ಶ್ರೀನಿವಾಸ-ಈ ಹೆಸರು ಶಿನ್ನ ಇಲ್ಲವೇ ಶಿನ್ನಾ ಎಂದು ಅಪಭ್ರಂಶಗೊಳ್ಳುವುದು ಕುಮಟೆಯ ಕಡೆಗೆ ಅಂಥ ವಿಶೇಷ ಸಂಗತಿಯೇನಲ್ಲ. ಶಿನ್ನನನ್ನು ಹಿತ್ತಲ ದಣಪೆಯಲ್ಲಿ ಅಥವಾ ಅಂಗಳದಂಚಿನಲ್ಲಿ ನಿಂತು ಕೂಗಿ ಕರೆಯುವಾಗ ಅವನ ಹೆಸರನ್ನು ಶಿನ್ನೋ ಎಂದೋ ಶಿನ್ನಪ್ಪಾ ಇಲ್ಲವೇ ಶಿನ್ನಪ್ಪೋ ಎಂದೋ ಎಳೆದು ಉದ್ದಗೊಳಿಸುವ ಪದ್ಧತಿ ಕೂಡ ಇಲ್ಲಿ ಅತಿ ಸಾಮಾನ್ಯವಾದದ್ದು. ಆದರೆ ನಮ್ಮ ಕಥಾನಾಯಕ ಶಿನ್ನಾ ‘ಮೊನ್ನ ಶಿನ್ನಾ’ ಆದದ್ದಾಗಲೀ. ಇದೇ ಮೊನ್ನ ಶಿನ್ನಾ, ಮುಂದೆ ಊರ ಜನರಿಂದ ಅಕ್ಕರೆಯಲ್ಲಿ, ಆದರದಲ್ಲಿ ‘ಶಿನ್ನಪ್ಪಾಜ್ಜಾ’ ಎಂದು ಕರೆಸಿಕೊಂಡಿದ್ದಾಗಲೀ ಸರ್ವಥಾ ಸಾಧಾರಣ ಸಂಗತಿಯಾಗಿರಲಿಲ್ಲ. ಕೆಲವರ ದೃಷ್ಟಿಯಲ್ಲಂತೂ ಇವೆರಡೂ ಪವಾಡಸದೃಶ ಘಟನೆಗಳೆನ್ನಿಸಿಕೊಂಡವು.
ಮೊನ್ನ ಶಿನ್ನಾ ಹುಟ್ಟಾ ಮೂಕನಲ್ಲ : ಧುತ್ ಎಂದು ಎದುರಾದ ಒಂದು ವಿಷಮ ಪರಿಸ್ಥಿತಿಯಲ್ಲಿ ಅವನು ಮೂಕನಾಗಬೇಕಾಯಿತು. ಅವನು ಇಪ್ಪತ್ತೊಂದು ವರ್ಷದವನಿದ್ದಾಗ ಕೋರ್ಟಿನಲ್ಲಿ ಸುಳ್ಳು ಸಾಕ್ಷಿ ನುಡಿಯಬೇಕಾದ ದುರ್ಧರಪ್ರಸಂಗ ಅವನ ಮೇಲೆ ಎರಗಿದಾಗ, ಸೀದಾ ಶಾಂತೇರಿ ಕಾಮಾಕ್ಷಿ ದೇವಸ್ಥಾನಕ್ಕೆ ನಡೆದು, ಅಲ್ಲಿ ಉಪಸ್ಥಿತರಿದ್ದ ಭಕ್ತ ಜನರ, ಅರ್ಚಕರ ಸಾಕ್ಷಿಯಲ್ಲಿ, ‘ನಾನು ಇಂದಿನಿಂದ ಅಜೀವ ಮೊನ್ನನಾಗಿರುತ್ತೇನೆ’ ಎಂದು ದೇವರೆದುರು ಘೋರಪ್ರತಿಜ್ಞೆ ಮಾಡಿದ. ಈ ಭೀಷ್ಮಪ್ರತಿಜ್ಞೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಜನ ಬೆರಗುಗೊಂಡರು. ಸುದ್ದಿ ಸಂಜೆಯಾಗುವುದರೊಳಗೆ ಊರು ತುಂಬ ಹರಡಿತು. ಕೇಳಿದ ಜನ ನಂಬದಾದರು.
ಅಹಾರ, ಮೈಥುನ, ನಿದ್ರೆಗಳನ್ನು ಬಿಟ್ಟರೆ ಕುಮಟೆಯ ಜನಕ್ಕೆ ಅತ್ಯಂತ ಪ್ರಿಯವಾದದ್ದು-ಮಾತು. ಅವರ ಜೀವನೋತ್ಸಾಹ, ಉಮೇದು, ಲವಲವಿಕೆ ಹೊರಹೊಮ್ಮುತ್ತಿದ್ದುದೇ ಇತರರೊಡನೆ ಆಡಿಕೊಂಡ ಮಾತಿನ ಮೂಲಕವಾಗಿತ್ತು. ಕುಮಟೆಯ ಜನಕ್ಕೆ ದಿನವಿಡೀ ಜನರೂ ಬೇಕು. ಮಾತೂ ಬೇಕು. ಇಲ್ಲವಾದರೆ ಅವರ ಜೀವಕ್ಕೆ ಜೈನಿಯೆಂಬುದಿಲ್ಲ. ಪಕ್ಕಾ ಕುಮಟೆಗಾರನಾಗಿಯೇ ಬೆಳೆದ ನಮ್ಮ ಶಿನ್ನಾ ಕೂಡ ಈ ಮಾತಿಗೆ ಅಪವಾದವಾಗಿರಲಿಲ್ಲ. ಕಟ್ಟಿಗೆಯ ಬಾಯಾಗಿದ್ದರೆ ಒಡೆದೇ ಹೋಗುತ್ತಿತ್ತು ಎನ್ನುವ ಹಾಗೆ ಇಡಿಯ ದಿನ ಬಡಬಡಿಸುತ್ತಿದ್ದ ಈ ವಾಚಾಳಿ ಇಂಥ ಎಳೆವಯಸ್ಸಿನಲ್ಲಿ ಆಮರಣ ಮೌನವ್ರತ ಪಾಲಿಸುವ ಪ್ರತಿಜ್ಞೆ ಮಾಡಿದ್ದೇನು ನಂಬುವ ಮಾತೇ ? ಯಾರೂ ಇವನ ಪ್ರತಿಜ್ಞೆಯನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಎಲ್ಲರಿಗೆ ಇದೊಂದು ದೊಡ್ಡ ತಮಾಷೆಯಾಗಿ ಕಂಡಿತು. ಕೆಲವರು ತಮ್ಮೊಳಗೇ ಆಡಿಕೊಂಡು ನಕ್ಕರೆ, ಇನ್ನು ಕೆಲವರು ಅವನೆದುರೇ ಸೌಮ್ಯವಾಗಿ ಗೇಲಿ ಮಾಡಿದರು : ದೇವರ ಎದುರು ನಿಲ್ಲುವ ಮೊದಲೇ-ಸುಳ್ಳು ಸಾಕ್ಷಿ ನುಡಿಯುವುದು ದೊಡ್ಡ ಪಾಪವೋ ? ಎಂದು ಯೋಚಿಸಬೇಕಿತ್ತು. ಇಷ್ಟಕ್ಕೂ ನಾಳೆ ಬೆಳಗಾಗುವುದರೊಳಗೆ ಮೌನ ಮುರಿದು ಭಟ್ಟರಿಂದ ಪ್ರಾಯಶ್ಚಿತ್ತ ಮಾಡಿಕೊಳ್ಳದಿದ್ದರೆ ಹೇಳಿ. ಹೇಳಿ ಕೇಳಿ ಅವನು ಕುಮಟೆಯ ಹುಡುಗ !
ಆಡಿಕೊಳ್ಳುವವರು ಆಡಿಕೊಂಡದ್ದಷ್ಟು ಬಂತು. ಹುಡುಗ ಜಗ್ಗಲಿಲ್ಲ. ಒಂದಲ್ಲ ಹಲವು ಬೆಳಗುಗಳಾದವು. ತಿಂಗಳು ಸರಿದವು. ವರ್ಷಗಳೇ ಕಳೆದವು ಹುಡುಗ ಒಮ್ಮೆ ಮುಚ್ಚಿದ ಬಾಯನ್ನು ಮತ್ತೆ ತೆರೆಯಲಿಲ್ಲ. ಆಗ ಮಾತ್ರ ಜನ ಅಬ್ಬಾ ! ಎಂದರು. ಹಡೆದ ತಂದೆ ತಾಯಿಗಳು ಚಿಂತೆಯಿಂದ ಕಂಗಾಲಾದರು. ಮನೆಗೆ ಒಬ್ಬನೇ ಮಗ. ಮನೆಯವರು ಶ್ರೀಮಂತರಲ್ಲ. ಆದರೂ ತಮ್ಮದೇ ಆದ ಅಂಗಡಿಯಿದೆ. ಮನೆಯಿದೆ. ಮನೆಯ ಸುತ್ತಲೂ ಹಲವು ಬಗೆಯ ಮರಗಳಿದ್ದ ತೋಟದಂಥ ಹಿತ್ತಲಿದೆ. ಕೊಟ್ಟಿಗೆಯಲ್ಲಿ ಹಾಲು ಕೊಡುವ ಹಸುಗಳಿವೆ. ಹೊತ್ತಿಗೆ ಸರಿಯಾಗಿ ರೈತರಿಂದ ಗೇಣಿ ಬರುತ್ತಿದ್ದ ಒಂದು ಹೊಲವೂ ಇದೆ. ಐಷಾರಾಮಿನಲ್ಲಿ ಅಲ್ಲವಾದರೂ ನೆಮ್ಮದಿಯಲ್ಲಿ ಜೀವನ ನಡೆಸುವುದಕ್ಕೆ ಕಷ್ಟವಾಗುತ್ತಿರಲಿಲ್ಲ.
ಮಗನು ಮದುವೆಗೆ ಬೆಳೆದು ನಿಂತಾಗ ತಂದೆತಾಯಿಗಳಿಗೆ ಹೊಸ ಆಸೆ ಚಿಗುರಿತು-ಮದುವೆ ಮಾಡಿದರಾದರೂ ಮೌನವ್ರತವನ್ನು ಮುರಿಯಬಹುದೆ ? ಮದುವೆಯಾದ ಹುಡುಗಿಯೊಡನೆ ಏಕಾಂತದಲ್ಲಾದರೂ ಮಾತನಾಡದೇ ಇರಲಾರ. ಮೊದಲು ಅಷ್ಟು ಆದರೂ ಸಾಕು. ಆಮೇಲೆ ಎಲ್ಲವೂ ತಂತಾನೆ ಸರಿಹೋಗುತ್ತದೆಯೆಂದು ಏನೆಲ್ಲ ಲೆಕ್ಕ ಹಾಕಿದರು. ಕಾಯಿಲೆ ಬಿದ್ದು ಗೊತ್ತಿರದ ಸದೃಢ ಆರೋಗ್ಯದ ಹುಡುಗ, ಕಾಣಲು ಕೆಟ್ಟವನಲ್ಲ. ಪ್ರಾಯಕ್ಕೆ ಬಂದವನಾದ್ದರಿಂದ ಆಕರ್ಷಕನಾಗಿಯೂ ಇದ್ದ. ಮೆಟ್ರಿಕ್ ವರೆಗೆ ಕಲಿತವನು, ಮೇಲಾಗಿ ಊರಿನ ಪರಿಚಯದ ಮನೆತನದ್ದೇ ಹೆಣ್ಣನ್ನು ಮನೆಗೆ ತಂದರು. ಗಂಡ-ಹೆಂಡಿರು ಆದರ್ಶದಂಪತಿಗಳೆಂದು ಕರೆಸಿಕೊಳ್ಳುವಂತೆ ಸುಖದ ಸಂಸಾರ ಸಾಗಿಸಿದರು. ಆದರೆ ಮೌನವನ್ನು ಕುರಿತು ಹಾಕಿದ ಲೆಕ್ಕ ಮಾತ್ರ ಸುಳ್ಳಾಯಿತು. ಮುಂದೆ ಯಥಾಯೋಗ್ಯ ಕಾಲದಲ್ಲಿ ಮಕ್ಕಳಾದವು. ಮೊಮ್ಮಕ್ಕಳೂ ಆದವು. ಮಕ್ಕಳಿಂದ ಪ್ರೀತಿಯ ಅಪ್ಪ ಎನ್ನಿಸಿಕೊಂಡ. ಆ ಹೊತ್ತಿಗಾಗಲೇ ಶಿನ್ನನ ಮೌನಕ್ಕೆ ಮೂವ್ವತ್ತು ವರ್ಷಗಳು ಸಂದಿದ್ದವು. ಈ ದೀರ್ಘ ಮೌನ ‘ನ ಭೂತೋ ನ ಭವಿಷ್ಯತಿ’ ಎನ್ನುವ ಖ್ಯಾತಿ ಪಡೆದು ಅದಕ್ಕೆ ಅತಿಮಾನುಷದ ಕಳೆ ಬಂದುಬಿಟ್ಟಿತು. ಮೊನ್ನ ಶಿನ್ನಾ ಸ್ವತಃ ತಾನೇ ತನ್ನ ಸುತ್ತಲಿನ ಈ ವಿಕ್ಷಿಪ್ತ ವಿದ್ಯಮಾನಗಳಿಗೆ ನಿರ್ಲಿಪ್ತನಾಗಿರುವಾಗಲೂ ಅವನ ಕೀರ್ತಿ ಮಾತ್ರ ಊರ ಗಡಿ ದಾಟಿ ನಾಲ್ಕೂ ನಿಟ್ಟುಗಳಲ್ಲಿ ಹಬ್ಬತೊಡಗಿತು.
ಈ ನಡುವೆ ಒಂದು ದಿನ, ಅದೇ ಆಗ ಮಾತು ಹುಟ್ಟಿದ್ದ ಅವನ ಮೊಮ್ಮಗ ಅವನನ್ನ ಇದ್ದಕ್ಕಿದ್ದ ಹಾಗೆ, ‘ಶಿನ್ನಪ್ಪಜ್ಜಾ’ ಎಂದು ಕರೆದು ಹತ್ತಿರವಿದ್ದವರನ್ನೆಲ್ಲ ದಂಗುಬಡಿಸಿದ. ಸ್ವತಃ ಅಜ್ಜನನ್ನು ಕುಮಟೆಯ ಉಳಿದೆಲ್ಲ ಮೊಮ್ಮಕ್ಕಳ ಹಾಗೆ ‘ಅಬಾ’ ಎಂದೋ ‘ಅಜ್ಜಾ’ ಎಂದೋ ಕರೆಯುವುದನ್ನು ಬಿಟ್ಟು ‘ಶಿನ್ನಪ್ಪಜ್ಜ’ ಎಂದು ಕರೆದದ್ದು ಊರವರ ಪಾಲಿಗೆ ರಹಸ್ಯ ಸಂಜ್ಞೆಯಾಯಿತು. ಆ ದಿನವನ್ನು ಮೊನ್ನ ಶಿನ್ನಾ ಎಲ್ಲರ ಬಾಯಲ್ಲಿ ಶಿನ್ನಪ್ಪಜ್ಜನಾಗಿ ಆದರೆ ಭಯಭಕ್ತಿಗಳಿಗೆ ವಸ್ತುವಾಗಿ, ಆರಾಧ್ಯದೈವತನಾದ.
ಮೊನ್ನ ಶಿನ್ನಾನನ್ನು ‘ಶಿನ್ನಪ್ಪಜ್ಜ’ ಎಂದು ಹೊಸತಾಗಿ ನಾಮಕರಣ ಮಾಡಿದ ಮೊಮ್ಮಗನ ಹೆಸರು ಪುಂಡಲೀಕನೆಂದು. ನನ್ನದೇ ವಯಸ್ಸಿನವನು. ಇವನಿಂದಲೇ ಇತ್ತೀಚೆಗೆ ಇವನ ಅಜ್ಜನ ಕಥೆ ನನಗೆ ಗೊತ್ತಾದದ್ದು. ನಾನು ಚಿಕ್ಕಂದಿನಲ್ಲಿ-ಬಹುಶಃ ಏಳೋ, ಎಂಟೋ, ವರ್ಷದವನಿದ್ದಾಗ-ಒಮ್ಮೆ ಈ ಪುಂಡಲೀಕನನ್ನು, ಅವನು ಅಷ್ಟಾಗಿ ಹಚ್ಚಿಕೊಂಡಿದ್ದ ಅವನ ಅಜ್ಜನನ್ನು ನೋಡಿದ್ದು ಮಸುಕುಮಸುಕಾಗಿ ನೆನಪಿದೆ. ಕುಮಟೆ ನನ್ನ ಅಜ್ಜಿಯ -ತಾಯಿಯ ತಾಯಿಯ-ತವರೂರು. ಶಿನ್ನಪ್ಪಜ್ಜ ಆಗ ಹುಬೇಹೂಬ ವಿನೋಬಾ ಭಾವೆಯವರಂತೆ ಕಾಣುತ್ತಿದ್ದ ಎಂಬಂತೆ ನೆನಪು. ಅವನ ವಯಸ್ಸು ಆಗ ಅರವತ್ತರ ಆಸುಪಾಸು ಇರಬೇಕು. ವಿನೋಬಾರ ಹಾಗೇ ದಾಡಿ. ಮೀಸೆ ಬಿಟ್ಟಿದ್ದ. ತಲೆಗೆ ಅವರದರ ಹಾಗೇ ಕೆದರಿದ ಕೂದಲಿತ್ತು. ಕಣ್ಣುಗಳಿಗೆ ಕಪ್ಪು ದಾರಕಟ್ಟಿದ್ದ ಕಪ್ಪು ಫ್ರೇಮಿನ ಕನ್ನಡಕವಿತ್ತು. ಧೋತರವನ್ನು ಅವರ ಹಾಗೇ ಮೊಣಕಾಲುಗಳಿಗಿಂತ ತುಸು ಕೆಳಕ್ಕೆ ಮುಟ್ಟುವಂತೆ ಗಿಡ್ಡವಾಗಿ ಉಟ್ಟು ಪಂಚೆಯೊಂದನ್ನು ಮೇಲುಹೊದಿಕೆಯಾಗಿ ತೊಟ್ಟಿದ್ದ. ಬರಿಗಾಲಲ್ಲಿ ನಡೆಯುವವನನ್ನು ರಸ್ತೆಯಲ್ಲಿ ಕಂಡ ಜನ ಭಯಭಕ್ತಿಯಿಂದ ಕೈಮುಗಿಯುವುದನ್ನೂ ಕಂಡಿದ್ದೆ. ಮುಗುಳ್ನಕ್ಕು ಕಣ್ಸನ್ನೆಯಿಂದ ಗೌರವವನ್ನು ಸ್ವೀಕರಿಸುತ್ತಿದ್ದವನ ಮೋರೆಯ ಮೇಲಿನ ತೇಜಸ್ಸಿಗೆ ಮಾರುಹೋಗಿದ್ದೆ.
ಶಿನ್ನಪ್ಪಜ್ಜ ಮೂರು ವರ್ಷಗಳ ಕೆಳಗೆ, ವಯಸ್ಸಿನ ಎಂಬತ್ತನೇ ವರ್ಷದಲ್ಲಿ ತೀರಿಕೊಂಡ. ಸಾಯುವ ಏಳೆಂಟು ವರ್ಷಗಳ ಮೊದಲು ಅವನಿಗೆ ಹುಚ್ಚು ಹಿಡಿಯಿತು. ಐವತ್ತು ವರ್ಷಗಳಷ್ಟು ದೀರ್ಘಕಾಲ ಎಂಥೆಂಥ ನಿಷ್ಠುರ ಪ್ರಚೋದನೆಗೂ ವಿಚಲಿತನಾಗದೇ ಅವುಡುಗಚ್ಚಿದ ಮೌನ ಧರಿಸಿದ್ದ ಈ ಯೋಗಿ ಹುಚ್ಚಿನ ದಿನಗಳಲ್ಲಿ ತನ್ನಷ್ಟಕ್ಕೆ ಮಾತನಾಡತೊಡಗಿದ. ಏನು ಮಾತನಾಡುತ್ತಿದ್ದ ?-ಯಾರಿಗೂ ಗೊತ್ತಾಗುತ್ತಿರಲಿಲ್ಲ. ಹುಚ್ಚು ಹಿಡಿದು ಮೌನ ಮುರಿದನೋ, ಮೌನ ಮುರಿದದ್ದರಿಂದ ಹುಚ್ಚು ಹಿಡಿಯಿತೋ-ಜನ ನಿರ್ಧರಿಸದಾದರು. ತಾನು ತನ್ನೊಳಗೇ ಮಾತನಾಡಿಕೊಳ್ಳುತ್ತಿದ್ದಾಗ, ಆಗೀಗ ಒಂದು ಹೆಣ್ಣಿನ ಹೆಸರಿನಂತೆ ಕೇಳಿಸುವ ಶಬ್ದ ಕಿವಿಯ ಮೇಲೆ ಬಿದ್ದಂತಾದದ್ದು ಹಲವರ ಊಹಾಪೋಹಕ್ಕೆ ಎಡೆ ಮಾಡಿಕೊಟ್ಟಿತು. ಅದಾಗಲೇ ಕುಮಟೆಯಲ್ಲಿ ಶಿನ್ನಪ್ಪಜ್ಜನ ಭೀಷ್ಮ ಪ್ರತಿಜ್ಞೆಗೆ ಪ್ರತ್ಯಕ್ಷ ಸಾಕ್ಷಿಯಾದವರಲ್ಲಿ ಬಹುತೇಕ ಜನ ಕಾಲವಶರಾಗಿದ್ದರು. ಆ ಪ್ರತಿಜ್ಞೆಯ ಪ್ರತ್ಯಕ್ಷ ಪ್ರಭಾವಕ್ಕೆ ಒಳಪಟ್ಟವರಿಗಿಂತಲೂ ಅಂಥದ್ದೇನೋ ಯಾವಾಗಲೋ ನಡೆದಿತ್ತೆಂದು ಕೇಳಿ ಗೊತ್ತಿದ್ದವರೇ ಹೆಚ್ಚಾಗಿದ್ದರು. ಊರಿನ ಪುಂಡಪೋಕರಿಗಳಿಗಂತೂ ಏನೇನೋ ಸುದ್ದಿ ಹಬ್ಬಿಸುತ್ತ ಇಷ್ಟು ದಿನ ಅವನನ್ನು ದೊಡ್ಡ ಸಂತನ ಪಟ್ಟಕ್ಕೆ ಏರಿಸಿದವರನ್ನೇ ಗೇಲಿ ಮಾಡತೊಡಗಿದರು. ಅವನ ಬಾಯಿಂದ ಕೇಳಿಸಿದಂತಾದ ಹೆಸರಿನ ಕೊನೆಯ ಅಕ್ಷರ ‘ಣಿ’ ಎಂದು ಹೊತ್ತಾಗಿ-ತ್ರಿವೇಣಿ, ನಾಗವೇಣಿ, ರುಕ್ಮಿಣಿ, ರಾಗಿಣಿ ಮುಂತಾದ ಪ್ರಚಲಿತವಿದ್ದ ಹೆಸರುಗಳ ಜೊತೆಗೆ ತಾವೇ ತಮ್ಮ ಸುಪೀಕ ಕಲ್ಪನೆಯಿಂದ ರಚಿಸಿದ, ಹೊಲಸು ಉಚ್ಚಾರದ, ಅರ್ಥವಿಲ್ಲದ ಹೆಸರುಗಳನ್ನು ಅವನೆದುರು ಒದರಿ ಚುಡಾಯಿಸತೊಡಗಿದರು. ದುರ್ದೈವದ ಸಂಗತಿಯೆಂದರೆ ಶಿನ್ನಪ್ಪಜ್ಜ ಇವರ ಜಗತ್ತಿಗೆ ಕಳೆದುಹೋಗಿ ಬೇರೆಯೇ ಲೋಕದಲ್ಲಿ ವಿಹರಿಸುತ್ತಿದ್ದದ್ದು ಇವರಾರ ಲಕ್ಷ್ಯಕ್ಕೇ ಬರಲಿಲ್ಲ.
ಒಟ್ಟಿನಲ್ಲಿ ಶಿನ್ನಪ್ಪಜ್ಜನ ಕೊನೆಯ ದಿನಗಳು ತುಂಬಾ ಕಷ್ಟದವಾದವು-ಅವನಿಗಿಂತ ಹೆಚ್ಚಾಗಿ ಅವನನ್ನು ಅಷ್ಟೊಂದು ಹಚ್ಚಿಕೊಂಡ ಅವನ ಮೊಮ್ಮಗ ಪುಂಡಲೀಕನಿಗೆ, ಗಂಡನ ಮೌನವ್ರತವನ್ನು ತುಂಬಾ ಸಹಾನುಭೂತಿಯಿಂದಲೇ ಸಹಿಸಿಕೊಂಡು ಅವನನ್ನು ಭಕ್ತಿಯಿಂದ ಸೇವಿಸಿ ಸಹನಶೇಲೆಯ ಪ್ರತಿಮೂರ್ತಿ ಎನ್ನಿಸಿಕೊಂಡಿದ್ದ ಶಿನ್ನಪ್ಪಜ್ಜನ ಹೆಂಡತಿ ಪದ್ಮಾವತಿ ಅವನಿಗೆ ಹುಚ್ಚು ಹಿಡಿಯುವ ಕೆಲವು ತಿಂಗಳ ಮೊದಲಷ್ಟೇ ತಿರಿಕೊಂಡಿದ್ದಳು. ಶಿನ್ನಪ್ಪಜ್ಜನ ಇಬ್ಬರು ಗಂಡುಮಕ್ಕಳಿಗೆ ಮೊದಲಿನಿಂದಲೂ ಅಪ್ಪನೆಂದರೆ ಅಷ್ಟಕ್ಕಷ್ಟೇ. ಕಿರಿಯ ಮಗ ಮದುವೆಯಾಗುತ್ತಲೇ ಗುಲ್ಬರ್ಗಾದಲ್ಲೋ, ಹೈದ್ರಾಬಾದಿನಲ್ಲೋ ಹೋಗಿ ನೆಲಸಿದವನು ಊರ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಂಡಿದ್ದ. ಊರಿನಲ್ಲಿದ್ದು ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ ಹಿರಿಯ ಮಗ, ಸೊಸೆ, ಪದ್ಮಾವತಿ ಬದುಕಿರುವವರೆಗಾದರೂ ಶಿನ್ನಪ್ಪಜ್ಜನನ್ನು ಕಡೆಗಣಿಸಲ್ಲಿಲ್ಲ ಎನ್ನಬಹುದು. ಪದ್ಮಾವತಿ ತೀರಿಕೊಂಡಮೇಲೆ, ಅದಕ್ಕಿಂತ ಹೆಚ್ಚಾಗಿ ಶಿನ್ನಪ್ಪಜ್ಜ ಹುಚ್ಚನಾಗಿ ಜನರ ನಿಂದೆಗೆ ಪಾತ್ರನಾದಮೇಲೆ ಮಾತ್ರ, ಅವನ ಬಗ್ಗೆ ಇದ್ದುಳಿದ ಭಾವನೆಯೂ ಹೊರಟುಹೋಗಿ, ಮಗ-ಸೊಸೆ ಇಬ್ಬರಿಗೂ ಅವನ ಬಗ್ಗೆ ತಾತ್ಸಾರ ಉಂಟಾಯಿತು. ಇಂಥ ಪರಿಸ್ಥಿತಿಯಲ್ಲಿ ಮೊಮ್ಮಗನೊಬ್ಬನೇ ಅಚಲಶ್ರದ್ಧೆಯಿಂದ ಅಜ್ಜನ ಆರೈಕೆಗೆ ನಿಂತ. ಅದಾಗಲೇ ಮದುವೆಗೆ ಬೆಳೆದು ನಿಂತವನಾದರೂ ಯಾವ ಆಣೆ-ಭಾಷೆಯ ನಾಟಕ ಮಾಡದೆ, ಅಜ್ಜ ಬದುಕಿರುವವರೆಗೆ ಅವನ ಆರೈಕೆಗೆಂದೇ ತಾನು ಮದುವೆಯೇ ಆಗಲಾರೆನೆಂದು ನಿರ್ಧರಿಸಿದ. ಅದೇ ಆಗ ಊರಿನಲ್ಲೇ ಆರಂಭವಾಗಿದ್ದ ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ ಪ್ರಾಧ್ಯಾಪಕನಾಗಿದ್ದ ಆತ, ಮನೆಯಲ್ಲಿ ಅಜ್ಜನ ಸೇವೆಗೆಂದು ಸ್ವಂತ ಖರ್ಚಿನಲ್ಲಿ ಒಬ್ಬ ಕೆಲಸದ ಪೋರನನ್ನು ನೇಮಿಸಿದ.
ಅಜ್ಜನ ಬದುಕು ಮೊಮ್ಮಗನ ಬದುಕಿನ ಆಕೃತಿಯನ್ನು ನಿರ್ಧರಿಸುತ್ತಿದ್ದ ಭಯಾನಕ ರೀತಿ ಪುಂಡಲೀಕನ ಅಪ್ಪ-ಅಮ್ಮರ ಲಕ್ಷ್ಯಕ್ಕೆ ಬಾರದೇ ಇರಲಿಲ್ಲ. ಆದರೆ ಅವನ ಜಿದ್ದಿನ ಎದುರು ತಾವು ಏನೂ ಮಾಡಲಾರೆವೆಂದು ಗೊತ್ತಿದ್ದ ಅವರು, ಅವರವರ ನಸೀಬ ಎಂದುಕೊಂಡು ಸುಮ್ಮನಾದರು. ಮುದುಕ ಕಣ್ಣು ಮುಚ್ಚಿದ ಮೇಲೆ ಎಲ್ಲವೂ ಸರಿಯಾಗುತ್ತದೆ ಎಂದು ಹಾರೈಸಿದರು. ಆದರೆ ಮುದುಕ ಮಾತ್ರ ಬೇಗ ಕಣ್ಣು ಮುಚ್ಚಲಿಲ್ಲ. ಈ ಘಟನೆಗೆ ಅವರು ಮುಂದಿನ ಎಂಟು ವರ್ಷ ಕಾಯಬೇಕಾಯಿತು. ಆದರೆ ಅದಕ್ಕಿಂತ ಬಹಳ ಮೊದಲೇ ನಡೆದ ಒಂದು ಪ್ರಸಂಗದಿಂದಾಗಿ ಮೊಮ್ಮಗನೇ, ಮುಂದೊಂದು ದಿನ, ಹುಚ್ಚಿನ ಹೊಸಲಲ್ಲಿ ಹೋಗಿ ನಿಲ್ಲುವಂತಾಯಿತು !
ಆಳುಮಗ ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ತಾನು ಮಾಡಿದ ದೊಡ್ಡ ಶೋಧವನ್ನು ಗುಟ್ಟಿನಲ್ಲಿ ಒಡೆಯನಿಗೆ ತಿಳಿಸಿದ : ಅಜ್ಜ ಬರೇ ಮೊನ್ನನಲ್ಲ. ಪೂರಾ ಪೂರಾ ಕೆಪ್ಪ ! ಪುಂಡಲೀಕನ ಮಟ್ಟಿಗೆ ಇದು ಹೊಸ ಶೋಧವಾಗಿರಲಿಲ್ಲ ; ಎಂದಿನಿಂದಲೂ ಕಾಡುತ್ತ ಬಂದಿದ್ದ ಸಂಶಯವಾಗಿತ್ತು : ಅಜ್ಜನಿಗೆ ಹುಚ್ಚು ಹಿಡಿಯುವ ಕೆಲವು ಕಾಲ ಮುಂಚಿನಿಂದಲೇ ಆತ ಈ ಜಗತ್ತಿಗೆ ಕಳೆದುಹೋದವನಂತೆ ಕಾಣತೊಡಗಿದ್ದು ಅವನ ನಿರ್ಲಿಪ್ತತೆಯ ಕುರುಹು ಆಗಿರದೇ ಅವನ ಕಿವುಡುತನದ ಪರಿಣಾಮವಾಗಿರಬೇಕು ! ಈ ಕಿವುಡುತನ ನೈಸರ್ಗಿಕ ಕಾರಣದಿಂದ ಒದಗಿದ್ದಾಗಿರದೇ ಒಮ್ಮೆಲೇ ಕಿವಿಗೆ ಅಪ್ಪಳಿಸಿದ ತೀರ ಅಪ್ರಿಯವಾದದ್ದೇನೋ ಉಂಟುಮಾಡಿದ ಆಘಾತದಿಂದ ಸಂಭವಿಸಿರಬೇಕು ! ಅಜ್ಜನ ಕಿವುಡಿಗೆ ಕಾರಣವಾದದ್ದೇ ಅವನ ಹುಚ್ಚಿಗೂ ಕಾರಣವಾಗಿರಬೇಕು ! ಒಂದು ಕೆಟ್ಟ ಗಳಿಗೆಯಲ್ಲಿ ಮನಸ್ಸು ಹೊಕ್ಕುಬಿಟ್ಟ ಸಂಶಯ ಅಜ್ಜನ ಮರಣದ ನಂತರ ದೂರವಾಗುವ ಬದಲು ಅನೇಕಾನೇಕ ಹೊಸ ರೂಪಗಳನ್ನು ಧರಿಸುತ್ತ ಮುಂದಿನ ಮೂರು ವರ್ಷಗಳಲ್ಲಿ ಅಸಾಧ್ಯವಾದ ಕಾಡುವ ಶಕ್ತಿ ಪಡೆದು ಪುಂಡಲೀಕನನ್ನು ಘಾಸಿಗೊಳಿಸತೊಡಗಿತು. ನಾನು ಈ ಬಾರಿ ಕುಮಟೆಗೆ ಬಂದದ್ದು ಇಂಥ ಪರಿಸ್ಥಿತಿಯಲ್ಲಾಗಿತ್ತು. ನಾನು ಕುಮಟೆಯ ಕಡೆಗೆ ಬಾರದೇ ಈಗಾಗಲೇ ಇಪ್ಪತ್ತೈದು ವರ್ಷಗಳ ಮೇಲಾಗಿತ್ತು. ಈ ಮಧ್ಯೆ, ಅಂದರೆ ಅಜ್ಜ ಸತ್ತ ಎರಡು ವರ್ಷಗಳ ನಂತರ, ತುಸು ತಡವಾಗಿಯಾದರೂ, ಪುಂಡಲೀಕ ಮದುವೆಯಾಗಿದ್ದ. ಅಜ್ಜನನ್ನು ತಾತ್ಸಾರದಿಂದ ಕಂಡ ಅಪ್ಪ-ಅಮ್ಮಂದಿರಿಂದ ಬೇರೆಯಾಗಿ ಸ್ವತಂತ್ರ ಬಿಡಾರ ಹೂಡಿದ್ದ.
ವಯಸ್ಸಿನ ಐದು ಪ್ರಾಯದ ವರ್ಷದಲ್ಲೇ ತಾನಾಗಿಯೇ-ಸ್ವಂತ ಇಚ್ಛಾಶಕ್ತಿಯಿಂದ-ಸ್ವೀಕರಿಸಿದ ಕಠೋರ ಮೌನವ್ರತ ; ಅದನ್ನು ಪಾಲಿಸುತ್ತಿರುವಾಗಲೇ ಯಾರದೋ ದುಷ್ಟ ಕಿತಾಪತಿಯಿಂದಾಗಿ ಎನ್ನುವಂತೆ ಗಂಟುಬಿದ್ದ ಕಿವುಡುತನ ; ಹುಚ್ಚು-ಎಲ್ಲವೂ ಮನುಷ್ಯಜೀವನದ ಯಾವುದೋ ಮಗ್ಗಲಿಗೆ ಅಖಂಡ ಸಂಕೇತವಾಗಿರುವಂತೆ ಕಂಡೂ ಅದರ ಅರ್ಥ ಹೊಳೆಯದೇ ಘಾಸಿಗೊಂಡ ದುರ್ಧರ ಗಳಿಗೆಯಲ್ಲಿ ಒಂದು ದಿನ, ಪುಂಡಲೀಕ ತನ್ನ ಹೆಂಡತಿಯ ಎದುರೇ ಈ ದುರಂತ ನಾಟಕಕ್ಕೆ ಮೂಲಕಾರಣವಾದ ಸಂಗತಿಯನ್ನೇ ಪ್ರಶ್ನಿಸಿಬಿಟ್ಟ –
“ಅನಸೂಯಾ ! ನಾನೆಂಥ ಮಳ್ಳ ನೋಡು. ಶಿನ್ನಪ್ಪಜ್ಜ ನುಡಿಯಲೇಬೇಕಾಗಿ ಬಂದಿತ್ತು ಎನ್ನಲಾದ ಸುಳ್ಲು ಸಾಕ್ಷಿ ಯಾರ ಪರವಾಗಿತ್ತು ? ಯಾರ ವಿರುದ್ಧವಾಗಿತ್ತು ? ಯಾವ ಕೋರ್ಟಿನಲ್ಲಿ ? ಇದನ್ನೆಲ್ಲ ನಾನು ಚಿಕ್ಕವನಿದ್ದಾಗ, ನನಗೆ ಹೇಳಿದ್ದು ನನ್ನ ಮನೆಯವರೇ ತಾನೇ ? ದಿಟವನ್ನೇ ಹೇಳಿದ್ದಾರೆಂದು ಯಾವ ಖಾತರಿ ?”
ಅಜ್ಜನ ಕಿವುಡುತನಕ್ಕೆ ತಾನು ಊಹಿಸಿಕೊಂಡ ಕಾರಣವೇ ನಿಜವಾದದ್ದೆಂದು ನಂಬುವ ಭರದಲ್ಲಿ ಅಜ್ಜನ ಮೌನಕ್ಕೆ ಹಿರಿಯರು ತನಗೆ ತಿಳಿಸಿದ ಕಾರಣವನ್ನು ಇಷ್ಟು ತಡವಾಗಿ ಶಂಕಿಸತೊಡಗಿದ ಪುಂಡಲೀಕ ಲೆಕ್ಕವಿಲ್ಲದ ಗುಮಾನಿಗಳ ದಾಳಿಗೆ ಸಿಕ್ಕು ಜರ್ಝರಿತನಾದ. ಮನಸ್ಸನ್ನು ಕಾಡಿದ ಸಾವಿರ ಸಂಶಯಗಳನ್ನು ಬರೇ ಎರಡಕ್ಕೆ ಭಟ್ಟಿಯಿಳಿಸುವ ಭಗೀರಥಪ್ರಯತ್ನವಾಗಿ ಎಂಬಂತೆ ಹೆಂಡತಿಯ ಎದುರು ಮತ್ತೊಮ್ಮೆ ಬಾಯಿ ತೆರೆದು, “ಅನಸೂಯಾ ನನಗೆ ಹೊಳೆದದ್ದು ಹೇಳಲೆ ? ಕೇಳು. ಶಿನ್ನಪ್ಪಜ್ಜ ಮೂಕನಾದದ್ದು ಸುಳ್ಳು ಸಾಕ್ಷಿ ಹೇಳಬೇಕಾದ ಪ್ರಸಂಗಕ್ಕೆ ಹೆದರಿದ್ದರಿಂದ ಅಲ್ಲವೇ ಅಲ್ಲ ; ಫಕ್ಕನೆ ಕಣ್ಣಿಗೆ ಬಿದ್ದ ಕಠೋರ ಸತ್ಯದಲ್ಲಿ ಮಾತು ಪಡೆದೀತೋ ಎಂದು ಹೆದರಿದ್ದರಿಂದ. ಹಾಗೇನೇ, ಕೆಪ್ಪನಾದದ್ದು ಯಾರೋ ಕಿವಿಯಲ್ಲಿ ಉಸುರಿದ ಸುಳ್ಳು ಸಹಿಸಲು ಅಸಾಧ್ಯವಾಗುವಷ್ಟು ಕೆಟ್ಟದ್ದಾದ್ದರಿಂದ” ಎಂದ. ಇನ್ನೂ ಕೆಲ ದಿನ ಬಿಟ್ಟು ತನ್ನಷ್ಟಕ್ಕೆ ಎಂಬಂತೆ ‘ಸತ್ಯಕ್ಕೆ ಹೆದರಿ ಶಿನ್ನಪ್ಪಜ್ಜ ಮೊನ್ನನಾದ ; ಹಳ್ಳಿಗೆ ಹೆದರಿ ಕೆಪ್ಪನಾದ” ಎಂದು ಗುಣಿಗುಣಿಸಿದ್ದು ಕಿವಿಯ ಮೇಲೆ ಬೀಳುತ್ತಲೇ ಅನಸೂಯಾ, ಇದೆಂಥ ಮಲಾಮತಿ ತಂದಿಯಪ್ಪಾ, ದೇವರೇ ! ಎಂದು ಹಲುಬಿದಳು. ಬದುಕಿದ್ದಾಗ ತನ್ನ ಗಂಡನನ್ನು ಒಂದು ರೀತಿಯಲ್ಲಿ ಕಾಡಿದ್ದ ಮುದುಕ ಈಗ ಸತ್ತ ಮೇಲೆ ಇನ್ನೊಂದು ರೀತಿಯಲ್ಲಿ ಕಾಡತೊಡಗಿರುವನಲ್ಲ ! ಇದರೊಳಗಿಂದ ಬಿಡುಗಡೆಯೇ ಇಲ್ಲವೆ ? ಮೊನ್ನ, ಕೆಪ್ಪ, ಹುಚ್ಚ-ಈ ಮೂರೂ ಆಗಿದ್ದವನು ಕೆರಳಿಸುವ ಊಹೆಗಳಿಗೆ ಕೊನೆಯುಂಟೆ ? ಇವರಿಗೆ ತಿಳಿಹೇಳುವವರಾದರೂ ಯಾರು ?
ನಾನು ಅನೇಕ ವರ್ಷಗಳ ಮೇಲೆ ಕುಮಟೆಗೆ ಬಂದದ್ದು ಅನಸೂಯಾಳ ಆರ್ತ ಕೋರಿಕೆಯ ಮೇಲೇ ಆಗಿತ್ತು. ಚಿಕ್ಕಂದಿನಲ್ಲಿ ಪುಂಡಲೀಕನನ್ನು ಒಮ್ಮೆ ಮಾತ್ರ ಕಂಡಿದ್ದು : ಅಮ್ಮೇಲೆ ಕಂಡಿರಲಿಲ್ಲ. ಅನಸೂಯಾಳಿಗಂತೂ ನನ್ನ ಗುರುತು ಪರಿಚಯವೂ ಇರಲಿಲ್ಲ. ಗಂಡನ ಹುಚ್ಚು ಬಿಡಿಸಲು ನಾನೇ ಯಾಕೆ ಯೋಗ್ಯನಾಗಿ ಕಂಡೆ. ನನಗಿನ್ನೂ ಒಡೆಯದ ಒಗಟಾಗಿಯೇ ಉಳಿದಿದಿಎ. ಆದರೂ ಯಾರಿಂದಲೋ ನನ್ನ ವಿಳಾಸವನ್ನು ದೊರಕಿಸಿ ಪತ್ರ ಬರೆದು ಕರೆಸಿಕೊಂಡಿದ್ದಂತೂ ನಿಜ.
ಮಣಕೀ ಗುಡ್ಡದ ಓರೆಯಲ್ಲಿದ್ದ ಅವನ ಮನೆಯಲ್ಲಿ ಕಾಲಿರಿಸುತ್ತಿದ್ದಂತೆ ತನ್ನದೇ ಹಾದಿಯನ್ನು ಕಾಯುತ್ತಿದ್ದವನ ಹಾಗೆ ದುಡುದುಡು ಜಗಲಿಗೆ ಬಂದ ಪುಂಡಲೀಕ. “ನೀನಲ್ಲವೇ ! ದೇವರು ಕಳುಹಿಸಿದವನ ಹಾಗೆ ಬಂದಿ, ಬಾ !” ಎಂದು ಉಸುರಿ ನನ್ನೊಡನೆ ಕೈಕುಲುಕಿದಾಗ ಜಗತ್ತಿನಲ್ಲಿ ಅದ್ಭುತಗಳು ಇರುವುದು ಸುಳ್ಳಲ್ಲ ಅನ್ನಿಸಿತು.
– ೨ –
ಪುಂಡಲೀಕ-ಅನಸೂಯಾ ಇಬ್ಬರು ನನಗೆ ಮೊದಲ ಪರಿಚಯದಲ್ಲೇ ಆತ್ಮೀಯರೆನ್ನಿಸಿದರೂ. ಪುಂಡಲೀಕ ತುಂಬಾ ಆಕರ್ಷಕ ಯುವಕನಾಗಿ ಬೆಳೆದಿದ್ದ. ಇಲ್ಲಿಗೆ ಬರುವ ಮೊದಲು ಅವನ ಬಗ್ಗೆ ಕಲ್ಪಿಸಿಕೊಂಡು ಹೆದರಿದ್ದೆಲ್ಲ ಸುಳ್ಳು ಅನ್ನಿಸುವ ಮಟ್ಟಿಗೆ ಖುಶಿಯಲ್ಲಿದ್ದ. ನೋಡಿ ನನಗೂ ಖುಶಿಯಾಯಿತು. ಕುಮಟೆಯ ಎಲ್ಲ ತರುಣರ ಹಾಗೇ ತೆಂಗಿನ ಮರದಷ್ಟು ಎತ್ತರದ ದನಿಯಲ್ಲಿ ಮಾತನಾಡುತ್ತಿದ್ದ. ಮಾತುಮಾತಿಗೆ ಅಲ್ಲವಾದರೂ ಆಗೀಗ ಕುಮಟೆಯ ಅವ್ವಲ್ ಬೈಗುಳ ಬಳಸುತ್ತಿದ್ದ. ನಗುತ್ತ ನಗಿಸುತ್ತಿದ್ದ. ಅನಸೂಯಾಳೂ ಹಾಗೆಯೇ-ತರ್ತರೀತ ಉಮೇದಿನ ಹುಡುಗಿ.
ಅಂದು ರವಿವಾರ, ಕಾಲೇಜಿಗೆ ರಜೆಯಿದ್ದ ದಿವಸ. ಕುಮಟೆಯ ಎಷ್ಟೆಲ್ಲ ಜನ, ಎಷ್ಟೆಲ್ಲ ಸಮಾಚಾರಗಳು ನಮ್ಮ ಮಾತುಕತೆಯಲ್ಲಿ ಬಂದುಹೋದವು. ಆದರೆ ಶಿನ್ನಪ್ಪಜ್ಜ ತಪ್ಪಿ ಕೂಡ ಬರದೇಹೋದಾಗ, ಇದು ಒಳ್ಳೆಯದರ ಲಕ್ಷಣ ಅಲ್ಲವೆಂದು ತೋರಿ ತುಸು ಬೇಚೈನುಗೊಂಡೆ. ಕತ್ತಲಾಗುವ ಹೊತ್ತಿಗೆ ನನ್ನ ಬೇಚೈನಿಗೆ ಆಧಾರ ಸಿಗಹತ್ತಿತು-ಬೆಳಿಗ್ಗೆ ನೋಡಿದ ಪುಂಡಲೀಕನು ಇವನು ಅಲ್ಲವೇ ಅನ್ನಿಸುವ ಮಟ್ಟಿಗೆ ಬದಲುಗೊಂಡವನು ತನ್ನ ಅಜ್ಜನ ಕೊನೆಯ ವರ್ಷಗಳನ್ನು ನೆನೆಯುತ್ತ ಪ್ರಶ್ನೆಗಳ ಪಟಾಕಿ ಸರ ಹಚ್ಚಿಬಿಟ್ಟ. ನಡುವೆಯೇ ಒಮ್ಮೆ ಬಿಕ್ಕಿದ. ಒಂದು ಕ್ಷಣದ ಮಟ್ಟಿಗೇ ಇರಲಿ, ಸಣ್ಣ ಮಗುವಿನಂತೆ ಅತ್ತನು ಕೂಡ. “ದೀಪ ಹಚ್ಚುವ ಹೊತ್ತು” ಎಂದು ಹೆಂಡತಿ ಗದರಿಸಿದಾಗ ಗಪಕ್ಕನೆ ಬಾಯಿ ಮುಚ್ಚಿದವನು ಎರಡು ಮಿನಿಟುಗಳ ಮೌನದ ನಂತರ ಬಾಯಿ ತೆರೆದಾಗ ಪುಂಡಲೀಕ ಮತ್ತೆ ತೀರ ಬೇರೆಯವನೇ ಆಗಿದ್ದ. ಸೌಮ್ಯವಾದ ಆದರೂ ಸ್ಥಿರವಾದ ದನಿಯಲ್ಲಿ ಶಪಥ ಮಾಡುವ ಧಾಟಿಯಲ್ಲಿ, “ಒಂದಲ್ಲ ಒಂದು ದಿನ ನನ್ನ ಅಜ್ಜನ ಇಡೀ ಜೀವನವನ್ನೇ ಹಾಳುಗೆಡವಿದವರನ್ನು ಬಯಲಿಗೆಳೆಯದೇ ಇರಲಾರೆ” ಎಂದ. ಆ ದಿಕ್ಕಿನಲ್ಲಿ ತಾನು ಈಗಾಗಲೇ ಒಟ್ಟು ಮಾಡಿದ ಮಾಹಿತಿಯನ್ನು ನನ್ನೆದುರು ಪಟ್ಟಿ ಮಾಡಿದ. ನಾನು ದಂಗು ಬಡಿದೆ. ತನ್ನ ಅಜ್ಜ ಇನ್ನೂ ಬದುಕಿದ್ದಾಗ, ತಾನು ಖುದ್ದು ಅವನ ಆರೈಕೆಯಲ್ಲಿ ತೂಡಗಿದ್ದಾಗ, ಕಾಡಿರದ ಪ್ರಶ್ನೆಗಳು ಈಗ ಅವನು ಕಣ್ಮರೆಯಾದ ಮೇಲೆ ಒಮ್ಮೆಲೇ ದಾಳಿ ಮಾಡಿದಂತಿತ್ತು. ನಾನು ಕೌತುಕ ತುಂಬಿದ ಕಣ್ಣುಗಳಿಂದ ಅವನನ್ನು ನೋಡುತ್ತಿದ್ದಾಗಲೇ ಮತ್ತೆ ತನ್ನೊಳಗೆ ಎಲ್ಲೋ ‘ಗುಲ್’ ಆದವನು ತನ್ನಷ್ಟಕ್ಕೆ “ಸತ್ಯಕ್ಕೆ ಹೆದರಿ ಮೊನ್ನನಾದ. ಸುಳ್ಳಿಗೆ ಹೆದರಿ ಕೆಪ್ಪನಾದ. ಸುಳ್ಳು ಯಾವುದು ? ಸತ್ಯ ಯಾವುದು ? ತಿಳಿಯದೇ ಹುಚ್ಚನಾದ” ಎಂದ. ಅನಸೂಯಾ, ‘ನನ್ನನ್ನು ಹೆದರಿಸಿದ್ದು ಇದು,’ ಎಂದು ನನ್ನ ಲಕ್ಷ್ಯ ಸೆಳೆಯುವವಳ ಹಾಗೆ ನನ್ನತ್ತ ನೋಡಿದಳು. ಹೆದರುವ ಕಾರಣವಿಲ್ಲವೆಂದು ಕಣ್ಸನ್ನೆಯಿಂದಲೇ ಅವಳಿಗೆ ಆಶ್ವಾಸನೆಯಿತ್ತೆ.
ಪುಂಡಲೀಕನ ಮಾತಿನಲ್ಲಿ ಸರ್ವಜ್ಞನ ತ್ರಿಪದಿಯ ಧಾಟಿಯಿತ್ತು. ಅವನ ಸ್ಥಿತಿ ನೋಡಿ ಕನಿಕರವೆನ್ನಿಸಿತು. ನನ್ನನ್ನು ಕಾಡುತ್ತಿದ್ದ ಸಂಶಯ ಏನೆಂಬುದನ್ನು ಪುಂಡಲೀಕ ತನ್ನ ತ್ರಿಪದಿಯ ಮೂಲಕ ಸ್ಪಷ್ಟಪಡಿಸಿದ್ದ. ಈ ಸಂಶಯ ಅವನ ಭಾವನೆಗಳ ಮೇಲೆ ಮಾಡುತ್ತಿದ್ದ ಪರಿಣಾಮಕ್ಕೆ ಅವನು ಆಗೀಗ ಸೇರುತ್ತಿದ್ದ ಭ್ರಾಮಕಸ್ಥಿತಿಯೇ ಸಾಕ್ಷಿ ನುಡಿಯುತ್ತಿತ್ತು. ಇವನನ್ನು ಈ ಸ್ಥಿತಿಯೊಳಗಿಂದ ಹೊರಗೆಳೆಯುವ ಏಕೈಕ ಉಪಾಯವೆಂದರೆ ಸೌಮ್ಯವಾದ ಗದರಿಕೆಯೆಂದು ತಿಳಿದವನ ಹಾಗೆ-
“ ‘ಸತ್ಯಕ್ಕೆ ಹೆದರಿ,’ ‘ಸುಳ್ಳಿಗೆ ಹೆದರಿ’ ಎನ್ನುವ ಮಾತುಗಳನ್ನು ನಂಬಬಹುದಾದರೆ, ನಿನ್ನ ಪ್ರಕಾರ, ಇಲ್ಲಿಯ ಜನರೆಲ್ಲ ಒಬ್ಬ ಮಹಾ ಸಂತನೆಂದು ತಿಳಿದು ಪೂಜಿಸಿದ ನಿನ್ನ ಅಜ್ಜ ನಿಜದಲ್ಲಿ ಮಹಾ ಪುಕ್ಕನಾಗಿದ್ದ, ಅಲ್ಲವೆ ?” ಎಂದು ಕೇಳಿದೆ. ಪುಂಡಲೀಕನ ಮೋರೆ ತಕ್ಷಣ ಅತೀವ ನೋವಿನಿಂದ ಕಿವುಚಿಕೊಂಡಿದ್ದು ನೋಡಿ ಕೆಡುಕೆನ್ನಿಸಿಯೂ ನಾನು ಸಮಾಧಾನ ಹೇಳಲು ಹೋಗಲಿಲ್ಲ. ನಮ್ಮ ಸಂಜೆಯ ಮಾತುಕತೆ ಅಲ್ಲಿಗೆ ಮುಗಿದಿತ್ತು.
ರಾತ್ರಿಯೆ ಊಟದ ನಂತರ ಚಪ್ಪರ ಹಾಕಿದ ಅಂಗಳದಲ್ಲಿ ಇರಿಸಿದ ಅರ್ಧ ಆರಾಮಕುರ್ಚಿಗಳಲ್ಲಿ ಹೋಗಿ ಕುಳಿತುಕೊಂಡೆವು. ಚಪರಕ್ಕೆ ಮಾಡು ಮಾತ್ರವಿತ್ತು. ತಟ್ಟಿಗಳಿರಲಿಲ್ಲ. ಹೊರಗೆ ಬೆಳ್ದಿಂಗಳಿತ್ತು. ಮನೆಯ ಎದುರೇ ಹರಿದ ಹೆದ್ದಾರಿಯ ಆಚೆ ಹಬ್ಬಿದ ‘ಮಣಕೀ ಗ್ರೌಂಡ್’ ಆಟದ ಬಯಲು ಕಣ್ಣು ಹಾಯುವವರೆಗೂ ಬೆಳ್ದಿಂಗಳಲ್ಲಿ ಮನಸ್ಸಿಗೆ ಮಂಕು ಹಿಡಿಸುವ ಹಾಗೆ ಹೊಳೆಯುತ್ತಿತ್ತು. ವಾತಾವರಣ ಮಾತುಕತೆಗಿಂತ ಭಾವಸಮಾಧಿಗೇ ಹೆಚ್ಚು ಅನುಕೂಲವಾಗಿತ್ತು. ಅದೇ ಹೊತ್ತಿಗೆ ಪುಂಡಲೀಕನೊಬ್ಬನೇ ಅವನ ಅಜ್ಜನ ಬಗ್ಗೆ ಮಾತನಾಡುವಂತೆ ಮಾಡಲು ಇದುವೇ ಸರಿಯಾದ ಸಮಯವೆಂದು ತಿಳಿದು, ಅಜ್ಜನ ಬಗ್ಗೆ ಗೊತ್ತಿದ್ದ ಎಲ್ಲವನ್ನೂ ಹೇಳಲು ಕೇಳಿಕೊಂಡ : “ನಿನ್ನ ಅಜ್ಜನೆಂದು ಭಾವುಕನಾಗಬೇಡ. ನಿನ್ನ ಭಾವುಕತೆಯಲ್ಲಿ ನನಗೆ ಆಸ್ಥೆಯಿಲ್ಲ. ಪ್ರತಿಯೊಬ್ಬರಿಗೂ ಅವರವರ ಅಜ್ಜ ದೊಡ್ಡವನೆ. ಮೊದಲು ನೀನು ನಿನ್ನ ಅಜ್ಜನ ಬಗ್ಗೆ ಹೇಳು. ಆಮೇಲೆ ನಾನು ನನ್ನ ಅಜ್ಜನ ಬಗ್ಗೆ ಹೇಳುತ್ತೇನೆ. ನೀವಿಬ್ಬರೂ ಕೇಳುವಿರಂತೆ” ಎಂದೆ. ನನ್ನ ಮಾತಿನಲ್ಲಿ ಇನ್ನೂ ಅಡಗಿದಂತಿದ್ದ ಬಚಾವಣೆಯ ದನಿ ಪುಂಡಲೀಕನ ಮೇಲೆ ನಾನು ನಿರೀಕ್ಷಿಸಿದ ಪರಿಣಾಮ ಮಾಡಿತ್ತು. ಪುಂಡಲೀಕ ತನ್ನ ಅಜ್ಜನ ಬಗ್ಗೆ ನನಗೆ ಹೇಳಿದ್ದು ಆವಾಗ ! ಕೇಳಿದಮೇಲೆ ಹೇಳು ಎಂದು ಆಹ್ವಾನಿಸಿದ ನಾನೇ ಥಕ್ಕುಗೊಂಡೆ. ಎಲ್ಲ ಅಜ್ಜರ ಹಾಗಿರಲಿಲ್ಲ. ಪುಂಡಲೀಕನ ಅಜ್ಜ. ಭಾವುಕಗೊಳ್ಳುವ ಪಾಳಿ ಈಗ ನನ್ನದಾಯಿತು. ಆದರೂ ಹಾಗೆ ತೋರಿಸಿಕೊಳ್ಳದೇ ಶಾಂತಚಿತ್ತನಾಗಿ ಕೇಳಿದೆ-
“ನಿನ್ನ ಅಜ್ಜ ಕಂಡಿರಬಹುದಾದ ನಿಷ್ಠುರ ಸತ್ಯದ ಬಗ್ಗೆ, ಅವನ ಕಿವಿಯಮೇಲೆ ಬಿದ್ದಿರಬಹುದಾದ ಅಸಹ್ಯ ಸುಳ್ಳಿನ ಬಗ್ಗೆ ನೀನೇ ಮಾಡಿಕೊಂಡ ಅಂದಾಜಾದರೂ ಏನೆಂದು ತಿಳಿಯಬಹುದೆ ?”
ಪುಂಡಲೀಕ ಈ ಪ್ರಶ್ನೆಯನ್ನು ನಿರೀಕ್ಷಿಸಿರಲಾರ. ತುಸು ದಡಬಡಿಸಿದವನಂತೆ ಕಂಡ. ಎದೆಗೆ ಹತ್ತಿರವಾಗಿ ಹಿಡಿದ ಗುಟ್ಟು ಇನ್ನೊಬ್ಬರ ಎದುರು ಮಾತಾಡುವಂಥದ್ದಾಗಿರಲಿಲ್ಲವೇನೋ ! ನಾನು ಕೇಳಿದ ತೀರ ಸರಳ ಪ್ರಶ್ನೆಗೆ ಉತ್ತರ ಕೊಡುವಾಗ ಎದುರಾದ ಕಷ್ಟದಲ್ಲೇ ತಾನು ಮಾಡುತ್ತಿರುವ ತಪ್ಪು ಅರಿವಿಗೆ ಬಂದವನ ಹಾಗೆ-“ಹಾಗಾದರೆ ವಾಸ್ತವ ಸತ್ಯವನ್ನು ಅರಿಯುವ ಪ್ರಯತ್ನವೇ ತಪ್ಪು ಎನ್ನುತ್ತೀಯಾ ?” ಎಂದು ಕೇಳಿದ. ದನಿ ತುಂಬಾ ಮೆತ್ತಗಾಗಿತ್ತು.
ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಆದರೂ ಏನಾದರೂ ಹೇಳಲೇಬೇಕೆಂದುಕೊಂಡವನ ಹಾಗೆ ಹೇಳಿದೆ-
“ನಾನೇನು ನಿನಗಿಂತ ಹೆಚ್ಚು ತಿಳಿದವನಲ್ಲ. ನಿನಗಿಂತ ಹೆಚ್ಚು ಅನುಭವ ಇದ್ದವನೂ ಅಲ್ಲ. ಮೇಲಾಗಿ ನಾವಿಬ್ಬರೂ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು. ಆದರೂ ನಿನ್ನ ಮಾತನ್ನು ಕೇಳುತ್ತಿದ್ದಂತೆ ನನಗೆ ಹೊಳೆದದ್ದನ್ನು ಹೇಳುತ್ತೇನೆ. ವಾಸ್ತವ ಸತ್ಯ ಎನ್ನುವುದು ಎಲ್ಲರಿಗೂ ಒಂದೇ ಅಲ್ಲ. ಅದು ವಾಸ್ತವಕ್ಕೆಷ್ಟೋ ಅಷ್ಟೇ ನಮಗೂ ಸೇರಿದ್ದು. ನಾವು ತಿಳಿದುಕೊಂಡ ಹಾಗೇ ಅದು ಇರುತ್ತದೆ. ಶಿನ್ನಪ್ಪಜ್ಜನ ಬಾಯಿಂದ ಕೇಳಿಸಿದಂತಾದ ಹೆಣ್ಣಿನ ಹೆಸರಿನ ಬೆನ್ನು ಹತ್ತಿ ಮಾಡಿದ ಶೋಧಕ್ಕೂ ದಕ್ಕುವ ಒಂದು ಸತ್ಯವಿರಬಹುದಲ್ಲವೆ ? ನಾನು ಓದಿದ ಒಂದು ಮಾತನ್ನು ಹೇಳಬಹುದಾದರೆ ಬದುಕು ಇಂಥ ಸನ್ನಿವೇಶಗಳ ಮುಖಾಂತರ ನಮ್ಮನ್ನು ಆಹ್ವಾನಿಸುವುದು ವಾಸ್ತವ ಸತ್ಯವನ್ನು ಅರಿಯುವುದಕ್ಕೆ ಅಲ್ಲವೇ ಅಲ್ಲವಂತೆ. ಬದುಕಿನ ಅರ್ಥವನ್ನು ಗ್ರಹಿಸಿ ಅದರಂತೆ ಬದುಕಲಂತೆ. ಶಿನ್ನಪ್ಪಜ್ಜ ಸ್ವಂತ ನಿರ್ಧಾರದಿಂದ, ಆಯ್ಕೆಯಿಂದ ಜೀವಾವಧಿ ಕಾಲ ಧರಿಸಿದ ಕಠೋರ ಮೌನ, ಬದುಕು ಅವನಿಗೆ ಹಾಕಿದ್ದ ಎಂಥ ಪ್ರಶ್ನೆಗೆ ಉತ್ತರವಾಗಿತ್ತು ? ಅವನ ಕಿವುಡುತನ, ಹುಚ್ಚು ಎಂಥ ಪ್ರಶ್ನೆಗಳಿಗೆ ಉತ್ತರವಾಗಿದ್ದುವು ? ಇದು ನಮ್ಮ ಶೋಧ ಹಿಡಿಯಬಹುದಾದ ಒಂದು ದಾರಿ. ಇನ್ನೊಂದು ದಾರಿಯೆಂದರೆ-ಶಿನ್ನಪ್ಪಜ್ಜನ ಮೌನಕ್ಕೆ ಏನು ಕಾರಣವಾಯಿತು ? ಹೊಣೆಯಾದವರು ಯಾರು ? ಅವನ ಹೇತುವೇನಾಗಿತ್ತು ? ಎಂದು ಮುಂತಾಗಿ ತಿಳಿಯುವುದು. ಆಯ್ಕೆ ನಮ್ಮದು. ಒಂದನ್ನು ಆಯುವುದರಿಂದ ಶಿನ್ನಪ್ಪಜ್ಜನಿಗೆ ಹತ್ತಿರವಾಗಿರುತ್ತೇವೆ. ಇನ್ನೊಂದರಿಂದಾಗಿ ಅವನಿಂದ ದೂರ ಸರಿಯುತ್ತೇವೆ. ಆಗ ಅನಸೂಯಾ ಮಾತುಮಾತಿನಲ್ಲಿ, ಮುದುಕ ತನ್ನ ಆಯುಷ್ಯವನ್ನು ಹಾಳುಮಾಡಿಕೊಂಡಿದ್ದರೂ ಆಯಿತೇ. ಈಗ ನಮ್ಮ ಆಯುಷ್ಯವನ್ನೂ ಹಾಳು ಮಾಡುತ್ತಿರುವುದು ಸರಿಯೆ ? -ಎಂದು ಕೇಳಿದಳು. ಮುದುಕ ತನ್ನ ಬದುಕನ್ನು ಹಾಳುಮಾಡಿಕೊಂಡಿದ್ದರ ಬಗ್ಗೆ ನನಗೆ ಖಾತರಿಯಿಲ್ಲ. ಈ ರೀತಿಯಾಗಿ ನೋಡಿದರೆ-ಅರಮನೆಯ ವೈಭವವನ್ನು, ಹೆಂಡತಿ ಮಕ್ಕಳ ಸುಖವನ್ನು ತೊರೆದು ಬೈರಾಗಿಯಾಗಲು ನಿರ್ಧರಿಸಿದ ಬುದ್ಧ ಕೂಡ ತನ್ನ ಜೀವನವನ್ನು ಹಾಳುಮಾಡಿಕೊಂಡ ಎನ್ನಬೇಕಾದೀತು.” ಆಗಿನಿಂದಲೂ ನಾನೊಬ್ಬನೇ ಮಾತನಾಡುತ್ತಿದ್ದೇನೆ ಎನ್ನುವುದು ಲಕ್ಷ್ಯಕ್ಕೆ ಬಂದು ಹೇಗೋ ಆಯಿತು.
ಬುದ್ಧನಿಗೆ-ಮುದುಕ, ರೋಗಿ, ಮೃತನ ಹೆಣ, ಭಿಕ್ಷುಕ-ಬೈರಾಗಿಗಳ ರೂಪದಲ್ಲಿ ಎದುರಾದ ನಾಲ್ಕು ಸನ್ನಿವೇಶಗಳಿಗೆ ಆ ಮಹಾನುಭಾವನು ಸ್ಪಂದಿಸಿದ ಅನನ್ಯ ರೀತಿಯನ್ನು ಕುರಿತು ಮಾತನಾಡುವ ಮನಸ್ಸಾಗಿತ್ತು. ಈಗಾಗಲೇ ನನ್ನ ಮಾತಿಗೆ ಭಾಷಣದ ರೂಪ ಬಂದದ್ದು ನೋಡಿ ಮುಜುಗರವಾಗಿ ತಡೆದುಕೊಂಡೆ. ಆಮೇಲೆ ನಾವು ಯಾರೂ ಮಾತನಾಡಲಿಲ್ಲ. ನನ್ನ ಮಾತು ಮುಂದೆ ಕುರಿತು ತದೇಕಚಿತ್ತರಾಗಿ ಕೇಳುತ್ತಿದ್ದವರ ಮೇಲೆ ಪರಿಣಾಮ ಮಾಡಿದ್ದು ಸ್ಪಷ್ಟವಿತ್ತು. ನಿದ್ದೆ ಮಾಡಲೆಂದು ನಾವು ಅಂಗಳ ಬಿಡುವ ಹೊತ್ತಿಗೆ, ಹೊರಗೆ, ಬೆಳ್ದಿಂಗಳು ಇನ್ನಷ್ಟು ಶುಭ್ರಗೊಡಿತ್ತು.
– ೩ –
ರಾತ್ರಿ ಹಾಸಿಗೆಯಲ್ಲಿ ಅಡ್ಡವಾದಲ್ಲಿ ಬಹಳ ಹೊತ್ತಿನವರೆಗೆ ನಿದ್ದೆ ಬಾರದೇ ತಳಮಳಿಸಿದೆ. ಶಿನ್ನಪ್ಪಜ್ಜನ ಜೀವನದ ವಿವರಗಳು ಮುಚ್ಚಿದ ಕಣ್ಣು ಗೆಳೆಯರು ಭರಭರನೆ ಹಾದುಹೋಗುತ್ತಿದ್ದಂತೆ, ನನ್ನ ಮಾತಿನೊಳಗೆ ನನಗೇ ವಿಶ್ವಾಸ ಇಲ್ಲವಾಗುತ್ತ ತುಂಬಾ ಮ್ಲಾನನಾದೆ. ವಿಶ್ವಾಸವಿದ್ದು ಆಡಿದ ಮಾತುಗಳೇ ಅಲ್ಲವಾಗಿದ್ದವು ಅವು. ನನ್ನ ಮ್ಲಾನತೆ ಹೋಗಲಾಡಿಸಲೆಂದೇ ಎಂಬಂತೆ ನನ್ನೊಳಗಿನ ಸಹಜ ತುಂಟತನ ಜಾಗೃತಗೊಂಡು, ನಾಳೆ, ಪುಂಡಪೋಕರಿಗಳ ಕೈಗೆ ಸಿಕ್ಕ ‘ಣಿ’ ಪ್ರಕರಣದ ಬಗ್ಗೆ ಕೇಳಬೇಕು ಎನ್ನುವ ವಿಚಾರ ತಲೆಯೊಳಗೆ ಮೊಳೆತಾಗ ನಗು ಬಂತು. ಪುಂಡಲೀಕನಿಗೆ ಅಜ್ಜನ ಪ್ರೇಯಸಿಗಳ ಬಗ್ಗೆ ಗೊತ್ತಿಲ್ಲದೇ ಇರಲಾರದು. ನಾಳೆ ನಾಸ್ತಾದ ಹೊತ್ತಿಗೆ ಕೇಳಿ ಚುಡಾಯಿಸಬೇಕು. ಅವರ ಬಗ್ಗೆ ಹೇಳುವಾಗಲಾದರೂ ನಗದೇ ಇರಲಾರ, ನಗಿಸಬೇಕು. ಸಡಿಲಗೊಂಡಾನು. ನಾನು ಈ ವಿಚಾರ ಬಂದ ಕೆಲ ಹೊತ್ತಿನ ಮೇಲೆ ನನಗೆ ನಿದ್ದೆ ಹತ್ತಿರಬೇಕು.
ಮಾರನೇ ದಿನ ನಾಸ್ತಾದ ಹೊತ್ತಿಗೆ ಪುಂಡಲೀಕನನ್ನು ‘ಣಿ’ ಪ್ರಕರಣದ ಬಗ್ಗೆ ಕೇಳಿಯೂ ಕೇಳಿದೆ. ಅವನು ನಗಲಿಲ್ಲ. ಆದರೂ ನಿನ್ನೆಯ ಹಾಗೆ ಸಲ್ಲದ ಉದ್ವೇಗಕ್ಕೆ ಒಳಗಾಗದೇ ಸಂತ ದನಿಯಲ್ಲಿ ನುಡಿದ-“ನಿನ್ನೆ ನೀನು ಹೇಳಿದ ಒಂದು ಮಾತು ನನ್ನನ್ನು ಇಡೀ ರಾತ್ರಿ ಕಾಡಿತು, ನೋಡು. ನನ್ನ ಅಜ್ಜ ಸರ್ವಥಾ ಪುಕ್ಕನಾಗಿರಲಿಲ್ಲ. ನಾನೇ ಅವನ ಬಗ್ಗೆ ಹೇಳುವಾಗ ತಪ್ಪು ಮಾಡಿದೆನೆಂದು ಈಗ ತೋರುತ್ತದೆ. ಸುಳ್ಳು ಹೇಳಕೂಡದೆಂದು ಅವನು ಮೊನ್ನನಾದ. ಸುಳ್ಳು ಕೇಳಕೂಡದೆಂದು ಕೆಪ್ಪನಾದ-ಎನ್ನುವುದು ಹೆಚ್ಚು ಸಮಂಜಸವಾದೀತೇನೋ” ಎಂದ. ತುಸು ತಡೆದು. “ಸುಳ್ಳು ಯಾವುದು, ಸತ್ಯ ಯಾವುದು-ಎಂದು ತಿಳಿಯದೇ ಹುಚ್ಚನಾದ ಎನ್ನುವ ನನ್ನ ಹೇಳಿಕೆಯ ಬಗ್ಗೆ ನನಗೇ ಖಾತರಿಯಿಲ್ಲ” ಎಂದ.
ನಾನು ನಿನ್ನೆ ಎಷ್ಟೆಲ್ಲ ಮಾತುಗಳನ್ನು ಆಡಿರುವಾಗ ಎಲ್ಲ ಬಿಟ್ಟು ಇದನ್ನೇ ನೆನೆದುದನ್ನು ನೋಡಿ ನನಗೆ ನಿರಾಸೆಯಾಗಲಿಲ್ಲ. ಬದಲಾಗಿ ನನ್ನ ಮಾತುಗಳಿಂದ ನಾನೇ ಇನ್ನೂ ಮುಜುಗರಪಟ್ಟುಕೊಂಡಿರುವಾಗ ಕಿವಿಯ ಮೇಲೆ ಬಿದ್ದ ಈ ಮಾತುಗಳಿಂದ ನನಗೆ ಖುಶಿಯಾಯಿತು. ಕೊನೆಗೂ ಅಂತಃಕರಣ ನೆನೆಯುವುದು ಇಂಥ ಮಾತುಗಳನ್ನೇ ಅಲ್ಲವೆ ? ನಾನಿನ್ನೂ ಅವನ ಮಾತುಗಳನ್ನು ಮೆಲುಕುಹಾಕುತ್ತಿರುವಾಗಲೇ ಪುಂಡಲೀಕ ಮುಂದುವರಿದು-
“ಶಿನ್ನಪ್ಪಜ್ಜ ಅಂದಿನ ದಿನಗಳಲ್ಲಿ ಎಂಥ ಕಷ್ಟದಲ್ಲಿದ್ದನೋ ! ಕಷ್ಟದಲ್ಲಿದ್ದ ಪ್ರತಿಯೊಂದು ಮಗು ನೆನೆಯುವಂತೆ ತನ್ನ ಅಮ್ಮನನ್ನು ನೆನೆಯುತ್ತಿರಬೇಕು. ನನ್ನ ಮುತ್ತಜ್ಜಿಯ ಹೆಸರು ದೇವಕಿ. ಮನೆಯಲ್ಲಿ ಎಲ್ಲರೂ ಕರೆಯುತ್ತಿದ್ದದ್ದು ಅಮ್ಮಣಿ” ಎಂದ.
ಎರಡು ದಿನಗಳ ಮೇಲೆ ಊರಿಗೆ ವಾಪಸ್ಸಾಗಲು ಬಸ್ಸು ಹತ್ತಿ ಕೂತಾಗ, ನನ್ನನ್ನು ಬೀಳ್ಕೊಡಲು ಸ್ಟ್ಯಾಂಡಿಗೆ ಬಂದಿದ್ದ ಪುಂಡಲೀಕ-ಅನಸೂಯಾರ ಮೋರೆಗಳ ಮೇಲಿನ ಸಮಾಧಾನ ನೋಡಿ ಮನಸ್ಸು ನಿರಾಳವಾಯಿತು. ನಾನು ಕುಮಟೆಗೆ ಬಂದದ್ದು ಅವರ ಸಲುವಾಗಿಯೇ ಆಗಿತ್ತು ತಾನೇ. ಅಂದು ಬೆಳಗಿಗೇ ಜಗಲಿಯ ಮೇಲೆ ನಾನೊಬ್ಬನೇ ಇದ್ದ ಹೊತ್ತನ್ನು ಸಾಧಿಸಿ, “ನೀವು ಬಂದದ್ದು ಒಳ್ಳೆಯದಾಯಿತು. ತಲೆಯಮೇಲೆ ಹತ್ತಿ ಕುಳಿತಿದ್ದ ಕೊಲೆ ಈಗ ದೂರವಾಗಿದೆ” ಎಂದಿದ್ದಳು ಅನಸೂಯಾ.
ಬಸ್ಸು, ಸ್ಟ್ಯಾಂಡನ್ನು ಬಿಟ್ಟು ಒಂದು ಫರ್ಲಾಂಗು ಕೂಡ ದೂರ ಹೋಗಿರಲಾರದು-ಪುಂಡಲೀಕ ಕೇಳಿದ ಪ್ರಶ್ನೆಗಳೆಲ್ಲ ಒಂದೊಂದಾಗಿ ನೆನಪಿಗೆ ಬರತೊಡಗಿದಂತೆ ತುಂಬಾ ಅಸ್ವಸ್ಥನಾದೆ. ಕೊನೆಗೂ ನಾವು ಯಾರೂ ಮಹಾತ್ಮ-ಬುದ್ಧರೇನಲ್ಲವಲ್ಲ ! ನಮ್ಮಂತಹರ ಸಮಾನ್ಯ ಮನಸ್ಸುಗಳಿಗೆ ಬದುಕಿನ ಅರ್ಥಕ್ಕಿಂತ ಹೆಚ್ಚಾಗಿ ವಾಸ್ತವ ಸತ್ಯಗಳನ್ನು ಶೋಧಿಸಹಚ್ಚುವ ಪ್ರಶ್ನೆಗಳೇ ಸುಲಭ ಸಾಧ್ಯವೇನೋ ಅನ್ನಿಸಿತು. ಆದರೂ ಮನಸ್ಸು ಕಳಕೊಂಡ ನೆಮ್ಮದಿಯನ್ನು ತಿರುಗಿ ಪಡೆಯದೇ ಹೋದಾಗ ಪುಂಡಲೀಕ ತನ್ನ ಅಜ್ಜನ ಬಗ್ಗೆ ರಚಿಸಿದ ತ್ರಿಪದಿಗಳನ್ನು ಮತ್ತೆ ಮತ್ತೆ ಪಠಿಸಿದೆ, ಪ್ರಯೋಜನವಾಗಲಿಲ್ಲ. ಇಂಥ ರಕ್ತ-ಮಾಂಸಗಳ ಜೀವಂತ ವ್ಯಕ್ತಿಯೊಬ್ಬ ಈ ಕುಮಟೆಯ ನೆಲದ ಮೇಲೆ ನಿಜಕ್ಕೂ ನಡೆದಾಡಿದ್ದ ಎನ್ನುವುದನ್ನು ಒಪ್ಪುವುದರಾಚೆ ಮಾಡಿದ ಎಂಥ ವಿಚಾರವೂ ನಿರರ್ಥಕವೆಂದು ತೋರಿ ಹತಾಶನಾದೆ.
ಮಾರನೇ ದಿನ ಬೆಳಗಿನ ಜಾವದಲ್ಲಿ, ಬಸ್ಸು ಕುಮಟೆಯನ್ನು ಬಹಳ ಹಿಂದೆ ಬಿಟ್ಟ ಊರನ್ನು ಸಮೀಪಿಸುತ್ತಿದ್ದಾಗ, ಸರಕ್ಕನೆಂಬಂತೆ, ಪುಂಡಲೀಕ ಹೇಳಿದ ಇನ್ನೊಂದು ಮಾತು ನೆನಪಿಗೆ ಬಂದು ಅಂತಃಕರಣ ಪುಳಕಗೊಂಡಿತು-
“ಶಿನ್ನಪ್ಪಜ್ಜ ಅಂದಿನ ದಿನಗಳಲ್ಲಿ ಎಂಥ ಕಷ್ಟದಲ್ಲಿದ್ದನೋ ! ಕಷ್ಟದಲ್ಲಿದ್ದ ಪ್ರತಿಯೊಂದು ಮಗು ನೆನೆಯುವಂತೆ ತನ್ನ ಅಮ್ಮನನ್ನು ನೆನೆಯುತ್ತಿರಬೇಕು”
ಬಹುಶಃ ಇನ್ನು ಮುಂದೆ ಶಿನ್ನಪ್ಪಜ್ಜ ಸ್ವಲ್ಪವಾದರೂ ನಮ್ಮ ಗ್ರಹಿಕೆಗೆ ದಕ್ಕುವುದು ನಮ್ಮ ಅಂತಃಕರಣ ತಟಕ್ಕನೆ ಗುರುತಿಸುವ ಇಂಥ ಸತ್ಯಗಳಲ್ಲೇ ಏನೋ ಎಂದು ಅನ್ನಿಸುವ ಹೊತ್ತಿಗೆ, ದೂರ, ನಾನು ಇಳಿಯುವ ನಿಲ್ದಾಣ ಬೆಳಗಿನ ಎಳೆಬಿಸಿಲಲ್ಲಿ ಬೆಳಗಿ ನಿಂತದ್ದು ಕಣ್ಣಿಗೆ ಬಿತ್ತು !
*****
