ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ಈ ಬಾರಿ ನಾನು ನಿಜವಾಗಿಯೂ ಪೂರ್‍ಣ, ಅಖಂಡ
ಎಲ್ಲ ಪರಿಣಾಮಗಳಿಂದ ಮುಕ್ತ, ನಿಜವಾಗಿಯೂ ಪೂರ್‍ಣ
ಈಗ ಚತುರ್‍ಭೂತಗಳ ಸೃಷ್ಟಿಯಾದ ವಿಗ್ರಹ ಚೂರು ಚೂರು ಚೂರಾಯಿತು
ಮತ್ತೆ ನಾನು ಭಕ್ತನಾದೆ, ಎಲ್ಲ ಭವಿತನದಿಂದ ದೂರವಾದೆ
ಒಂಭತ್ತು ಸ್ವರ್‍ಗ ಲೋಕಗಳ ಸುತ್ತ ಕುಣಿದಾಡಿದೆ
ನಕ್ಷತ್ರ ಲೋಕಗಳ ಪಥದ ಸುತ್ತ ಪರದಾಡಿದೆ
ನಾನು ಪೂರ್‍ಣ ಅದೃಶ್ಯ, ಅವನ ಜತೆಗೆ ಆಲೆದಾಡಿದೆ
ಈ ನೆಲದೊಳಗೆ ಅವನನ್ನಪ್ಪಿದೆ, ಸುತ್ತಲಿನ ಜಗತ್ತು ಕಂಡೆ
ಈಗ ಲೋಕದ ಸೆರೆಮನೆಯಲ್ಲಿ ನಾನು ಬಂದಿ
ನಾನ್ಯಾಕೆ ಇಲ್ಲಿ ಖೈದಿ, ಯಾರ ಆಸ್ತಿ ನಾನು ಕದ್ದೆ?
ಸೆರೆಯೊಳಗೆ ಸಖರ ಜತೆಗಿರುವುದು ಮೇಲು ಎಂದು ಬಂದೆ ಇಲ್ಲಿ
ಭಣ ಭಣಗುಟ್ಟುವ ನಂದನಕ್ಕಿಂತ ಇದು ಮೇಲು
ಆ ಸುಂದರಾಂಗನ ನೋಟ ಸಿಗಲಿ ಎಂದು ನಾನೀಗ ಬಂದಿ
ಹೊಕ್ಕುಳ ಬಳ್ಳಿ ಕಳಚಿ ಬಂದ ನಾನೀಗ ಇಲ್ಲಿ ರಕ್ತ ಸಂಬಂಧಿ
ಮಾನವ ಜೀವಕ್ಕೆ ಒಮ್ಮೆ ಮಾತ್ರವಂತೆ ಹುಟ್ಟು, ನನಗೆ ಸಾವಿರ ಹುಟ್ಟು
ನೀನು ಕುಡಿದು ಚಿತ್ತು, ನಾನು ಕುಡಿಯದೆ ಸದಾ ಚಿತ್ತು
ನಿನಗೆ ತುಟಿಗಳಲ್ಲಿ ನಗೆ. ನನಗೆ ತುಟಿಗಳಿಲ್ಲದೆ ನಗೆ
ಹರಿದು ಚಿಂದಿಯಾದ ಶರೀರ ನಾನು, ಆದರೂ ಸದಾ ಕಾರ್‍ಯಪ್ರವೃತ್ತ
ಈ ದೇಹವೆಂಬ ಹರಕು ಬಟ್ಟೆ ಹರಿಸಿದ್ದೇನೆ ನಾನು
ಖುದ್ದಾಗಿ ಈ ಕೈಯಿಂದಲೇ ಆದ ಹರಿದು ಚೆಲ್ಲಿದ್ದೇನೆ
*****
