ನನ್ನ ನೆನಪು

ಎಲ್ಲ ಕಡೆ ಬಸ್ಸು ತಪ್ಪಿ ಭಾರದ ಕೈ
ನೋಯುವ ಬ್ಯಾಗಿನೊಂದಿಗೆ ಧೂಳು
ಮುಕ್ಕುವ ಸಂಜೆ ದಣಿದು ನಿಂತಾಗ
ಅಕ್ಕ ಪಕ್ಕ ಸರಿಯುವ ಮಲ್ಲಿಗೆ ಮುಡಿದ
ತುರುಬಿನ ಕಣ್ಣುಗಳಲ್ಲಿ ಅಮೃತವೀಯುವ
ಹೆಂಗಸರನ್ನು ಕಂಡು ಅಮ್ಮನ ನೆನಪಾಯಿತು

ನರೆತ ಕೂದಲುಗಳಲ್ಲಿ ಸುಕ್ಕು ಹಾಯುವ
ಧೀರ ಹೆಜ್ಜೆಯ ಕನ್ನಡ
ಕದ ಗತ್ತಿನ ಸ್ತಬ್ಧ ನೆರಳು ಕಂಡ ತಕ್ಷಣ
ಎಲ್ಲರೂ ಅಪ್ಪನಂತಾದರು

ಅಗಲ ಕಣ್ಣಿನವಳು ಅಹಹ ನೋಡಿದರೆ ಊರಿನ
ಪೋರಿ ನೆನಪಾಗುತ್ತ ದುಂಡು ಮೊಗದ ಮೊಗ್ಗರಳಿದರೆ
ಕನಸಿನ ಕನ್ಯೆ ನೆನಪಾಗುತ್ತ
ಹೊರೆ ಇಟ್ಟು ನಿಂತ ಬೆವರು ಕುಬುಸದ
ಮೇಲಿನ ಲಕ ಲಕ ಮೂಗು ಮೂಗುತಿ ಕಂಡು
ಊರ ಪಕ್ಕಾ ಜೋರು ಹಾಲಕ್ಕಿಯರು
ನೆನಪಾಗುತ್ತ
ಸಾವಿಗೆ ಸಾವು ನೆನಪಾಗುತ್ತ ಹೊರಳೆ
ಹೊರಳುವ ಮಣ್ಣ ಘಮಘಮಕ್ಕೆ
ಹೂವರಳುವ ಮಳೆ ನೆನಪಾಗುತ್ತ
ರಾಜಿಗೆ ರಾಜ
ಕೀಯ ನೆನಪಾಗುತ್ತ ಭಾಷೆ
ಗೆ ಭಾವ ನೆನಪಾಗುತ್ತ
ಆಗುತ್ತ
ನೆನೆಪಿನೀಟಿಯ ಮಧ್ಯ ನೆನಪೋ ನೆನಪು!

ಅರ್‍ಥ: ಇದೆಲ್ಲದರ ಮಧ್ಯೆ ನನಗೆ
ನನ್ನ ನೆನಪೇ ಆಗುವುದಿಲ್ಲ!
ಸದ್ಯ ಕನ್ನಡಿಯಲಿ ಕಂಡಿದ್ದು
ನೆನಪಲ್ಲವಲ್ಲ.
*****