ವೆಂಕಟರಮಣ ಅಲ್ಲ ವೆಂಕಟರಾಂ

ಲೇಟಾಗಿ ಮದುವೆಯಾದ ಗೋಪಾಲ್ ಲೆಕ್ಚರರ್ ಆಗಿದ್ದರು.ಅವರ ಹೆಂಡತಿ ಗೀತಾ ಒಂದು ಸ್ಕೂಲಿನಲ್ಲಿ ಪಾಠ ಹೇಳುತ್ತಿದ್ದರು. ಇಬ್ಬರು ಮಕ್ಕಳು. ಮೊದಲನೆಯ ಮಗು ಈಗ ೨೨ ವರ್ಷದ ಹುಡುಗಿ. ಎಂ. ಎ. ಇಂಗ್ಲಿಷ್ ಪಾಸಾಗಿದ್ದಾಳೆ. ಮಗನಿಗೆ ೧೮ ವರ್ಷ. ಬಿ.ಎಸ್ಸಿ. ಮೊದಲನೇ ವರ್ಷ ಓದುತ್ತಿದ್ದಾನೆ.

ಗೋಪಾಲ್‌ಗೆ ಊರೆಲ್ಲಾ ಸ್ನೇಹಿತರು.ಅವರು ಪಬ್ಲಿಕ್ ಲೈಬ್ರರಿಯಲ್ಲಿ ರಸೆಲ್ಲನ ಒಂದು ಪುಸ್ತಕ ಓದ್ತಿದ್ದಾಗ,ಅಲ್ಲೊಬ್ಬ ೨೮ ವರ್ಷದ ತರುಣ ಕಾಣಿಸಿದ. ತರುಣನೇ ಮಾತಾಡಿಸಿದ. “ಸರ್, ನಿಮಗೆ ರಸೆಲ್ ಇಷ್ಟಾನೋ ಅಥವಾ ಎರಿಕ್ ಫ್ರಾಮೋ?” ಎಂದು ಕೇಳಿದ. ಪರವಾಗಿಲ್ಲ, ಇವನ್ಯಾರೋ ತುಂಬಾ ಓದಿಕೊಂಡಿದ್ದಾನೆ, ಎಂದುಕೊಂಡ ಗೋಪಾಲ್ `ನಿಮ್ಮ ಹೆಸರೇನು?’ ಎಂದರು. ವೆಂಕಟರಮಣ.

ಒಂದು ಸಂಜೆ ಇನ್ನೇನು ಗೋಪಾಲ್ ಹೊರಡುವುದರಲ್ಲಿದ್ದರು. ವೆಂಕಟರಮಣ ಅವರ ಮನೆಗೆ ಹಾಜರಾದ. “ನಮಸ್ಕಾರ ಬನ್ನಿ. ಏನು ಈ ಕಡೆ?”
“ಏನೂ ಇಲ್ಲ ಸಾರ್, ಆ ಪಕ್ಕದ ಬೀದೀಲಿ ಒಬ್ರು ಎಂ.ಎಲ್.ಎ. ಇದ್ದಾರೆ. ಚೀಫ್ ಮಿನಿಷ್ಟ್ರು ಏನೋ ಮೆಸೇಜ್ ಕಳಿಸಿದ್ರು. ಈ ಕಡೆ ಬಂದಿದ್ದನಲ್ಲ, ನಿಮ್ಮನ್ನು ನೋಡಿ ಹೋಗೋಣ ಅಂತ ಬಂದೆ”
`ಕೂತ್ಕೊಳ್ಳಿ’ ಎಂದು ಹೇಳಿ ಗೋಪಾಲ್ “ಲೇ ಗೀತಾ ಕಾಫಿ ಕೊಡ್ತೀಯ” ಅಂದರು. ಕಾಫಿ ಬಂದಾಗ “ಎಲ್ಲಿ ರುಕ್ಮಿಣಿ” ಎಂದರು. “ರುಕ್ಮಿಣೀ ಅಪ್ಪ ಕರೀತಾರೆ” ಎಂದು ಮಗಳನ್ನು ಕರೆದಳು. ರುಕ್ಮಿಣಿ ಬಂದಳು. “ಇವಳು ನನ್ನ ಮಗಳು ರುಕ್ಮಣಿ. ಎಂ.ಎ. ಇಂಗ್ಲೀಷ್ ಮಾಡಿದ್ದಾಳೆ. ಇವರು ವೆಂಕಟರಮಣ ಸ್ಪೆಷಲ್ ಆಫೀಸರ್”
“ನಿಮಗೆ ಮಾಡರ್ನ್ ಲಿಟರೇಚರ್ ಎಲ್ಲಾ ಇಟ್ಟಿದಾರಾ?” ಎಂದು ವೆಂಕಟರಮಣ ಕೇಳಿದ.
“ಇರುತ್ತೆ, ಲಾರೆನ್ಸ್, ಜಾಯ್ಸ್, ಕಾಪ್ಕ.”
“ಜಾಯ್ಸ್‌ನ ಫಿನೆಗನ್ಸ್ ವೇಕ್ ಓದಿದೀರಾ?”
“ಇಲ್ಲ.”
“ತುಂಬಾ ಚೆನ್ನಾಗಿದೆ, ಓದೋದು ಸ್ವಲ್ಪ ಕಷ್ಟ. ಆದ್ರೆ ಕ್ರಿಟಿಕ್ಸ್ ಇದಾರಲ್ಲ, ಎಲ್ಲಾ ಡೀಟೇಲಾಗಿ ವಿವರಿಸ್ತಾರೆ.
ರುಕ್ಮಿಣಿ “ನಾನು ಯೂಲಿಸಿಸ್ ಮಾತ್ರ ಓದಿದೀನಿ” ಎಂದಳು.
*
*
*
ಇನ್ನೊಂದು ದಿನ ಗೋಪಾಲ್ ಮನೆಯಲ್ಲಿರಲಿಲ್ಲ. ವೆಂಕಟರಮಣ ಒಂದು ಕಾರಿನಲ್ಲಿ ಅವರ ಮನೆ ಮುಂದೆ ಇಳಿದು, ಕಾರು ಕಳಿಸಿದ. ರುಕ್ಮಿಣಿ ಬಾಗಿಲಲ್ಲಿ ಇಣುಕಿ ನೋಡಿದಳು. “ಬನ್ನಿ ಕೂತ್ಕೊಳ್ಳಿ” ಎಂದಳು.
“ಅಪ್ಪ ಎಲ್ಲಿ?” “ಎಲ್ಲೊ ಆಚೆಗೆ ಹೋಗಿದಾರೆ. ಅಮ್ಮನು ಜೊತೇಗೆ ಹೋಗಿದಾರೆ”
“ಹಾಗಾದ್ರೆ ನಾನು ಬರ್ತೀನಿ.”
“ಪರ್ವಾಗಿಲ್ಲ ಕೂತ್ಕೊಳ್ಲಿ.”
ವೆಂಕಟರಮಣನ ಕೈಯಲ್ಲಿ ಟಾಯ್ನ್‌ಬಿ ಬರೆದ ವರ್ಲ್ಡ್ ಹಿಸ್ಟರಿ ಇತ್ತು. “ನೀವು ಚರಿತ್ರೇನೂ ಓದ್ತೀರಾ?” ಎಂದು ಕೇಳಿದಳು
“ಇದರ ಬಗ್ಗೆ ಒಂದು ಲೇಖನ ಬರ್ದಿದ್ದೆ. ಇಂಪ್ರಿಂಟ್ನಲ್ಲಿ ಪ್ರಕಟವಾಗಿತ್ತು. ಅದ್ಯಾವನೋ ಒಬ್ಬ ನನ್ನ ಒಂದು ಅಭಿಪ್ರಾಯಕ್ಕೆ ಸಾಕಷ್ಟು ಪುರಾವೆ ಇಲ್ಲ ಅಂದಿದ್ದ. ಅದಕ್ಕೆ ಉತ್ತರ ಬರೆಯೋಣ ಅಂತ, ಇನ್ನೊಂದು ಸಾರಿ ರೆಫರ್ ಮಾಡ್ಲಿಕ್ಕೆ ಈ ಪುಸ್ತಕ ತಂದಿದೀನಿ” ಎಂದ ವೆಂಕಟರಮಣ
“ನೀವು ಹಾಗಾದ್ರೆ ಬಾರೀ ಬುದ್ದಿ ಜೀವಿ. ಇಂಟಲೆಕ್ಚುಯಲ್, ಲೇಖನ ಅಲ್ದೆ ಇನ್ನೇನು ಬರೀತೀರಿ?”
“ಕತೆ ಕವಿತೇನೂ ಬರೀತೀನಿ. ಇಲ್ಲಸ್ಟ್ರೇಟೆಡ್ ವೀಕ್ಲಿ, ಡೀಬೊನೇರ್, ಚಂದ್ರಭಾಗ ಅಲ್ಲೆಲ್ಲ ಪಬ್ಲಿಷ್ ಆಗಿದೆ. ಕ್ವಾಟರ್ಲಿ ಅಂತ ಒಂದು ಅಮೇರಿಕನ್ ಮ್ಯಾಗಜಿನ್‌ನಲ್ಲಿ ನಂದೊಂದು ಕತೆ ಬಂದಿತ್ತು
“ನೋಡಿ ಮಾತಾಡ್ತಾ ಕಾಫಿ ಕೊಡೋದೆ ಮರೆತು ಬಿಟ್ಟೆ” ಎಂದು ರುಕ್ಮಿಣಿ ಒಳಗೆ ಹೋದಳು.
ವೆಂಕಟರಮಣ ಕಾಫಿ ಕುಡಿದು ಹೊರಡುವಾಗ ಒಂದು ಲೇಖನವನ್ನು ಬಿಟ್ಟು ಹೋಗಿದ್ದ
ಗೋಪಾಲ್ ಮನೆಗೆ ಬಂದಾಗ ರುಕ್ಮಿಣಿ “ಅಪ್ಪ ವೆಂಕಟರಮಣ ಬಂದಿದ್ರು, ಅವರು ಭಾರೀ ಇಂಟಲೆಕ್ಚುಯಲ್.” ಇಲ್ನೋಡಿ ಇಲ್ಲೊಂದು ಲೇಖನ ಮರೆತು ಹೋಗಿದ್ದಾರೆ. “ವಾಸ್ ಗಾಂಧಿ ಎ ಸ್ಕೀಮರ್” ಅಂತ.
“ನೀನು ಓದಿದೆಯ?”
“ಓದ್ದೆ. ಅವರು ಹೇಳೋದು, ಗಾಂಧೀ ಮಹಾ ಉಪಾಯಗಾರ ಅಂತ. ಪ್ರತಿಯೊಂದು ಹೆಜ್ಜೆ ಇಡಬೇಕಾದ್ರೂ, ಪ್ರತಿಯೊಂದು ಮಾತು ಆಡಬೇಕಾದ್ರೂ, ತುಂಬ ಕ್ಯಾಲ್ಕುಲೇಟೀವ್ ಆಗಿದ್ರು ಅಂತ ಬರ್ದಿದಾರೆ’.
“ದೊಡ್ಡ ಅಧಿಕಾರ ಇದೆ ಅಂತ ಕಾಣುತ್ತೆ. ಒಳ್ಳೇ ಮನೆತನದವರೂ ಇರ್ಬೇಕು” ಅಂದರು ಗೋಪಾಲ್.
“ಹೌದಪ್ಪ ಇವತ್ತು ಕಾರ್ನಲ್ಲಿ ಬಂದಿದ್ರು.”
“ಯಾವೂರು ಅಂತ ಏನಾದ್ರೂ ಕೇಳಿದ್ಯಾ?”
“ಹೂನಪ್ಪ, ಅದೇನೋ ತುಮಕೂರು ರಸ್ತೆಯಲ್ಲಿ ಬಾಗೂರು ಅಂತ ಇದೆಯಂತೆ. ಅಲ್ಲಿ ತುಂಬ ಆಸ್ತಿ ಇದೆಯಂತೆ, ಇವರಜ್ಜ, ಈಗಿನ ಚೀಫ್ ಮಿನಿಸ್ಟರ್ ಇದಾರಲ್ಲ, ಅವರ ತಂದೇಗೆ ತುಂಬಾ ಸಹಾಯ ಮಾಡಿದ್ರಂತೆ” ಎಂದಳು.
*
*
*
ಇನ್ನೊಂದು ದಿನ ವೆಂಕಟರಮಣ ಮತ್ತು ರುಕ್ಮಿಣಿ ಕೃಷ್ಣ ಹೊಟೇಲ್‌ನಿಂದ ಹೊರಬರುವುದನ್ನು ಗೋಪಾಲ್ ನೋಡಿದರು. ಅವರಿಗೆ ಕಾಣಿಸದ ಹಾಗೆ ಹೊರಟು ಹೋಗಿ ಮನೆಗೆ ಬಂದಾಗ

“ವೆಂಕಟರಮಣರ ಬಗ್ಗೆ ನಿಂಗೇನು ಅನ್ಸುತ್ತೆ?” ಎಂದು ಹೆಂಡತಿಯನ್ನು ಕೇಳಿದರು.
“ಒಳ್ಳೆ ಹುಡುಗ, ತುಂಬಾ ಓದಿದಾನೆ ಅಂತ ಕಾಣುತ್ತೆ. ಇಲ್ದಿದ್ರೆ ನಮ್ಮ ರುಕ್ಮಿಣಿ ಅವನ ಜೊತೆ ಅಷ್ಟೊಂದು ತಿರುಗ್ತಾ ಇರ್ಲಿಲ್ಲ”
ಅವರ ತಂದೇ ತಾಯಿನ ವಿಚಾರಿಸಬೇಕು. ಮುಂದಿನ ವರ್ಷ ರಿಟೈರ್ ಆಗೋದ್ರೊಳಗೆ ಮದುವೇನೂ ಮುಗಿದಿದರೆ ನಿಶ್ಚಿಂತೆಯಾಗಿರುತ್ತೆ” ಅಂದರು.
“ಅವನೇನೋ ಒಪ್ಕೊಂಡ ಅಂತಿಟ್ಕೊಳ್ಳಿ, ಮದುವೆ ಮಾಡ್ಲಿಕ್ಕೆ ದುಡ್ಡೆಲ್ಲಿದೆ? ನನ್ನ ಹತ್ರ ೧೫ ಸಾವಿರ ಇದೆ. ಅಷ್ಟರೊಳಗೆ ಮದುವೆಯಾಗ್ತಾನಾ ಅಂತ ಕೇಳೋದು. ಆಗಲ್ಲ ಅಂದ್ರೆ ಇನ್ನೊಬ್ಬನ್ನ ಹುಡುಕೋದು”
ಅವತ್ತೊಂದು ಭಾನುವಾರ. ವೆಂಕಟರಮಣ ಬಂದ. “ಸರ್ ಚೀಫ್ ಮಿನಿಷ್ಟ್ರು ನಿಮ್ಮನ್ನು ಒಂದ್ಮಾತು ಕೇಳು ಅಂದ್ರು” ಅಂದ
“ಏನಂತೆ?”
“ಅವರ ತಂದೆ ಸ್ಕೂಲ್ ಮೇಸ್ಟ್ರಾಗಿದ್ರಂತೆ. ನೀವು ತುಂಬಾ ಒಳ್ಳೇ ಮೇಸ್ಟ್ರು ಅಂತ ಅವರಿಗೆ ಗೊತ್ತಾಗಿದೆ. ಅಲ್ದೆ ನೀವು ಬರೆದಿರೋ `ಗೋಪಾಲ ಕೃಷ್ಣ ಗೋಖಲೆ’ ಪುಸ್ತಕಾನೂ ಓದಿದ್ದಾರೆ”.
“ಅದನ್ನು ಅವರಿಗೆ ಯಾರು ಹೇಳಿದ್ರು? ನೀವು ಹೇಳಿದ್ರ?”
“ನಾನೇನ್ ಹೇಳ್ಲಿಲ್ಲ ಸರ್. ಅವರ ಹತ್ರ ಸಿ.ಐ.ಡಿ. ಗಳು ಇರ್ತಾರಲ್ಲ. ಎಲ್ಲರ ಬಗ್ಗೆಯೂ ಇನ್ಪರ್ಮೇಷನ್ ಕಲೆಕ್ಟ್ ಮಾಡ್ತಿರ್ತಾರೆ”.
“ಏನು ವಿಷಯ?”
“ನಾಡಿದ್ದು ನಿಮ್ಮನ್ನ ಮನೇಗೆ ಕರ್ಕೊಂಡು ಬಾ” ಅಂತ ಹೇಳಿದ್ರು.
“ನಾಡಿದ್ದು ಆಗೋಲ್ವಲ್ಲಯ್ಯ, ಇಡೀ ದಿವಸ ಕೆಲ್ಸ ಇದೆ. ಎಕ್ಸಾಮಿನೇಷನ್ ವರ್ಕ್ ಇದೆ. ಇನ್ಯಾವಾಗ್ಲಾದ್ರೂ ಹೋಗೋಣ” ಎಂದರು.
“ಆಯ್ತು ಸರ್” ಎಂದ ವೆಂಕಟರಮಣ.
“ನೀವು ಯಾವ ಥರ ಕೆಲ್ಸ ಮಾಡ್ತೀರಿ?”
“ಸರ್, ನಾನು ಸ್ಪೆಷಲ್ ಆಫೀಸರ್ ಅಂತ. ವಿಧಾನಸೌಧದ ಮೇಲುಗಡೆ ಒಂದು ದೊಡ್ಡ ರಿಸೀವರ್ ಇದೆ. ಡೆಲ್ಲಿಯಿಂದ ಅರ್ಜೆಂಟ್ ಮೆಸೇಜ್ ಎಲ್ಲ ಅದರ ಮೂಲಕ ಬರುತ್ತೆ. ನಾನು ಅದನ್ನ ನೋಡ್ಕೊಳ್ತೀನಿ ಸರ್. ತುಂಬಾ ಕಾನ್ಫಿಡೆನ್ಶಿಯಲ್ ಕೆಲಸ” ಅಂದ
ನಾಲ್ಕು ದಿನ ಬಿಟ್ಟು ವೆಂಕಟರಮಣ ಬಂದ. ರುಕ್ಮಿಣಿ ಆತ ಬರುವುದನ್ನೇ ಕಾಯುತ್ತಿದ್ದಳು.
“ಎಲ್ಲಿ ಕಾಣಿಸ್ಲೆ ಇಲ್ಲ?”
“ತುಂಬಾ ಕೆಲ್ಸ ಇತ್ತು.”
“ಹೌದ್ಹೌದು ನಿಮಗೆ ಚೀಫ್ ಮಿನಿಸ್ಟರ್ ಮಾತ್ರ ಮುಖ್ಯ. ನಮ್ಮಂಥವರು ಕಣ್ಣಿಗೂ ಬೀಳೋಲ್ಲ.”
“ಅದೆಲ್ಲ ಅಲ್ಲ ರುಕ್ಮಿಣಿ. ನಿನ್ನನ್ನ ನೋಡ್ದೆ ಒಂದಿನಾನೂ ಇರ್ಲಿಕ್ಕಾಗೋಲ್ಲ. ಆದ್ರೆ ಮೊನ್ನೆ ಸಿ. ಎಂ. ಕರೆದು ಗ್ರಾಮಪಂಚಾಯಿತಿ ಎಲೆಕ್ಷನ್‌ಗೆ ಅದೂ ಸಾಗರದ ಹತ್ತಿರ ಆನಂದಪುರ ಎಲೆಕ್ಷನ್‌ಗೆ ದುಡ್ಡುಕೊಟ್ಟು ಬಾ ಅಂತ ಕಳಿಸಿದ್ರು. ಅಷ್ಟೊಂದು ದುಡ್ಡನ್ನು ಯಾರ್ಯಾರ್ದೊ ಕೈಯಲ್ಲಿ ಕಳ್ಸೋದಕ್ಕೆ ಆಗೋಲ್ಲ. ಅದಕ್ಕೆ ನನ್ನನ್ನೇ ಹೋಗು ಅಂದ್ರು.”
“ಹೂಂ ಬಿಡೀಪ್ಪ, ಸಾವಿರ ಲಕ್ಷ, ದುಡ್ಡು ಹೊತ್ಕೊಂಡು ಹಾಗೆಲ್ಲ ಹೋಗ್ಬೇಡಿ. ಯಾರಾದ್ರೂ ತಲೆ ಒಡೆದ್ರೆ…….”
“ನನ್ನ ಹತ್ರ ರಿವಾಲ್ವರ್ ಇರುತ್ತೆ ಗೊತ್ತ?” ಎಂದ ವೆಂಕಟರಮಣ.
ಅಷ್ಟು ಹೊತ್ತಿಗೆ ಗೋಪಾಲ್ ಬಂದರು. ರುಕ್ಮಿಣಿ ಒಳಗೆ ಹೋದಳು.
“ಸರ್ ಸಿ.ಎಂ. ಬಹಳ ಬೇಜಾರು ಮಾಡ್ಕೊಂಡ್ರು ಸರ್. ನಮ್ಮಂಥವರು ಕರೆದ್ರೆ ಅವರೆಲ್ಲಿ ಬರ್ತಾರೆ-ಅಂದರು” ಅಂದ ವೆಂಕಟರಮಣ. ಆಮೇಲೆ “ಸರ್, ಅವರ ತಂದೆ ಸ್ಕೂಲ್ ಮಾಸ್ಟರ್ ಆಗಿದ್ರು ಅಂತ ಹೇಳಿದ್ನಲ್ಲ, ಅವರದ್ದೊಂದು ಜೀವನ ಚರಿತ್ರೆ ಬರೀಬೇಕಂತೆ, ಅದಕ್ಕೆ ನೀವೇ ಆಗಬೇಕು ಅಂತ ಅವರ ಆಸೆ” ಎಂದ ವೆಂಕಟರಮಣ.
ಗೋಪಾಲ್ ಕನಸು ಕಾಣಲಾರಂಭಿಸಿದರು. ಚೀಫ್ ಮಿನಿಸ್ಟರ್ ಜೊತೆಯಲ್ಲಿ ಕೂತು ಅವರ ತಂದೆಯ ವಿಷಯವನ್ನೆಲ್ಲ ಕೇಳಿಕೊಳ್ಳಬೇಕು. ಅವರ ಊರಿಗೆ ಹೋಗಿ ಅವರ ತಂದೆಯ ವಯಸ್ಸಿನವರು ಯಾರ್ಯಾರಿದ್ದಾರೊ ಅವರನ್ನೆಲ್ಲ ಸಂದರ್ಶಿಸಿ ಟಿಪ್ಪಣಿ ಮಾಡಿಕೊಳ್ಳಬೇಕು. ಚೀಫ್ ಮಿನಿಸ್ಟರ್ ಪ್ರಭಾವದಿಂದ, ನಾಳೆ ಯಾವುದಾದರೊಂದು ಸಂಸ್ಥೆಯಲ್ಲಿ ಕೆಲಸ ಸಿಗಬಹುದು. ಅಥವಾ ಚೀಫ್ ಮಿನಿಸ್ಟರ್ ಪಿ.ಎ. ಆಗಬಹುದು. ಇದನ್ನೆಲ್ಲ ಹೆಂಡತಿಯ ಹತ್ತಿರ ಹೇಳಿಕೊಳ್ಳಬೇಕು ಅನಿಸಿತು. ಆದರೆ ಗುಟ್ಟಾಗಿದ್ದು, ಆಮೇಲೆ ಗೊತ್ತಾದರೆ ಅದರ ಮಜಾನೇ ಬೇರೆ ಎಂದುಕೊಂಡರು.
ಇನ್ನೊಂದು ರಾತ್ರಿ ಹನ್ನೊಂದು ಗಂಟೆಗೆ ಕಾರಿನಲ್ಲಿ ಬಂದ, ಬಾಗಿಲು ತಟ್ಟಿದ. ಗೋಪಾಲ್ `ಯಾರು?’ ಅನ್ನುತ್ತ ಬಾಗಿಲು ತೆಗೆದು `ಏನು ಇಷ್ಟು ಹೊತ್ತಿನಲ್ಲಿ?’ ಅಂದರು.
“ಸರ್ ನಿಮ್ಮಿಂದ ಒಂದು ಕೆಲಸ ಆಗ್ಬೇಕು”
“ಏನು?”
“ಈಗ ನಂಜೊತೆ ಬರ್ತೀರ?”
“ನಡೀರಿ ಹೋಗೋಣ”

ದಾರಿಯಲ್ಲಿ ವೆಂಕಟರಮಣ ತಾನೊಂದು ಪಿಕ್ಚರ್ ತೆಗೆಯುತ್ತಿರುವುದಾಗಿಯೂ, ಅದರ ಸ್ಕ್ರಿಪ್ಟನ್ನು ಇಂಗ್ಲೀಷ್‌ಗೆ ಅನುವಾದ ಮಾಡಬೇಕಾಗಿದೆಯೆಂದು ಹೇಳಿದ.
“ದುಡ್ಡು ಎಷ್ಟು ಸಿಗುತ್ತೆ?” ಎಂದರು ಗೋಪಾಲ್.
“ಅದಕ್ಕೇನು ಸರ್, ನಾನು ಸುಮ್ನೆಯಾರ ಹತ್ರಾನೂ ಕೆಲ್ಸ ಮಾಡ್ಸೋಲ್ಲ. ಚೆನ್ನಾಗೇ ಕೊಡ್ತೀವಿ. ಈಗ ನನ್ನ ಪಾರ್ಟ್‌ನರ್ ಸಿಗ್ತೀನಿ; ನಿಮ್ಮ ಹತ್ರ ಮಾತನಾಡಬೇಕು ಅಂದರು” ಎಂದ ವೆಂಕಟರಮಣ.
ಕಾರು ಮಲ್ಲೇಶ್ವರದ ಒಂದು ಓಣಿಯಲ್ಲಿ ನಿಂತಿತು. ಅಲ್ಲಿ ಒಂದು ಮನೆಯನ್ನು ಹೊಕ್ಕರು. ಮೂರು ನಾಲ್ಕು ಜನ ಕೂತಿದ್ದರು. ವೆಂಕಟರಮಣ “ಇವರೇ ಪ್ರೊಫೆಸರ್ ಗೋಪಾಲ್, ನಮ್ಮ ಸ್ಕ್ರಿಪ್ಟನ್ನು ಇಂಗ್ಲೀಷ್ಗೆ ಅನುವಾದ ಮಾಡಲಿಕ್ಕೆ ಒಪ್ಪಿದ್ದಾರೆ. ಪರಿಚಯ ಮಾಡೋಣ ಅಂತ ಕರೆದುಕೊಂಡು ಬಂದೆ” ಎಂದು ಹೇಳಿದ
ಎಲ್ಲರೂ “ನಿಮ್ಮವಿಷಯ ವೆಂಕಟರಮಣ ಹೇಳಿದಾರೆ ಸರ್, ಇನ್ನು ೧೫ ದಿನದಲ್ಲಿ ರಶಸ್ ರೆಡಿಯಾಗುತ್ತೆ. ಆ ಮೇಲೆ ಕೆಲಸ ಶುರುಮಾಡಬಹುದು ” ಎಂದರು
ದಾರಿಯಲ್ಲಿ ವೆಂಕಟರಮಣ ತ್ಯಾಗರಾಜ ನಗರದ ಹತ್ತಿರ ಇಳಿದ. ಡ್ರೈವರ್‌ಗೆ “ಸಾಹೇಬರನ್ನು ಮನೆಗೆ ಬಿಟ್ಟು ಬಾ” ಎಂದು ಹೇಳಿದ
ಇದೇನು ಇಲ್ಲಿ, ನಿಮ್ಮ ಮನೆ ಇಲ್ಲಿದೆಯ?” ಎಂದರು ಗೋಪಾಲ್.
“ಮನೆ ಅಲ್ಲ,ಒಂದು ದೊಡ್ಡ ರೂಮಿದೆ, ಇನ್ನೂ ಮನೆ ಮಾಡಿಲ್ಲ”
“ನಾನು ಬರ್ತೀನಿ ಸಾರ್” ಎಂದು ಹೊರಟು ಹೋದ.
ಒಂದು ದಿನ ರುಕ್ಮಿಣಿ ಗೋಪಾಲ್ ಒಬ್ಬನೇಕುಳಿತಾಗ `ಅಪ್ಪ’ ಎಂದಳು.
“ಏನಮ್ಮ”
“……..”
“ಏನು ಹೇಳಮ್ಮ”
“ವೆಂಕಟರಮಣ………”
“ಹೂಂ…….”
“ಮದುವೆ ಆಗ್ತಾರಂತೆ” ಅಂತ ಹೇಳಿ ಒಳಗೆ ಓಡಿ ಹೋದಳು.

ರಿಟೈರ್ ಆಗುವ ಮುಂಚೆ, ವರದಕ್ಷಿಣೆಯ ಖರ್ಚಿಲ್ಲದೆ, ಹೆಚ್ಚು ಖರ್ಚಿಲ್ಲದೆ ಸರಳ ವಿವಾಹ ಮಾಡುವ ಸಂತೋಷದಿಂದ ಗೋಪಾಲ್ ಹಿಗ್ಗಿದರು. ಆದರೂ ಏನೋ ಅನುಮಾನ, ಆತಂಕ ಪ್ರತಿ ಬೆಳಿಗ್ಗೆ ಮತ್ತು ಸಂಜೆ ಬೇರೆ ಕಡೆ ವಾಕ್ ಹೋಗುವುದನ್ನು ನಿಲ್ಲಿಸಿ, ನರಸಿಂಹರಾಜ ಕಾಲೋನಿಯ ರಾಮಮಂದಿರದ ಹತ್ತಿರ ಸುಳಿದಾಡ ಹತ್ತಿದರು. ಒಂದು ದಿನ ವೆಂಕಟರಮಣ ಒಂಭತ್ತು ಗಂಟೆಗೆ ವಿಧಾನ ಸೌಧದ ಬಸ್ಸು ಹತ್ತುವುದನ್ನು ನೋಡಿದರು. ಹೋಗಿ ಮಾತಾಡಿಸೋಣ ಅನ್ನಿಸಿದರೂ ತಡೆದುಕೊಂಡರು. ತಾವು ಅಲ್ಲಿದ್ದಾಗ ತಮ್ಮ ವಿದ್ಯಾರ್ಥಿಗಳು ಮತ್ತು ಗುರುತಿನವರು `ಏನು ಸರ್ ಇಲ್ಲಿ?’ ಎನ್ನುವುದನ್ನು ತಪ್ಪಿಸಿಕೊಳ್ಲಬೇಕು ಅನಿಸಿತು.

ಅಲ್ಲಿಯವರೆಗೂ ತಮ್ಮ ಮಗನ ಹತ್ತಿರ ಯಾವ ವಿಷಯವನ್ನು ಮಾತಾಡದ ಗೋಪಾಲ್ ಮಗನನ್ನು ಕರೆದುಕೊಂಡು ಹೊರಟರು. ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಪಾರ್ಕಿನಲ್ಲಿ ಹೋಗಿ ಕುಳಿತು ಕೊಂಡರು
“ಏನಪ್ಪಾ ಏನೋ ಯೋಚಿಸ್ತಿರೋ ಹಾಗಿದೆ” ಅಂತ ಶ್ರೀನಾಥ ಕೇಳಿದ.
” ನೋಡೋ ಶ್ರೀನಾಥ, ಕೆಲವು ವಿಷಯ ಮಕ್ಕಳ ಹತ್ರ ಹೇಳ್ಬಾರ್ದು ಅನ್ಸುತ್ತೆ. ಆದ್ರೆ ನೀನೇನೂ ಮಗುವಲ್ಲ. ನಮ್ಮ ರುಕ್ಮಿಣಿ, ಆ ಹುಡುಗ ವೆಂಕಟರಮಣನನ್ನು ಮದುವೆ ಆಗ್ಬೇಕು ಅಂತಿದಾಳೆ.”
“ಅದ್ಯಾಕೊ ಅವನನ್ನು ಕಂಡರೆ ನಂಗಾಗೋಲ್ಲ.”
“ನಂಗೂ ಅವನ ವಿಷಯದಲ್ಲಿ ಅನುಮಾನ ಇದೆ.”
“ಯಾಕೆ ಅನುಮಾನ? ನೀವೇ ಅವನ ಜೊತೆ ಹರಟೆ ಹೊಡಿತಿದ್ರಿ. ರಾತ್ರಿ ಅವನ ಜೊತೆ ಎಲ್ಲೋ ಹೋಗಿದ್ರಿ. ರುಕ್ಮಿಣೀನ ಅವನ ಜೊತೆ ತಿರುಗಲಿಕ್ಕೆ ಬಿಟ್ಟಿದ್ದೀರಿ. ಮತ್ಯಾಕೆ ಅನುಮಾನ? ಅಂದ ಶ್ರೀನಾಥ.
“ಅವನ ಮತ್ತು ಚೀಫ್ ಮಿನಿಸ್ಟರ್ ಸಂಬಂಧ ಸುಳ್ಳು ಅನ್ಸುತ್ತೆ. ಅವನು ದೊಡ್ಡ ಆಫೀಸರ್ರೂ ಅಲ್ಲ ಅನ್ಸತ್ತೆ. ಆದ್ರೆ ಕಾರ್ನಲ್ಲೇನೋ ಓಡಾಡ್ತಾನೆ. ನಂಗೊಂದು ದಿನ ಒಂದು ಬಿ.ಡಿ.ಎ. ಸೈಟು ಕೊಡಿಸ್ತೀನಿ ಅಂದ. ಇಲ್ಲೆಲ್ಲೊ ತ್ಯಾಗರಾಜ ನಗರದಲ್ಲಿ ರೂಮಿದೆಅಂದ . ಅವನ ಊರು ತುಮಕೂರು ಅಂದ. ಅವನ ಊರು ತುಮಕೂರು ದಾರಿಲಿರೊ ಬಾಗೂರು ಅಂದ. ತುಂಬ ಆಸ್ತಿ ಇದೆ ಅಂತಾನೆ. ಆದ್ರೆ ಒಂದು ದಿವಸ ಬಸ್ಸಲ್ಲಿ ಹೋದದ್ದನ್ನೂ ನೋಡ್ದೆ.
“ಈಗ ನಾನೇನ್ಮಾಡ್ಲಿ?
“ದಿನಾ ಸಂಜೆ ನರಸಿಂಹರಾಜ ಕಾಲೋನಿ ರಾಮಮಂದಿರದ ಹತ್ರ ವಾಚ್ ಮಾಡ್ಬೇಕು. ನಾನು ಈಕೆಲಸ ಮಾಡಬಹುದಿತ್ತು. ಆದರೆ ನನ್ನ ಸ್ಟೂಡೆಂಟ್ಸು ಗುರುತಿನವರು ಯಾರ್ಯಾರೋ ಸಿಕ್ತಾರೆ. ನೀನು ಅವರನ್ನು ಫಾಲೋ ಮಾಡ್ಬೇಕು. ಮಾಡ್ತೀಯಾ?” ಅಂತ ಕೇಳಿದರು.
ಶ್ರೀನಾಥನಿಗೆ ತನ್ನ ಮನೆಯಲ್ಲಿ ತನಗೊಂದು ಸ್ಥಾನ ಸಿಕ್ಕಿದ್ದು ಸಂತೋಷವಾಯಿತು. ತಾನೀಗ ಮಗು ಅಲ್ಲ, ಜವಾಬ್ದಾರಿ ಇರುವ ಮಗ ಅನಿಸಿತು.
“ಆಯ್ತಪ್ಪ.”
*
*
*
ವೆಂಕಟರಮಣ, ರುಕ್ಮಿಣಿ ಜೊತೆ ಬರುತ್ತಿದ್ದ ಹಾಗೆ ಗೋಪಾಲರಾಯರು “ಏನು ಇವತ್ತು ಆಫೀಸ್ ಇರ್ಲಿಲ್ವ” ಎಂದು ಕೇಳಿದರು. ರುಕ್ಮಿಣಿ ಒಳಗೆ ಹೋದಳು.
“ಇವತ್ತು ಸಾರ್. ಮಧ್ಯಾಹ್ನ ಲೀವ್ ಹಾಕಿ ಬಂದೆ. ರಾತ್ರಿ ನೈಟ್ ಡ್ಯೂಟಿ ಇರುತ್ತೆ” ಅಂದ.
“ಬೇಗ ಮದುವೆ ಆಗ್ಬಿಡಿ. ನಿಮ್ಮ ತಂದೆ ತಾಯೀನ ಕರ್ಕೊಂಡು ಬನ್ನಿ, ಅಥವಾ ನಾವೇ ಅಲ್ಲಿಗೆ ಹೋಗೋಣ” ಎಂದರು.
“ಆಯ್ತು ಸಾರ್. ಮನೆಗೆ ಫೋನ್ ಮಾಡ್ತೀನಿ. ಮುಂದಿನ ವಾರ ಹೋಗೋಣ ಸಾರ್” ಅಂತ ಹೇಳಿ “ಸಿಂಪಲ್ ಆಗಿ ಮದುವೆ ಆಗ್ತೀನಿ ಸರ್. ರಿಜಿಸ್ಟರ್ ಮದುವೆ ಆದ್ರೂ ಸರಿ” ಅಂದ.
“ಅಲ್ಲಾ ವೆಂಕಟರಮಣ. ನೀವು ಅವತ್ತೊಂದು ಲೇಖನ ಗಾಂಧಿ ಬಗ್ಗೆ ಬರ್ದಿದ್ದು ಇಲ್ಲೆ ಬಿಟ್ಟು ಹೋಗಿದ್ರಿ. ಆ ಮೇಲೆ ತಗೊಂಡು ಹೋದ್ರಾ?”
“ಸರಿ”ಎಂದು ಗೋಪಾಲ್ ಒಳಗೆ ಹೋದರು. ರುಕ್ಮಿಣಿ ಹೊರಗೆ ಬಂದು ವೆಂಕಟರಮಣನ ಜೊತೆ ಹರಟುತ್ತ ಕುಳಿತುಕೊಂಡಳು.
ಮಾರನೆ ದಿನ ಗೋಪಾಲ್ ಕಾಲೇಜಿಗೆ ಹೋಗಿರಲಿಲ್ಲ. ಅವರಿಲ್ಲದ ಸಮಯ ಅಂತ ವೆಂಕಟರಮಣ ಬಂದಾಗ ಅವನಿಗೆ ನಿರಾಶೆಯಾಯಿತು. ಆದರೆ ಅದನ್ನು ತೋರಿಸದೆ,
“ಸರ್, ನೀವು ತುಂಬ ಸರಳ ವ್ಯಕ್ತಿ” ಅಂದ.
“ಇಲ್ಲ ವೆಂಕಟರಮಣ, ನಾನೊಂದು ಜಂಬದ ಕೋಳಿ. ನಾನು ನ್ಯಾಯವಂತನಾಗಿದೀನಿ, ಸತ್ಯ ಹೇಳ್ತಿರ್ತೀನಿ, ಪ್ರಾಮಾಣಿಕನಾಗಿರ್ತೀನಿ, ನೇರವಾಗಿ ಮಾತಾಡ್ತೀನಿ ಅಂತೆಲ್ಲ ಅಂದ್ಕೊಳ್ತ ಇರ್ತೀನಿ. ಆದರೆ ಅದೆಲ್ಲ ಸುಳ್ಳು, ನನಗೆ ಬಿ.ಡಿ.ಎ. ಸೈಟ್ ಸುಲಭವಾಗಿ ಸಿಗೋದಾದ್ರೆ ಒಂದು ಮೂರ್ನಾಕು ಸೈಟು ಕೊಂಡ್ಕೋಬೇಕು ಅನ್ನೋ ಆಸೆ ಇದೆ. ಮುಂಚೆ ಅನ್ಕೊಂಡಿದ್ದೆ; ಒಂದು ಸೈಟಿರಬೇಕಾದ್ರೆ, ಅದಿಲ್ಲ ಅಮತ ಸುಳ್ಳು ಹೇಳಬಹುದು ಅಂದ್ಕೊಂಡಿದ್ದೆ; ಆದರೆ ಯಾರು ಸತ್ಯವಂತರಿದ್ದಾರೆ ಹೇಳಿ? ಎಷ್ಟು ಜನ ಲಂಚ ತೊಗೊಳಲ್ಲ. ಎಷ್ಟು ಜನ ಪ್ರಶ್ನೆ ಪತ್ರಿಕೆಗಳನ್ನು ಮಾರ್ಕೊಂಡು ದುಡ್ಡು ಮಾಡೊಲ್ಲ! ನೋಡಿ ಅವತ್ತು ಚೀಫ್ ಮಿನಿಸ್ಟರ್ ಹತ್ರ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿದ್ರಿ. ನಾನು ಬರೊಲ್ಲ ಅಂದೆ. ಅವತ್ತೇನೋ ಎಕ್ಸಾಮಿನೇಷನ್ ಕೆಲ್ಸ ಇತ್ತು ಸರಿ. ಆದ್ರೆ ಚೀಫ್ ಮಿನಿಸ್ಟರು ಕರೆದಾಗ, ಆ ಕೆಲಸಾನ ಯಾರಿಗಾದ್ರೂ ವಹಿಸಿ ಹೋಗಬಹುದಾಗಿತ್ತು. ಆಮೇಲೆ ನೀವು ಚೀಫ್ ಮಿನಿಸ್ಟರ್ರು ಬೇಜಾರು ಮಾಡ್ಕೊಂಡು “ನಮ್ಮಂಥವರು ಕರೆದ್ರೆ ಅವರೆಲ್ಲಿ ಬರ್ತಾರೆ ಅಂತ ಹೇಳಿದ್ರು” ಅಂತ ಹೇಳಿದಾಗ, ನಾನು ನನ್ನ ಚಾರಿತ್ರ್ಯದ ಬಗ್ಗೆ ಎಷ್ಟು ಹೆಮ್ಮೆ ಪಡ್ಕೊಂಡಿದ್ದೆ ಗೊತ್ತ? ಮಾರಲಿ ಸುಪೀರಿಯಲ್ ಅಂದ್ಕೊಂಡಿದ್ದೆ. ಹೋಗ್ಲಿ ಬಿಡಿ. ನೀವೊಂದು ಕೆಲ್ಸ ಯಾಕ್ಮಾಡ್ಬಾರ್ದು?”
“ಏನು ಸರ್?”
“ನೋಡಿ ನಿಮಗೆ ಲೇಖನ ಬರೀಬೇಕು ಅನ್ನೋ ಆಸೆ ಇದೆ. ನೀವು ಮನಸ್ಸು ಮಾಡಿದ್ರೆ ದೊಡ್ಡ ಲೇಖಕ ಆಗಬಹುದು. ನೀವು ಬಹಳ ಜನರ ಜೊತೆ ಓಡಾಡೋದ್ರಿಂದ, ಅವರ ಮನಸ್ಸನ್ನೆಲ್ಲ ಅರ್ಥ ಮಾಡ್ಕೋಳ್ತೀರಿ. ನೀವು ಕಾದಂಬರಿ ಯಾಕೆ ಬರೀಬಾರ್ದು. ಈ ಚೀಫ್ ಮಿನಿಸ್ಟರ್ ಸೇವೆ ಮಾಡ್ಕೊಂಡು ಬಿದ್ದಿರೋದಕ್ಕಿಂತ, ಒಬ್ಬ ಜೆನ್ಯುಯುನ್ ಆದ, ಆತ್ಮಾಭಿಮಾನವುಳ್ಳ, ಚಿಂತಕ, ತತ್ವ ಜ್ಞಾನಿ ಅಥವಾ ಲೇಖಕ ಯಾಕಾಗ್ಬಾರ್ದು?”
“ನಂಗೂ ಆಸೆ ಇದೆ ಸರ್, ಆದರೆ…….”
“ಸರಿ ಬಿಡಿ, ಏನೋ ಹೇಳ್ಬೇಕು ಅನ್ನಿಸ್ತು, ಹೇಳಿಬಿಟ್ಟೆ, ಇದಕ್ಕೆ ನೋಡಿ ನಾನು ನೇರವಾಗಿ ಮಾತಾಡುವ ಮನುಷ್ಯ, ಸುಳ್ಳು, ತಟವಟ, ಮೋಸ, ವಂಚನೆ ಏನೂ ಗೊತ್ತಿಲ್ಲದ ಮನುಷ್ಯ ಅಂತ ಹೆಮ್ಮೆ ಪಟ್ಕೊಳ್ತೀನಿ. ನನಗೆ ಲೋಕಾನುಭವ ಸಾಲದು ವೆಂಕಟರಮಣಯ್ಯ” ಎಂದು ಗೋಪಾಲ್ ಹೇಳಿದರು

ಶ್ರೀನಾಥ ರಾತ್ರಿ ೮ ಗಂಟೆಗೆ ಬಂದ. “ಅಪ್ಪಾ ಗುಡ್ ನ್ಯೂಸ್” ಅಂದ.
“ಏನೋ ಅದು” ಎಂದು ಗೋಪಾಲ್ ಗುಟ್ಟಾಗಿ ಕೇಳಿದರು. ಅವರ ಹೆಂಡತಿ ಮತ್ತು ಮಗಳ ಕಿವೀಗೆ ಆ ಮಾತು ಬೀಳಬಾರದು ಅಂತ ಅವರಿಗೆ ಅನ್ನಿಸಿತ್ತು.
“ಬಾ ಆಚೆಗೆ ಹೋಗೋಣ” ಎಂದರು.
ದಾರಿಯಲ್ಲಿ ಶ್ರೀನಾಥ “ಅಪ್ಪ, ತ್ಯಾಗರಾಜನಗರದ ನಾಲ್ಕನೆ ಕ್ರಾಸಿನಲ್ಲಿ ಒಂದು ವಠಾರ ಇದೆ. ಅಲ್ಲಿಗೆ ವೆಂಕಟರಮಣ ಹೋದದನ್ನ ನೋಡಿದೆ. ಆ ಮೇಲೆ ಅಲ್ಲೇ ಒಂದು ಗಂಟೆ ಕಾಯ್ತಾ ಇದ್ದೆ. ಅವನು ಹೊರಗೆ ಬರಲಿಲ್ಲ.”
“ನೋಡೋ, ನಮ್ಮ ಹತ್ರ ವೆಂಕಟರಮಣ ಅಂತ ಹೆಸರು ಹೇಳಿರಬಹುದು. ನಾಳೆ ಬೆಳಿಗ್ಗೆ ಅವನು ಮನೆ ಬಿಟ್ಟು ಹೋದ ಮೇಲೆ, ಅಲ್ಲೇ ಯಾರ್ನಾರೂ ಕೇಳು, ಈಗ ಹೋದ್ರಲ್ಲ, ದಪ್ಪ ಮೀಸೆ ಇದೆಯಲ್ಲ, ಒಳ್ಳೆ ಬಾಡಿ ಇದೆಯಲ್ಲ. ಅವರ ಹೆಸರೇನು ಅಂತ. ಅಥವಾ ಅವನು ಆ ವಠಾರದಿಂದ ಹೊರಗೆ ಬಂದ ಮೇಲೆ ಒಂದೈದು ನಿಮಿಷ ಬಿಟ್ಟು ಹೋಗಿ `ಇಲ್ಲಿ ವೆಂಕಟರಮಣ ಅಂತ ಇದಾರಾ?’ ಅಂತ ಕೇಳು. `ಇಲ್ಲಿ ಯಾರೂ ಇಲ್ಲ’ ಅಂದ್ರೆ, `ಮತ್ತೆ ಈಗ ಹೋದರಲ್ಲ ಅವರ ಹೆಸರು ವೆಂಕಟರಮಣ ಅಲ್ವ?’ ಅಂತ ಕೇಳು `ಯಾಕೆ’ ಅಂತ ಯಾರಾದ್ರೂ ಕೇಳಿದ್ರೆ `ನಮ್ಮೂರಲ್ಲಿ ವೆಂಕಟರಮಣ ಅಂತ ಇದ್ರು, ಅವರು ಸ್ವಲ್ಪ ಇವರನ್ನು ಹೋಲ್ತಾರೆ, ಅವರು ಇಲ್ಲೇ ಎಲ್ಲೋ ಮನೆ ಮಾಡ್ಕೊಂಡಿದಾರೆ ಅಂತ ಕೇಳಿದ್ದೆ. ಅವರನ್ನು ನೋಡಿ ಭಾಳಾ ವರ್ಷ ಆಗಿದೆ. ಅದಕ್ಕೆ ಕೇಳಿದೆ! ಅಂತ ಬುರುಡೆ ಬಿಡು”ಎಂದರು.

ಮಾರನೆದಿನ ಬೆಳಿಗ್ಗೆ ಶ್ರೀನಾಥನ ಪತ್ತೆದಾರಿ ಮುಂದುವರೆಯಿತು. ವೆಂಕಟರಮಣನಿಗೆ ಸುಳಿವು ಕೊಡದ ಹಾಗೆ, ಶ್ರೀನಾಥ ಅವರಿವರನ್ನು ಕೇಳಿ ಅವನ ಹೆಸರು ವೆಂಕಟರಾಂ ಅಂತ ತಿಳಿದು ಕೊಂಡ. ವೆಂಕಟರಾಂ ಅಗ್ರಿಕಲ್ಚರಲ್ ಆಫೀಸಿನಲ್ಲಿ ಕೆಲಸ ಮಾಡ್ತಾನೆ ಅಂತಾನೂ ತಿಳಿಯಿತು. ವೆಂಕಟರಾಂ ಮನೆ ಅ ವಠಾರವನ್ನು ಪ್ರವೇಶಿಸಿದಾಗ ಮೂಲೆಯಲ್ಲಿ ಎಡಗಡೆ ಇರುವ ಮನೆ ಅನ್ನುವುದನ್ನು ಪತ್ತೆಹಚ್ಚಿದ.

ಮಾರನೆ ದಿನ ಬೆಳಿಗ್ಗೆ ೫ ಗಂಟೆಗೆ ಗೋಪಾಲ್ ವೆಂಕಟರಾಂ ಮನೆಗೆ ಹೋಗಿ ಬಾಗಿಲು ತಟ್ಟಿದರು. ವೆಂಕಟರಾಂ ಬಾಗಿಲು ತೆಗೆದ. ಅಡಿಗೆ ಮನೆಯಲ್ಲಿ ಉದ್ದನೆಯ ಹೆಂಗಸೊಬ್ಬಳು ಕೆಲಸ ಮಾಡುತ್ತಿದ್ದಳು. ಮಂಚ ಖಾಲಿಯಾಗಿತ್ತು. ಮಂಚದ ಕೆಳಗೆ ಒಬ್ಬಳು ಹೆಂಗಸು ಮಲಗಿದ್ದ ಹಾಗೆ ಕಂಡಿತು. “ಬನ್ನಿ ಸರ್ ಬನ್ನಿ” ಎಂದು ವೆಂಕಟರಾಂ ಹೇಳಿದಾಗ, “ಪರವಾಗಿಲ್ಲ ಇಲ್ಲೇ ನಿಂತಿರ್ತೀನಿ” ಅಂತ ಗೋಪಾಲ್ ಹೇಳಿದರು. “ಇಲ್ಲ ಬನ್ನಿ ಸಾರ್” ಅಂತ ವೆಂಕಟರಾಂ ಕರೆದ. ಅಷ್ಟು ಹೊತ್ತಿಗೆ ಮಲಗಿದ್ದ ಹೆಂಗಸು ಎದ್ದಾಗ ಅವಳು ೧೮-೧೯ ವರ್ಷದ ಹುಡುಗಿ ಅಂತ ಗೋಪಾಲ್‌ಗೆ ಗೊತ್ತಾಯಿತು. ಹುಡುಗಿ ಆತುರಾತುರವಾಗಿ ಹಾಸಿಗೆ ಸುತ್ತಿಟ್ಟಳು. ಗೋಪಾಲ್ ಮಂಚದ ಮೇಲೆ ಕುಳಿತುಕೊಂಡರು. “ಶಾಂತಾ ಕಾಫಿ ಕೊಡೆ” ಅಂದಾಗ ಒಳಗಿದ್ದ ೨೪-೨೫ ವಯಸ್ಸಿನ ಹೆಂಗಸು ಕಾಫಿ ತಂದುಕೊಟ್ಟಳು. ಕಾಫೀ ಕುಡಿದು ಗೋಪಾಲ್ “ಬರ್ತೀನಿ” ಅಂತ ಹೊರಗೆ ಬಂದರು.

ಗೋಪಾಲ್ಗೆ ಏನಾದರೂ ಮಾಡಿ ವೆಂಕಟರಾಂಗೆ ಪಾಠ ಕಲಿಸಬೇಕು ಅನ್ನುವ ಗೀಳು ಹಿಡಿಯಿತು. ತಮ್ಮ ಸ್ನೇಹಿತರಾದ ಒಬ್ಬ ಸೈಕಾಲಜಿಸ್ಟ್ ಹತ್ತಿರ ಅವನ ವಿಷಯ ಮಾತಾಡಿದರು. ಅಗ್ರಿಕಲ್ಚರಲ್ ಆಫೀಸಿಗೊಮ್ಮೆ ಹೋಗಿ ಅವನನ್ನು ಹೊರಗೆ ಕರೆದರು. “ಅಯ್ಯಾ ವೆಂಕಟರಾಂ ನೀನು ಬುದ್ದಿವಂತ. ಈ ಥರಾ ಜನರಿಗೆ ಮೋಸ ಮಾಡ್ತಾ ಎಷ್ಟು ದಿವಸ ಇರಲಿಕ್ಕೆ ಸಾಧ್ಯ? ನಿನ್ನ ಪೊಲೀಸ್‌ಗೆ ಕೊಡೋಣ ಅಂತ ಇದ್ದ. ನಿನ್ನ ಕೆಲಸಾನೂ ಹೋಗುತ್ತೆ, ನಿನ್ನ ಹೆಂಡತಿ, ನಿನ್ನ ತಂಗಿ ಬೀದಿ ಪಾಲಾಗ್ತಾರೆ, ಅದಕ್ಕೋಸ್ಕರ ನನ್ನ ಫ್ರೆಂಡ್ ಸೈಕಾಲಜಿಸ್ಟ್ ಹತ್ರ ಮಾತಾಡಿದೀನಿ. ಅವನು ನಿನ್ನ ರೋಗಾನ ವಾಸಿ ಮಾಡ್ತಾನೆ. ರೋಗ ವಾಸಿ ಮಾಡ್ಕೊಂಡು ಪ್ರೈವೇಟ್ ಆಗಿ ಇನ್ನಷ್ಟು ಓದಿ, ನಿನ್ನ ಬುದ್ದಿ ಶಕ್ತಿಗೆ ಸರಿಯಾದ ಮಾರ್ಗವನ್ನು ಹುಡುಕು” ಎಂದರು
“ತುಂಬಾ ಥ್ಯಾಂಕ್ಸ್ ಸರ್, ನನ್ನನ್ನು ಕ್ಷಮಿಸಿ ಬಿಡಿ ಸರ್, ನೀವು ಹೇಳ್ದಾಗೆ ಆ ಸೈಕಾಲಜಿಸ್ಟ್ ಹತ್ರ ಹೋಗ್ತೀನಿ ಸರ್, ಅವರ ಅಡ್ರೆಸ್ ಕೊಡಿ ಸರ್” ಅಂತ ಅಡ್ರೆಸ್ ಇಸಿದುಕೊಂಡ.
ಒಬ್ಬ ಮನುಷ್ಯನನ್ನು ಉಳಿಸಿದೆ; ಅವನಿಂದ ಅನೇಕರಿಗೆ ತೊಂದರೆಯಾಗುವುದನ್ನು ತಪ್ಪಿಸಿದೆ ಅಂತ ಗೋಪಾಲ್ ಹೆಮ್ಮೆ ಪಟ್ಟುಕೊಂಡರು. ಒಂದು ವಾರ ಹೇಗೋ ಕಳೆಯಿತು. ವೆಂಕಟರಾಂ ಹೇಗಿದ್ದಾನೆ ಅಂತ ನೋಡಿ ಬರಲಿಕ್ಕೆ ಅವನ ಮನೆಗೆ ಗೋಪಾಲ್ ಬೆಳಗಿನ ಜಾವ ಆರು ಗಂಟೆಗೇ ಹೋದರು. ವೆಂಕಟರಾಂ ಮನೆ ಖಾಲಿಯಾಗಿತ್ತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ