೧
ಹೊರಗೆ ಭಾರೀ ಥಂಡಿ
ನೆಲದ ಮೇಲಿದ್ದುದೆಲ್ಲವ ದುಂಡುಸುತ್ತಿ ಮೇಲೆತ್ತಿ
ಎಲ್ಲಿಗೋ ಒಯ್ದು ಒಗೆಯುತ್ತಿಹುದು ಗಾಳಿ!
(ಕಂಡ ಕಂಡವರ ಬಾಚಿ ತಬ್ಬಿಕೊಳ್ಳುವದಿದರ ಕೆಟ್ಟಚಾಳಿ)
ಗುಡ್ಡ ದೋವರಿಯಿಂದ ಸಂದಿಗೊಂದಿಗಳಿಂದ
ಒಮ್ಮೆಲೇ ಇದರ ದಾಳಿ.
ಶ್ರಾವಣದ ಹಸಿರು ರೇಶಿಮೇ ನೆನೆದು ನೆಲದ ಮೈಗಂಟಿಹುದು
ಶಿರಸಲದ ಹೂವಿನರಿಷಿಣವ ತೊಡೆದು.
ಮಳೆಯ ಜಾಲರಿ ಹಿಡಿದು ಮುಂದೆ ಸಾಗಿವೆ ಮೋಡ
ಆಗಾಗ ಹೂಬಿಸಿಲ ಮುಗುಳುನಗೆ ತಳೆದು-
ಆದರೀ ಗಾಳಿ ರೋಮ ರೋಮವ ಕಿತ್ತು ತೆಗೆಯುತಿದೆ,
ಎಲ್ಲೊ ಎಂದೋ ಉದುರಿಹೋದ ಎಲೆಗಳನೆತ್ತಿ
ಬುಗುರಿಯಾಡಿಸಿ ಮತ್ತೆ ಬೀಸಾಡಿದೆ.
ಮೈಮೇಲೆ ಎಚ್ಚರಿಲ್ಲದೆ ಅಲೆವ ಈ ಮದ್ದಾನೆಗೊಂದಲ್ಲ ಸಾವಿರ ಸೊಂಡಿಲು!
ದೂರ್‍ವಾಸಮುನಿಯ ಹೂವಿನಹಾರ ನೆಲಕೊಗೆದು ತಿಕ್ಕಿದೈರಾವತಕು ಮಿಗಿಲು.
ಮೇಲೆ ಕುಳಿತವನಿಂದ್ರನೋ ಚಂದ್ರನೊ
ಕೊಟ್ಟ ಶಾಪವು ಅವನಿಗೇ ತಟ್ಟುತಿರಲು-
ಅದೊ ಬಂತು, ಮೊರಗಿವಿಯ ಝಾಡಿಸಿ, ನೆಲದ
ಮಣ್ಣ ಮೇಲಕೆ ತೂರಿ-
ಕಾಲೊಳಗೆ ಸಿಕ್ಕುದೆಲ್ಲ ಕಚ ಪಚ ತುಳಿದು
ಭೂಮಿಯಾಕಾಶ ಒಂದು ಮಾಡಿ!
ಸಾಧುಗೊಳಿಸಿದ ಮಾವುತನೆ ಕಂಗಾಲಾಗಿ ಕುಳಿತಿದ್ದಾನೆ
ಉಳಿದವರಿಗೆಲ್ಲಿಯದು ಜೀವದಾನ?
ಕಿಟಕಿ ಮುಚ್ಚಿ, ಬಾಗಿಲು ಹಾಕಿ, ಅಗಳಿ ಜಡಿದು ಬಿಡು
ನಿಶ್ಚಿಂತೆ.
ಹೊರಗಿನ ಪೀಡೆ ಹೊರಗೇ ಇರಲಿ
ಅದರುಸಾಬರಿ ಬೇಡ, ತಿಳಿಯಿತೆ?
೨
ಈ ಕಣ್ಣು ಕಾಣುವ ಜಗದ ಸೊಗದ ನೋಟ
ಈ ದಿನದ, ಈ ಹೊತ್ತಿನ, ಈ ಗಳಿಗೆಯ ಸಂಪುಟ.
ಒಳಗೆ ಕನ್ನಡಿಸಿ ತೆರೆದಿದೆ ನೂರು ಪದರುಗಳ
ಮನೋಮಂದಿರದ ಸುಂದರ ಕವಾಟ!
ಬಣ್ಣಬಣ್ಣದ ಗೋಲ, ಬಣ್ಣ ಬಣ್ಣದ ಛಾಯೆ-
ಒಂದೊಂದೂ ಪ್ರಸ್ಫುಟ.
ಒಡೆದ ಗಾಜಿನ ಬಳೆಯ ತುಂಡುಗಳ ಶೇಖರಿಸಿ
ಚಿತ್ರದಲಿ ಬಿಡಿಸಿಟ್ಟು ಕಂಡ ಮಾಟ;
ಕಣ್ಣೆದುರು ಬೀಳದೆಯೆ ಕಿವಿಗೆ ಕೇಳಿಸುತಿಹುದು
ಕೇಳಿದಂತೆಯೆ ಕಣ್ಣು ಕಾಣುತಿಹುದು;
ಈ ದೃಶ್ಯದಾಚೆಗಿನ ಬೇರೆ ದೃಶ್ಯದ ಪರದೆ
ರಂಗಭೂಮಿಯ ಮೇಲೆ ಜಾರುತಿಹುದು-
ಹನಿ ಹನಿಯಿಂದ ಹೊಡೆದು, ಕವಣೆಗಲ್ಲನು ಹಿಡಿದು
ನುಗ್ಗು ನುಗ್ಗಾಗಿಸುವ ಕಾರೊಡಲ ಮೇಘ;
ಹಳ್ಳ ಹೊಳೆ ಹುಚ್ಚೆದ್ದು ಹರಿದು, ಸೇತುವೆ ಮುರಿದು
ಊರು ಕೇರಿಯ ಹೊಕ್ಕು ನೀರಿನೋಘ!-
ಅತ್ತ ದನಕರು, ಇತ್ತ ಮನೆಮಾರು ತೆಪ್ಪತೇಲಿ
ನೀರು ಕಾಯ್ದಿದೆ ತನ್ನ ಸಮಪಾತಳಿ!
ಒಮ್ಮೊಮ್ಮೆ ಮೈಯಲ್ಲಿ ದೆವ್ವ ಹೊಕ್ಕಂತೆ ಭೂಕಂಪ
ಆಕಾಶ ಗಾಳಿಯ ಪಟ!
ಬಸಿರು ಬಸಿರೇ ಬಿರಿದು ಬಕ್ಕರಿಸುವುದು, ಕಣ್ಣ
ಕೆಕ್ಕರಿಸುವದು-ಸೌರಬಿಂಬದಲಿ ಸ್ಫೋಟ!
“Things fall apart, centre cannot hold”
“ತಾಸಿಗಿಪ್ಪತ್ತು ಅಪಘಾತ ಆಕಾಶದಲ್ಲಿ, ನೆಲದಲ್ಲಿ, ಪಾತಾಳದಲ್ಲಿ.”
ಹತ್ತು ದಿಕ್ಕಿಗು ಸಂಪು
ಒತ್ತಿ ಮಾತಾಡಿದರೆ ರಂಪು
ಕೂಟು ಕೂಟಿಗೆ ಜನರ ಗುಂಪು- ಕೋಲಾಹಲ!
ಕಲ್ಲು, ಲಾಠಿ, ಲೂಟಿ, ಸೋಡಾಬಾಟ್ಲಿ, ಅಶ್ರುವಾಯು ಪ್ರಯೋಗ
ಕೊನೆಗೆ ಗುಂಡಿನೇಟು-
ಸದಾ ತೆರೆದು ಕೊಂಡಿಹುದು ಆಸ್ಪತ್ರೆಗೇಟು;
ಮಹಾಸಾಗರದ ಗಂಭೀರ ಗುಂಭವೆನಿಸಿದ ಹಡಗು
ಹೀಗೇಕೆ ಹೊಯ್ದಾಡಿದೆ?
ಅಂತರಿಕ್ಷದಲಿ ತೂಗಿ ತಾಕಲಾಡಿವೆ ದೀಪ,
ಬೆಳಕಿನ ಮೊಟ್ಟೆಯೊಡೆದು ಕತ್ತಲೆ ಬರುವುದುಂಟೆ, ಪಾಪ.
ಕಿವಿಯಲ್ಲಿ ಗಾಳಿದುಂಬಿದ ಕರುವಿನಂತೆ ಸದಾ
ಜಿಗಿದಾಡುತ್ತಿರುವ ಇದಕೆ
ಇದ್ದಕ್ಕಿದ್ದಂತೆ ಎಲ್ಲಿಂದ ಬಂತು ಲಂಗರು ಬಿಚ್ಚಿ ನೀರ ತಳಕಳಿವ ಬಯಕ;
ದಿಗಂತವನೆ ವ್ಯಾಪಿಸಿ ನಿಂತ ಮಹಾಸಾಗರದ ಮಧ್ಯದಲಿ
ಎದ್ದು ನಿಂತಿದೆ ಮುಗಿಲವರೆಗೆ ವಿಷಧೂಮ ವಿಜಯಸ್ತಂಭ!
ಮದುಳಿನ ಮೇಲೆ ನಾಯಿ ಕೊಡೆ ಬೆಳೆಯಿಸಿಕೊಂಡ ಶುದ್ಧ ಹುಂಬ!
೩
ಗತವೈಭವವೊ?- ಪಾಳುಬಿದ್ದ ಗುಡಿ;
ಅಂಗಳದಿ ಆಂಗುಲಂಗುಲಕೆ ನಗ್ಗುಲಿ ಮುಳ್ಳು, ಗೂಳ ಗೊಳಿಕೆ.
ಈ ಹಿಂದೆ ಎಲ್ಲ ದಾರಿಗಳಿಲ್ಲಿ ಬಂದು ಕೂಡಿದ ಗುರುತು-
ನಮಗಿಂದು ಕಾಣುವದು ಬರಿಯ ತೋರು ಬೆರಳು.
ಗೋಡೆ ಗೋಡೆಯ ಗೋರಿಯಲ್ಲಿ ಹುಳು-ಹುಪ್ಪಡಿ
ಕಣ್ಣು ಕಪ್ಪಡಿ, -ಬಿಚ್ಚುಗತ್ತಿ ಮೈಗಾವಲು.
ಗಾಳಿಯಾಡಿದರೆ ಆಡು ಕುರಿ-ದಡ್ಡಿ ಜಿಡ್ಡು ನಾತ.
ಆಚೀಚೆ ನಡುಬಾಗಿ ಒಂಟೆ ಮಲಗಿದ ತಂಗು
(ಆಯುಷ್ಯ ಗಟ್ಟಿಯಿದ್ದರೆ ಯಾರದೇನು ಹಂಗು?)
ಬದಿಯಲ್ಲಿ ಬೆಳೆದು ನಿಂತಿದೆ ಸ್ವಾಮಿ ಸನಾತನ ಅಶ್ವತ್ಥ ವೃಕ್ಷ
ಸುತ್ತು ಮುತ್ತೂ ಹಸುರು ಪೈರು ಮೊಳೆದಂತಿಲ್ಲ
ಅಷ್ಟು ವರ್‍ತುಲ ಜಾಗ ಇಂದಿಗೂ ರುಕ್ಷ.
ಇದರಡಿಗೆ ಕುಳಿತು ಮೋಕ್ಷ ಪಡೆದವರೆಷ್ಟೊ
ಆಗಲೂ ಈಗಲೂ ಟೊಂಗೆ ಟೊಂಗೆಗೆ ಜೋತು-
ಬಿದ್ದಿರುವ ತೊಗಲಬಾವಲಿ ಸಾಕ್ಷಿ ನುಡಿಯಬಹುದಲ್ಲ!
ಧೂಳಡರಿ, ಜಂತಿಗೆ ಸೇರಿ ಕುಳಿತ ಪಲ್ಲಕ್ಕಿ,
ಮೂಲೆಗುಂಪಾಗಿರುವ ತೇರು-
ಒಳಗಿನುತ್ಸವ ಮೂರ್‍ತಿ ಮೊದಲೇ ಗಡೀಪಾರು.
ಯಾರ ಪುಣ್ಯವೊ, -ಗರ್ಭಗುಡಿಯಲ್ಲಿ
ಇನ್ನೂ ಉರಿಯುತಿದೆ ಸಣ್ಣ ಹಣತೆ-
ನಮಸ್ತೆ, ನಮಸ್ತೆ, ನಮಸ್ತೆ.
* * *
ಕಲ್ಲು ಕಟೆಯುವ, ಮಣ್ಣು ಹೊರುವ, ನೇಗಿಲು
ಹಿಡಿದು ಉಳುವ, ಬಟ್ಟೆ ನೇಯುವ ಕಾರ-
ಖಾನೆಯಲಿ ದುಡಿವ; ಭಂಗಿ ಬುಟ್ಟಿಯ ಹೊರುವ,
ಪತ್ರಿಕೆಯ ಮಾರುವ; ಕಚೇರಿಯಲಿ
ಕುರ್‍ಚಿಗೆ ಕುಳಿತು ಬಗ್ಗಿ ಬರದೇ ಬರೆವ;
ಅಣೆಕಟ್ಟನು ಕಟ್ಟಿ ಕಾಲುವೆಯ ತೋಡುವ
ಭೂಗರ್‍ಭದಿಂದ ಬಂಗಾರ ತೋಡಿಕೊಡುವ
ಲೇಖನಿ ಮಿಡಿದು ಅಂತರಂಗ ಕರಗಿಸುವ
ಪಾಟಿ ಪೇಣೆಯ ಕೊಟ್ಟು ಅಕ್ಷರವ ತೀಡಿಸುವ
ಲಕ್ಷ ಲಕ್ಷ ಹೋರೆಯ ಭಾರತಶಕ್ತಿ ಪ್ರತ್ಯಕ್ಷ.
ದುಡಿದು ಹಣ್ಣಾದವಗೆ ಇಲ್ಲಿ ಸಾಕ್ಷಾತ್ಕಾರ;
ಇವರಿಂದ ಈ ಪಾಳು ಗುಡಿಯ ಜೀರ್‍ಣೋದ್ಧಾರ.
*****
