ದೀಪಮಾಲೆಯ ಕಂಬ

“ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು”
ಮಿದುವಾಗಿ ಹದಗೊಂಡು ಹರಿವುದೀ ಹಾಡು!
ಗೂಡಿಂದ ಬಾನಿನಂಗಣಕೇರಿ ಕರೆಯುತಿದೆ,
ಸಹ್ಯಾದ್ರಿ ಶಿಖರದಲಿ ನಿಂತು ನೋಡು;

ಮೂಡಪಡುವಲ ತೆಂಕು ಬಡಗು ಕೊಡಗಿನ ನಾಡು
ಎಲ್ಲ ಒಂದೇ ಯಶದ ರಸದ ಬೀಡು.
ಬಾ ಬಂಧು, ಹತ್ತಿರದಿ ನಿಂದು ಸಂತೋಷದಿಂದ ಹಾಡು;
ಶತಮಾನಗಳ ನಾಡ ಗತವೈಭವವ ನೆನೆದು,
ಸಣ್ಣತನ ಸ್ವಾರ್‍ಥ ಸಂಕೋಚಗಳ ರಾಡಿ ಮಡುವನುಳಿದು,
ನಿನ್ನ ಮನಸಿನ ಮೂಲೆಗಂಟಿರುವ ಸಂಶಯದ ಜೇಡ ಬಲೆ ಹರಿದು,
ಶುಭದ ಹಾರೈಕೆಯಲಿ ನಿನ್ನೆದೆಯು ದಾಳಿಂಬವಾಗಿ ಬಿರಿದು,
ನಾಡಿನಂತಃಕರಣದಲ್ಲಿ ಬೆರೆದು.

ಈಸು ದಿನ ಹತ್ತಿರಿದ್ದರು ದೂರ
ಕಂಡರೂ ಕಂಡಮುಟ್ಟಿದ ತೆರದಿ ಒಂದು ತರಹ;
ಗೋಡೆಗೋಡೆಗೆ ಹಾಯ್ದು ತಡಕಾಡುತ್ತಿದ್ದವರು
ಈಗ ಬಂದಿದ್ದೇವೆ ಹೊಂಬೆಳಕು ಹರಡಿರುವ
ಹುಲ್ಲುಗಾವಲಕೆ, ಹೂಗಾಳಿಗೆ,

ಅಗಲಿ ಕೂಡಿದ್ದೇವೆ ಹೊಸ ಬಾಳಿಗೆ.
ಮೇಲೇರಿದಂತೆ ಕ್ಷಿತಿಜ ವಿಸ್ತಾರಗೊಳ್ಳುವದು, ಬಲ್ಲೆಯ?
ಅಷ್ಟು ದೂರದ ಮಾತು ಒಲ್ಲೆಯ?
ಇಲ್ಲ ಕಣ್ಣೆದುರು ಅರಳಿದೆ ಸೃಷ್ಟಿ;
ನೀಲಿ, ಬಿಳಿ, ಹಳದಿ, ಕೆಂಪು, ಕಂಪು;
ಟುವ್ವಿಡುವ ಕುಕಿಲಿಡುವ ಗಾನದೊನಪು;
ವರ್‍ಣಮಂಡಲ ರಚಿಸಿ ಆಗಸವ ತೊಯ್ಸಿ
ಮಂಜುಹನಿಯಾಗಿಳಿದ ಹಾಡಿನಿಂಪು,
ಈ ಹಾಡಿಗೆಂದೆ ಶ್ರುತಿ ಮಾಡಿಟ್ಟ ವೀಣೆ-
ಕೃಷ್ಣೆ, ಕಾವೇರಿ, ವರದೆ, ತುಂಗಭದ್ರೆ!
ಜೋಗದಲ್ಲಿಳಿದು ಕಾಮನಬಿಲ್ಲನೊಡಮುರಿದು ಬರೆ ಶರಾವತಿ
ಬೆಳಕಿನಮರಾವತಿ,

ಇಲ್ಲಿ ನುಡಿಯುವ, ನಡೆವ, ದುಡಿದು ಪಡೆಯುವ, ಕೊಡುವ
ಇದನುಟ್ಟು ಇದನುಂಡು ಕೊಂಡು ಕೊನೆವ
ಈ ಜನದ ಬದುಕಿನ ಸೊಗಸು ಸಂಸ್ಕೃತಿಯರಳಿ ಪರಿಮಳಿಸಲೆಂದು
ಹೊಸತಿಲಲಿ ಹಚ್ಚಿಟ್ಟ ಹಣತೆ-
ಒಳಗು ಹೊರಗೂ ಕೂಡಿ ಬೆಳಗಲೆಂದು.

ಗಡಿಯಾಚೆ ಗಡಿಯೀಚೆ ಒಂದೆ ಕನ್ನಡ ಗಡಿಯು
ಪೂಜೆಗೊಳ್ಳುವ ತಾಯಿ ಜನಶಂಕರಿ;
ಕಡಲಕರೆ, ಮಲೆನಾಡು, ಬೆಳುವಲೈಸಿರಿ ತೆನೆಯು
ಎಲ್ಲ ಹದ ರುಚಿ ಬೆರೆತ ಜೀವ ಲಹರಿ!

ಇಲ್ಲಿ ಕೂಡಲ ಬಾಳು, ಗೊಮ್ಮಟನ ಔನ್ನತ್ಯ
ವೀರ ನಾರಾಯಣನೆ ನುಡಿದ ಕಾವ್ಯ;
ಶಿಲೆಯ ಅಂತಃಪುರದಿ ಕಲೆಯ ಕಿಂಕಿಣಿನಾದ
ಸುಳಿವ ಶಾಸನವಾಗಿ ಮರದ ಜೀವ!

ಎದ್ದೇಳುತಿದೆ ಮುಂದೆ ದೀಪಮಾಲೆಯ ಕಂಬ
ಉದಯವಾಗಲಿ ಒಳಗೆ ಚೈತ್ಯಬಿಂಬ-
ಒಂದು ದೀಪಕೆ ಲಕ್ಷದೀಪ ಹೊತ್ತಿಸಿ ಹೊಗರಿ
ಬೆಳಗಲಿದೆ ಇನ್ನೇನು ಕಣ್ಣತುಂಬ!
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ