೧
ಸವಿಹಾಡ ರಸವತಿಯೆ
ಎದೆಯನ್ನೆ ಕನ್ನೆ,
ನಿನ್ನೆದೆಯ ಬೀಣೆಯನು ನುಡಿಸು ಚೆನ್ನೆ!
ನುಡಿದು ಪಡಿನುಡಿದು ಎದೆವನೆದೆರೆದು ನುಡಿಯೆ.
೨
ಜೀವಸಂಜೀವಿನಿಯೆ
ಕಲ್ಪನಾಮೋದೆ,
ಹೋಗಾಡಲೀರೋತೆ ಹಾಡು ಪ್ರಮದೆ
ಅಂಬರವ ತುಂಬಿ ತುಳುಕಿಸಿ ಗಾನ ಸುರಿಯೆ!
೩
ಚಿತ್ಕಲಾ ಸುಂದರಿಯೆ
ಲಲಿತಾರವಿಂದೆ,
ಪುಳಕದಲಿ ಗುಡಿಗಟ್ಟಿ ಬಂದು ನಿಂದೆ
ಹಾಡು ಹಾಡೆನ್ನ ಕಂಗಳು ಕೋಡಿವರಿಯೆ!
೪
ಸುರುಚಿರ ವಿಲಾಸಿನಿಯೆ
ಝೇಂಕಾರವಾಣಿ!
ಚಿನ್ನಾದವಾನಂದಿ ಕವಿಯು ಮೌನಿ,
ರವಿಕಿರಣ ಮುದ್ದಿಡುವ ಹೂವಿನೊಲು ಒಲಿಯೆ.
೫
ಗಾಯತ್ರಿ ಕಲ್ಯಾಣಿ
ಚೆಲು ಚೆಲ್ಲಗಾರ್‍ತಿ
ಭಾವಚಿಂತಾರತ್ನ ಕಾವ್ಯಸ್ಪೂರ್‍ತಿ
ಬಾಂದಳದಿ ಭೂತಲದಿ ನಾದ ನಿರ್‍ಝರಿಣಿ!
೬
ಹೊಂಗೆಳತಿ ಸಂಗಾತಿ
ಏನಂಥ ಪ್ರೀತಿ!
ರಸರಸಾಲದಿ ಕುಕಿಲುತಿರುವ ಖ್ಯಾತಿ
ರೋದೋಂತಪರ್‍ಯಂತ ನುಡಿ ಮಿಡಿಸು ತಂತಿ.
*****
