ಯುಗ ಯುಗಕೂ ಉರುಳುತಿಹುದು
ಜಗದ ರಥದ ಗಾಲಿ,
ಹಗಲು ಇರುಳು ಮರಳಿ ಮಸೆದು
ಸಾಹಸ ಮೈತಾಳಿ.
ಕಾಡು-ನಾಡು, ದೇಶ-ಕೋಶ
ಭಾಷೆ-ಭಾವ ದಾಟಿ,
ಭೂಮಿ-ಬಾನು, ಬೆಂಕಿ-ನೀರು
ಗಾಳಿ-ರಾಟಿ-ಧಾಟಿ.
ನವ ಜನಾಂಗ ಮೂಡಿ, ಮೊಳಗಿ
ಬದುಕು ತಿದ್ದಿ ತೀಡಿವೆ;
ಸೂರ್‍ಯ, ಚಂದ್ರ, ಚಿಕ್ಕೆ ಕೋಟಿ
ಕಣ್ಣರಳಿಸಿ ನೋಡಿವೆ.
ಊರು-ಕೇರಿ, ಭೂಮಿ-ಸೀಮಿ
ಮೀರಿ ಬೆಳೆದ ಮಾನವ,
ನೂರು ತಾರೆಗಳಲಿ ಹುಡುಕು-
ತಿಹನು ವಿಶ್ವಗಾನವ.
ಸುತ್ತು ಮುತ್ತು ಭಯ, ಸಂಶಯ
ಕೊಳ್ಳಿ ದೆವ್ವ ಕುಣಿದಿವೆ;
ಮನ ಮನಗಳ ಮುಳ್ಳುಬೇಲಿ
ಮಮತ ದೂರ ತಳ್ಳಿವೆ.
ಯುಗಪುರುಷರ ಜಗುಲಿಗಿರಿಸಿ
ಕೈಯ ತೊಳೆದುಕೊಂಡೆವು.
ಬಯಲಾಟದ ವೇಷ ಕುಣಿದು
ಬೆಳಗು ಬರಲು ದಣಿದೆವು.
ಪ್ರತಿಪದವೂ ಪ್ರಗತಿಗೆಂದು
ಹದವಿಲ್ಲದೆ ಮಿದಿದೆವು;
ಕುದಿಯಿಲ್ಲದೆ ಎಸರಿಲ್ಲದೆ
ಕಸುಕಿಗೆ ಬಾಯ್ದೆರೆದೆವು.
ನಿನಗೆ ಬೇವು ನನಗೆ ಬೆಲ್ಲ –
ನವಯುಗಾದಿ ಗಾದೆಯು;
ಕೂಡಿ, ಕುಟ್ಟಿ ಸವಿಯಲಿಲ್ಲ
ಯುಗ ಯುಗಗಳ ಹಾಡಿದು.
ದೂರ ದೂರ ಬೇರು ಚಾಚಿ
ಟೊಂಗೆ, ಟಿಸಿಲು ಮನುಕುಲ;
ತಾಯಿ ಬೇರು ಕಾಯಬೇಕು
ಹಣ್ಣಾಗಲಿ ಹಂಬಲ.
ಶುಭಾಶುಭದ ಫಲವ ಹೊತ್ತು
‘ಶೋಭನ’ವಿದೊ ಬಂದಿದೆ;
ಇಳುಹಿಕೊಳ್ಳಿ ತಲೆಯ ಭಾರ
ಲಾಭ-ಹಾನಿ ಮುಂದಿದೆ.
*****
