ನಡುರಾತ್ರಿ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ನಡುರಾತ್ರಿಯಲ್ಲೆದ್ದು ನಾನು ಚೀರಿದೆ- “ಈ ಹೃದಯದ ಮನೆಯಲ್ಲಿ ಯಾರಿದ್ದೀರಿ?”
ಅವನು ಹೇಳಿದ- “ಯಾರ ಮುಖ ಕಂಡು ಸೂರ್‍ಯ ಚಂದ್ರರು ನಾಚುವರೋ ಆ ನಾನು”

ಅವನು ಕೇಳಿದ-ಏಕೆ ಈ ಹೃದಯ ಮಂದಿರದಲ್ಲಿ ಥರಾವರಿ ಪ್ರತಿಮೆ
ನಾನು ನುಡಿದೆ-ಪ್ರಭೂ, ಎಲ್ಲ ನಿಮ್ಮ ಪ್ರತಿಫಲನ, ನಿಮ್ಮ ಮುಖ ಕಂಡು
ಸುಂದರ ನಾಡು ಷಿಗಿಲ್‌ಗೇ ಅಸೂಯೆಯ ಸಂಚಲನ

ಕೊರಳನ್ನೆ ಕತ್ತರಿಸಿ ಕಾಣಿಕೆ ನೀಡಿದೆ ನಾನು
“ಇದು ಪ್ರೇಮದ ಪಾಪ, ಬೇಡ ಇದಕ್ಕೆ ಮುಕ್ತಿ”

ಕುತಂತ್ರ ಕುಚೇಷ್ಟೆಗಳ ಸೂತ್ರವೊಂದರ ತುದಿ ಕೊಟ್ಟು ಹೇಳಿದ
“ಈ ತುದಿ ನೀನು ಜಗ್ಗು, ಈ ಕಡೆಗೆ ನಾನು, ಹರಿಯದಿರಲಿ ದಾರ”

ಆತ್ಮದ ಗುಡಾರದಿಂದ ವಿಜೃಂಭಿಸಿತು ನನ್ನ ದೊರೆಯ ಚೆಲುವು
ಹಿಡಿಯಲು ಕೈ ಚಾಚಿದೆ ಕೈಗೆ ಬಡಿದು ನುಡಿದ “ಶುರುಮಾಡು”

ನಾನು ಹೇಳಿದೆ-ಈಗ ನೀನೂ ಉಳಿದವರ ಹಾಗೆ ಕ್ರೂರಿ
ಅವನೆಂದ-ನಾನು ಕ್ರೂರಿಯಾದದ್ದು ಸದುದ್ದೇಶಕ್ಕೆ, ಕೇಡಿಗಲ್ಲ

ಇದು ನಾನೇ ಎಂದು ಬೀಗಿ ಬರುತ್ತಾರಲ್ಲ
ಮುಖಕ್ಕೆ ಅವರಿಗಿಕ್ಕು, ಇದು ಪ್ರೀತಿಯ ಅಭಯಾರಣ್ಯ, ಕುರಿಯ ರೊಪ್ಪವಲ್ಲ

ಸಲಾಹಿದಿಲ್ ಉದೀನ್ ನಿಜಕ್ಕೂ ಆ ಸುಂದರ ಪ್ರತಿಮೆ
ಕಣ್ಣುಜ್ಜಿ ನೋಡು, ಎದೆಯ ಪ್ರತಿಮೆಯನ್ನು ತಬ್ಬಿಕೊ
*****