ಹೊಳೆವ ಹೊಂಗನಸುಗಳ ಶಬ್ದ ಸಂಕೋಚಗಳ
ದಟ್ಟ ನಟ್ಟಿರುಳ ನಡುವೆ ಒಂದು ಕವಿತೆ
ಆತ್ಮಹತ್ಯೆ ಮಾಡಿಕೊಂಡಿತು
ಮಾತುಗಳು ಢಿಕ್ಕಿ ಹೊಡೆದು ತೂತಾಗಿ ಕೂತು
ಪರಡಿಗಳ ತುಂಬೆಲ್ಲ ಬಣ್ಣದ ಕನ್ನಡಕ
ಸುತ್ತಾಮುತ್ತಾ ಎಲ್ಲಾ ಚಿನ್ಹೆಗಳ ಚಿಲಕ
ಗೋದಾಮಿನ ತುಂಬ ಹದಾ
ಸದಾ ತಿಕ್ಕುತ್ತಿರುವ
ಕೊಂಬು ಪ್ರಶ್ನಾರ್‍ಥಕ ತಲೆಗಟ್ಟು ಒತ್ತು ಉದ್ಗಾರವಾಚಕ
ನರಮಂಡಲದಿಂದ್ಹೊರಟ ಹೂ ಮೊಗ್ಗು ಮುಗುಳುಗಳು
ರಕ್ತ ಪರಿಚಲನೆ ಸೇರಿ
ಎದೆಗೂಡಿನ ಮೃದು ಹೃದಯವನು ಸುತ್ತರಿದು
ಈಟಿ ಬಾಣಗಳಾಗಿ ನೆಟ್ಟು ಬಿಟ್ಟಾಗ
ಒಂದು ಕವಿತೆ ಆತ್ಮಹತ್ಯೆ ಮಾಡಿಕೊಂಡಿತು
ಸೋರುವ ಹಣತೆಯ ಹಿಚುಕಿದ ಬೆಳಕಿನ
ಮೊಂಡು ಒರೆಗಲ್ಲುಗಳ ಸ್ಮಶಾನದಲ್ಲಿ
ಗೋರಿಯಿಂದೆದ್ದು ಬರಲು ಒದ್ದಾಡಿದವು ಶಬ್ದ
ಶಬ್ದದಿಂದೆದ್ದು ಬರಲು ಗುದ್ದಾಡಿತು ಭಾವ
ನೋವು ಬೀಗುವ ಕ್ಷೀಣ ತಾರೆಗಳ ನೆರಳಲ್ಲಿ
ಹೋರಾಟ ನಡೆಸಿತೋ ಪ್ರಜ್ಞಾ ಪ್ರವಾಹ
ಹಠಾತ್ತನೆ ಮರ ಬೆಳೆದು ಲತೆಯೇ ಹರಿದುಹೋಯಿತೋ
ಬುತ್ತಿ ತುಂಬ ತಂದ ಚಿಗುರು
ಹಾಡಾಗದೇ ಉಳಿಯಿತೋ
ಒಂದು ಕವಿತೆ, ಆತ್ಮಹತ್ಯೆ ಮಾಡಿಕೊಂಡಿತು
ಬಸಳೆ ಮಲ್ಲಿಗೆ ಮೊಗ್ಗು ಜಾಜಿ ಪಾರಿಜಾತ
ಸಾರು ಪಲ್ಲೆ ಬೆಂಡೆ ಕಾಯಿ ಖೀರು ಖಾರಭಾತ
ಬಿಲ್ಲು ಬಾಣ ಖಡ್ಗ ಕವಚ ಕುಂಡಲ ಕಿರೀಟ
ದಟ್ಟಣೆಯೋ ಜನ
ದಟ್ಟಣೆಯೋ
ಪುತ್ರ ವಾತ್ಸಲ್ಯವೋ ಭಾತೃ ಪ್ರೇಮವೋ
ಉನ್ಮತ್ತ ಕಾಮ ಭಳಿರೇ
ಎಂಥ ಪ್ರೀತಿ!
ಬೀದಿಯ ಸೆರಗಿನಗುಂಟ ಗಟಾರದ ಕಸೂತಿ
ಧ್ವನಿಗಳಿಗೆ ಬಕಾ
ಸುರ ಆಕಾರದ ಹಸಿವು
ಹಸಿವೆಯೇ ಅಕೋ ಅಕೋ ತೀಟೆಯಾಗಿ ಬಿಟ್ಟು
ನಕ್ಷತ್ರ ತೋಟದಲ್ಲಿ ಸದಾ ಮೃಗಬೇಟೆ
ಒಂದೊಂದೇ ಅಂಗಡಿ ಕಳಚಿ
ಬೋಳು ಜಾತ್ರೆ ಪೇಟೆ
ಆಹಾ ಇಂಥ ಸ್ವರ್‍ಗದಲ್ಲಿ
ಕಣ್ಣು ಮತ್ತು ಕಾಡಿಗೆ ನಡುವೆ
ಮಣ್ಣು ಮತ್ತು ಬೇರಿನ ನಡುವೆ
ರೆಕ್ಕೆ ಮತ್ತು ತ್ರಾಣದ ನಡುವೆ
ನದಿ ಮತ್ತು ತಡಸಲ ನಡುವೆ
ಹೇಳದೇ ಕೇಳದೆ ಗೆಳೆಯಾ
ಒಂದು ಕವಿತೆ ಆತ್ಮಹತ್ಯೆ ಮಾಡಿಕೊಂಡಿತು
ಆದರೂ ಎಂಥ ತಮಾಷೆ ನೋಡು-
ಕವಿಸಮಯಗಳಿಗೆ ಕಾಯುತ್ತ
ನಾನೂ ನೀನೂ ಇನ್ನೂ
ಹಾಗೆಯೇ ಇದ್ದೇವೆ!
*****
