ತುಂಬುದಿಂಗಳು

ಮೊನ್ನೆ ದೀಪಾವಳಿಗೆ ಒಂದು ತಿಂಗಳು ದಣೇ
ತುಂಬಿಹುದು; ಆಗಲೇ ಸುಳುವು ಹಿಡಿಯುವ ಮೋಡಿ!
ತೆರೆದು ಬಟ್ಟಲಗಣ್ಣ ಬಿಟ್ಟೂ ಬಿಡದೆ ನೋಡಿ
ಮಿಟ್ಟು ಮಿಸುಕದೆ ಇರುವ (ನಾನು ಅಪರಿಚಿತನೇ?)
ಎತ್ತಿಕೊಂಡರೆ ತುಸುವ ಅತ್ತಂತೆ ಮಾಡಿ, ಮರು-
ಗಳಿಗೆಯಲ್ಲಿ ಬೆಚ್ಚಗೆ ಬಟ್ಟೆ ತೊಯ್ಸಿ, ಗೊತ್ತಿಲ್ಲ-
ದವರಂತೆ ಸುಮ್ಮನಿರೆ (ಇದನಾರು ಕಲಿಸಿಲ್ಲ!)
ಬೇರೆ ಬೇಕೇ ಶಿಕ್ಷೆ? ಹಗಲು ನಿದ್ದೆಯ ಹೊಡೆದು
ದೀಪ ಹಚ್ಚುವ ಹೊತ್ತಿಗಾಗಲೇ ಕಣ್ದೆರೆದು
ಇರುಳೆಲ್ಲ ತಂತಿ ಮೀಟಿದ ತೆರದಿ ದನಿತಗೆದು
ಪಹರೆ ಮಾಡುವನೀತ, ಮುಟ್ಟಿಗೆಯ ಬಿಗಿಹಿಡಿದು
ಕುಟ್ಟಿ, ಗಾಳಿಯ ಒಂಟಿಕುಸ್ತಿಯಾಡುವ ಜಟ್ಟಿ!
‘ಹಸಿವೆಯಾದರೆ ಒಂದು ನಿಮಿಷ ತಡೆಯಲು ಒಲ್ಲ’
ಇರಬಹುದು; (ಅದು ಮಾತ್ರ ನನ್ನ ಖಾತೆಯದಲ್ಲ.)
*****