ಸಂಪಿಗೆ ಮರ

ಕೆಲವು ತಿಂಗಳ ಹಿಂದೆ ನನ್ನ ಕನಸಿನಲ್ಲಿ ಒಂದು ಸಂಪಿಗೆ ಮರ ಕಾಣಿಸಿಕೊಂಡು ‘ನನ್ನ ಬಗ್ಗೆ ಒಂದು ಕತೆ ಬರಿ’ ಎಂದು ಹೇಳಿತು. ಇದು ಯಾವ ಸಂಪಿಗೆ ಮರ ಎಂದು ಯೋಚಿಸಿದೆ. ಸೊರಬದಲ್ಲಿ ನಮ್ಮ ಮನೆಯ ಹಿತ್ತಲಿನಲ್ಲಿ ಒಂದು ಸಂಪಿಗೆ ಮರವಿತ್ತು. ಅದರ ಆಚೆಗೆ ಲಂಟಾನ ಗಿಡಗಳು ತುಂಬಿದ್ದವು. ನನ್ನ ತಮ್ಮ ಹತ್ತು ವರ್ಷದ ಹುಡುಗನಾಗಿದ್ದಾಗ, ಲಂಟಾನ ಹೂವುಗಳನ್ನು ಕೀಳುತ್ತ ಒಂದು ಸಂಜೆ ಹಿತ್ತಲಿನ ಸಂಪಿಗೆ ಮರದ ಹತ್ತಿರ ನಿಂತಿದ್ದನಂತೆ. ಆಗಲೇ ಕತ್ತಲಾಗುತ್ತಿತ್ತು. ಏನೋ ಸದ್ದಾಯಿತು ಅಂತ ನಮ್ಮ ತಾಯಿ ತಲೆಯೆತ್ತಿದಾಗ ಒಂದು ಹುಲಿ ನನ್ನ ತಮ್ಮನ ಮೇಲೆ ಹಾರಿಹೋಯಿತಂತೆ. ತೊಳೆಯುತ್ತಿದ್ದ ಪಾತ್ರೆಗಳನ್ನು ಅಲ್ಲಿಯೇ ಬಿಟ್ಟು ಮಗನನ್ನು ನಮ್ಮ ತಾಯಿಯು ಒಳಗೆ ಎಳೆದುಕೊಂದು ಹೋದರಂತೆ. ಹುಲಿ ಯಾವ ಅಪಾಯವನ್ನೂ ಮಾಡದೆ ಹಾರಿಹೋದದ್ದು ಆಶ್ಚರ್ಯದ ಸಂಗತಿಯಾಗಿ, ನನ್ನ ನೆನಪು, ಸೊರಬದ ಸಂಪಿಗೆ ಮರದ ಸುತ್ತ ಸುತ್ತಿಕೊಂಡಿದೆ. ಇನ್ನೊಂದು, ಸಾಗರದ ಸಂಪಿಗೆ ಮರ ನಾನು ಇಪ್ಪತ್ತು ವರ್ಷದ ತರುಣನಾಗಿದ್ದಾಗ, ಆ ಮರದ ಕೆಳಗಿದ್ದ ಬಟ್ಟೆ ಒಗೆಯುವ ಕಲ್ಲಿನ ಮೇಲೆ, ನಾನು ಆರಾಧಿಸುತ್ತಿದ್ದ ಮೋಹಿನಿಯೊಬ್ಬಳ ಜೊತೆಗೆ ಕೂತು, ನಾವಿಬ್ಬರೂ ಅಷ್ಟಮಿಯ ಚಂದ್ರನನ್ನು ನೋಡಿದ್ದೆವು. ಇನ್ನೂ ಅನೇಕ ಊರುಗಳ ಸಂಪಿಗೆ ಮರಗಳನ್ನು ನೆನಪು ಮಾಡಿಕೊಂಡೆ. ನಾನು ಈ ಮನೆಗೆ ಬರುವುದಕ್ಕೆ ಮುಂಚೆ ಇದ್ದ, ಬಾಡಿಗೆ ಮನೆಯ ಅಂಗಳದಲ್ಲಿದ್ದ ಸಂಪಿಗೆ ಮರದ ನೆನಪಾಯಿತು. ಆ ಸಂಪಿಗೆ ಮರದ ಕೆಳಗಿದ್ದ ಕಲ್ಲುಬೆಂಚಿನ ಮೇಲೆ ನಾನು ಆಗಾಗ ಕೂರುತ್ತಿದ್ದೆ. ಆ ಮನೆಯನ್ನು ಬಿಡಬೇಕಾದ ಹಿಂದಿನ ರಾತ್ರಿ, ಅಂಗಳದಲ್ಲಿದ್ದ ಆ ಸಂಪಿಗೆ ಮರದ ಕೆಳಗೆ ಕೂತು ಅದರ ಜೊತೆಗೆ ಮಾತಾಡಿದ್ದು ನೆನಪಾಯಿತು. ಅದೇ ಮರ ಇರಬೇಕು ಅಂದುಕೊಂಡು ಅದರ ಬಗ್ಗೆ ಏನು ಬರೆಯಲಿ ಎಂದು ಯೋಚಿಸುತ್ತಿದ್ದೆ. ಅದಾದ ಮೇಲೆ ಇನ್ನೊಂದು ರಾತ್ರಿ ಇನ್ನೊಂದು ಕನಸು ಬಿತ್ತು. ಅದೇ ಮರ ಮತ್ತೆ ಕಾಣಿಸಿಕೊಂಡು “ನಾನು ಬಸವನಗುಡೀಲಿ ನೀನಿದ್ದ ಹಳೆ ಮನೆಯ ಮರ” ಎಂದು ನೆನಪು ಮಾಡಿತು. “ಈಗ ಕೆಲವು ತಿಂಗಳ ಹಿಂದೆ ಕನಸಿನಲ್ಲಿ ಬಂದದ್ದು ನೀನೇ ಏನು?” “ಹೌದು” “ನಿನ್ನ ಬಗ್ಗೆ ಕತೆ ಬರೆಯಬೇಕೆಂದು ಕೇಳಿದ್ದಿ. ನಿನಗೇಕೆ ಅಂತಹ ಆಸೆ ಹುಟ್ಟಿತು?” “ಅಯ್ಯಾ ಕತೆಗಾರ, ನಿನ್ನ ಬಗೆ ಎಷ್ಟೋ ಕತೆಗಳನ್ನು ಬರೆದಕೊಂಡಿದ್ದೀಯಲ್ಲ, ಏಕೆ?” ಎಂದು ಆ ಸಂಪಿಗೆ ಮರ ಮರುಸವಾಲು ಹಾಕಿತು. “ನಾನು ಸತ್ತರೂ ಜನರ ನೆನಪಿನಲ್ಲಾದರೂ ಅಮರವಾಗಿರುವ ಆಸೆಯಿಂದ ಅದಕ್ಕಾಗಿ ಮಾಡುವ ವ್ಯರ್ಥ ಪ್ರಯತ್ನಗಳೇ ನಾನು ಬರೆಯುವ ಕತೆಗಳು.” “ಅದೇ ಕಾರಣಕ್ಕಾಗಿ, ನನ್ನ ಬಗ್ಗೆಯೂ ಒಂದು ವ್ಯರ್ಥ ಪ್ರಯತ್ನ ಮಾಡು” ಎಂದು ಆ ಸಂಪಿಗೆ ಮರ ಹೇಳಿತು. “ನಾನು ಈಗಾಗಲೆ ನಿನ್ನ ನೆನಪನ್ನು ಒಂದೆರಡು ಕತೆ ಮತ್ತು ಪದ್ಯಗಳಲ್ಲಿ ಬರೆದಿದ್ದೇನೆ” ಎಂದು ಹೇಳಿದೆ. “ಹೌದು, ಅದಕ್ಕಾಗಿಯೆ ಒಂದು ಕತೆ ಬರಿ ಅಂತ ಹೇಳ್ತಿರೋದು. ಈ ಕತೆಯಲ್ಲಿ ನಾನೇ ಪ್ರಧಾನ ಪಾತ್ರವಾಗಿರಬೇಕು. ಹಾಗೆ ನೀನು ಬರೆದರೆ, ನನ್ನ ಬಗ್ಗೆ ನಿನ್ನ ಪ್ರೀತಿಯನ್ನು ವ್ಯಕ್ತಪಡಿಸಲೇಬೇಕಾಗುತ್ತದೆ. ನಿನಗೆ ಭಾವನೆಗಳಿರಬಹುದು. ಅವು ಬೇರೆಯವರಿಗೆ ಗೊತ್ತಾಗಬೇಕಾದರೆ, ಆ ಭಾವನೆಗಳನ್ನು ಹೇಳಿಕೊಂಡರೆ ಮಾತ್ರ ಗೊತ್ತಾಗುವುದು ಅಲ್ಲವೆ? ವ್ಯಕ್ತವಾದ ಭಾವನೆ ಸಂತೋಷ ಕೊಡುವ ಹಾಗೆ, ಅವ್ಯಕ್ತವಾದ ಭಾವನೆ ಸಂತೋಷ ಕೊಡುವುದಿಲ್ಲ ಅಲ್ಲವೆ? ಅದಕ್ಕಾಗಿಯೇ ನಾವು ಸಾಹಿತ್ಯವನ್ನು ಓದುತ್ತೇವೆ ಅಲ್ಲವೆ? ನೀನು ನನ್ನನ್ನು ಸಾಯಿಸಬಾರದು ಎಂದು ಬಯಸುವುದಿಲ್ಲವೆ? ನಾನು ಸತ್ತರೆ ನನ್ನನ್ನು ಬದುಕಿಸುವ ನಿನ್ನ ಸಂಜೀವಿನಿ ವಿದ್ಯೆಯನ್ನು ಪ್ರಯೋಗ ಮಾಡು” ಎಂದು ಆ ಸಂಪಿಗೆ ಮರ ಹೇಳಿತು. ಎಲಾ! ಸಂಪಿಗೆ ಮರವೆ ಅಂದುಕೊಂಡೆ. “ಸಾಯುವುದಕ್ಕೆ ಮುಂಚೆ ಪ್ರೇತದ ಹಾಗೆ ಕಾಣುತ್ತಿರುವ ನಿನಗೆ ಜೀವನ್ಮುಕ್ತಿ ಬೇಕಾಗಿದೆ ಅಲ್ಲವೆ? ನಿನ್ನನು ಒಂದು ಶುದ್ಧ ಪ್ರತಿಮೆಯಾಗಿ ಕಡೆದು ನಿಲ್ಲಿಸುತ್ತೇನೆ. ಶುದ್ಧ ಪ್ರತಿಮೆಯಾದರೆ ನೀನು ಮತ್ತೆ ಹುಟ್ಟುವುದಕ್ಕೆ ಸಾಧ್ಯವಿಲ್ಲ. ನಿನ್ನ ರೆಂಬೆಗಳ ಮೇಲೆ ಅದೇ ಕಾಗೆಗಳ ಗೂಡು, ಅದೇ ಕೋತಿಗಳ ಚೆಲ್ಲಾಟ ಇರುತ್ತೆ. ನಿನ್ನ ರೆಂಬೆಗಳು ಎಲೆಕ್ಟ್ರಿಕ್ ತಂತಿಗೆ ತಾಗುತ್ತಲೆ ಇರುತ್ತವೆ. ವಿದ್ಯುತ್ ಇಲಾಖೆಯವರು ಆ ರೆಂಬೆಗಳನ್ನು ಕದಿಯುತ್ತಲೇ ಇರುತ್ತಾರೆ. ನಿನಗೆ ಬದಲಾವಣೆಯೇ ಇರುವುದಿಲ್ಲ” ಎಂದು ನಾನು ಹೇಳಿದೆ. “ನೀನು ಸಾಹಿತ್ಯ ತತ್ವವನ್ನು ಮಾತಾಡಬೇಡ. ಸಾಹಿತ್ಯವೇ ಬೇರೆ, ಸಾಹಿತ್ಯ ತತ್ವವೇ ಬೇರೆ. ಸಾಹಿತ್ಯ ತತ್ವ ಸಾಹಿತ್ಯ ರಚನೆಯ ಕ್ರಿಯೆಯಲ್ಲಿ ಬದಲಾಗಿ ಹೋಗುತ್ತೆ” ಎಂದಿತು ಮರ. ನನ್ನ ನಿದ್ದೆ ಕೆಟ್ಟಿತು. ಇನ್ನಾದರೂ ಸ್ವಲ್ಪ ಹೊತ್ತು ನಿದ್ದೆ ಮಾಡಬೇಕು ಎಂದುಕೊಂಡು “ಆಗಲಿ ನಾನು ಕತೆ ಬರೆಯುತ್ತೇನೆ” ಎಂದು ಹೇಳಿ ನಿದ್ರೆ ಹೋದೆ.
*
*
*
ಈ ಸಂಪಿಗೆ ಮರ ವರ್ಷಕ್ಕೆ ಎರಡು ಸಲ ಹೂ ಬಿಡುತ್ತಿತ್ತು. ಹೂವುಗಳನ್ನು ಕೊಯ್ದುಕೊಡುತ್ತೇವೆ. ಇಷ್ಟು ದುಡ್ಡು ಕೊಡಿ ಎಂದು ಯಾರ್ಯಾರೊ ಬರುತ್ತಿದ್ದರು. ಅಕ್ಕಪಕ್ಕದ ಮನೆಯ ಹುಡುಗರು ಹೂವು ಕಿತ್ತು ಕೊಳ್ಳುತ್ತೇವೆ ಎಂದು ಕೇಳುತ್ತಿದ್ದರು. ‘ದಿನವೂ ಹೂವು ಕಿತ್ತುಕೊಂಡು, ನಿಮಗೆ ಹೂವು ಮತ್ತು ದುಡ್ಡನ್ನು ಕೊಡುತ್ತೇವೆ’ ಎಂದು ಹೂ ಮಾರುವವರು ಬರುತ್ತಿದ್ದರು. ಒಂದು ದಿನ ನನ್ನ ಭಾವ ಮರ ಹತ್ತಿ ಒಂದು ರೆಂಬೆ ಮುರಿದು ಕೆಳಗೆ ಬೀಳುವುದರಲ್ಲಿದ್ದ. ಇನ್ನೊಂದು ರೆಂಬೆಯ ಆಸರೆ ಸಿಕ್ಕು ಹೇಗೋ ಬಚಾವಾದ. ಎದುರು ಮನೆಯವರ ಮತ್ತು ಅಕ್ಕಪಕ್ಕದ ಮನೆಗೆ ಬಂದವರ ಕಾರುಗಳು ಸಂಪಿಗೆ ಮರದ ನೆರಳಿನಲ್ಲಿ ನಿಲ್ಲುತ್ತಿದ್ದವು. ಕೆಲವೊಮ್ಮೆ ನಾವು ಮನೆಗೆ ಬರುವುದಕ್ಕೂ ಅಡ್ಡಿಯಾಗುವ ಹಾಗೆ ಅವುಗಳನ್ನು ನಿಲ್ಲಿಸುತ್ತಿದ್ದರು. ದೊಡ್ಡ ಸಂಪಿಗೆ ಮರದ ನೆರಳು, ಅರ್ಧ ರಸ್ತೆಯನ್ನು ಮುಚ್ಚುತ್ತಿತ್ತು. ನಾನು ಕಾರಿನವರ ಜೊತೆಗೆ ಅನೇಕ ಬಾರಿ ಜಗಳವಾಡಬೇಕಾಗುತ್ತಿತ್ತು. ಭಿಕ್ಷುಕರು ಬಂದು ಆ ನೆರಳಿನಲ್ಲಿ ಊಟ ಮಾಡುತ್ತಿದ್ದರು. ಮನೆಯ ಕಾಂಪೌಂಡಿನ ಒಳಗೆ ಅಂಗಳದ ಬಲಭಾಗದಲ್ಲಿದ್ದ ಈ ಮರದ ಕೆಳಗೆ ಒಂದು ಗಂಧದ ಗಿದ ಹುಟ್ಟಿಕೊಂದು ಮರವಾಗುತ್ತಿತ್ತು. ಮರದಿಂದ ಸ್ವಲ್ಪ ದೂರದಲ್ಲಿದ್ದ ನೀರಿನ ತೊಟ್ಟಿಯಲ್ಲಿ ಸಂಪಿಗೆ ಎಲೆಗಳು ಬಿದ್ದು, ಕೊಳೆತು ಹೋಗುತ್ತಿದ್ದುದರಿಂದ, ತೊಟ್ಟಿಯನ್ನು ಆಗಿಂದ್ದಾಗ್ಗೆ ಸ್ವಚ್ಛ ಮಾದುವ ಕೆಲಸಕ್ಕೆ ನಾನು ಬೇಸರಿಸಿಕೊಳ್ಳುತ್ತಿದ್ದೆ. ಮರದ ಬೇರು ಹೆಬ್ಬಾವಿನ ಹಾಗೆ ದಪ್ಪದಪ್ಪವಾಗಿ ನೆಲದ ಮೇಲೂ ಕಾಣುತ್ತಿತ್ತು. ಬೇರುಗಳು ಹಾದು ಗೇಟಿನಿಂದ ಮನೆಯ ಬಾಗಿಲವರೆಗೂ ಹಾಕಿದ್ದ ಸಿಮೆಂಟು ಎದ್ದು ಬರುತ್ತಿತ್ತು. ನೀರಿನ ತೊಟ್ಟಿ ಸೀಳು ಬಿಟ್ಟಿತ್ತು. ಬಲಗಡೆಯ ಮನೆಯವರು “ನಮ್ಮ ಕಾಂಪೌಂಡು ಹಾಳಾಗುತ್ತಿದೆ. ಮರ ಕಡಿಸಿ” ಎಂದು ಹೇಳುತ್ತಿದ್ದರು. ಚಳಿಗಾಲ ಶುರುವಾಗುವ ಹೊತ್ತಿಗೆ ಮನೆಯ ಗೋಡೆಯ ತುಂಬ ಕಂಬಳಿ ಹುಳಗಳು ಹತ್ತಿಕೊಂಡು ಬಿಳಿ ಗೋಡೆಯನ್ನು ಕಪ್ಪಾಗಿ ಮಾಡುತ್ತಿದ್ದವು. ಉದುರಿದ ಕಂಬಳಿ ಹುಳಗಳ ಕಾಟದಿಂದ ನಿದ್ದೆ ಮಾಡುವುದೂ ಕಷ್ತವಾಗುತ್ತಿತ್ತು. ಅಂಗಳದ ತುಂಬ ಎಲೆ ಮತ್ತು ಹೂವುನ ಪಕಳೆಗಳು ಉದುರಿ ಅಂಗಳವೆಲ್ಲಾ ಗಲೀಜಾಗಿ ಕಾಣುತ್ತಿತ್ತು. ಎಷ್ತು ಅಂತ ಕಸ ಹೊಡೆಯುವುದು? ಮರದ ರೆಂಬೆಗಳ ತುದಿಯಲ್ಲಿ ಕಾಗೆಗಳು ಗೂಡು ಕಟ್ಟಿಕೊಂಡು ಕ್ರಾ ಕ್ರಾ ಕ್ರಾ ಅಂತ ಬಡುಕೊಳ್ಳುತ್ತಿದ್ದವು. ಕೋತಿಗಳು ಅವುಗಳ ಗೂಡುಗಳನ್ನು ಕಿತ್ತು ಹಾಕಿದಾಗಲಂತೂ ಅವುಗಳ ಅರಚಾಟವನ್ನು ಕೇಳುವುದಕ್ಕಾಗುತ್ತಿರಲಿಲ್ಲ. ಅಲ್ಲದೇ ಕಾಗೆಗಳ ಹಿಕ್ಕೆ, ಅವುಗಳ ಗರಿಗಳು, ಅವು ತಂದು ಹಾಕುತ್ತಿದ್ದ ಮೂಳೆಯ ತುಂಡುಗಳು, ಅವುಗಳಿಗೆ ಮುತ್ತುತ್ತಿದ್ದ ಇರುವೆಗಳು ಹೀಗೆ ಸಂಪಿಗೆ ಮರ ತನ್ನ ಇರವನ್ನು ಜಾಹೀರಾತು ಮಾಡುತ್ತಿತ್ತು. ಸಂಪಿಗೆ ಮರಕ್ಕೆ ಬರುತ್ತಿದ್ದ ಗೊದ್ದಗಳ ಕಾಟ, ಸಂಪಿಗೆಗೆ ಹತ್ತಿದ್ದ ಗೆದ್ದಲು ಇವೆಲ್ಲದರಿಂದ ಮರದ ಬಗ್ಗೆ ಬೇಸರ ಬರುತ್ತಿತ್ತು. ****** ಇಷ್ಟು ಬರೆಯುವ ಹೊತ್ತಿಗೆ ನನಗೆ ಸುಸ್ತಾಗಿತ್ತು. ಕತೆಯನ್ನು ಅಲ್ಲಿಗೇ ಬಿಟ್ಟು ಸ್ನೇಹಿತರ ಜೊತೆಗೆ ಕಾಲ ಕಳೆದು ರಾತ್ರಿ ಹನ್ನೆರಡಕ್ಕೆ ಮನೆ ಸೇರಿ ಊಟ ಮಾಡದೆ ಮಲಗಿದ್ದೆ. ನಿದ್ರೆ ಜೋರಾಗಿ ಬಂದಿತ್ತು. ಅವತ್ತು ಮಧ್ಯ ರಾತ್ರಿಯ ಹೊತ್ತಿಗೆ ಇನ್ನೊಂದು ಕನಸು ಬಿತ್ತು. ಕನಸಿನಲ್ಲಿ ಮತ್ತೆ ಅದೇ ಸಂಪಿಗೆ ಮರ. “ನಿನ್ನ ಕತೆ ಓದಿದೆ” ಎಂದು ಸುಮ್ಮನಾಯಿತು. ಇನ್ನೇನು ಹೇಳುತ್ತದೋ ಎಂದು ಕಾದೆ. ಏನೂ ಹೇಳಲಿಲ್ಲ. “ಹೇಗಿದೆ?” ಎಂದು ಕೇಳಿದೆ. “ನನ್ನಿಂದ ದೊಡ್ಡ ತೊಂದರೆ, ಗಂಡಾಂತರ ಎಂದು ಹೇಳಿದ್ದೀಯ” ಎಂದು ಸಂಪಿಗೆ ಮರ ಹೇಳಿತು. “ಕತೆ ಇನ್ನೂ ಮುಗಿದಿಲ್ಲ” ಎಂದೆ. “ಮುಗಿಯುವುದು ಮುಖ್ಯವಲ್ಲ. ನಿನ್ನ ಧಾಟಿ ಮುಖ್ಯವಾದದ್ದು. ನನ್ನನ್ನು ಸಾಯಿಸಲಿಕ್ಕೆ ಸಮರ್ಥನೆಯನ್ನು ಕೊತ್ತಿದ್ದೀಯೆ ಹೊರತು, ನಾನೇಕೆ ಬದುಕಿರಬಾರದು ಎಂದು ಹೇಳಿಲ್ಲ. ನಿಮ್ಮಂಥವರು ಹೆಚ್ಚಾಗಿರುವುದರಿಂದಲೇ ಮರಗಳೆಲ್ಲ ನಾಶವಾಗುತ್ತಿವೆ” ಎಂದು ಸಂಪಿಗೆ ಮರ ದೂರಿತು. “ಕತೆ ಇನ್ನೂ ಮುಗಿದಿಲ್ಲ”ಎಂದೆ. “ಹೇಗೆ ಮುಗಿಸುತ್ತೀಯ ನನಗೆ ಗೊತ್ತು. ನೀನು ಕತೆ ಮುಗಿಸುವುದಿಲ್ಲ. ನನ್ನನ್ನು ಮುಗಿಸುತ್ತೀಯ. ಮನುಷ್ಯರಿಗೆ ಮನುಷ್ಯರಿಂದ, ಮರಗಳಿಂದ, ಪ್ರಾಣಿಗಳಿಂದ, ನೆಲದಿಂದ, ಆಕಾಶದಿಂದ, ಗಾಳಿಯಿಂದ ಲಾಭ ಬೇಕೇ ಹೊರತು ಅವುಗಳ ಅಸ್ತಿತ್ವ ಬೇಕಾಗಿಲ್ಲ. ನಾವೆಲ್ಲ ಪರಸ್ಪರ ಜೀವ ಕೊಟ್ಟು ಜೀವ ಪಡೆಯಬೇಕು ಎನ್ನುವ ಅರಿವಿಲ್ಲ. ನೀನು ನನ್ನನ್ನು ನೋಡಿದ ಹಾಗೆ ನಿನ್ನ ಹೆಂಡತಿಯನ್ನೂ ನೋಡುತ್ತೀಯ” ಎಂದು ಸಂಪಿಗೆ ಮರ ಮರ್ಮಘಾತಕ ಮಾತನ್ನಾಡಿತು. ನನ್ನ ಹೆಂಡತಿಯ ಬಗ್ಗೆ ಕೆಲವೊಮ್ಮೆ ನನ್ನ ವರ್ತನೆ ಹಾಗಿರುವುದೇನೂ ನಿಜ : ಆದರೆ ಅದನ್ನು ಸಂಪಿಗೆ ಮರ ಹೇಳಬೇಕಾಗಿರಲಿಲ್ಲ ಅನ್ನಿಸಿತು. ನನ್ನನ್ನು ಚುಚ್ಚಿ ನೋಯಿಸಬೇಕೆನ್ನುವ ಅದರ ಪ್ರಯತ್ನ ಸಫಲವಾಗಿತ್ತು. “ಕತೆಯನ್ನು ಪೂರ್ತಿಯಾಗಿ ಹೊಸದಾಗಿ ಆರಂಭಿಸುತ್ತೇನೆ” ಎಂದೆ. “ನೀನೊಬ್ಬ ನನ್ನನ್ನು ಪ್ರೀತಿಸುತ್ತಿದ್ದವನು ಎಂದು ತಿಳಿದಿದ್ದೆ. ನಾನು ತಿಳಿದದ್ದು ತಪ್ಪಾಯಿತು. ಏನಾದರೂ ಮಾಡಿಕೋ” ಎಂದು ಸಂಪಿಗೆ ಮರ ಮಾಯವಾಯಿತು. ನನಗೆ ಆಮೇಲೆ ನಿದ್ರೆ ಸರಿಯಾಗಲಿಲ್ಲ ರಾತ್ರಿ ಮತ್ತೆಲ್ಲಿ ಸಂಪಿಗೆ ಮರ ಕನಸಿನಲ್ಲಿ ಬರುತ್ತದೋ ಎಂದು ಆತಂಕದಲ್ಲಿದ್ದೆ. ಆ ರಾತ್ರಿ ಸಂಪಿಗೆ ಮರ ನನ್ನ ನಿದ್ರೆಯನ್ನು ಕೆಡಿಸಲಿಲ್ಲ. ಎಂಥಾ ಸಂಪಿಗೆ ಮರ! ಅದರ ಹಳದಿಯ ಹೂವನ್ನು ಕೊಯ್ಯಲಿಕ್ಕೆ ನಾನೊಂದು ದೋಟಿಯನ್ನು ಕೊಂಡುಕೊಂಡಿದ್ದೆ. ಹೂವನ್ನು ಕೊಯ್ದು ಕೊಯ್ದು ಅಕ್ಕಪಕ್ಕದ ಮನೆಗಳಿಗೆ ಕೊಡುತ್ತಿದ್ದೆವು. ನನ್ನ ತಂಗಿಯ ಮದುವೆಯಲ್ಲಿ ಹಳ್ಳಿಗೆ ಬಂದ ಹೆಂಗಸರೆಲ್ಲ ಸಂಪಿಗೆ ಹೂವು ಕೊಟ್ಟೆವು. ದೇವಸ್ಥಾನಕ್ಕೆ ಪೂಜೆಗೆ ಹೋದಾಗ ಸಂಪಿಗೆ ಹೂವಿನ ಸರವನ್ನು ಒಯ್ಯುತ್ತಿದ್ದೆವು. ಮನೆಯಲ್ಲಿ ಸತ್ಯನಾರಾಯಣ ಪೂಜೆ, ಗಣೇಶನ ಹಬ್ಬ, ದಿನನಿತ್ಯದ ಪೂಜೆಗೆ ಕೂಡ ಸಂಪಿಗೆ ಹೂವನ್ನು ಉಪಯೋಗಿಸುತ್ತಿದ್ದೆವು. ನಮ್ಮ ಅಂಗಳ ಮತ್ತು ಮನೆಯ ತುಂಬ ಸಂಪಿಗೆಯ ಸುವಾಸನೆ ಹರಡಿರುತ್ತಿತ್ತು. ನನಗೆ ಅತ್ಯಂತ ಸಂತೋಷವನ್ನು ಕೊಟ್ಟ ವಿಷಯವೊಂದಿದೆ. ಸಂಪಿಗೆಯ ಮರದ ತುಂಬ ಯಾವಾಗಲೂ ಮೊಗ್ಗುಗಳಿದ್ದಂತೆ ಭಾಸವಾಗುತ್ತಿತ್ತು. ಒಂದು ಸಾರಿ ಒಂದು ಮೊಗ್ಗನ್ನು ಕಿತ್ತು ಅದರ ಮೇಲಿನ ಕವಚವನ್ನು ನಿಧಾನವಾಗಿ ಬಿದಿಸಿ ನೋಡಿದಾಗ, ಅದು ಮೊಗ್ಗಾಗಿರಲಿಲ್ಲ. ಆದರೆ ಇನ್ನೂ ಚಿಗುರುತ್ತಿದ್ದ ಎಲೆಯಾಗಿತ್ತು. ಮೊಗ್ಗಿಗೆ ಕವಚವಾಗಿರುವ ಹಾಗೆ ಎಲೆಗೂ ಕವಚವನ್ನು ತೊಡಿಸುವ ಸಂಪಿಗೆಯ ವಿಚಿತ್ರವನ್ನು ಮೊತ್ತಮೊದಲ ಬಾರಿಗೆ ಗಮನಿಸಿದಾಗ ನನಗೆ ಅತೀವ ಆನಂದವಾಗಿತ್ತು. ಸಂಪಿಗೆಯ ಕಾಯಿಯ ಗೊಂಚಲು ಗೊಂಚಲನ್ನೂ ನಾನು ಸಂತೋಷಪಟ್ಟಿದ್ದೇನೆ. ನಾವು ಸಂಪಿಗೆಯ ನೆರಳಿನಲ್ಲಿ ಕುರ್ಚಿಗಳನ್ನು ಹಾಕಿಕೊಂಡು ಬಿಸಿಲು ಕಾಲದಲ್ಲಿ ಕೂತುಕೊಳ್ಳುತ್ತಿದ್ದೆವು. ನಾನು ಮಲೆನಾಡಿಗೆ ಹೋಗಿದ್ದಾಗ ಒಂದು ಸೀತಾಳ ದಂಡೆಯನ್ನು ತಂದು ಆ ಮರದ ಮೇಲೆ ಬೆಳೆಸುವ ಪ್ರಯತ್ನ ಮಾದಿಡೆ. ಕೋತಿಗಳು ಆ ಗಿಡವನ್ನು ಕಿತ್ತು ಹಾಕುತ್ತಿದ್ದವು. ನಾನು ಮತ್ತೆ ಮತ್ತೆ ಆ ಗಿಡವನ್ನು ಸಂಪಿಗೆ ಮರದ ಕವಲಿನಲ್ಲಿ ಇಡುವ ಪ್ರಯತ್ನ ವ್ಯರ್ಥವಾಯಿತು ಅನಿಸಿದಾಗ, ಆ ಪರಾವಲಂಬಿಯ ಬೇರುಗಳನ್ನು ಹರಡಿ ಅವುಗಳ ಸುತ್ತಲೂ ದಾರವನ್ನು ಬಿಗಿದು, ಆ ಬೇರುಗಳ ಮೇಲೆ ಇಟ್ಟಿಗೆಗಳನ್ನಿಟ್ಟು ಅದು ಬೇರೂರಿ ಹೂವು ಬಿಡುವುದನ್ನು ಕನಸುಕಾಣುತ್ತಿದ್ದೆ. ಆದರೆ ಕೋತಿಗಳು ಅದನ್ನು ಕಿತ್ತು ಚೂರು ಚೂರು ಮಾಡಿದ್ದವು. ಆ ಮರ ನನ್ನನ್ನು ಮಾತನಾಡಿಸುತ್ತದೆ ಅನಿಸುತ್ತಿತ್ತು. ಅದರ ಕೊಂಬೆಗಳು ಅಲುಗಾಡಿದಾಗ ನನ್ನನ್ನು ಕರೆಯುತ್ತಿದೆ ಅನ್ನಿಸಿತು. ನನ್ನನ್ನು ನೋಡಿ ಮುಗುಳ್ನಗುತ್ತದೆ. ನಾನು ಹತ್ತಿರ ಹೋದಾಗ ಅದಕ್ಕೆ ಸಂತೋಷವಾಗುತ್ತದೆ ಎಂದೂ ನನಗೆ ಅನ್ನಿಸಿತ್ತು. ನಾನೂ ಮಾತನಾಡುತ್ತಿದ್ದೆ. ನನ್ನ ಮಾತು ಅದಕ್ಕೆ ಅರ್ಥವಾಗುತ್ತದೆ ಎಂದುಕೊಂಡಿದ್ದೆ. ಆಗೀಗ ನನಗೆ ಬೇಸರ ತಂದರೂ ಆ ಮರದ ಮೂಲಕ, ಪರಿಚಯವಾದ ಜನಗಳ ಮೂಲಕ ಆ ಮರ ನಮ್ಮ ಸಂತೋಷಕ್ಕೆ ಕಾರಣವಾಗಿತ್ತು. ಹಾಗೆ ನೋಡಿದರೆ ಯಾರು ತಾನೆ ಸದಾ ಕಾಲವೂ ಇನ್ನೊಬ್ಬರನ್ನು ಸಂತೋಷವಾಗಿಡಲಿಕ್ಕೆ ಸಾಧ್ಯ? ಸಂಪಿಗೆ ಮರವಿಲ್ಲದ ಮನೆಗಳಲ್ಲೂ ಕಂಬಳಿ ಹುಳುಗಳು ತುಂಬಿಕೊಳ್ಳುವುದನ್ನು ನಾನು ಕೇಳಿದ್ದೇನೆ. ಕಂಬಳಿಹುಳ ಕಾಟ ಕೊಟ್ಟರೆ ಅದಕ್ಕೆ ಸಂಪಿಗೆ ಮರ ಏನು ಮಾದಲಿಕ್ಕೆ ಸಾಧ್ಯ? ಮೋಸಗಾರರು ನನ್ನನ್ನು ನಂಬಿಸಿ ಮೋಸ ಮಾಡಿದ್ದಾರೆ. ಆದರೆ ನಾನು ಮೋಸಗಾರರನ್ನು ಪ್ರೋತ್ಸಾಹಿಸಿದೆ ಎಂದರೆ ಸರಿಯೆ? ಉಪಕಾರ ಅಥವಾ ಅಪಕಾರ ಆಯಾ ಜೀವಿಯ ಸ್ವಭಾವಕ್ಕೆ ಸೇರಿದ್ದು. ಹಾಗೆ ನೋಡಿದಾಗ ಸಂಪಿಗೆ ಮರ ಉಪಕಾರ ಜೀವಿಯಾಗಿಯೇ ಇತ್ತು. ಈ ಮನೆಯನ್ನು ಕಟ್ಟಿದಾಗ, ಅದಿನ್ನೂ ಸಸಿಯಾಗಿದ್ದಾಗ ಮಾತ್ರ ನೀರನ್ನು ಅಪೇಕ್ಷಿಸಿತ್ತು. ಆಮೇಲೆ ಮನುಷ್ಯ ಕೊಡುವ ನೀರನ್ನು ಅಪೇಕ್ಷಿಸಿರಲಿಲ್ಲ. ದೇವರು ಕೊಟ್ಟ ನೀರು, ನೆಲದ ಸಾರ, ಗಾಳಿಯಲ್ಲಿ ಸಿಗುವ ಇಂಗಾಲಾಮ್ಲ. ಸೂರ್ಯನ ರಶ್ಮಿ ಅಷ್ಟರಿಂದ ಮಾತ್ರ ಬದುಕುವ ಆ ಸಂಪಿಗೆ ಮರ ವರ್ಷಕ್ಕೆರಡು ಸಲ ಹೂವಿನ ರಥವಾಗಿ ನಿಂತು ಕಣ್ಣಿಗೆ ಸೌಂದರ್ಯದ ವಸ್ತುವಾಗಿ, ಮೂಗಿಗೆ ಹಿತವಾದ ಕಂಪಾಗಿ, ಚರ್ಮಕ್ಕೆ ಬಿಸಿಲಿನ ತಾಪವನ್ನು ಪರಿಹರಿಸುವ ನೆರಳಾಗಿ, ಸಣ್ಣ ಮಳೆಗೆ ಛತ್ರಿಯಾಗಿ ನಿಲ್ಲುವ ಅದರ ಉಪಕಾರವನ್ನು ನಾನು ಮರೆತಿಲ್ಲ. ಮರ ನಮ್ಮಿಂದ ಏನನ್ನೂ ಬಯಸಿಲ್ಲ. ವರ್ಷಗಟ್ಟಲೆ ಹೂವಾಗಿದೆ, ನೆರಳಾಗಿದೆ. ನಾನು ಬೇಸರಗೊಂಡಾಗ ಮನಸ್ಸಿಗೆ ಸಮಾಧಾನವನ್ನೂ ತಂದಿದೆ.
*
*
*
ಕತೆಯನ್ನು ಇಲ್ಲಿಗೆ ನಿಲ್ಲಿಸಿದ ರಾತ್ರಿ ಮತ್ತೆ ಕನಸಿನಲ್ಲಿ ಅದೇ ಸಂಪಿಗೆ ಮರ ಕಾಣಿಸಿಕೊಂಡಿತು. “ನಿನ್ನ ಕತೆ ಓದಿದೆ. ನೀನು ವಸ್ತುನಿಷ್ಠನಾಗಿರಲಿಕ್ಕೆ ಪ್ರಯನಿಸಿದ್ದೀಯ, ನಿನ್ನ ಭಾವನೆಗಳನ್ನು ಅತಿಯಾಗಿ ರಂಜಿಸದೆ ಹೇಳಿದ್ದೀಯ” ಎಂದು ಮಾತನ್ನು ನಿಲ್ಲಿಸಿತು. “ಆದರೆ ಏನು?” ಎಂದು ಕೇಳಿದೆ. “ನಿನ್ನೆ ನನ್ನನ್ನು ಕದಿದು ಹಾಕಿದರು” ನನಗೇನು ಹೇಳಬೇಕೋ ತೋಚಲಿಲ್ಲ. ತೀರ ಹತ್ತಿರದವರು ಸತ್ತಾಗ ಅನುಭವಿಸುವ ಶೂನ್ಯವನ್ನು ಅನುಭವಿಸಿದೆ. “ನನ್ನನ್ನು ಕಡಿಯಬಾರದು ಎಂದು ನೀನೊಂದು ಮಾತನ್ನು ಹೇಳಬೇಕಾಗಿತ್ತು” ಎಂದಿತು ಆ ಸಂಪಿಗೆ ಮರ. “ಹೌದು, ನಾನು ಹೇಳಬೇಕಾಗಿತ್ತು. ಆದರೆ ಹೊಸ ಮನೆಗೆ ಹೊಂದಿಕೊಳ್ಳುವ ಗಡಿಬಿಡಿಯಲ್ಲಿ, ಅತ್ತೆಯ ಖಾಯಿಲೆಯಲ್ಲಿ ಮಗಳ ಮದುವೆಯ ತುರ್ತಿನಲ್ಲಿ, ಕಾಲೇಜಿನಲ್ಲಿ ಪಾಠ ಹೇಳಬೇಕಾದ ಕರ್ತವ್ಯದಲ್ಲಿ, ನನ್ನ ಪ್ರಪಂಚದಲ್ಲಿ ಮುಳುಗಿಹೋಗಿದ್ದೆ. ಆದರೆ ನಾನು ಹೇಳಿದ್ದರೂ ಅವರು ಕೇಳುತ್ತಿರಲಿಲ್ಲ” ಎಂದು ನನ್ನನ್ನು ಸಮರ್ಥಿಸಿಕೊಳ್ಳಲಿಕ್ಕೆ ನೋಡಿದೆ. “ಸ್ವಸಮರ್ಥನೆ ಬೇಡ, ಕೃತಘ್ನತೆ ಬೇಡ, ಪಶ್ಚಾತ್ತಾಪ ಬೇಡ, ನನ್ನ ಬಗ್ಗೆ ಕರುಣೆ ಬೇಡ : ಆದರೆ ಇನ್ನೊಂದು ಜೀವದ ಬಗ್ಗೆ ಪ್ರೀತಿಯೊಂದಿದ್ದರೆ ಅದನ್ನು ಅಭಿವಕ್ತ ಮಾಡಿದರೆ ಅಷ್ಟು ಸಾಕು” ಎಂದು ಸಂಪಿಗೆ ಮರ ಹೇಳಿತು. “ನಾನೇನು ಮಾಡಬಹುದಾಗಿತ್ತು?” “ನನ್ನನ್ನೇನು ಕೇಳ್ತೀಯ, ಸ್ವಂತ ಬುದ್ಧಿಯನ್ನು ಉಪಯೋಗಿಸಬೇಕು. ಬೊಂಬಾಯಿಯಲ್ಲಿ ಒಂದು ಮರವನ್ನು ಕಡಿಯಬೇಕೆಂದಾಗ, ಆ ಬಡಾವಣೆಯ ಜನಗಳೆಲ್ಲ ಅದನ್ನು ವಿರೋಧಿಸಿದಾಗ, ಆ ಮರವನ್ನು ಕಿತ್ತು ಇನ್ನೊಂದು ಜಾಗದಲ್ಲಿ ನೆಡಲಿಲ್ಲವೆ? ವಿಜ್ಞಾನ ಇಷ್ಟು ಮುಂದುವರಿದಾಗಲೂ, ಒಂದು ಮರವನ್ನು ಇಡಿಯಾಗಿ ಕಿತ್ತು ನೆಡುವುದು ಸಾಧ್ಯವಿಲ್ಲವೇನು?” ಎಂದು ಸಂಪಿಗೆ ಮರ ಭಾವನಾತ್ಮಕವಾಗಿ ಮಾತನಾಡಿತು. “ಆದರೆ, ನಾನು ಚಳವಳಿಯನ್ನು ಮಾದಿ ನಿನ್ನನ್ನು ಉಳಿಸುವಷ್ಟು ಸಮರ್ಥನಲ್ಲ : ನಾನು ಪ್ರಭಾವಶಾಲಿಯಲ್ಲ : ಶ್ರೀಮಂತನಲ್ಲ : ರಾಜಕಾರಣಿಯಲ್ಲ”. ಎಂದು ನನ್ನ ಅಸಹಾಯಕತೆಯನ್ನು ತೋಡಿಕೊಂಡೆ. “ಹೌದಪ್ಪ ನೀನು ಶ್ರೀಮಂತನಲ್ಲ. ಆದರೆ ನಿನ್ನ ಅಭಿಪ್ರಾಯವನ್ನು ಆ ಮನೆಗೆ ಬಂದವರಿಗೆ ಹೇಳುವಷ್ಟಾದರೂ ಸಣ್ಣ ಪ್ರಯತ್ನವನ್ನು ಮಾಡುವಷ್ಟು ಶಕ್ತಿ ಸಹ ಇರಲಿಲ್ಲವೆ? ಹೋಗಲಿ ಬಿಡು. ನಿನ್ನನ್ನು ಅಂದೇನು ಪ್ರಯೋಜನ? ನಾನೂ ಸಹ ನಿನ್ನ ಹಾಗೆಯೇ. ನಾನು ಬುದ್ಧನೋ, ಶಂಕರಾಚಾರ್ಯನೋ ಕೆಳಗೆ ಕೂತು ತಪಸ್ಸು ಮಾಡಿದ ಮರವಾಗಿದ್ದರೆ ಅಥವಾ ಗಾಂಧೀಜಿ ನೆಟ್ಟ ಮರವಾಗಿದ್ದರೆ ನನ್ನನ್ನೂ ಉಳಿಸುತ್ತಿದ್ದರೊ ಏನೋ” ಎಂದು ಮರ ಸುಮ್ಮನಾಯಿತು. “ನನಗೆ ತುಂಬ ದುಃಖವಾಗಿದೆ” ಎಂದು ಹೇಳಿದೆ. “ನನಗೆ ನಿನ್ನ ಬಗ್ಗೆ ಎಷ್ಟು ಪ್ರೀತಿ ಇತ್ತೆಂದು, ಈಗಲೂ ಎಷ್ಟು ಪ್ರೀತಿ ಇದೆಯೆಂದು ಈಗ ಗೊತ್ತಾಗಿದೆ” ಎಂದೆ. “ನೀನು ಸತ್ತಿಲ್ಲ, ನನ್ನೊಳಗೆ ಹೂ ಬಿಡುತ್ತಿದ್ದೀಯ, ನೆರಳು ಕೊಡುತ್ತಿದ್ದೀಯ” ಎಂದು ಹೇಳಿದೆ. ಮರ ಕನಸಿನಲ್ಲಿ ಮಾಯವಾಯಿತು, ಅವತ್ತಿನಿಂದ ಎಂದೂ ಅದನ್ನು ಕನಸಿನಲ್ಲಿ ನಾನು ಕಂಡಿಲ್ಲ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ