ಹೊಸ ಬಾಳು ನಮ್ಮದಿದೆ

ಹೊಸ ಜಗವು ರೂಪುಗೊಂಡಿಹುದೀಗ; ಹೊಸ ಬಾಳು
ನಮ್ಮದಿದೆ, ಹೊಸತೆಲ್ಲ ನಮ್ಮದಿನ್ನು!
ಹಳೆಯ ಕಾಲದ ರೂಢಿ-ಜಡಮತೀಯರನೆಲ್ಲ
ಬಿಟ್ಟು ಬಿಡಿ ಅವರವರ ಪಾಡಿಗಿನ್ನು –

ಯುವ ಜನಾಂಗವೆ ಬನ್ನಿ ನವರಂಗಕೆ
ಹೊಸ ಪಾತ್ರಧಾರಿಗಳ ಹೊಸ ಕುಣಿತಕೆ;
ಮೂಲೆಯಲ್ಲವಿತವಗೆ ಬರಿ ಕತ್ತಲು
ಸತ್ಯತಮ ಸಾಹಸಕೆ ಯಶವೆತ್ತಲು!

ಹೊಸ ಮಳೆಯ ಧಾರೆಯಲಿ ಇಂದಿನೀ ಜೀವನಕೆ
ಬಂದಿದೆ ಮಹಾಪೂರ, ಬತ್ತದಿನ್ನು!
ಹಳೆ ಕೊಳೆಯ ತತ್ತ್ವಗಳು ಸಂಕುಚಿತ ಭಾವಗಳು
ಕೊಚ್ಚಿ ಹೋಗಿವೆ, ತಿರುಗಿ ಬಾರವಿನ್ನು –

ಮುಂಬಾಳ ಮುಂಜಾವು ನಗೆಯ ಬೀರಿ
ಕೊರಳೆತ್ತಿ ಹಾಡುತಿದೆ ಜಯವ ಕೋರಿ;
ಮರೆತು ಬಿಡಿ ಹಿಂಗತೆಯ ಹೀನತೆಯನು
ಕೊಟ್ಟು ಬಿಡಿ ಆ ವ್ಯಥೆಗೆ ತರ್ಪಣವನು!

ಎಂದಿನಿಂದಲೊ ನಿಮ್ಮ ಎದೆಗಳಲಿ ಹುದುಗಿಹುದು
ಹೊಸ ಸಮಾಜದ ರೂಪ-ರೇಷೆ ಬಯಕೆ;
ನಿಮ್ಮ ಹೊಂಗನಸುಗಳ ಕಂಡರಿಸಲೆಂದೀಗ
ಹದಗಾಲ ಬಂದಿರಲು ಮುದುರಲೇಕೆ?

ಬಾಳವೃಕ್ಷದ ಜೀರ್ಣ ಪರ್ಣಂಗಳುದುರಿ
ಹೋಗುತಿವೆ ಚಿಗುರಲೆಗೆ ಹೊಗರು ಬೀರಿ,
ಜೋಲು ಮೊಗ ಯುವಕರಿಗೆ ಸಲ್ಲ ಹೊಲ್ಲ;
ನಗುತ ಮುಂಬರಿಯುತಿರೆ ಬಹುದು ಗೆಲ್ಲ!

ಬಡವ ಬಲ್ಲಿದರೆಂಬ ಜಾತಿಗೀತಿಗಳೆಂಬ
ವಿಷಮತೆಯ ನಂಟೇಕೆ ಹೊಸ ಬಾಳಿಗೆ?
ಹೆಣ್ಣೆಂದು ಹೀಗಳೆವ ಕುನ್ನಿತನವಿನ್ನೇಕೆ?
ಕಸವೇಕೆ ನಳನಳಿಪ ಹುಲುಸು ಬೆಳೆಗೆ?

ಒಡಕು ಬಾಳಿನಲಿಲ್ಲ ಚೆಲುವು ಮೋದ
ಒಡಕು ತಂಬೂರಿಯಲಿ ಒಡಕು ನಾದ;
ಮಣ್ಣು ಮಣ್ಣೇ ಹೊನ್ನ ಬೆಳೆಯಬಹುದು
ನಮ್ಮ ದೃಢ ಮುಷ್ಟಿಯಲಿ ಸಗ್ಗವಿಹುದು.

ಮುಗಿದು ಹೋಯಿತು ಬಾಲ್ಯ, ಮುಂದೆ ಬಾರದು ಹರೆಯ
ಚಣಚಣಕು ಆಯುಷ್ಯ ಸವೆಯುತಿಹುದು;
ಕಾಲಗತಿಯೊಡನೆ ಸಮರಸವಾಗಿ ಸಾಗುವದೆ
ಜೀವನ ಪ್ರವಾಹಕ್ಕೆ ದೊರೆತ ಗುರಿಯು.

ನಮ್ಮ ಅನುಭವಗಳೇ ನಮ್ಮ ಗಳಿಕೆ,
ಕಾಲದೂರೆಗಲ್ಲಿನಲಿ ನಿಂತ ಬಾಳ್ಕೆ;
ನೊರೆಗೆ ಮರುಳಾಗುವದೆ ಹೇಡಿ ಬದುಕು
ಮುತ್ತು ಪಡೆವರೆ ಆಳ ಮುಳುಗಬೇಕು.

ನಿಮ್ಮೆದೆಯೊಳಿದೆ ಛಲವು, ನಿಮ್ಮ ಕೈಗಿದೆ ಬಲವು
ಆದರೇತಕೊ ಹಿಂದೆ ಸರಿಯುತಿಹಿರಿ-
ಅವ್ಯಕ್ತ ತೇಜಗಳೆ, ಅಮೃತಪುತ್ರರು ನೀವು
ಪ್ರತಿಗಾಮಿ ಶಕ್ತಿಗಳ ಸದೆಬಡಿಯಿರಿ.

ಜ್ಞಾನವೃದ್ಧರು ತಿಳಿವನೆರೆಯುತಿರಲಿ
ಬೇಡವೆಂದವರಾರು- ಅವರು ಬರಲಿ;
ಹುಮ್ಮಸಕೆ ತಣ್ಣೀರನೆರಚದಿರಲಿ
ಹೊಸ ಸಮಾಜದ ಗುರಿಯು ನೇರವಿರಲಿ.

ಹೊಸ ಜಗವು ರೂಪುಗೊಂಡಿಹುದೀಗ, ಹೊಸ ಬಾಳು
ನಮ್ಮದಿದೆ, ಹೊಸತೆಲ್ಲ ನಮ್ಮದಿನ್ನು!
ಹಳೆಯ ಕಾಲದ ರೂಢಿ ಜಡಮತೀಯರನೆಲ್ಲ
ಬಿಟ್ಟು ಬಿಡಿ ಅವರವರ ಪಾಡಿಗಿನ್ನು!

ಹೊಸ ಬಾಳು ರಸಬಾಳನಪ್ಪುತಿಹುದು
ಸಮತೆ-ಸಾಮಾನ್ಯತೆಗೆ ಒಪ್ಪುತಿಹುದು;
ಹೊಸ ಗಂಧ ತಂದಿಹನು ಮಂದಾನಿಲಂ
ಹೊಸ ಕಾಲದುದಯ ರವಿ-ಸುಸ್ವಾಗತಂ.
*****