು; ಏಳ್ವುದೆಂದು?

ಯಾರು ಬಂದರು ತೆರೆವ ಬಾಗಿಲವು, ಸೋತವರ-
ನೆತ್ತಿಕೊಳ್ಳುವ ಹೆಗಲು, ತುಂಬಿದುಡಿಯು;
ಎಂಥ ಭಾರಕು ಜೋಲಿ ಹೊಡೆಯದಿಹ ತೂಗು-ತೊಲೆ,
ಆ ಮಹಾತ್ಮನು ತೆರೆದ ಗರ್‍ಭಗುಡಿಯು.

ಒಳಹೊರಗು ಸ್ವಚ್ಛ ಬಿಳಿ; ಹಾಲುಕ್ಕಿದಂತೆ ನಗು
ಪೂರ್‍ವ-ಪಶ್ಚಿಮ ಬೆರೆತಪೂರ್‍ವಕಾಂತಿ.
ಪುಟಿ ಪುಟಿವ ಕಾರಂಜಿ; ಹಳತು-ಹೊಸತನು ಹಿಂಜಿ
ಹೊಸೆದು ಹೊತ್ತಿಸಿ ಹಿಡಿದ ಶಾಂತಿ-ಪಣತಿ.

ತ್ಯಾಗವನು ಬಿತ್ತಿ ಬೆಳೆದಂಥ ಗೊಮ್ಮಟ ನಿಲುವು-
ರಸಿಕತೆಯ ಕಂಪೊಗೆವ ಚೆಂಗುಲಾಬಿ.
ಎರಡು ಕೈಯಿಂದಲೂ ಹೊಸ ಭಾರತವ ಮಿದ್ದಿ
ತಿದ್ದಿದನು ತಾನದರ ಕಣ್ಣುಗೊಂಬಿ.

ಈ ನೆಲದ ಮಣ್ಣವಗೆ ಕಸ್ತೂರಿ, ಕೇಸರವು
ಈ ಜನವ ಹೊಟ್ಟೆಯೊಳಗಿಟ್ಟುಕೊಂಡು,
ಕಾಂಗರೂವಿನ ಹಾಗಿ ಜಿಗಿದ ನೂರಡಿ ಮುಂದೆ,
ಹಸಿರು ಹೊಮ್ಮಿತು ತುಂಬು ತೆನೆಯ ಹಿಡಿದು.

ತುಂಬಿದೆಪ್ಪತ್ತೈದು ವರುಷದೀ ಶತಮಾನ-
ದಿತಿಹಾಸ ಸಂಪುಟದ ಹಾಳೆ ತರೆದು,
ಓದಿ ಹೋರಾಟಗಳ ಧೀರ ಕಥೆ ಚಿಮ್ಮಿರುವ
ಮೂರು ಬಣ್ಣದ ಗುಡಿಯ ಭೇರಿ ಹೊಡೆದು.

ನಿನ್ನಿನಿರುಳೇ ಅವನು ಎಲ್ಲ ಕೆಲಸವ ಮುಗಿಸಿ
ಮಲಗಿದನು, ನಾಳೆಯನು ನಮಗೆ ಬಿಟ್ಟು;
ಅಲಸಿಗರು ನಾವು ನಮಗೊಟ್ಟಿಕೊಂಡಿವೆ ಬೆಟ್ಟ-
ಹಗಲಿರುಳು ಕಡಿದರೂ ತೀರದಷ್ಟು.

ಯಾವುದನು ಬರಬಾರದೆಂದು ನೆನೆದಿದ್ದೆವೊ
ಬಂದೆಬಿಟ್ಟಿತು ಕೊನೆಗೆ, ಹೊಸತಿಲೊಳಗೆ
ಈಗ ತಾಕಿತು ತಲೆಗೆ ಅವನು ಹೊತ್ತಿಹ ಭಾರ
ಎತ್ತು ಭಾರತ ಮಹಾರಥವ ಮೇಲೆ.

ಕಣ್ಣೀರು ತೊಳೆಯ ಕಲ್ಮಷ ಪರಂಪರೆ ತೈಲ
ಹೀರಿ, ಹೊಸಬತ್ತಿಯಲಿ ಸ್ವಂತ ಬೆಳಕು
ಹಿಡಿದು, ಎದೆ ಹಣತೆಯಲಿ ಸಲಿಸು ಶ್ರದ್ಧಾಂಜಲಿಯ
ಅವನ ಹೊಂಗನಸುಗಳ ದೀಕ್ಷೆ ಪಡೆದು.
*****