ಒಹ್! ನಮ್ಮ ಬೆಂಗಳೂರು.
ಸಂಪ್ರದಾಯಸ್ಥ ಸುಂದರಿಗೆ
ಬೆಳೆಯಬಾರದ ಕಡೆಯೆಲ್ಲ ರೋಮಗಳೆದ್ದಂತೆ
ಇಲ್ಲೊಂದು ಮಲ್ಲೇಶ್ವರವಿದೆ.
ವ್ಯಾಕ್ಸಿಂಗ್ ಮಾಡಿ ಮಾಡಿ
ಮಾಸಿಹೋದ ಮಾಡೆಲ್ ಎಂ.ಜಿ.ರೋಡಿದೆ.
ಶಿವಾಜಿನಗರ, ಕಳಾಸಿಪಾಳ್ಯಗಳ ಮೈ
ಇನ್ನೂ ನೆರೆತಿಲ್ಲ.
ಸದಾಶಿವನಗರ ಇಂದಿರಾನಗರದ ಕನ್ಯಾಪೊರೆ
ಹುಟ್ಟುವಾಗಲೇ ಹರಿದಿದೆ.
ಇಲ್ಲೊಮ್ಮೆ ಸುತ್ತಿದಾಗ:
ರಾತ್ರಿ ರೈನ್ ಡ್ಯಾನ್ಸಿನಲಿ
ಅವಸರಿಸುವ ನೆರೆಮನೆ ಗರತಿ,
ಎದುರೇ ಸಿಕ್ಕಾಗ
ಅಪರಿಚಿತಳಾಗುವ ಹಳೆಯ ಗೆಳತಿ,
ಮಾತಿಗೂ ಸಿಗದ ಮನೆಯೊಡತಿ,
ಹೈಸ್ಕೂಲಿಗೇ ಮುಗಿದ ವರ್ಜಿನ್ ಪ್ರೀತಿ.
ಮಂದಿರದೊಳಗೆ ಸ್ಲೀವ್‌ಲೆಸ್ ಪ್ರದಕ್ಷಿಣೆ,
ಕ್ಲೀವೇಜ್ ಹಣ್ಣು-ಕಾಯಿ, ಸ್ಟೇರಿಂಗ್ ಆರತಿ.
ಅಪರೂಪಕ್ಕೊಮ್ಮೆ ಅಳೆದು ತೂಗಿ
ಮೆಚ್ಚಿದ ಹುಡುಗಿ-
ಮುಂಜಾವಿನಲಿ ಸುಪ್ರಭಾತ
ಸಂಜೆ ಪುರುಷಸೂಕ್ತ.
ಬೆಂಗಳೂರೆಂದರೆ-
ನಮ್ಮ ನಂಬಿಕೆಗಳ ಪವರ್‌ಹೌಸಿನಲ್ಲೇ
ನಮ್ಮೊಳಗಿನ ಅಪನಂಬಿಕೆಯ ಸ್ವಿಚ್ಚುಗಳು.
ಉರಿದರೂ ಬೆಳಗದ
ತಂತುಗಳಿಲ್ಲದ ಬಲ್ಬುಗಳು.
*****