ಅಂತೂ ಕೊನೆಗೆ ಬಂತು ಮಳೆ-
ತಂತಿ ವಾದ್ಯವ ನುಡಿಸು, ಮದ್ದಳೆಯ ಬಡಿ, ಹೂಡಿ ಕೇಕೆ.
ಓಡಿ ಹೋಗುವ ಮೋಡಗಳ ಹಿಡಿದು ಹಿಂಡು.
ಬಳುಕಿ ಬಾಗುವ ಮಳೆಯ ಸೆಳಕುಗಳ
ಸೇವಿಗೆಯ ಸಿವುಡು ಕಟ್ಟಿಡು;
ಬೇಕು ಬೇಕಾದಾಗ ಹೊಡೆಯೋಣ ಪಾಯಸ.
ಮೊನ್ನೆ ಬೇಸಗೆಯಲ್ಲಿ ಲಟ್ಟಿಸಿದ ಹಪ್ಪಳ, ಇಟ್ಟ ಸಂಡಿಗೆ,
ತುಂಬಿಟ್ಟ ಉಪ್ಪಿನಕಾಯಿ ಭರಣಿ- ಎಲ್ಲ ತರೆದಿಡು;
ಒಲೆಯ ಮುಂದೆ ಬೆಚ್ಚಗೆ ಕುಳಿತು ಸವಿಯೋಣ.
ಹೊರಗೆ ಹೋದರೆ ಕತ್ತು ಹಿಡಿದು ಒಳನೂಕುವದು ಗಾಳಿ
ನಾವೇನು ಮಾಡೋಣ-
ಕದ ಹಾಕಿ, ಕಿಡಕಿ ಮುಚ್ಚಿ,
ಆರಾಮು ಕುರ್‍ಚಿಯಲ್ಲಿ ಕೂಡೋಣ;
ವ್ಹಿಟ್‌ಮನ್, ಈಲಿಯಟ್, ಟಾಗೋರ್, ಬೇಂದ್ರೆ
ಒಂದೊಂದೆ ಪುಟವ ತೆರೆಯೋಣ-
[ಕುಣಿಯೋಣು ಬಾರ, ಕುಣಿಯೋಣು ಬಾ]
ಇಂಥ ದಿನಗಳಲಿ ರೇಡಿಯೋ ಕೂಡ
ಗೂಳಿಯ ಹಾಗೆ ಗುಟುರುವದು,
ವಿದ್ಯುದ್ದೀಪ ಕಣ್ಣು ಹೊಡೆಯುವದು;
ಬರ್‍ಪದಲಿ ಸಾರಿಸಿದಂತೆ ನೆಲವು ಜುಣುಗುಟ್ಟುವದು.
ಹೊರಗೊ?- ಜಗವೆಲ್ಲ ತೊಯ್ದು ಹೋಗಿದೆ,
ತಿಳಿಮಣ್ಣು ತೇಲಿ ಹೋಗಿದೆ;
ಬಂಡ ಬಂಡೆಗಳೆದೆಯ ಗೊಮ್ಮಟಗೆ ಕುಂಭಾಭಿಷೇಕ.
ತೊಯ್ದ ಪತ್ರಿಕೆಯಲ್ಲು ಬಂತು ಬಿಸಿಬಿಸಿ ಸುದ್ದಿ
(ಗಾಯ ಮಾಯ್ದರು ರಸಿಕೆಯಾಡುವದು ನಿಂತಿಲ್ಲ)
ಪ್ರಕ್ಷುಬ್ಧ ಸಾಗರಕೆ ಸಾಗಿದೆ ಶಾಂತಿ ಹಡಗದ ಹಂಸ.
ಬಿಳಿಯ ಮೈಯೊಳು ತೊಳೆದರೂ ಹೋಗದಿದೆ
ಕೆಂಪು ರಕ್ತದ ಕಲೆ.
ಕೆಂಪು ಕೋಟೆಯ ಮೇಲೆ ನಿಂತು ಹಾರಿಸಿದ ಬಿಳಿ ಪಾರಿವಾಳ
ಮರಳಿ ಗೂಡಿಗೆ ಬಂತೆ?
ಅಣ್ವಸ್ತ್ರಗಳ ಹಿಡಿದು ಹೊರಟವರ ತಲೆಯ ನುಣ್ಣಗೆ ಮಾಡಿ,
ಲಿಂಬಿ ಹುಳಿಯನು ಹಿಂಡಿ, ಸುಣ್ಣದ ಪಟ್ಟಿ ಎಳೆದು,
ಕತ್ತೆಯ ಮೇಲೆ ತಂದು
ವಿಶ್ವಸಂಸ್ಥೆಯ ಮುಂದೆ ಮರಸೋಣ.
[ನಮ್ಮ ಬೆಂಬಲಕಿಹನು ಅಂಬಿಗರ ಚೌಡಯ್ಯ]
ಢಣ್, ಢಣ್….
ಎಲ್ಲಿ ಹೋದರೂ ಬೆನ್ನು ಹತ್ತಿಯೇ ತೀರುವದು
ಗೋಪುರದ ಕಣ್ಣು ಗಡಿಯಾರ,-
ಮರೆತು ಕುಳಿತರೆ ತಲೆಯ ಕುಕ್ಕುವದು,
ನರೆತ ಕೂದಲು ಹಿಡಿದು ಒಂದೊಂದೆ ಎಣಿಸುವದು.
ಸುತ್ತು ಸುತ್ತಿಗೆ ಏನೊ ಕತ್ತರಿಸಿ ಒಗೆಯುವದು.
ವಿಶ್ವದಗಲವ ಸುತ್ತಿ ಬಿಚ್ಚುವದು, ಮತ್ತೆ
ಮುಚ್ಚುವದು ಸುರುಳಿ, ಸುರುಳಿ.
ದೂರದಲಿ ಯಾರೋ ಮಬ್ಬುಗತ್ತಲಲಿ
ಹುಬ್ಬುಗೈ ಹಚ್ಚಿ ನೋಡುತಿದ್ದಾರೆ ಹೊರಳಿ ಹೊರಳಿ…
ಅಂತೂ ಕೊನೆಗೆ ಬಂತು ಮಳೆ-
ಹುಚ್ಚು ಹೊಳೆ.
*****
