ಮಾತಾಡಬೇಕು

ಕತ್ತಾಳೆಯ ಮುಳ್ಳುಗಳು ಹಾಲಿಲ್ಲದ ಕಳ್ಳಿಗಳು
ಮೈ ಸಿಗಿಯುವ ಬಾಡಬಕ್ಕದ ಗಿಡಗಳು
ಇವುದರ ಜೊತೆಗೆ ಕೊಂಚ ಮಾತಾಡಬೇಕು
ಬಾಡಿಗೆ ಬೆಳಕಿನ ಚಂದ್ರನಿಗೆರವಷ್ಟು
ಪ್ರಶ್ನೆ ಕೇಳಬೇಕು
ಚಂದದ ಗುಲಾಬಿಯನ್ನು ಮುಳ್ಳುಗಳಿಂದ
ಬಿಡುಗಡೆ ಮಾಡಬೇಕು
ಜಲವಿಲ್ಲದ ಬಾವಿಗಳು ಮಾತಿಲ್ಲದ ಮಂತ್ರಿಗಳು
ಸೀಗೆ ಮೆಳೆಗಳು ಓಡಾಡುವ ಪೋಲೀಸರು
ಲೋಕವೇ ನಾ ನಿನ್ನ ನೋಡಬೇಕು
ಭಾಷಣಗಳಂತೆ ಬರುವ ಬಿಳಿಮೋಡಗಳಿಂದ
ತೊರೆ ಹರಿಯುವುದಿಲ್ಲ-ಹಸಿರು ಏಳುವುದಿಲ್ಲ
ಕಾಲಕಾಲಕ್ಕೆ ಬರದಂತೆ ಮಳೆಯನ್ನು ತಡೆಯುತ್ತಿರುವವರಾರು?
ಕಾಮನಬಿಲ್ಲಿನಿಂದ ನಕ್ಷತ್ರಗಳನ್ನು ಕತ್ತರಿಸುತ್ತಿರುವವರಾರು?
ಸೂರ್ಯನನು ಸೆರಗಿನಿಂದ ಮರೆ ಮಾಡಿಕೊಂಡು
ಕೆದರಿದ ಕತ್ತಲೆಯನ್ನು ಎತ್ತರಿಸುತ್ತಿರುವವರಾರು?
ಮಾವು ಹಲಸುಗಳ ಫಲ ಕಿತ್ತುಕೊಂಡು
ಹೆಣ್ಣೂ ಅಲ್ಲ-ಗಂಡೂ ಅಲ್ಲದ
ಆತ್ಮಗಳನ್ನು ಹುಟ್ಟಿಸುತ್ತಿರುವವರಾರು?
ಲೋಕವೇ ನಾ ನಿನ್ನ ನೋಡಬೇಕು
ನಿನ್ನೊಡನೆ ಮಾತಾಡಬೇಕು
ಅಲ್ಲೆ ಕುಂತವರೆ
ಒಂದಾನೊಂದು ಊರು
ಊರಿಗೆ ಮಳೆಯಿಲ್ಲ
ಬೂಟಿನ ಸದ್ದು ಗುಂಡಿನ ಸದ್ದು
ಕತ್ತಿಯ ತಿವಿತ ಕೂಗಾಟ
ಊರಿಗೆ ಬೆಳೆಯಿಲ್ಲ
ಮಳೆರಾಯ ಕ್ವಾಪದಲಿ ದೇಸಂತರಾ ಹೋಗಿ
ಅಂದಾವೆ ಹೋಯಿತಲ್ಲೊ
ನಗುತಿದ್ದ ಮಲ್ಲಿಗೆಯ ಮಕದಲ್ಲಿ ಕಳೆಗುಂದಿ
ಚಂದಾವೆ ಹೋಯಿತಲ್ಲೊ
ಬಡವನ ದನವೊಂದು ಸಗಣಿ ಇಕ್ಕಾದೆ
ನೆಲ ವ ತಾರಿಸಲಿಲ್ಲ
ಮದುವೆಯ ಮನೆಯಲ್ಲಿ ವಡವೇಯ ಮಾತೇರಿ
ಹಸೆಗೆ ಕೂರಿಸಲಿಲ್ಲ
ಅನ್ನ ನೀಡದೆ ಹೋದ ನೂರಾರು ದೇವರು
ಹೋದಾವು ಬಿದ್ದಾವು ಪಾಳು ಬಾವಿ
ಅನ್ನ ನೀಡದ ದೊರೆಯ ದರಬಾರು ನಿರುವಾದು
ಬಡಜನ ಬುಡುತಾರೆ ಬಾಯಿ ಬಾಯಿ
ವಟ್ಟೆಗಿಲ್ಲದ ಜನರ ವಣನೆತ್ತಿ ಮ್ಯಾಲೇರಿ
ಕುಣಿಯುತ್ತ ಬರುತಾವೆ ಕರೆಬಾಣ
ಯಾರಾನ ಕದ್ದಾರೆ ಮರುಮಾತು ಕೊಟ್ಟಾರೆ
ಬಯಲಲ್ಲಿ ನ್ಯಡೆಸವರೆ ಕತ್ತಿವರಸೆ
ಸುತ್ತಮುತ್ತ ಹಸಿರು ಮಳೆ
ಬೆಳೆಯುತಾರೆ ಬೆಂಕಿ ಬೆಳೆ
ಕಪ್ಪು ಜನರ ತಲೆಯಮ್ಯಾಲೆ
ಬಿಳಿಬಿಳಿ ಮಡಕೆ
ಪಾತಾಳದ ಆಳದಲ್ಲಿ
ಭರವಸೆಗಳ ಕೋಳದಲ್ಲಿ
ನರಳುತಾದೆ ಉರುಳುತಾದೆ
ಜನರ ಜಂಗುಳಿ
ಈ ಬಾಳಿನ ಗೋಳನೆಲ್ಲ
ಗುಡಿಸು ಬಾರೋ ಮಳೆರಾಯ
ಆಕಾಸವ ಬಗೆದು ಬಾರೊ
ಸುಕಪ್ರೀತಿಯ ಬೆಳಕು ತೋರೊ
ಸುತ್ತ ಬಿಗಿದ ಬೇಲಿಯನ್ನು
ಬಿಳಿಸು ಬಾರೊ ಮಳೆರಾಯ
ಹುಯ್ಯೊ ಹುಯ್ಯೊ ಮಳೆರಾಯ
ಎದೆಗಳ ಕಡಲು ಬತ್ತೋದೊ
ಬಡವರ ಕಣ್ಣಲ್ಲಿ ನೀರಿಲ್ಲ
ಹುಯ್ಯೊ ಹುಯ್ಯೊ ಮಳೆರಾಯ
ಜನ ಸುತ್ತ ಮುತ್ತ ನೋಡ್ತರೆ
ಆಕಾಸ ನೋಡ್ತರೆ
ಬಡವರ ಮನೆ ಗುಂಡಿ ಬಿಂದ್ಗೆ
ಹಂಡೆ ಕಡಾಯಿಕಡ್ಗ ಎಲ್ಲ
ಯಜಮಾನ್ರ ಮನೆ ಸೇರ್ಕಂಡೊ
ರಾತ್ರಿ ಹಗ್ಲು ಅನ್ನಂಗಿಲ್ಲ
ಜೀವುಕ್ಕೆ ಗ್ಯಾರಂಟಿ ಇಲ್ಲ
ಜಮೀನ್ದಾರ್ರ್ ಮನೆ ಸುತ್ತ
ಗವ ಅನ್ನೊ ರಾತ್ರಿವೆಳ್ಗೆ
ಎಲ್ಲೆಲ್ಲೂ ಕಪ್ಪು ಜನ
ಡೋಲ್ ಬಡ್ಕಂಡು ಪದ ಯೇಳ್ತಾ ಅವ್ರೆ
ಮಳೇ ಬರ್ದೇ ಇದ್ರೇನೆ ಚಂದಾ
ಅನ್ನಂಗೆ ಕುಣಿತಾ ಅವ್ರೆ
ಹುಯ್ಯೊ ಹುಯ್ಯೊ ಮಳೆರಾಯ
ಹೂವಿನ ತ್ವಾಟಕೆ ನೀರಿಲ್ಲ
ಚಂಡೂವಿನ ತ್ವಾಟಕೆ ನೀರಿಲ್ಲ
ಬೀದಿಯ ನಲ್ಲೀಲಿ ನೀರಿಲ್ಲ
ನಲ್ಲೀಗ್ ಕುಡಿಯಾಕ್ ನೀರಿಲ್ಲ
ಬಾರಪ್ಪೋ ಮಳೆರಾಯ
ನೀ ಬಂದುಯ್ಯೋ ಮಳೆರಾಯ
ಜನ ಕಾಲಿಗಡ್ಗೆ ತಪ್ಲೆ ಯಿಡಕಂಡು
ಅನ್ನ ನೀರು ವುಡಿಕಂಡು
ಬೀದ್ ಬೀದಿ ಸುತ್ತಾ ಅವ್ರೆ
ಯಾರಾನ ಯಾವ್ದಾನ ಗ್ವಾಡೆ ಕ್ಯಳಗೆ ಕುಂತಿದ್ರೆ
ಗಲ್ಲೀಲಿ ನಿಂತಿದ್ರೆ
ಓಡ್ ಬಂದು ಅವುರನ್ನ ಗದುರ್ಸಿ
ಗ್ವಾಮಾಳೆ ಯಿಡ್ದು
ಯಂಗುಸ್ರಾದ್ರೆ ಮಡ್ಲು ಕಾಯಿ ತಡ್ಕಿ
ಗಂಡುಸ್ರಾದ್ರೆ ಚಡ್ಡಿ ಚೋಬ್ ತಡ್ಕಿ
ಆಮ್ಯಾಲೆ ಬುಡೊರು ಒಂದಷ್ಟು ಜನ
ಎಲ್ಲೆಲ್ಲೂ ಅವ್ರೆ ಅವ್ರ ಮಕವೆ

– ೨ –

ಒಂದಿನ ಭರ್ರೋ ಅಂತ ಮಳೆ ಹುಯ್ತದೆ
ಕದ ಅಂಚಿನ ತೂತ್ನಿಂದ
ಮಿಂಚು ಕುಕ್ತದೆ
ಗುಡ್ಗು ಸಿಡ್ಲು ವಡಿತದೆ
ವಬ್ಬರ ಮಾತು ವಬ್ಬರ್ಗ್ ಕೇಳ್ಸಲ್ಲ
ಮಳೆ ಜೋರಾಗಿ ಬೀದಿಗಲ್ಲೀಲೆಲ್ಲ ಆಳೆತ್ರ ಹರೀತಿದ್ದಂಗೆ
ಮನೆ ಮ್ಯಾಲೂ ನುಗ್ ಬುಡ್ತು
ನಾನಂತೂ ಬಟ್ಟೆತರಾ ನ್ಯಂದೋದೆ
ಮನೆ ಮ್ಯಾಗಳ ನೀರು ರವ ರವಷ್ಟೇ ಇಂಗ್ತಿದ್ದಂಗೆ
ಕದಾನೂ ಯಾರೋ ಬಡಬಡ
ಬಡಿಯಾಕ್ ಸುರುಮಾಡುದ್ರು
ಅದ್ರ ಜತ್ಗೆಕಿಟ್ಗೆಸೂರಿನ ಅಂಚು
ಮನೇಲಿ ಇದ್ದ ಬದ್ದ ಕಂಚು
ದಡದಡ ಅನ್ನಾಕ್ ತಿರಿಕಂಡೊ
ಕಬ್ಬುಣದ ಬೂಟಿನ ಸದ್ದು
ಫಳಾರ್ ಅನ್ನೋ ಗುದ್ದು
ಮಳೆನೀರು ನನ್ ನೀರು
ನಾನು ನ್ಯಲುಕ್ ಕಚ್ಚಂಡ್ ಬುಟ್ಟೆ
ನತ್ತೀ ಮ್ಯಾಗಳ ಅಂಚು ಕದ ಕಿಟ್ಗೆ ಕಡೀಂದ
ನಾಲ್ಕ್ ಜನ ನ್ಯಂದೋಗಿರೋ ಮನೇವಳೀಕೆ
ಪುದೀರ್ನೆ ತೂರ್ ಬಂದ್ರು
ವಬ್ಬೊಬ್ಬರ್ಗು ಮೂರ್ ಮೂರ್ ಕಣ್ಣು
ಕೆಂಪು ಬಿಳೆ ಹಸ್ರು ರವರವ ಉರಿತವೆ
ಬಂದೋರು ಕುಂತಿದ್ದೋನ್ ಮುಂಗೈಯಿಡ್ಕಂಡು
ಕೈ ಉಳ್ಕಂಗೆ ನುಲ್ಜಿ ತ್ಯಾಂಕ್ಸೂ ಅಂದ್ರು
ಗುರ್ತು ಕೂನು ಇಲ್ದೋರು
ನಂಗೊಂದೂ ಗೊತ್ತಾಗ್ದೆ ಈಕ್‌ಮೆಟ್ಟಂಗಾದೆ
ಐದು ವರ್ಷದ ಹಿಂದೆ ಓಟಿಗೆ ಬಂದೋರು
ನೋಟನ್ನು ಕೊಟ್ಟೋರು ಅಲ್ಲವೇನೊ
ಕೊಟ್ಟ ಸಾಲವ ಜನರು ಯಿಂದಕ್ಕೆ ಕೊಡದಿರಲು
ಕೈಕಾಲು ಮುರಿಯೋರು ಅಲ್ಲವೇನೊ
ಮಾತು ಕೇಳದ ಜನರ ನೇತು ಹಾಕಲು ಮರಕೆ
ಹಾವಿನ ಹಗ್ಗವ ತಂದವರು
ಮಂತ್ರಿ ಮಾನ್ಯರ ಜೊತೆಗೆ ತಂತ್ರವ ಮಾಡೋರು
ಚೂರಿಯ ಗೆಳೆಯರು ಅಲ್ಲವೇನೊ
ಗಾಂಧೀ ಮಹಾತ್ಮನ ವಾರಸುದಾರರು
ರಾಮ ನಾಮವ ಜಪಿಸಿ ಬಂದರಲ್ಲೊ
ಕಚ್ಚೆ ಟೋಪಿಯ ಒಳಗೆ ಹೆಗಲ ಚೋಳಿಗೆ ತುಂಬ
ಬಡವರ ತಲೆಗಳ ತಂದರಲ್ಲೊ
ವಂಡು ಅಂತ ಕೈ ಸನ್ನೆ ಮಾಡದ್ರು
ನಾ ಏಳ್ಳಿಲ್ಲ ತಲೆ ಅಳ್ಳಾಡುಸ್ದೆ
ಈ ನನ್‌ಮಕ್ಳು ಯಿಂಗಾದ್ರೆ ದಾರಿಗೆ ಬರಲ್ಲ
ಅಂತ ವಳಗಿಂದ ಬೀದಿಗೆ ತಂದ್ರು
ಅಲ್ಲಿ ನಾಗ್ರಾವು ಹಸ್ರಾವು ಯಬ್ಬಾವುಂತರ
ನೀರು ನುಲ್‌ಕಂಡ್ ಹರೀತದೆ
ನನ್ ಮಯ್ಯಿಂದ ರಕ್ತ ಯಿಂಕಿಂಕ್ರಾನೆ
ತೊಟ್ಟಿಕ್ಕಿ ಹರ್ಯೋ ನೀರು
ಬಣ್ಣಾ ಏರ್ತಾ ಅದೆ
ಆದಿ ಬೀದೀಲಿ ಆಡೋ ಹುಡುಗರ
ಪದ ಕೇಳುಸ್ತಾ ಅದೆ
ಬನ್ನಿರಿ ಆಯನ ಆನೇಕಲ್ಲ
ಬನ್ನಿರಿ ಆಡಾನ ನೀರಾಟ
ಗೆಳೆಯರೆಲ್ಲಾ ಕೂಡಾನ
ಕಪ್ಪೆ ಚಿಪ್ಪು ಆಡಾನ
ಕೈಲೇ ಬಾವಿ ತೋಡಾನ
ನೀರು ಬಂದಾವ ನೋಡಾನ
ಬನ್ನಿರಿ ಆಯನ ಆನೇಕಲ್ಲ
ಬನ್ನಿರಿ ಆಡಾನ ನೀರಾಟ
ಏನಿದೇನು ಚೀರಾಟ
ಏನಿದೇನು ಹೋರಾಟ
ಅಂಗನ್ಕಂಡು ವುಡುಗ್ರೆಲ್ಲ
ಬಿದ್ದಂಬೀಳ ವಾಟವಡುದ್ಬುಟ್ರು
ನನ್ನಿವ್ರು ಕುಯ್ದು ಒ‌ಆಲ್ ಆಕ್ತಾ ಅವ್ರೆ ಅನ್ನುಸ್ತು
ನನ ಎಳ್ದ್‌ಕಯ್ಯಿ ಎಳ್ದ್‌ಕಾಲು
ಇಪ್ಪತ್ ಬೆಳ್ಳು ಸಾವ್‌ರಾರ್ ಕೂದ್ಲು
ಮೂಗು ಬಾಯಿ ಮೂವತ್ತೆಳ್ಡ್ ಹಾಲ್ಲುಗೊ
ಗಾಳೀಲಿ ಆಕಾಸದ ತುಂಬಾ ಹಾರ್ತಾ ಅವೆ
ನನ್ ಮೂಳೇನ ಇವ್ರ ಬೂಟ್ಗುಳು
ತುಳ್ದು ಪುಡ್‌ಪುಡಿ ಮಾಡ್ತಾ ಅವೆ
ನನ್ಗೆ ರೋಸೋಯ್ತು
ಕಲ್ತಿದ್ದು ಕೇಳಿದ್ದು ಯಲ್ಲಾ ಮರ್ತೋಗಿ
ಉಳ್ಕಂಡಿತ್ತೊಂದೇ ಮಾತು
‘ಧಿಕ್ಕಾರ ಧಿಕ್ಕಾರ’
ಅಂತ ಅವ್ರು ಯದ್ರಿ ಪದ್ರಗುಟ್ಟಂಗೆ ಕಿರುಚ್‌ಬುಟ್ಟೆ
ಅವ್ರು ‘ಎಲಾ ಇವ್ನ,’ ಅನ್ಕಂಡು
ಒಂದು ಉದ್ದಾಗಿರೋ ದಬ್ಳ ಟೈನಾದಾರ ತಗಂಡು
ಎಳ್ಡ್ ತುಟೀನ ಸೇರ್ಸಿ ವಲದ್ಬುಟ್ರು
ಬಾಯ್ ಬೀಗ ಹಾಕ್ಬುಟ್ರು
ಗ್ವಾಮಾಳೆ ಹಿಂಡುತಾರೆ
ತಲೆ ಬುಲ್ಡೆ ಜಜ್ಜುತಾರೆ
ಮಾತಿಲ್ಲದ ಗಂಟಲಿಗೆ
ವಲೆದುಕೊಂಡ ತುಟಿಗಳಿಗೆ
ಅದುಮಿ ಅದುಮಿ ತುರುಕುತಾರೆ
ಅನ್ನದ ಮಿದಿಕೆ
ಹುಟ್ಟಿದ ನಿರ್ವಾಣಕ್ಕೆ
ಸೆಣಬಿನಂಬ ಸುತ್ತಿ ಬಿಗಿದು
ದರದರನೆ ಎಳೆಯುತಾರೆ
ಕತ್ತಲೇಲಿ ಕೊಳ್ಳಿದೆವ್ವ
ಕೈಗಳಲ್ಲಿ ಬೆಳ್ಳಿಕತ್ತಿ
ಸುತ್ತ ನಿಂತು ಕುಣಿಯುತಾರೆ
ಕಾಡು ಕಲ್ಲು ಗಿಡ ಗುಡ್ಡ ಯಲ್ಲಾ ದಾಟುದ ಮ್ಯಾಲೆ
ಒಂದು ಬಟ್ಟಬಯಲಿಗೆ ಯಳಕಂಬಂದ್ರು
ಆ ಬಯ್ಲಿನ ಸುತ್ತಮುತ್ತ ತರತರದ ತ್ವಾಟಗಳು
ತಗ್ಗಿ ಬಗ್ಗಿ ನಗ್ತ ನ್ಯಗೀತ ನಿಂತವೆ
ಅವ್ರು ಕತ್ತೀ ತ್ವಾಟಕೆ ಹೋದಾರು
ಅಲ್ಲಿ ಚಿನ್ನದ ಕತ್ತಿ ತಂದಾರು
ಬಾಕಿನ ತ್ವಾಟಕೆ ಹೋದಾರು
ಬೆಳ್ಲಿಬಾಕ ತಂದಾರು
ಸೀಮೆಣ್ಣೆ ಬಾವಿಗಾಳು ಅಲ್ಲಿ
ಬಂದೂಕ ಬೆಳೆದವರೆ
ದತ್ತೂರಿ ಗಿಡಗಾಳು ಅಲ್ಲಿ
ಮುದ್ದುಗುಂಡು ಉದುರುತಾವೆ
ಬಂದೋರೆ ಚಿನ್ನದ ಕತ್ತೀಲಿ ನನ್ ತಲೇನ
ನುಣ್ಣುಗೆ ಬೋಳುಸ್ತಾರೆ
ರಕ್ತಾ ತೊಟ್ಟಿಕ್ತಿರೋ ಹಣೆಗೆ ಮಂತ್ರ ಯೇಳ್ಕಂಡು
ಮೂರ್ನಾಮಾ ಇಕ್ತಾ ಆವ್ರೆ
ನನ್ನ ಅಂತರ ಮಕನಾಗಿ ಮಲುಗ್ಸಿ
ಚಿನ್ನದ ಕತ್ತೀಲಿ ನನ್ನೆದೆ ಮ್ಯಾಗಳ
ಕೂದಲ್ನ ಬೋಳ್ಸಿ
ಬೆಳ್ಳಿ ಬಾಕೇಲಿ ಯದೇನ
ತೂತ್ ಮಾಡುದ್ರು
ರಕ್ತ ಬುಳ ಬುಳನೇ ಬತ್ತಿದಂಗೆ ಬೋಡೋಗಿ
ಒಂದು ಸಸಿ ತಂದು ಅಲ್ಲಿ ನೆಟ್ ಬುಟ್ರು
ಆ ಸಸಿ ನನ ಮೈತುಂಬ ಬೇರ್ಬುಟ್ಟು ಅರಳ್ತಾ ಅದೆ
ಅದು ಬಲ್ತು ಕ್ವಂಬೆ ರ್ಯಂಬೆ ವೂವ ಕಾಯಿ ಅಣ್ಣು
ಬುಡ್ತಿದ್ದುಗೆ ನನ ಉಸ್ರು ವಂಟೋಯ್ತು
ಒಂದಿನ ನಾನು ಸುಳ್ದಾಡ್ತಿದ್ದೆ
ಕಣ್ಮಿಲ್ಲ ಕಾಲಿಲ್ಲ ಮೈಯಿಲ್ಲ ಉಸ್ರಿಲ್ಲ
ಅದೇ ಬಯ್ಲು ಅದೇ ಮರ
ಅಡೆ ಜನ ಗಿಟುಕಾಸ್ಕೊಂಬುಟ್ಟವ್ರೆ
ನಡ್ವೆದ್ವಡ್ಡಾಗೊಂದ್ ಸ್ಟೇಜ್ ಹಾಕವ್ರೆ
ಅದ್ರ ಮ್ಯಾಲೆ ದ್ವಡ್ ದ್ವಡ್ಡೋರು
ನಗನಗ್ತಾ ಕುಂತವ್ರೆ
ಸುತ್ತಮುತ್ತ ಜನವೆಲ್ಲ ಮೂಳೆ ಚಕ್ಳ ಬಡ್ಕಂಡು
ಕಚ್ಚರುಬೆ ಕಟ್ಟಕಂಡು
ಪದಾ ಯೇಳ್ತಾ ಅವ್ರೆ
ತಾಳಾ ಮೇಳ ಹಾಕ್ಕಂಡು
ಕುಣ್ಣು ಕುಪ್ಪಳುಸ್ತಾ ಅವ್ರೆ
ಇವ್ರ ಸೇವೆ ದೊಡ್ಡಾದು
ಯಸ್ರಯೆತ್ತಿ ಕೊಂಡಾಡಿ
ಇವ್ರ ತ್ಯಾಗ ದೊಡ್ಡಾದು
ಸ್ಟೇಜಿನ ಮ್ಯಾಲಕ ಕರೆತನ್ನಿ
ಇವರ ಕಾರು ಬಂಗಾರ
ಗಂಧದ ಹಾರ ಹಾಕೀರಿ
ಇವರ ಬಂಗಾಲೆ ದೊಡ್ಡಾದು
ಸೀಟಿನ ಧೂಳಾ ವರಸೀರಿ
ಇವರ ಜೇಬು ಅಗಾಲ
ಭಕ್ತಿ ಭಜನ ಮಾಡೀರಿ
ಇವುರು ಮಗಳು ದೊಡ್ಡೋಳು
ಮಾವ ದೇವ ಅನ್ನೀರಿ
ಇವ್ರ ಮೈಯಿ ದಪ್ಪಾದು
ಹೊತ್ತುಕೊಂಡು ಕುಣಿಯೀರಿ
ಮ್ಯಾಲೆ ಕುಂತಿರೋ ನಮ್ಮಪ್ಪದಿರ ಪಾದಕೆ ಗೋವಿಂದಾ
ಅವ್ರ ಯೆಂಡಿರ ಪಾದಕೆ ಗೋವಿಂದ
ಮಕ್ಕಳ ಪಾದಕೆ ಗೋವಿಂದ
ಅವ್ರ ತಾತನ ಪಾದಕೆ ಗೋವಿಂದ
ಮುತ್ತಾತನ ಪಾದಕೆ ಗೋವಿಂದ
ಈತರ ಇವ್ರು ಕುಣೀತಿದ್ರೆ
ಮ್ಯಾಲಿರೋ ಇವುರ್ನ ನೋಡಿ
ಆನಂದ ಪಟ್ಕಂಡು ತಲೆದೂಗ್ತಾ ಅವ್ರೆ
ಇವ್ರ ಭಯಾ ಭಕ್ತೀನ
ಮನಸಾರೆ ಮೆಚ್ಚುತ್ತಾ ಅವ್ರೆ
ನಾನು ‘ಎಲಾ ಇವ್ನ ’ ಅನ್ಕಂಡು
ಸ್ಟೇಜಿನತಕಾ ಹೋದೆ
ಅಲ್ಲಿ ದ್ವಡ್ ದ್ವಡ್ ಮನಸ್ರಯಿದ್ಗಂಡೆ
ಮರೇಲಿ ಯಾರೋ ಕುಂತಿದ್ರು
ಅವುರನ್ನ ನೋಡ್ದೇಟ್ಗೆ ನನ್ಗೆ
ಭೀತಿ ಬಡೀತು ಮಂಕು ಕವೀತು
ಅಲ್ಲೆ ದ್ವಡ್ಡ ಮನಷ್ರಿಂದೆ
ಅಲ್ಲೇ ಕುಂತವರೆ ಅವರು
ಅಲ್ಲೇ ಕುಂತವರೆ
ಬೇವಿನ ಸೊಪ್ಪು ಹಾಸವರೆ
ಬೇವಿನ ಸೊಪ್ಪು ಹೊದ್ದವರೆ
ಹಳೇ ಕ್ಯರವ ಕಾಯೀಸಿ
ಮಯ್ಯಿಗೆ ಬರೆಯ ಎಳೆಯೋರು
ಸೈಜು ಕಲ್ಲು ಹೊರಸೋರು
ಹುಣಸೆ ಮರಕೆ ಕಟ್ಟೋರು
ಅಲ್ಲೆ ಕುಂತವರೆ ಅವರು
ಅಲ್ಲೇ ಕುಂತವರೆ
ನಿಂಬೇ ಹಣ್ಣು ಮಡಗವರೆ
ಬಾಣ್ತಿ ಕಯ್ಯ ಮಡಗವರೆ
ಮೂಳೇ ಜೋಳಿಗೆ ಹಾಕವರೆ
ಮೀಸೆ ಮರೆಯಲಿ ನಗುತಾರೆ
ದೊಡ್ಡ ಮನುಷರ ಹಿಂದವರೆ
ಅಲ್ಲೇ ಕುಂತವರೆ ಅವರು
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.