ಹೂತೊಂಗಲಲಿ ಕುಳಿತು, ಹೊಂಬಕ್ಕಿ ಹಾಡುತಿರೆ
ಎನ್ನೆದೆಯು ಸಂತಸದಿ ಕುಣಿಯುತಿಹುದು;
ನಾವಿಬ್ಬರೂ ಒಂದೆ ಹಳ್ಳಿಯಲಿ ಬಾಳಿಹೆವು-
ಈ ಬಗೆಯ ಬದುಕೆಮ್ಮ ಹಿಗ್ಗಿಸಿಹುದು.
ನಮ್ಮ ತೋಪಿನ ನೆಳಲ ಹಸುರ ಮೇಯಲು ಬಹವು
ಅವಳ ಮುದ್ದಿನವೆರಡು ಕುರಿಮರಿಗಳು,
ಹಾದಿತಪ್ಪುತ ನಮ್ಮ ಗೋದಿ ಹೊಲಕ್ಕೆತರಲು
ಅಕ್ಕರತೆ ತೋಳಿನಲಿ ತೆಗೆದಪ್ಪಲು.
ನಮ್ಮೂರು ‘ಕಂಜನಾ’ ಹರಿದಿಹುದು ಹೊಳೆಯೊಂದು
‘ಅಂಜನಾ’ ಎಂದದನು ಕರೆಯುತಿಹರು;
ನಮ್ಮೂರಿನವರೆಲ್ಲ ನಾನೆಂದರರಿತಿಹರು
‘ರಂಜನಾ’ ಎಂದವಳಿಗಿಟ್ಟ ಹೆಸರು.
ನಮ್ಮ ಬನದಲಿ ಹುಟ್ಟುಕಟ್ಟಿರುವ ತುಂಬಿಗಳು
ಅವಳ ಬನಕೋಡುವವು ಜೇನರಸಲು,
ಅವಳ ತೋಟದಲರಳಿ ಜಗುಳಿರುವ ಹೂಜಲ್ಲಿ
ನಾವು ಮೀಯುವ ಝರಿಗೆ ತೇಲಿ ಬಹವು.
ನಮ್ಮೆರಡು ಬೀಡುಗಳ ನಡುವಿರುವ ತಾಣದಲಿ
ಒಂದೆ ಹೊಲವಿಹುದಲ್ಲಿ ದಾರಿತುಂಬಿ,
ಅವಳ ಹೊಲದಿಂದೆಮ್ಮ ಮಾರುಕಟ್ಟೆಗೆ ಬಹವು
ಒಣಗಿರುವ ಕುಜ್ಮಹೂ ಬುಟ್ಟಿದುಂಬಿ.
ನಮ್ಮೂರು ‘ಕಂಜನಾ’ ಹರಿದಿಹುದು ಹೊಳೆಯೊಂದು
‘ಅಂಜನಾ’ ಎಂದದನು ಕರೆಯುತಿಹರು;
ನಮ್ಮೂರಿನವರೆಲ್ಲ ನಾನೆಂದರರಿತಿಹರು
‘ರಂಜನಾ’ ಎಂದವಳಿಗಿಟ್ಟ ಹೆಸರು.
ಚೈತ್ರ ಮಾಸದಲವಳ ಮನೆಯ ಮುಂದಿನ ದಾರಿ
ಮಾಮರದ ಕಮ್ಮಲರ ಕಂಪೊಗೆವುದು;
ಅವಳ ಅಗಸೆಯ ಬೆಳೆಯು ಮಾಗಿ ಸುಗ್ಗಿಗೆ ಬರಲು
ನಮ್ಮ ಸಣಬಿಗೆ ಹೂವು ಚೆಲ್ವರಿವುದು!
ಅವಳ ಗುಡಿಸಲ ಮೇಲೆ ಮಿನುಗುತಿಹ ಚಿಕ್ಕೆಗಳು
ನಮ್ಮೆಡೆಗು ಅದೆ ಬೆಳಕ ಚೆಲ್ಲುತಿಹವು.
ಅವಳ ಕೂಳ ತುಳುಕಿಸುವ ತುಂತುರಿನ ಸೋನೆವಳೆ
ನಮ್ಮ ಪೇರಡವಿಯನ್ನು ಸೊಕ್ಕಿಸುವದು.
ನಮ್ಮೂರು ‘ಕಂಜನಾ’, ಹರಿದಿಹುದು ಹೊಳೆಯೊಂದು
‘ಅಂಜನಾ’ ಎಂದದನು ಕರೆಯುತಿಹರು;
ನಮ್ಮೂರಿನವರೆಲ್ಲ ನಾನೆಂದರರಿತಿಹರು
‘ರಂಜನಾ’ ಎಂದವಳಿಗಿಟ್ಟ ಹೆಸರು.
*****
The Gardener: 17
