ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ಆ ಸುಂದರಾಂಗ ನನ್ನ ಕೈಗೊಂದು ಕಸಪೊರಕೆ ಕೊಟ್ಟು
ಹೇಳಿದ : ಸಮುದ್ರದ ಧೂಳು ಗುಡಿಸು
ಆಮೇಲೆ ಪೊರಕೆ ಬೆಂಕಿಗೆ ಹಾಕಿ ಉರಿವಾಗ
ಹೇಳಿದ : ಆ ಮೊರಕೆಯನ್ನು ಬೆಂಕಿಯಿಂದ ಮೇಲೆತ್ತು
ದಿಗ್ಭ್ರಾಂತನಾಗಿ ಅಡ್ಡ ಬಿದ್ದೆ
ಆತ ಹೇಳಿದ : ಶರಣಾಗತ ರಕ್ಷಕವಿಲ್ಲದೆ ಶರಣಾಗತನಾಗುವುದ ಕಲಿ
ಶರಣಾಗತ ರಕ್ಷಕನಿರದೆ ಶರಣಾಗತನಾಗುವುದು ಹೇಗೆ?
ಆತ ಹೇಳಿದ : ಬೇಷರತ್ತಾಗಿ, ಕುತ್ತಿಗೆ ಕೆಳಗೆ ಮಾಡಿ ಹೇಳಿದೆ
“ಶರಣಾಗತನ ಕುತ್ತಿಗೆ ಕತ್ತರಿಸು”
ಕತ್ತಿಯಿಂದ ಕತ್ತರಿಸಿದಷ್ಟೂ ತಲೆ ಬೆಳೆಯಿತು
ಕುತ್ತಿಗೆಯಿಂದ ಶತ ಸಾವಿರಕೋಟಿ ತಲೆಗಳು ಚಿಮ್ಮಿದವು
ತಲೆಯೊಳಗಿಂದ ಬತ್ತಿಗಳು ಜಗ್ಗನೆ ಹೊತ್ತಿಕೊಂಡವು
ಪೂರ್‍ವ ಪಶ್ಚಿಮಗಳೆಲ್ಲ ದೀಪಗಳಿಂದ ಕಿಕ್ಕಿರಿದವು
ದಿಕ್ಕುಗಳೇ ಇರದ ಕಡೆ ಪೂರ್‍ವವೆಲ್ಲಿ? ಪಶ್ಚಿಮವೆಲ್ಲಿ?
ಅದೊಂದು ಉರಿವ ನೀರೊಲೆ, ಸ್ನಾನದ ಬಚ್ಚಲು
ಮನಸ್ಸೇ ನೆಂದು ಮುದ್ದೆಯಾಗಿರುವಾಗ, ಹೃದಯಕ್ಕೆಲ್ಲಿಯ ಆತಂಕ
ಈ ಬಚ್ಚಲ ಮನೆಯಲ್ಲಿ ಎಷ್ಟು ಹೊತ್ತು ಇರುತ್ತಿ?
ಬಚ್ಚಲಾಗು ನೀನು, ಬೆತ್ತಲಾಗು ನೀನು, ಉರಿವ ಒಲೆಗೆ ಬೀಳಬೇಡ
ಸುತ್ತ ಚಿತ್ತ ಚಿತ್ತಾರಗಳನ್ನು ನೋಡು
ಕಿಟಕಿಯಾಚೆಗೆ ನೋಡು, ಕಿಟಕಿ ಗಾಜಿನ ಬೆಳಕು
ಅವನನ್ನು ಸುಂದರಾಂಗವಾಗಿಸಿದೆ, ಕಿಟಕಿಯಾಚೆಗೆ ಚೆಲುವ ರಾಜಕುಮಾರ
ನೆಲ ಜಲಗಳಿಗೂ ನಲ್ಲನ ನೆರಳಿಂದಲೇ ಬಂದ ಕಾಂತಿ!
ದೂರ ದೇಶಗಳಿಗೆ ಹಾರಾಡಿದೆ ಹೃದಯ
ಹೊತ್ತು ಮುಳುಗುತ್ತ ಬಂತು, ನನ್ನ ಕಥೆ ಮುಗಿವ ಹಾಗೇ ಇಲ್ಲ!
ಅವನ ಕಥೆಯ ಹಾಡಿಗೆ ಹಗಲು ರಾತ್ರಿಗಳು ನಾಚಿ ತಲೆತಗ್ಗಿಸಿವೆ
ನನ್ನ ದೊರೆ ತಬ್ರೀಜ್‌ನಿಂದ ಮತ್ತನಾಗಿದ್ದೇನೆ
ಸುಖದ ಸುಗ್ಗಿಯ ಮೇಲೆ ಸುಗ್ಗಿ ಸುರಿದು ಚಿತ್ತಾಗಿದ್ದೇನೆ
*****
