ಆಗ, ಮೂರುಸಂಜೆಯ ಹೊತ್ತಿಗೆ ಭೆಟ್ಟಿಯಾಗಲು ಬಂದಾತ ಹೇಳಿ ಹೋಗಿದ್ದ-“ನಾಳೆ ನಸುಕಿನಲ್ಲಿ ಕೋಳಿ ಕೂಗುವ ಮೊದಲೇ ಹೊರಡಬೇಕು ಸಿದ್ಧನಾಗಿರು” ಎಂದು. ಎಂತಲೇ, ರಾತ್ರಿಯ ಊಟ ಮುಗಿಸಿದ್ದೇ ಅವನು ಹೊರಡುವ ಸಿದ್ಧತೆಗೆ ತೊಡಗಿದ್ದ. ಕಳೆದ ನಾಲ್ಕಾರು ದಿನಗಳಲ್ಲಿ ಕೋಣೆಯಲ್ಲಿ ಅಸ್ತವ್ಯಸ್ತವಾಗಿ ಬಿದ್ದುಕೊಂಡ ಅರಿವ-ಅಂಚಡಿಗಳನ್ನೆಲ್ಲ ಸೂಟ್ ಕೇಸಿನಲ್ಲಿ ತುಂಬಹತ್ತಿದ. ತುಂಬುತ್ತಿದ್ದಂತೆ ಕೈಗೆ ಬಂದ `ಶೇವಿಂಗ್ ಸೆಟ್ಟ’ನ್ನು ನೋಡಿ ತಡೆದ. ಮೋರೆಯ ಮೇಲೆ ಗಡ್ಡ ಬೆಳೆಯುವ ಜಾಗದ ಮೇಲೆ ಕೈಯಾಡಿಸಿಕೊಂಡ. ಬೆಳಿಗ್ಗೆ, ಅವನು ಕರೆಯಲು ಬರುವ ಮೊದಲು ದಾಡಿ ಮಾಡಿಕೊಳ್ಳಲು ಆಗುವದೋ ಇಲ್ಲವೋ, ಈಗಲೇ ಮಾಡಿಕೊಂಡರೆ ಹೇಗೆ ಎಂಬ ವಿಚಾರ ಬಂದದ್ದೇ, ಅದನ್ನು ಕೃತಿಯಲ್ಲಿ ಇಳಿಸಲು ಆತುರನಾಗಿ ಎದ್ದು ನಿಂತ. ಗಡ್ಡದ ವಿಷಯದಲ್ಲಿ ಅವನು ತೆಗೆದುಕೊಳ್ಳುತ್ತಿದ್ದ ಜಾಗ್ರತೆ ಅವನ ಗೆಳೆಯರಲ್ಲೆಲ್ಲ ಹೆಸರು ಗಳಿಸಿತ್ತು. ಅವನು ಕೆಲಸ ಮಾಡುತ್ತಿದ್ದ ಕಂಪನಿಯವರು ಮಾರುತ್ತಿದ್ದ `ರೇಜರ್-ಬ್ಲೇಡು’ಗಳ ಜಾಹಿರಾತಿನಲ್ಲಿ ಅವನ ಕ್ಷೌರ ಮಾಡಿದ ಮುಖದ ಚಿತ್ರವನ್ನೂ ನೀವು ಆಗೀಗ ನೋಡಿರಬಹುದು.
ಬಾತ್ರೂಮಿನ ವಾಃಶ್ ಬೆಸಿನ್ನಿನ ಎದುರಿಗೆ ನಿಂತು, ಗೋಡೆಗೆ ಹಚ್ಚಿದ ಕನ್ನಡಿಯಲ್ಲಿ ಮೋರೆ ನೋಡಿಕೊಳ್ಳುತ್ತ, ಗಡ್ಡಕ್ಕೆ ನೀರು, ಸಾಬೂನು ಹಚ್ಚಿ ಬ್ರಶ್ಶಿನಿಂದ ನೊರೆ ಎಬ್ಬಿಸುತ್ತಿದ್ದಂತೆ ಅವನ ತಲೆಯಲ್ಲಿ ಆಗಿನಿಂದಲೂ ಎದ್ದಿರದ ಒಂದು ವಿಚಾರವು ಮೆಲ್ಲನೆ ಎದ್ದು ಬಂದಾಗ ನಡುವೆಯೇ ನಿಂತುಬಿಟ್ಟ: ಎಲ್ಲ ಬಿಟ್ಟು ಕೋಳಿ ಕೂಗುವ ಮೊದಲು ಎಂದನಲ್ಲ. ಕಲಕತ್ತೆಯಂತಹ ಈ ವಿಶಾಲ ಪಟ್ಟಣದ ಎದೆಯಲ್ಲಿ ನಿಂತ ಈ ದೊಡ್ಡ ಆಧುನಿಕ ಹೊಟೆಲ್ಲಿನ ಹತ್ತಿರ ಕೋಳಿಯಲ್ಲಿ ಕೂಗಬೇಕು? ಕೇಳುವುದನ್ನೇ ಮರೆತುಬಿಟ್ಟೆನಲ್ಲ. ಕೋಳಿ ಕೂಗುವದೂ ಎಷ್ಟು ಹೊತ್ತಿಗೆಂಬುದು ನೆನಪಿದ್ದರಲ್ಲವೆ: ಹಳ್ಳಿ ಬಿಟ್ಟು ಎಷ್ಟು ವರುಷಗಳಾದವೊ! ಯಾವ ಹಳ್ಳಿಯ ಹುಂಬನೋ ಇವನು-ಕೋಳಿ ಕೂಗುವ ಮೊದಲು ಹೊರಡಲು ಸಿದ್ಧನಾಗಲು ಹೇಳಿದವನು. ಏನಾದರೇನು? ಮುಂಜಾವಿನ ನಾಲ್ಕು ಗಂಟೆಗೇ ಎದ್ದರೆ ಒಳಿತು. ಅದಕ್ಕಿಂತಲೂ ಮೊದಲೇ ಬಂದರೆ? ಬಂದರೆ ಬರಲಿ, ತುಸು ಹಾದಿ ಕಾದಾನು…….
ಗಡ್ಡದ ನೊರೆ ಚೆನ್ನಾಗಿ ಬೆಳೆದಿತ್ತು. ಹರಿತವಾದ ಹೊಸ ಬ್ಲೇಡು ಇನ್ನೂ ಬೆಳೆದಿರದ ಗಡ್ಡವನ್ನು ಸವರುತ್ತಿತ್ತು. ಇನ್ನೊಮ್ಮೆ ಸಾಬೂನು ಹಚ್ಚಿಕೊಳ್ಳುವ ಹೊತ್ತಿಗೆ ತಲೆಯಲ್ಲಿ ಬಂದ ಇನ್ನೊಂದು ವಿಚಾರಕ್ಕೆ ಬೆಚ್ಚಿಬಿದ್ದ: ನಸುಕಿನಲ್ಲೇ ಹೊರಡುವದಾದರೆ ಹೊಟೆಲ್ಲಿನವರಿಗೆ ಈಗಲೇ ತಿಳಿಸಬೇಕಲ್ಲ. ಓಹ್! ಮರೆತೇ ಹೋಗುತ್ತಿದ್ದೆ. ಗಡ್ಡಕ್ಕೆ ನೊರೆ ಹಚ್ಚಿಕೊಂಡಿರುವಾಗಲೇ ಕೋಣೆಗೆ ಬಂದು `ಟೆಲಿಪೋನ್ ರಿಸೀವರ್’ ಎತ್ತಿದ. “ರಿಸೆಪ್ಶನ್ ಪ್ಲೀಜ್” ಎಂದ. ತನಗೆ ಬೇಕಾದ ಸ್ಥಳ ದೊರಕಿದ ಮೇಲೆ ಹೇಳಿದ-“ನಾನು ೧೫೯ ನೇ ರೂಮಿನಿಂದ ಮಾತನಾಡುತ್ತಿದ್ದೇನೆ. ಬೆಳಿಗ್ಗೇ ಹೊಟ್ಟೆಲ್ಲನ್ನು ಬಿಡಬೇಕು. `ಬಿಲ್ಲ’ನ್ನು ಈಗಲೇ ಸಿದ್ಧಪಡಿಸಿ ಇಡಲು ಹೇಳಿ. ಹೋಗುವಾಗ ಸಹಿ ಮಾಡಿ ಹೋಗುತ್ತೇನೆ. ನನ್ನ ಹತ್ತಿರ `ಟ್ರೆವಲ್ ಏಜೆಂಟರ ವೌವ್ಚರ್’ ಇದೆ. “ನಾಲ್ಕು ಗಂಟೆಗೆ ಎಬ್ಬಿಸುವ ಕರೆ ಕೊಡಿ.” ಇವನ ಮಾತು ಮುಗಿಸಿದ್ದೇ ಟೆಲಿಪೋನಿನ ಆ ತುದಿಯಿಂದ ನಮ್ರವಾದ ಮಾತುಗಳು ಬಂದವು. “ಕ್ಷಮಿಸಿ ಸರ್. ಈ ಕೋಣೆ ತಮ್ಮ ಹೆಸರಿನಲ್ಲಿ ಹತ್ತು ದಿನಗಳ ಸಲುವಾಗಿ `ರಿಝರ್ವ್’ ಆಗಿದೆ…..” ಆ ಮಾತುಗಳು ಮುಂದುವರೆಯುವ ಮೊದಲೇ ಇವನು ಅನವಶ್ಯಕವಾಗಿ ಕೆರಳಿ ಒಡರಾಡಿದ: “ರಿಝರ್ವ್ ಮಾಡಿದ್ದು ಹೌದು. ಆದರೆ ಒಂದು ಅನಪೇಕ್ಷಿತ ಕಾರಣಕ್ಕಾಗಿ ನನ್ನ ಇಲ್ಲಿಯ ಮುಕ್ಕಾಮನ್ನು ಅರ್ಧಕ್ಕೇ ಮುಗಿಸಬೇಕಾಗಿದೆ. ಇದರಿಂದ ನಿಮಗೆ ಅಡಚಣೆಯಾಗುತ್ತಿದ್ದರೆ ಮಾತ್ರ…..” ಟೆಲಿಫೋನಿನ ಆ ತುದಿಯಿಂದ ತಡವರಿಸುತ್ತ ಬಂದ ಮಾತುಗಳು-“ತಪ್ಪು ತಿಳಕೊಳ್ಳಬೇಡಿ, ಸರ್…..” ಆದರೆ ಅವನಿಗೆ ಆ ವಿವರಣೆಯನ್ನು ಕೇಳುವ ತಾಳ್ಮೆಯಾಗಲೀ ವ್ಯವಧಾನವಾಗಲೀ ಇದ್ದಿರಲಿಲ್ಲ. ಟೆಲಿಫೋನಿನ ರಿಸೀವರನ್ನು ಅದರ ಸ್ಥಾನದಲ್ಲಿ ಅಪ್ಪಳಿಸಿದವನೇ ತಿರುಗಿ ಬಾತ್ ರೂಮಿಗೆ ಬಂದ. ಅವನಿಗೆ ತನಗೆ ಬಂದ ಸಿಟ್ಟಿನಿಂದ ತುಂಬ ಸಮಾಧಾನವೆನಿಸಿತು. ಮರು ಕ್ಷಣ, ಗಡ್ಡದ ಮೇಲೆ `ರೇಜರ್’ನ್ನು ಆಡಿಸುತ್ತಿದ್ದಂತೆ ಅನಿಸತೊಡಗಿತು: ಟೆಲಿಫೋನಿನ ಮೇಲೆ ಮಾತನಾಡಿದವನು ಕಣ್ಣೆದುರಿಗೆ ಇದ್ದಿದ್ದರೆ ಅವನನ್ನು ಹಾಗೆ ಗದರಿಸಲು ತನಗೆ ಮನಸ್ಸಾಗುತ್ತಿತ್ತೇ? ಪರೋಕ್ಷದಲ್ಲಿ ತಾನು ಬೇಕಾದವರನ್ನು ಗದರಿಸಬಲ್ಲೆನಾದರೂ ಪ್ರತ್ಯಕ್ಷದಲ್ಲಿ ಮಾತ್ರ ಹಾಗೆ ಮಾಡುವದು ತನ್ನಿಂದ ಸಾಧ್ಯವಿಲ್ಲ ಎಂಬ ಸತ್ಯವನ್ನು ಅವನು ಬಲ್ಲ. ಈಗ ಅರ್ಧ ಗಂಟೆಯ ಹಿಂದಿನದೇ ಸಂಗತಿ:
ಆಗ ಮೂರು ಸಂಜೆಯ ಹೊತ್ತಿಗೆ ಬಂದ ಆ ಆಗಂತುಕ ಹೊರಟು ಹೋದದ್ದೇ ಅವನು ಮೊಟ್ಟಮೊದಲು ಮಾಡಿದ ಕೆಲಸವೆಂದರೆ ಹೊಟೆಲ್ಲಿನ ಲಾಂಡ್ರಿಗೆ ಟೆಲಿಫೋನ್ ಮಾಡಿ ತನ್ನ ಬಟ್ಟೆಗಳನ್ನು ಕೂಡಲೇ ರೂಮಿಗೆ ಕಳಿಸಿಕೊಡಲು ಕೇಳಿಕೊಂಡದ್ದು. ಬಟ್ಟೆಗಳು ಸಿದ್ಧವಾಗಲು ಇನ್ನೂ ಒಂದು ದಿವಸ ಬೇಕಾಗಿತ್ತು. ಟೆಲಿಫೋನ್ ತೆಗೆದುಕೊಂಡ ನೌಕರ ನಮ್ರ ಭಾಷೆಯಲ್ಲೇ ತನ್ನ ನಿರುಪಾಯತೆಯನ್ನು ತಿಳಿಸಿದ. ಇವನಿಗೆ ಸಿಟ್ಟು ಒಮ್ಮೆಲೇ ಮಸ್ತಕಕ್ಕೇರಿ ಲಾಂಡ್ರಿಯ ಮೆನೇಜರರ ಹತ್ತಿರ ಮಾತನಾಡುವ ಬಯಕೆ ಪ್ರಕಟಿಸಿದ-ಒದರಾಡುವ ಭಾಷೆಯಲ್ಲೇ. ಮೆನೇಜರರು ಟಿಲಿಫೋನಿನ ಮೇಲೆ ಬಂದಾಗ ಅತಿ ಗಂಭೀರವಾದ ಧ್ವನಿಯಲ್ಲಿ ತನಗೆ ಎಲ್ಲಿಂದಲೋ `ಅರ್ಜಂಟ್’ ಕರೆ ಬಂದದ್ದರಿಂದ ಬಿಳಿಗ್ಗೆ ಎದ್ದದ್ದೇ ಹೊರಟು ಹೋಗಬೇಕಾಗಿದೆ ಎಂದೂ ಒಗೆಯಲು ಕೊಟ್ಟ ಬಟ್ಟೆಗಳು ಯಾವ ಸ್ಥಿತಿಯಲ್ಲಿದ್ದರೂ ಅಂದು ರಾತ್ರಿಗೇ ತನ್ನ ರೂಮಿಗೆ ಮುಟ್ಟಬೇಕೆಂದೂ ತಿಳಿಸಿದ. ಮೆನೇಜರ ಬಾಯಿ ತೆರೆಯುವ ಮೊದಲೇ ದನಿಯನ್ನು ಎತ್ತರಿಸಿದ. “ಹಾಗೆ ಮಾಡಲು ಆಗದಿದ್ದಲ್ಲಿ ಮಾತ್ರ ಬಟ್ಟೆಗಳನ್ನು ನೀವೇ ಇಟ್ಟುಕೊಳ್ಳಬಹುದು. ನನಗೆ ಅವುಗಳ ಅವಶ್ಯಕತೆ ಇಲ್ಲ” ಎಂದವನೇ ಟೆಲಿಫೋನ್ ರಿಸೀವರನ್ನು ಕೆಳಗಿಟ್ಟಿದ್ದ. ಆಶ್ಚರ್ಯದ ಸಂಗತಿಯೆಂದರೆ, ಎರಡು ತಾಸುಗಳ ನಂತರ, ಒಗೆದು ಇಸ್ತ್ರಿ ಮಾಡಿದ ಇವನ ಬಟ್ಟೆಗಳನ್ನು ತೆಗೆದುಕೊಂಡು ಲಾಂಡ್ರಿಯ ಮೆನೇಜರರೇ ಇವನ ಕೋಣೆಗೆ ಧಾವಿಸಿ ಬಂದಿದ್ದರು. ಇವನು ಮಾತನಾಡಲಿಲ್ಲ. ಟೆಲಿಫೋನಿನ ಮೇಲೆ ಮಾತನಾಡುವಾಗ ಅವರಿಗೆ ತನ್ನ ಬಗ್ಗೆ ಇದ್ದ ಭಯ, ಆದರಗಳು ತನ್ನನ್ನು ಕಂಡದ್ದೇ ಮಾಯವಾಗಿದ್ದವೋ ಎಂದೆನಿಸಿತು: ಬಟ್ಟೆಗಳ ಪೊಟ್ಟಣವನನ್ನು ಇವನ ಟೇಬಲ್ಲಿನ ಮೇಲಿಟ್ಟು ಇವನೊಡನೆ ಮಾತನಾಡದೇ ರೂಮನ್ನು ಬಿಟ್ಟು ಹೋಗಿದ್ದರು. ಇವನ ಜೀವ ಅಸ್ಪಷ್ಟ ಅಸಮಾಧಾನದಿಂದ ಮುದುಡಿಕೊಂಡಿತ್ತು…..
ಕ್ಷೌರದ ಕೆಲಸ ಮುಗಿದಿತ್ತು. ಕ್ಷೌರದ ಸರಂಜಾಮನ್ನು ಹೊತ್ತು ಕೋಣೆಗೆ ಬಂದ. “ಅಷ್ಟು ಬೆಳಿಗ್ಗೆ ಎಬ್ಬಿಸುವದೆಂದರೆ ಮರೆತೇಬಿಡುತ್ತಾರೋ ಏನೋ”. ಹೊಸ ಸಂಶಯವೊಂದು ತಲೆಯಲ್ಲಿ ಇಣಕುತ್ತಿದ್ದಂತೆ, `ರೂಮ್-ಬಾಯ್’ನಿಗೂ ಹೇಳಿಡುವುದು ಒಳಿತು. ಅವನಿಗೆ ಸಲ್ಲಬೇಕಾದ `ಟಿಪ್ಸ್’ (ಬಕ್ಷೀಸು) ಈಗಲೇ ಕೊಟ್ಟಂತಾಯಿತು, ಮುಂಜಾನೆಯ ಚಹವನ್ನೂ ತರಿಸಿದಂತಾಯಿತು, ಎಂದು ಬಗೆದು ಗಂಟೆ ಒತ್ತಿದ. ಕೆಲ ನಿಮಿಷಗಳಲ್ಲೇ `ರೂಮ್-ಬಾಯ್’ ಬಂದು ಹಾಜರಾದ. ಐದು ರೂಪಾಯ ನೋಟು ಒಂದನ್ನು ಅವನ ಕೈಯಲ್ಲಿಡುತ್ತ, “ನನಗೆ ಬೆಳಿಗ್ಗೆ ಸರಿಯಾಗಿ ಐದು ಗಂಟೆಗೆ ಎಬ್ಬಿಸಬೇಕೆಂದು ಕೆಳಗೆ ಹೇಳಿಬಿಟ್ಟಿದ್ದೇನೆ. ಆದರೆ ಮರೆತೇಬಿಡುತ್ತಾರೋ ಏನೋ. ನೀನು ನಾಲ್ಕು ಗಂಟೆಗೆ ಚಹ ತಂದು ಎಬ್ಬಿಸಬೇಕು, ತಪ್ಪದೇ”. ಎಂದು ಹೇಳಿದಾಗ ಸೇವಕ ಕೃತಜ್ಞತೆಯಿಂದ ಸಲಾಮು ಹೊಡೆಯುತ್ತ “ಎಳ್ಳಷ್ಟೂ ಕಾಳಜಿ ಬೇಡ ಸಾರ್. ನಾಲ್ಕು ಗಂಟೆಗೆ ತಪ್ಪದೇ ಎಚ್ಚರಿಸುವೆ. ಗುಡ್ ನೈಟ್ ಸರ್…..” ಎಂದು ಹೊರಟು ಹೋದ. ತನ್ನ ಹಿಂದೆಯೇ ಕದ ಎಳೆದುಕೊಂಡ.
`ಸೂಟ್ ಕೇಸ್’ನ್ನು ತುಂಬುವ ಕೆಲಸ ಮುಂದುವರೆದಿತ್ತು. ನಡುವೆಯೇ ಎದ್ದ ಹೊಸ ಪ್ರಶ್ನೆಯೊಂದರಿಂದ ಬೆರಗುಗೊಂಡು ಕುಳಿತುಬಿಟ್ಟ: ಅರೆ, ಆಗ ಬಂದವನು ಕೋಳಿ ಕೂಗುವ ಮೊದಲೇ ಹೊರಡಬೇಕು ಎಂದಾಗ, ಎಲ್ಲಿಗೆ? ಯಾಕೆ? ಎಂದು ಕೇಳುವದನ್ನೇ ಮರೆತು ಒಪ್ಪಿಬಿಟ್ಟೆನಲ್ಲ! ಒಪ್ಪಿಬಿಟ್ಟೆನೇ?… ಅವನ ಮೋರೆಯ ಮೇಲೆ ವಿಷಾದ ತುಂಬಿದ ನಗೆ ಮೂಡಿತು: ತನ್ನ ಒಪ್ಪಿಗೆ ತಿಳಿಯಲು ಅವನು ಅಲ್ಲಿ ನಿಂತಿದ್ದರಲ್ಲವೆ! ಆದರೆ ಇಂತಹ ಸಂಗತಿಗಳು ಅವನಿಗೆ ಹೊಸವಲ್ಲ. ಈಗ ಅವನು ಕಲಕತ್ತೆಗೆ ಬಂದುದರ ಹಿಂದಿನದೇ ಕತೆ: ಅವನು ಅವನ ಕಂಪನಿಯ ಉಚ್ಚ ತರಗತಿಯ `ಟ್ರೆವಲಿಂಗ್ ಸೇಲ್ಸಮೆನ್’. ಆದರೆ ಅವನು ಸಂಚಾರ ಮಾಡಬೇಕಾದ ಪಟ್ಟಣಗಳಲ್ಲಿ ಕಲಕತ್ತೆ ಇದ್ದಿರಲಿಲ್ಲ. ಕೆಲವು ದಿನಗಳ ಹಿಂದಷ್ಟೇ ತನ್ನ ಅಧಿಕಾರದ ಕೆಳಗಿನ ಹತ್ತಾರು ಪಟ್ಟಣಗಳನ್ನು ಸತತವಾಗಿ ಎರಡು ತಿಂಗಳವರೆಗೆ ತಿರುಗಾಡಿ ಮುಂಬಯಿಗೆ ಹಿಂತಿರುಗಿದ್ದ. ಮುಂಬೈ ತಲುಪಿದ ಮರುದಿನವೇ ಅವನ ಮೇಲಧಿಕಾರಿ ಅವನನ್ನು ತನ್ನ `ಕ್ಯಾಬಿನ್ನಿ’ಗೆ ಕರೆದು ಹೇಳಿದ್ದ: “ನಾಳೆಗೆ ನೀನು ಕಲಕತ್ತೆಗೆ ಹೊರಡಬೇಕು”. ಇವನಿಗೆ ಬಾಯಿ ತೆರೆಯುವ ಅವಕಾಶವನ್ನೂ ಕೊಡದೇ ಆ ಮೇಲಧಿಕಾರಿ ಮುಂದುವರೆದಿದ್ದ: “ನಿನ್ನ ಟ್ರೇನ್ ಟಿಕೆಟ್ಟು `ರಿಝರ್ವ್’ ಆಗಿದೆ-ಕಲಕತ್ತಾ ಮೇಲಿಗೆ. `ಗ್ರ್ಯಾಂಡ್ ಹೊಟೆಲ್ಲಿ’ನಲ್ಲಿ ಉಳಿಯುವ ವ್ಯವಸ್ಥೆಯಾಗಿದೆ. ಕಲಕತ್ತೆ ತಲುಪಿದ ಕೂಡಲೇ ಅಲ್ಲಿಯ `ಬ್ರ್ಯಾಂಚ್ ಮೆನೇಜರ’ರನ್ನು ಭೆಟ್ಟಿಯಾಗು: ನಿನ್ನ ಕಲಕತ್ತೆಯ ಕಾರ್ಯಕ್ರಮ ತಿಳಿಸುತ್ತಾರೆ”. ಇವನು `ಪಿಟ್ಟೆ’ನ್ನದೇ ಕಲಕತ್ತೆಯ ಪ್ರವಾಸಕ್ಕೆ ಒಪ್ಪಿಕೊಂಡಿದ್ದ. ಅದರ ಬಗ್ಗೆ ತನಗೆ ಸುಖವಾಗಲೀ ದುಃಖವಾಗಲೀ ಇಲ್ಲ ಎನ್ನುವ ಅರಿವಿನಿಂದ ತುಸು ಅಚ್ಚರಿಪಟ್ಟಿದ್ದ, ಅಷ್ಟೆ.
ಮೇಲಧಿಕಾರಿಯ `ಕ್ಯಾಬಿನ್’ ಬಿಟ್ಟು ಹೊರಗೆ ಬಂದ ಮೇಲೆ ತಿಳಿದಿತ್ತು: ಈ ಅನಪೇಕ್ಷಿತ ಪ್ರವಾಸದ ಹಿಂದಿನ ಕಾರಣ. ಕಲಕತ್ತೆಯ ಪ್ರವಾಸಕ್ಕೆ ಹೋಗಬೇಕಾಗಿದ್ದ ಇವನ ಸಹೋದ್ಯೋಗಿಯೊಬ್ಬನು ತರಾತುರಿಯಲ್ಲಿ ಲಗ್ನವಾಗಿ `ಹನಿಮೂನಿ’ಗೆ ಹೋಗಬೇಕಾದ ಮೋಜಿನ ಘಟನೆ ಆಫೀಸಿನಲ್ಲಿ ಅದಾಗಲೇ ಎಲ್ಲರ ಮಾತಿಗೆ ವಿಷಯ ಒದಗಿಸಿತ್ತು. ತನ್ನದೇ ಆಫೀಸಿನಲ್ಲಿಯ `ಸ್ಟೆನೋಗ್ರಾಫರ್’ ಹುಡುಗಿಯೊಬ್ಬಳನ್ನು ಲಗ್ನವಾದ ತನ್ನ ರಸಿಕ ಸಹೋದ್ಯೋಗಿಯ ನೆನಪು ಬಂದ ಕೂಡಲೇ ಅವನು ನಿಜಕ್ಕೂ ಸಿಹಿಯಾದ ನಗೆ ನಕ್ಕ. ಅವನ ರಸಿಕತೆಯ ಪರಿಣಾಮವಾಗಿ ತಾನು ಕಲಕತ್ತೆಗೆ ಓಡಬೇಕಾಗಿತ್ತು. ಅದಾಗಲೇ ನಾಲ್ವತ್ತು ವರುಷ ದಾಟಿದ್ದರೂ ತನಗೆ ಮಾತ್ರ ಇನ್ನೂ ಹೆಂಡತಿಯಿರಲಿಲ್ಲ. ಮಕ್ಕಳುಮರಿಗಳಿರಲಿಲ್ಲ. ಹತ್ತಿರದ ಸಂಬಂಧಿಕರೂ ಇದ್ದಿರಲಿಲ್ಲ. ಸಂಚಾರಕ್ಕೆ ತಕ್ಕ ಆಳು. `ಬಾಃಸ್’ ತನ್ನನ್ನು ಬೇಕಾದಾಗ ಬೇಕಾದಲ್ಲಿ ಕಳಿಸಬಹುದು. ಅವನ ಮೋರೆಯ ಮೇಲಿನ ನಗುವಿನಲ್ಲಿ ವಿಷಾದದ ಛಾಯೆ ಸೇರಿಕೊಂಡಿತು.
`ವಾರ್ಡ್‌ರೋಬಿ’ನಲ್ಲಿ ಹೆಂಗರಿನ ಮೇಲೆ ತೂಗು ಹಾಕಿದ ಸೂಟೊಂದನ್ನು ಬಿಟ್ಟು `ಸೂಟ್ ಕೇಸಿ’ನಲ್ಲಿ ಎಲ್ಲ ಅರಿವೆಗಳನ್ನೂ ತುಂಬಿಯಾಗಿತ್ತು. ಸೂಟನ್ನು ನಿರಿಗೆ ಮಾಡುತ್ತಿದ್ದಂತೆ ನಿನ್ನೆ ಸಂಜೆ, ಹೊಟೆಲ್ಲಿಗೆ ಹಿಂತಿರುಗಿದಾಗ ಕೆಳಗೆ ಕೌಂಟರಿನ ಬಳಿಯಲ್ಲಿ ನಡೆದ ಘಟನೆಯೊಂದು ನೆನಪಿಗೆ ಬರಹತ್ತಿತ್ತು. ಹೊಟೆಲ್ಲಿಗೆ ಅದೇ ಬಂದು ತಲುಪಿದ ಬಿಳಿಯ ಬಣ್ಣದ ಪರಕೀಯನೊಬ್ಬ-ಕೌಂಟರಿನಲ್ಲಿದ್ದ ರಜಿಸ್ಟರಿನಲ್ಲಿ ತನಗೆ ಸಂಬಂಧಪಟ್ಟ ವಿವರಗಳನ್ನು ಬರೆಯುತ್ತಿದ್ದಂತೆ ಅದರಲ್ಲಿಯ “ಯುವರ್ ನೆಕ್ಸಟ್ ಡೆಸ್ಟಿನೇಷನ್” (ನಿಮ್ಮ ಮುಂದಿನ ಮುಕ್ಕಾಮು ಎಲ್ಲಿ?) ಎಂಬ ಶೀರ್ಷಿಕೆಯನ್ನು ನೋಡಿ ಆಶ್ಚರ್ಯಪಟ್ಟು, ಈ ಮಾಹಿತಿಯ ಉಪಯೋಗವೇನು? ಎಂದು ಅಲ್ಲಿಯ ಅಧಿಕಾರಿಯೊಬ್ಬನನ್ನು ಪ್ರಶ್ನಿಸುತ್ತಿದ್ದ. ಆ ಪ್ರಶ್ನೆ ತನ್ನ ಕಿವಿಯ ಮೇಲೆ ಬಿದ್ದಾಗ ತಾನೂ ಆ ಹೊಟೆಲ್ಲಿಗೆ ಬಂದ ಮೊದಲ ದಿನ ಆ ರೆಜಿಸ್ಟರಿನಲ್ಲಿ ಬರೆಯುವಾಗ ಬಂದ ಅನುಭವದ ನೆನಪು ಬಂದಿತ್ತು: (“ಯುವರ್ ನೆಕ್ಸಟ್ ಡೆಸ್ಟಿನೇಷನ್”) ಎಂಬ ಪ್ರಶ್ನೆಯ ಕೆಳಗೆ (“ನಾಟ್ ನೋನ್”) (“ಗೊತ್ತಿಲ್ಲ”) ಎಂದು ಬರೆಯುತ್ತ ತನ್ನಷ್ಟಕ್ಕೇ ನಕ್ಕಿದ್ದ: ತಿಂಗಳೆರಡು ಪ್ರವಾಸ ಮಾಡಿ ದಣಿದು ಅದೇ ಹಿಂತಿರುಗಿದವನನ್ನು ಕಲಕತ್ತೆಯ ಪ್ರವಾಸಕ್ಕೆ ಕಳಿಸಿದ `ಬಾಃಸ್’ನ ಲಹರಿಯನ್ನು ಯಾರು ಬಲ್ಲರು? ಕಲಕತ್ತೆಯನ್ನು ಬಿಡುವ ಮೊದಲೇ ಬೇರೆ ಇನ್ನೆಲ್ಲಿಗಾದರೂ ಕಳಿಸಿದರೂ ಕಳಿಸಿದರೇ!
ಈ ಘಟನೆಯ ನೆನಹಿನೊಡನೆಯೇ ಹುಟ್ಟಿ ಬಂದ ಇನ್ನೊಂದು ವಿಚಾರಕ್ಕೆ ಅವನ ಮನಸ್ಸು ತುಸು ಕಳವಳಿಸಿತು. `ಪ್ರವಾಸ’ ಎಂದರೆ ಎಂದೂ ಗೊಂದಲಿಸದ ತಾನು ಇಂದು ಇಷ್ಟೇಕೆ ಗೊಂದಲಿಸುತ್ತಿದ್ದೇನೆ. ಇದೀಗ ಕೈಕೊಳ್ಳಲಿದ್ದ ಪಯಣದ ವಿಷಯದಲ್ಲಿ ತನಗೇ ಅರಿವಾಗದ ಎಂತಹದಾದರೂ ಭೀತಿ, ಅಳುಕು ಇದ್ದಿರಬಹುದೇ? ಎಂದಿಗೂ ಅತಿ ಶಾಂತಚಿತ್ತನಾಗಿ ಪ್ರವಾಸದ ಸಿದ್ಧತೆಯನ್ನು ಮಾಡುವ ತನಗೆ ಹೀಗೇಕೆ ಒಂದೊಂದೇ ವಿಚಾರ-ಅನಪೇಕ್ಷಿತವಾಗಿ ಬಂದುದೆಂಬಂತೆ-ಬಂದು ಗೊಂದಲಗೆಡಹುತ್ತಿದೆ? ಕಲಕತ್ತೆಯಲ್ಲಿ ಆಫೀಸಿನ ಕೆಲಸ ಇನ್ನೂ ಐದು ದಿನಗಳ ವರೆಗೆ ಇರುವಾಗ, ಯಾರೋ ಒಬ್ಬ ಅಪರಿಚಿತ ಆಗಂತುಕನ ಪ್ರವಾಸದ ಕರೆಗೆ ಒಪ್ಪಿಕೊಂಡು ಕುಳಿತುಬಿಟ್ಟಿದ್ದೇನಲ್ಲ! ನಾಳೆ `ಬಾಃಸ್’ ಕೇಳಿದರೆ ಏನು ಹೇಳಲಿ? ಮರುಕ್ಷಣ `ಬಾಃಸ್’ನ ಮಾತನ್ನು ಉಲ್ಲಂಫಿಸಿ ಕಲಕತ್ತೆಯಲ್ಲಿಯ ಕೆಲಸವನ್ನು ಅರ್ಧಕ್ಕೇ ಬಿಟ್ಟು ಹೋಗುವದರಲ್ಲೇ ಎಂತಹದೋ ಸಮಾಧಾನ ಕಂಡಿತು. ಈ ಉಲ್ಲಂಘನೆಯೇ ತಾನು ಆ ಹೊಸಬನ ಕರೆಗೆ ಓಗೊಟ್ಟುದರ ಹಿಂದಿನ ಸುಪ್ತ ಪ್ರೇರಣೆಯಾಗಿತ್ತು ಎನ್ನುವ ರೀತಿಯಲ್ಲಿ! ಆದರೂ ಹೊರಡುವ ಮೊದಲು `ಬಾಃಸ’ನಿಗೆ ತನ್ನ ಈ ಹೊಸ ನಿಶ್ಚಯವನ್ನು ತಿಳಿಸಬೇಕು ಎಂದು ಬಗೆದು ಒಮ್ಮೆಲೇ ಟೆಲಿಫೋನ್ ರಿಸೀವರನ್ನು ಎತ್ತಿ, ತನಗೊಂದು `ಟ್ರಂಕ್ ಟೆಲಿಫೋನ್’ ಮಾಡುವುದಿದೆ ಎಂದು ಹೇಳಿ `ಬಾಃಸ’ನ ಮನೆಯ `ಟೆಲಿಫೋನ್ ನಂಬರ’ ಹಾಗೂ `ಬಾಃಸ’ನ ಹೆಸರು ಕೊಟ್ಟು `ಅರ್ಜಂಟ್ ಕಾಃಲ್’ (ಅವಸರದ ಕರೆ) ಮಾಡಲು ವಿಜ್ಞಾಪಿಸಿದ. `ಬಾಃಸ್’ ಇದಾಗಲೇ ಮಲಗಿರಬಹುದೇನೋ. ಈ ಅವೇಳೆಯಲ್ಲಿ ಬಂದ ಟೆಲಿಫೋನಿನಿಂದ ಆತ ಕೆರಳಬಹುದು. ತಾನು ಕೊಡಲಿರುವ ಸುದ್ದಿಯಿಂದಂತೂ ಎದ್ದು ಹಾರಾಡಬಹುದು. ಏಕೋ ಆ ಕಲ್ಪನೆಯಿಂದಲೇ ಅವನಿಗೆ ಇನ್ನಷ್ಟು ಸುಖವೆನಿಸಿತು.
ಟೆಲಿಫೋನ್ ಬರುವ ಹಾದಿ ನೋಡುತ್ತ ಹಾಸಿಗೆಯಲ್ಲಿ ಅಡ್ಡವಾದಲ್ಲೇ, ಇದೆಲ್ಲ ತನ್ನ ನಿಜ ಸ್ವಭಾವಕ್ಕೆ ವಿರುದ್ಧವಾದದ್ದು ಎಂಬ ಅರಿವು ಮೂಡಹತ್ತಿತು: ನಸುಕಿನಲ್ಲಿ ಎದ್ದು ತಾನು ಕೈಕೊಳ್ಳಲಿದ್ದ `ಪಯಣ’ಕ್ಕೆ ಯಾವ ಬಗೆಯ ಸಮರ್ಥನೆಯೂ ಬೇಕಾಗಿರಲಿಲ್ಲ. ಉಲ್ಲಂಘನೆಯಾಗಲೀ ನಿರಾಕರಣೆ, ಪ್ರತಿಭಟನೆಯಾಗಲೀ ತನ್ನ ಸ್ವಭಾವರಚನೆಯಲ್ಲೇ ಇರಲಿಲ್ಲ. ತನ್ನ ಇಂದಿನವರೆಗಿನ ಆಯುಷ್ಯದಲ್ಲಿ ಇವುಗಳ ಅರ್ಥ ಹೊಳೆದಿರಲಿಲ್ಲ. ಅವಶ್ಯಕತೆ ತೋರಿರಲಿಲ್ಲ. ಗೆಳೆಯರು ಬಂದು ಈಗಿಂದೀಗ ಸಿನೇಮಾಕ್ಕೆ ಹೋಗಬೇಕು ಎಂದು ಸೂಚಿಸಿದಾಗ ಎಷ್ಟೊಂದು ಸಹಜವಾಗಿ ಒಪ್ಪುತ್ತಿದ್ದನೋ ಅಷ್ಟೇ ಸಹಜವಾಗಿ ಅವನ `ಬಾಃಸ’ನು ಅವನಿಗಾಗಿ ಸಿದ್ಧಪಡಿಸಿದ ಕಾರ್ಯಕ್ರಮಗಳನ್ನು ಸ್ವೀಕರಿಸುತ್ತಿದ್ದ. ತನ್ನೆಲ್ಲ ಚಟುವಟಿಕೆಗಳ ರೂಪರೇಷೆಗಳನ್ನು ಯಾವಾಗಲೂ ಬೇರೆಯವರೇ ನಿಶ್ಚಯಿಸಿರುತ್ತಾರೆ- ಅದೂ ತನ್ನ ಹಿತಕ್ಕೇ ಎಂಬ ನಂಬುಗೆಯಿಂದಲೇ. ತಾನೂ ಅವುಗಳಿಗೆ ಪ್ರತೀಕಾರ ಮಾಡಿ ಅವರನ್ನೇಕೆ ನಿರಾಸೆಗೊಳಿಸಲಿ, ಎಂದು ಅವನು ಆಗೀಗ ನಗುತ್ತ ಹೇಳುವುದುಂಟು. ಇದನ್ನು ನೆನೆಯುವಾಗ ಅಪ್ಪನ ಮಾತೊಂದರ ನೆನಪಾಯಿತು.
ಅಪ್ಪ ನಿಷ್ಠುರವಾದ ಶಿಸ್ತಿನ ಮನುಷ್ಯನಾಗಿದ್ದ. ಚಿಕ್ಕಂದಿನಲ್ಲಿ-ತನಗೆ ನೆನಪಿರಲಿಲ್ಲ-ಚಿಕ್ಕಪ್ಪ ಹೇಳಿದ ಸಂಗತಿ: ತಾನು ಏಳೋ ಎಂಟೋ ವರುಷದವನಿರುವಾಗ ನಡೆದ ಪ್ರಸಂಗ: ಅಪ್ಪ ತನ್ನನ್ನು ಅಂಗಡಿಯಲ್ಲಿ ಕೂಡಿಸಿ ಯಾವುದೋ ಕೆಲಸಕ್ಕೆಂದು ಮನೆಗೆ ಹೋಗಿದ್ದನಂತೆ. “ನಾನು ಇದೀಗ ಬರುತ್ತೇನೆ. ಯಾರಾದರೂ ಬಂದರೆ ತಡೆಯಲು ಹೇಳು. ಏನೂ ಕೊಡಲು ಹೋಗಬೇಡ” ಎಂದು ಹೇಳಿ ಹೋಗಿದ್ದನಂತೆ. ಅಪ್ಪ ಹೋದದ್ದೇ, ತನ್ನದೇ ಶಾಲೆ, ತನಗಿಂತ ಎಷ್ಟೋ ವರುಷಗಳಿಂದ ದೊಡ್ಡವನಾದ ಕ್ರಿಶ್ಚಿನ್ ಹುಡುಗನೊಬ್ಬ ಪೇರಲಹಣ್ಣೊಂದನ್ನು ಅಂಗಡಿಗೆ ತಂದು ತನಗೆ ಕೊಟ್ಟು ತನ್ನಿಂದ ಒಂದು ರೂಪಾಯಿ ಪಡೆದು ಹೋದ. ನಾಣ್ಯಗಳ ಪರಿಚಯ ತನಗಿನ್ನೂ ಆಗ ಇದ್ದಿರಲಿಲ್ಲ. ಕ್ರಿಶ್ಚನ್ ಹುಡುಗ ಬೇಡಿದ್ದು ಒಂದು ಬಿಲ್ಲಿ. ತಾನು ಕೊಟ್ಟದ್ದು ಬೆಳ್ಳಿಯ ನಾಣ್ಯ-ಒಂದು ರೂಪಾಯಿ. ಅಪ್ಪನಿಗೆ ಇದು ತಿಳಿದಾಗ ಜಮದಗ್ನಿಯ ಅವತಾರನಾಗಿದ್ದ. (ಅಪ್ಪ ಜಮದಗ್ನಿಯ ಅವತಾರನೆಂದೇ ಜನರೆಲ್ಲಾ ಆಡಿಕೊಳ್ಳುತ್ತಿದ್ದರು). ತನ್ನನ್ನು ದರದರ ಅಂಗಡಿಯಿಂದ ಮನೆಯವರೆಗೆ ಎಳೆದುಕೊಂಡು ಹೋಗಿ ಹಿತ್ತಲಲ್ಲಿಯ ಬಿಂಬಲಕಾಯೀ ಮರಕ್ಕೆ ಕಟ್ಟಿಹಾಕಿ ತಲೆಯ ಮೇಲೆ ಕೆಂಪು ಇರುವೆಗಳ ಕೊಟ್ಟೆ (ಎಲೆಗಳ ಗೂಡು)ಕೊಡವಿದನಂತೆ. ಇರುವೆಗಳ ಕಡಿತದಿಂದ ಮಗು `ಚಿಟಾರ’ನೆ ಚೀರಿಕೊಳ್ಳುತ್ತಿದ್ದಾಗಲೇ ಬಿಂಬಲೀಮರದ ಬರಲಿನಿಂದ ಕೈಗೆ ಬಂದಂತೆ ಹೊಡೆದನಂತೆ. ಕೈಕಾಲುಗಳನ್ನು ಕಟ್ಟಿಸಿಕೊಂಡ ಮಗು ನೋವಿನಿಂದ ಒದ್ದಾಡುತ್ತಿತ್ತಂತೆ. ಅದರ ಒದ್ದಾಟ ನೋಡಿದಷ್ಟೂ ಇವನ ಹೊಡೆಯುವ ಆವೇಶ ಹೆಚ್ಚುತ್ತಿತ್ತಂತೆ. ಅಮ್ಮ, ಸೋದರತ್ತೆಯವರು `ಬಿಡಿ ಬಿಡಿ, ದಮ್ಮಯ್ಯ’ ಎಂದು ಚೀರಿಕೊಂಡರೂ ಇವನು ಬಿಡಲಿಲ್ಲವಂತೆ. ನೆರೆದ ಕೇರಿಯ ಹೆಂಗಸರು ಛೀಮಾರಿ ಹಾಕಿದಾಗ “ನಾನು ಹುಟ್ಟಿಸಿದ ಹುಡುಗ, ನಾನು ಹೊಡೆಯುತ್ತೇನೆ. ಕೇಳುವವರು ನೀವು ಯಾರು?” ಎಂದು ಅವರ ಮೇಲೇ ಹರಿಹಾಯ್ದನಂತೆ. ಕೊನೆಗೆ, ಅದಾಗ ಗೋಕರ್ಣದಿಂದ ಹಿಂತಿರುಗಿದ ಚಿಕ್ಕಪ್ಪ ಇವರ ಕೈರಟ್ಟೆ ಹಿಡಿದು ದೂರ ದಬ್ಬಿ ತನ್ನನ್ನು ಬಿಡಿಸಿದ್ದನಂತೆ. ಹೆದರಿ ಕಂಗಾಲಾದ ಮಗು ಹತ್ತು ದಿನಗಳ ವರೆಗೆ ಒಬ್ಬರ ಹತ್ತಿರವೂ ಮಾತನಾಡಲಿಲ್ಲವಂತೆ. ತಾನು ದೊಡ್ಡವನಾದ ಮೇಲೆ ಅತ್ತೆಯಾಗಲೀ ತಾಯಿಯಾಗಲೀ ಅಪ್ಪ ತನಗೆ ಕೊಟ್ಟ ಹಿಂಸೆಯ ನೆನಪು ಮಾಡಿದರೆ, ಅಪ್ಪ ಹಾಗೆ ನಡೆಸಿಕೊಂಡದ್ದರಿಂದಲೇ ಹುಡುಗ ಹಾದಿಗೆ ಹತ್ತಿದ. ಇಲ್ಲವಾದರೆ ಅವನಂತಾಗುತ್ತಿದ್ದ, ಇವನಂತಾಗುತ್ತಿದ್ದ ಎಂದು ಯಾರೋ ಯಾರೋ ಅಡ್ಡ ಹಾದಿ ಹಿಡಿದ ಹುಡುಗರ ಕತೆ ಹೇಳುತ್ತಿದ್ದ. ತನಗೆ ನಗು ಬರುತ್ತಿತ್ತು.
ಅಪ್ಪನನ್ನು ತಾನು ಪ್ರೀತಿಸುತ್ತಿದ್ದೆನೋ ಇಲ್ಲವೋ ಅವನಿಗೆ ನೆನಪಿಲ್ಲ. ಆದರೆ ಅಪ್ಪನಿಗೆ ಎಂದೂ ಅವಿಧೇಯತೆಗೆ ಅಪ್ಪನಿಂದ ಆಗಬಹುದಾದ ಶಿಕ್ಷೆಯ ಭಯ ಆಗಿರಲಿಲ್ಲ. ಪ್ರತಿಭಟನೆಗೆ ಅರ್ಥವೇ ಇಲ್ಲ ಎಂಬುದು ಅವನ ಜೀವನದ ತತ್ವಜ್ಞಾನವಾಗಿತ್ತು. ಎಷ್ಟೋ ಸಲ ಈ ತತ್ವಜ್ಞಾನ ಕೃತಿಯಲ್ಲಿಳಿದಾಗ ನಿಜವಾಗಿ ಸುಖಪಟ್ಟಿದ್ದುಂಟು. ಆ ದಿನ ಕಲಕತ್ತೆಗೆ ಹೋಗೆಂದು ಹೇಳಲು ತನ್ನನ್ನು ಕರೆಯಿಸಿದಾಗ, ತನ್ನಿಂದ ಏನಾದರೂ ಆತಂಕ ಬರಬಹುದೆಂಬ ಅಪೇಕ್ಷೆ `ಬಾಃಸ’ನ ಮೋರೆಯ ಮೇಲೆ ನಿಚ್ಚಳವಾಗಿ ಮೂಡಿತ್ತು. ಆದರೆ ತಾನು ಯಾವ ಅಡೆತಡೆಯಿಲ್ಲದೆ ಒಪ್ಪಿಕೊಂಡುಬಿಟ್ಟಾಗ ಅವರಿಗೇ ತುಸು ನಿರಾಸೆಯಾಗಿರಬೇಕು…..ಟೆಲಿಪೋನಿನ ಗಂಟೆ ಬಾರಿಸಿತು. ಅವಸರ ಅವಸರವಾಗಿ ಎದ್ದು `ರಿಸೀವರ್’ ಎತ್ತಿಕೊಂಡ. `ಬಾಃಸ’ನಿಗೆ ತಾನು ಹೇಳಲಿದ್ದ ಸಂದೇಶವನ್ನು ನೆನೆದುಕೊಂಡ. ಗಂಟಲು ಸರಿಪಡಿಸಿಕೊಂಡ. ಮೂಗಿನ ಹೊರಳೆ ಅರಳಿಸಿದ. `ರಿಸೀವರ್’ನ್ನು ಕಿವಿಗೆ ಹಚ್ಚಿದ: “ಬಾಂಬೆ ಲೈನ್ ಈಸ್ ಔಟ್ ಆಫ್ ಆರ್ಡರ್, ಸರ್, ಡಿಲೇ ಈಸ್ ಇನ್ಡೆಫಿನೈಟ್. ಷುಡ್ ಐ ಕೀಪ್ ದ ಕಾಲ್ ಪೆಂಡಿಂಗ್, ಸರ್? (ಮುಂಬಯಿ-ಕಲಕತ್ತೆಗಳ ನಡುವಿನ ಟೆಲಿಫೋನ ಸಂಬಂಧ ಕೆಟ್ಟಿದೆ ಸರ್. ದುರಸ್ತಿಗೆ ಬೇಕಾದ ವೇಳೆ ಅನಿಶ್ಚಿತ. ನಿಮ್ಮ ಕರೆಯನ್ನು ಕಾದಿರಿಸಲೇ, ಸರ್?”) “ಕ್ಯಾನ್ಸಲ್ ಇಟ್” (ರದ್ದು ಪಡಿಸಿರಿ) ಎಂದವನೇ ರಿಸೀವರನ್ನು ಕೆಳಗಿಟ್ಟು `ಹೋ-ಹೋ’ ಎಂದು ನಗಹತ್ತಿದ: `ಬಾಃಸ’ನ ಮೇಲೆ ಸಿಟ್ಟಾಗುವ ಪ್ರಥಮ ಸಂಧಿ ಅನಾಯಾಸವಾಗಿ ಕಳೆದುಹೋಗಿತ್ತು. ಅವನಿಗೆ ನಗು ಅನಾವರವಾಯಿತು. ನಗುತ್ತಲೇ ಹಾಸಿಗೆಯ ಮೇಲೆ ಅಡ್ಡವಾದ. ಕೈಗಡಿಯಾರ ನೋಡಿಕೊಂಡ ಗಂಟೆ ಹನ್ನೆರಡು ದಾಟಿತ್ತು. ಕೂಡಲೇ ಮಲಗಬೇಕು ಅನಿಸಿತು. `ರೂಮ್-ಬಾಯ್’ ಬೆಳಿಗ್ಗೆ ಸರಿಯಾಗಿ ಎಬ್ಬಿಸಬಹುದಲ್ಲವೆ? ಇಲ್ಲವಾದರೆ ಆ ಅಪರಿಚಿತನು ಕರೆಯಲು ಬಂದಾಗ ನಿದ್ದೆ ಹತ್ತಿಬಿಟ್ಟರೆ? ದೀಪ ಆರಿಸುವದೇ ಬೇಡ. ಅಂದರಾದರೂ ಆಗೀಗ ಎಚ್ಚರಗೊಂಡು ಗಡಿಯಾರ ನೋಡಿಕೊಳ್ಳಬಹುದು. ಅವನು ದೀಪ ಆರಿಸಲಿಲ್ಲ. ಹಾಗೇ ಕಣ್ಣು ಮುಚ್ಚಿದ. ಹೊಟೆಲ್ಲಿಗೆ ಹೊಟೆಲ್ಲು ಸ್ತಬ್ಧವಾಗಿತ್ತು. ಹೊರಗೆ, ರಸ್ತೆಯಲ್ಲಿ ಮಾತ್ರ ಕೊನೆಯ ಟ್ರಾಮುಗಳ, ಬಸ್ಸುಗಳ ಸದ್ದು ಆಗೀಗ ಕೇಳಿಬರುತ್ತಿತ್ತು. ದಣಿದ ಮನಸ್ಸಿಗೆ ಜೋಗುಳ ಹೇಳುತ್ತಿತ್ತು…
ಸುಮಾರು ಒಂದು ಗಂಟೆಯ ಮೇಲೆ ಎಚ್ಚರಗೊಂಡು `ಧಡಕ್ಕನೆ’ ಎದ್ದು ಕೂತಾಗ, ಹೊರಗೆ ಒಮ್ಮೆಲೇ ಗುಡುಗು-ಮಿಂಚು-ಮಳೆ ಸುರುವಾಗಿದ್ದುವು. ಗುಡುಗು-ಮಳೆಗಳ ಸದ್ದಿಗೆ ಮೈಮೇಲೆ ರೋಮಾಂಚವೆದ್ದಿತು. ಕೆಲ ಹೊತ್ತಿನವರೆಗೆ ತಾನು ಎಲ್ಲಿದ್ದೇನೆ? ಯಾಕೆ ಹೀಗೆ ಒಮ್ಮಲೇ ಎದ್ದು ಕುಳಿತೆ? ಎನ್ನುವುದು ತಿಳಿಯದೇ ದಿಗ್ಭ್ರಾಂತನಂತೆ ಸುತ್ತಲೂ ನೋಡಹತ್ತಿದ. ರೂಮಿನಲ್ಲಿಯ ಎಲ್ಲ ದೀಪಗಳೂ ಬೆಳ್ಳಗೆ ಉರಿಯುತ್ತಿದ್ದವು. ಮಂಚದ ಮೇಲೆ, ಕಾಲು ಮಾಡುವ ದಿಕ್ಕಿನಲ್ಲಿ ಆಗ ನಿರಿಗೆ ಮಾಡಿಟ್ಟ ಸೂಟು ಇತ್ತು. ಅದನ್ನು ನೋಡಿದ ಕೂಡಲೇ ತನ್ನ ಪಯಣದ ನೆನಪು ಬಂತು. ಗಂಟೆ ನೋಡಿಕೊಂಡ. ಇನ್ನು ಮೂರು ತಾಸಾದರೂ ಇರಬೇಕು-ಅವನು ಬರಲು, ಎಂದುಕೊಂಡ. ಹೊರಗೇ ಉಳಿದ ಸೂಟನ್ನು ಸೂಟ್ ಕೇಸಿನಲ್ಲಿ ತುಂಬಬೇಕು ಎನ್ನುವಾಗ ಬಂದ ವಿಚಾರಕ್ಕೆ ಅವನು ಅವ್ಯಕ್ತವಾಗಿ ಹೆದರಿದ. ತಾನು ಇಂದು ಇಷ್ಟೇಕೆ ಗೊಂದಲಿಸಿದ್ದೇನೆ? ಬೆಳಿಗ್ಗೆ ಅವನು ಬಂದಾಗ ಯಾವ ಡ್ರೆಸ್ಸಿನಲ್ಲಿ ಹೋಗಬೇಕು ಎಂಬ ವಿಚಾರವನ್ನೂ ಮಾಡದೇ ಎಲ್ಲ ಅರವೆಗಳನ್ನೂ ಸೂಟ್-ಕೇಸಿನಲ್ಲಿ ತುಂಬಿದೆನಲ್ಲ. ಬೆಳಿಗ್ಗೆ ಯಾವ ಡ್ರೆಸ್ಸು ಹಾಕಿಕೊಳ್ಳಲಿ? ಈ ಸೂಟನ್ನೇ ಧರಿಸಿದರೆ ಹೇಗೆ? ಈಗ ಬಂದ ನೆನಹಿನಿಂದ ಮಾತ್ರ ಅವನು ತತ್ತರ ನಡುಗಿದ; ಮೂರು ಸಂಜೆಯ ಹೊತ್ತಿಗೆ ಅವನನ್ನು ಭೆಟ್ಟಿಯಾಗಲು ಬಂದಾತ ಬಟ್ಟೆಯನ್ನೇ ತೊಟ್ಟಂತಿರಲಿಲ್ಲ! ಈಗ ನೆನಪಿಗೆ ಬಂತು; ಕೆದರಿದ ಕೂದಲು; ಹರವಾದ ಭುಜಗಳು; ಹರವಾದ ಎದೆ; ಮಾಂಸಲ ಕೈರಟ್ಟೆಗಳು; ಕಪ್ಪು ಮೈಬಣ್ಣ; ಮೋರೆಗೆ ಇಷ್ಟುದ್ದ ಕಪ್ಪು ಪೊತ್ತೆ-ಮೀಸೆಗಳು; ಕಪ್ಪು ಎದೆಯ ಮೇಲೆ ಕಪ್ಪು ರೊಣೆ; ಎಡಗೈ ರಟ್ಟೆಗೆ ಕಪ್ಪು ಬಣ್ಣದ ಕಪ್ಪು ದಾರ. ಬಂದ. ಕದ ತಟ್ಟಿದ. ತಾನೇ ಕದ ತೆರೆದ. (ಅಗಳಿ ಹಾಕಿರಲಿಲ್ಲ) ಸೊಂಟದವರೆಗಿನ ದೇಹ ಒಳಗೆ ಹಾಕಿದ. “ನಾಳೆ ನಸುಕಿನಲ್ಲಿ ಕೋಳಿ ಕೂಗುವ ಮೊದಲೇ ಹೊರಡಬೇಕು. ಸಿದ್ಧನಾಗಿರು” ಎಂದ. ಮೈ ಹಿಂತೆಗೆದುಕೊಂಡ. ಕದ ಮುಚ್ಚಿದ. ಹೋಗಿಬಿಟ್ಟ. `ಈಗಿಂದೀಗ ಸಿನೇಮಾಕ್ಕೆ ಹೋಗಬೇಕು’ ಎಂದು ಗೆಳೆಯರು ಸೂಚಿಸಿದಾಗ ಇಲ್ಲವೆ `ನಾಳೆಗೆ ಕಲಕತ್ತೆಗೆ ಹೋಗಬೇಕು’ ಎಂದು `ಬಾಃಸ್’ ಹೇಳಿದಾಗ `ಹುಂ’ ಎನ್ನುವ ಸಹಜತೆಯಿಂದಲೇ ತಾನು ಒಪ್ಪಿಕೊಂಡುಬಿಟ್ಟೆ. ಒಪ್ಪಿಕೊಂಡುಬಿಟ್ಟೆನೇ? ಅವನ ಮನಸ್ಸಿನಲ್ಲಿ ಪ್ರಥಮ ಬಾರಿ ಸಂಶಯ ಮೂಡಿತು. ದಣಿವೂ ಬಂದಂತೆ ಎನಿಸಿತು. ಗೊಂದಲಿಸುತ್ತ ಹಾಸಿಗೆಗೆ ಬಂದ. ಅಡ್ಡವಾದ. ಕಣ್ಣು ಮುಚ್ಚಿದ.
ಹೊರಗೆ ಮಾತ್ರ ಗಾಳಿ-ಮಳೆ-ಸಿಡಿಲು-ಗುಡುಗುಗಳ ಆರ್ಭಟ ಒಮ್ಮೆಲೇ ಹೆಚ್ಚಿತ್ತು.
ಅಜ್ಜ ಸತ್ತ ರಾತ್ರಿಯನ್ನು ನೆನೆಯುತ್ತ ಅವನು ನಿದ್ದೆ ಹೋದ. ನಿದ್ದೆ ಹೋಗುವ ಮೊದಲು ಅದೇ ತಲೆ ಎತ್ತಲು ಯತ್ನಿಸುತ್ತಿದ್ದ ಸಂಶಯವೂ ಈಗ ಮಲಗಿತ್ತು: ಅವನು ಬರುವ ಮೊದಲೇ ಕೆಳಗಿನವರಾಗಲೀ `ರೂಮ್-ಬಾಯ್’ನಾಗಲೀ ತನ್ನನ್ನು ಎಬ್ಬಿಸಬಹುದಲ್ಲವೇ?….
ರೂಮ್-ಬಾಯ್ ಎಬ್ಬಿಸಲಿಲ್ಲ. ಅವನಿಗೆ ಮರೆತೇ ಹೋಗಿತ್ತು. ತನ್ನ ಅಜಾಗರೂಕತೆಯನ್ನು ಶಪಿಸುತ್ತ, ಅಳುಕುವ ಹೆಜ್ಜೆಗಳನ್ನಿಡುತ್ತ, ಚಹದ ಟ್ರೇ ಹೊತ್ತುಕೊಂಡು ಅವನು ಕೋಣೆಯ ಬಾಗಿಲನ್ನು ತಲುಪಿದಾಗ, ಬೆಳಗ್ಗಿನ ಐದೂವರೆ ಬಡೆದಿದ್ದವು: ಇಷ್ಟು ಹೊತ್ತಿಗೆ ಅವರು ಹೊರಟೇ ಹೋಗಿರಬಹುದೇನೋ. ಕದದ ಮೇಲೆ ಬಡೆದ. ಒಳಗಿನಿಂದ ಉತ್ತರ ಬರಲಿಲ್ಲ. ಕದದ ಹಿಡಿಕೆ ತಿರುವಿ ದೂಡಿದ. ಕದ ತೆರೆಯಿತು: ಒಳಗಿನಿಂದ ಅಗಳಿ ಹಾಕಿರಲಿಲ್ಲ. ರೂಮಿನಲ್ಲಿಯ ದೀಪಗಳೆಲ್ಲವೂ ಉರಿಯುತ್ತಿದ್ದವು. `ಅವರು ಇದ್ದಾರೆ’ ಅನಿಸಿತು. ಅಧೀರ ಹೆಜ್ಜೆಯನ್ನಿಡುತ್ತ ಹಾಸಿಗೆಯನ್ನು ಸಮೀಪಿಸಿದ. ಅವನು ಸೂಟು-ಬೂಟುಗಳನ್ನು ಧರಿಸಿಯೇ, ಹಾಸಿಗೆಯ ಮೇಲೆ ಅಂಗಾತ ಮಲಗಿ, ಗಾಢ ನಿದ್ದೆ ಹೋಗಿದ್ದ. ಮಂಚದಿಂದ ಇಳಿಬಿಟ್ಟ ಬಲಗೈಯಲ್ಲಿ ನೆಲದ ಮೇಲಿಟ್ಟ ಸೂಟ್-ಕೇಸಿನ ಹಿಡಿಕೆಯನ್ನು ಗಟ್ಟಿಯಾಗಿ ಹಿಡಿದಿದ್ದ. ಎಡಗೈಯನ್ನು ಹಾಸಿಗೆಯ ಇನ್ನೊಂದು ಅಂಚಿನತ್ತ ನಿಡಿದಾಗಿ ಚಾಚಿದ್ದ. ಬೂಟು ಹಾಕಿದ ಕಾಲುಗಳು ಒದನ್ನೊಂದು ಬಳಸಿದ್ದವು. ದಿಂಬಿನ ಮೇಲೆ ವಿಶ್ರಮಿಸಿದ, ಕ್ರಾಪು ಬಾಚಿದ, ತಲೆ ತುಸು ಬಲಕ್ಕೆ ಒಲಿದಿತ್ತು. ಚಹದ ಟ್ರೇಯನ್ನು ಹತ್ತಿರದ ಟೀಪಾಯ ಮೇಲಿಟ್ಟು, ರೂಮ್-ಬಾಯ್, “ಗುಡ್-ಮಾರ್ನಿಂಗ್, ಸಾರ್,” ಎಂದ. ಇನ್ನೂ ಉತ್ತರ ಬರದಿದ್ದುದನ್ನು ನೋಡಿ, ಮನಸ್ಸಿನಲ್ಲಿ ಮೂಡಿದ ಸಂಶಯನಿವಾರಣೆಗಾಗಿ ಮೈ ಮುಟ್ಟಿ ನೋಡಿದಾಗ ಹೆದರಿದ ಸೇವಕ ಅಲ್ಲಿಂದ ಓಟ ಕಿತ್ತ. ಹೊಟೆಲ್ಲಿನ ಮನೇಜರರಿಗೆ ಸುದ್ದಿ ಮುಟ್ಟಿ, ಅವರು ಡಾಕ್ಟರರನ್ನು ಕರೆಯಿಸಿ ರೂಮಿಗೆ ಬರುವ ಹೊತ್ತಿಗೆ ಕಾಲುಗಂಟೆ ಸರಿದಿತ್ತು. ಡಾಕ್ಟರರು ಪರೀಕ್ಷಿಸಿ, ಅವನು ಹೋಗಿ ಮುಕ್ಕಾಲು ಗಂಟೆಯಾದರೂ ಆಗಿರಬೇಕು ಎನ್ನುತ್ತ ಕೈಗಡಿಯಾರ ನೋಡಿಕೊಂಡಾಗ, ಐದೂಮುಕ್ಕಾಲು ಗಂಟೆ. ಭಯಗ್ರಸ್ತನಾಗಿ ಹತ್ತಿರ ನಿಂತ ಸೇವಕ, “ಸರಿಯಾಗಿ ಐದು ಗಂಟೆಗೆ ತಾನು ಹೊರಡಬೇಕು. ನಾಲ್ಕು ಗಂಟೆಗೇ ಎಬ್ಬಿಸು, ಎಂದಿದ್ದರು, ಸರ್,” ಎಂದ, ನಡುಗುತ್ತ.
*****
೧೫-೦೮-೧೯೬೪
