ಏನಮ್ಮ ಕಾಲಪುರುಷ
ನಿನ್ನ ಮುಖದರುಶನವನೊಮ್ಮೆ ದಯಪಾಲಿಸಯ್ಯ.
ಕಣ್ತುಂಬ ನೋಡಿ, ನಿನ್ನ ರೂಪವನೊಮ್ಮೆ ಅಚ್ಚೊತ್ತಿಕೊಳ್ಳುವೆವು
ಹಣೆಯ ಪಾದಕೆ ಹಚ್ಚಿ ನಮಿಸುವೆವು
ಸಾಷ್ಟಾಂಗವೆರಗುವೆವು, ಆಯಿತೋ?
ಈ ಸೃಷ್ಟಿ ಜೊತೆಗೇ ನಿನ್ನ ರಥವೂ ಹೊರಟು ಬಂದಿಹುದು-
(ಉರುಳುತಿದ ಕುರುಡು ಚಕ್ರ)
ನಮ್ಮಜ್ಜ ಮುತ್ತಜ್ಜರ ಕೈಗೆ ಕೋಲು ಕೊಟ್ಟು
ಕಣ್ಗೆ ಕನ್ನಡಕ ಹಚ್ಚಿ,
ಬೆನ್ನಿನಲಿ ಹೆಣಭಾರವಿಟ್ಟು
ಈಗ ನಮ್ಮ ಹೆಗಲಿಗೇ ಕೈ ಹಾಕಿ ನಡೆದಿರುವೆಯಲ್ಲ,
ಏನಯ್ಯ ಸಮಾಚಾರ?
ಇನ್ನೂ ಎಷ್ಟು ದೂರವಿದೆಯೋ ನಿನ್ನ ಪಾದಗಟ್ಟಿ?
ನೀನೇನು ತುಳಿದೆಯೋ, ಏನೇನು ಬೆಳದೆಯೋ
ಏನೆಲ್ಲ ಕೂಡಿಸಿ ಕಳೆದಯೊ
ಯಾರು ಎಲ್ಲ ಲೆಕ್ಕವ ಬರೆದು ಇಟ್ಟವರು?
ಹೊಳೆವ ನಕ್ಷತ್ರಗಳ ಕಣ್‌ಬೆಳಕಿನಲ್ಲಿ
ನೀನಿಟ್ಟ ಖಾತೆ-ಕಿರ್‍ದಿಯನೊಮ್ಮೆ ತೆರೆಯಬೇಕು;
ಎಷ್ಟೊ ತಾರಗೆ ಇದ್ದಕಿದ್ದಂತೆ ಆರಿದವು,
ಇನ್ನೆಷ್ಟೊ ತಮ್ಮ ಬೆಳಕನು ಇಳೆಗೆ ಮುಟ್ಟಿಸಲು ಪಣತೊಟ್ಟವು.
ಆಕಾಶಗಂಗೆಯಲಿ ಕಿಕ್ಕಿರಿದು ತಿಕ್ಕಿ ಮುಕ್ಕಿದವು ಕೆಲವು.
ಇಂಥದರಲ್ಲಿ –
ನಮ್ಮ ಕೃತಿಗಳು ನಿನ್ನ ಒರೆಗಲ್ಲಿನಲಿ ನಿಂತು ಬದುಕಬೇಕಂತೆ!
ಎಲ್ಲ ವಿಮರ್‍ಶಕರ ತಲೆ ಮೇಲೆ ಹತ್ತಿ
‘ಅತ್ಮತಿಷ್ಠದ್ದಶಾಂಗುಲಂ’ ಆಗಿರುವೆಯಂತೆ.
ಬೇಡ ಮಹಾರಾಯಾ
ನಿನ್ನ ಒರೆಗಲ್ಲನ್ನು ಹೊರಗೆ ತೆಗೆಯಬೇಡ.
‘ಕಾಲಪುರುಷಂಗೆ ಗುಣಮಣಮಿಲ್ಲಂಗಡ!’
ಎಂದು ನಮ್ಮಜ್ಜ ಮೊದಲೇ ಹೆದರಿಸಿದ್ದಾನೆ.
ಅದ ಕೇಳಿ ನಮ್ಮೊಡಲೊಳೂ ‘ಗುಡುಗುಟ್ಟುಗುಂಗಡ!’
ಚೊಕ್ಕ ಬಂಗಾರವೇ ಬೇಕೆಂಬ ಹಟವೇಕೆ ನಿನಗೆ
ಈ ಲೋಕದಲಿ ನಾನಾ ನಮೂನೆ ಲೋಹವಿರುವಾಗ?
ಗಟ್ಟಿ ಕಾಳುಗಳನ್ನೆ ಮುಟ್ಟಿಗೆಯಲ್ಲಿ ಹಿಡಿಯಬೇಕೆಂದೇಕೆ ಚಪಲ
ಎಲ್ಲವೂ ಹೊಟ್ಟೆಗೇ ಹೋಗುವಾಗ?
ಇಗೋ
ನಮ್ಮ ಮನದಂಗಳದಿ ಬೆಳೆದಷ್ಟು ಕವಿತೆಗಳ
‘ನಿನ್ನ ಮಡಿಲೊಳಗಿಡಲು ತಂದಿರುವೆವು’;
ತುಂಬಿ ಹರಿಯುವ ಹೊಳೆಯ ನೀರಿನಲಿ
ಇವುಗಳನು ಹಾಯಾಗಿ ತೇಲಿಸಪ್ಪ
ಸ್ವಾಮಿ ನಮ್ಮಪ್ಪ.
ನಮ್ಮ ಕಣ್ಮರೆಯಲ್ಲಿ ಬೇಕಾದ್ದು ಮಾಡಿಕೊ
ನಾವಂತು ಪಾರಾದೆವು.
ಸರಿ, ನೀನಿಷ್ಟು ಮಾಡಿದರೆ, ನಿನ್ನ ಮೇಲೊಂದು
ಪದ್ಯವ ಬರೆದು, ಕನ್ನಡಿ ಕಟ್ಟು ಹಾಕಿ
ತುಂಬು ಸಭೆಯೊಳು ಮಾನಪತ್ರ ಸಲಿಸುವೆವು.
ಇಲ್ಲದಿದ್ದರೆ ವೃಥಾ ತಲೆದಂಡ
ಅಲ್ಲವೆ? ಅದಕಾಗಿ ಆಯುಷ್ಯದುದ್ದಕೂ ಚಿಂತೆ ಬೇಡ.
ಕಾಲಾಯ ತುಭ್ಯಂ ನಮಃ.
*****
