ಅದೃಷ್ಟ

ಆ ಹಳೆ ಮನೆಯಲ್ಲಿ, ಎಲ್ಲೆಲ್ಲೂ, ಬೆಳಕು ತುಸು ಕಡಿಮೆಯೇ. ದೇವರಕೋಣೆಯ ಇದಿರಿನ ಈ ಚಿಕ್ಕ ಕೋಣೆಯಲ್ಲಂತೂ ಅದು ತೀರ ಕಡಿಮೆ. ಕಟ್ಟಿಗೆಯ ಚೌಕು ದಂಡಗಳಿದ್ದ ಸಣ್ಣ ಕಿಟಿಕಿಯಿಂದ ಬರಲೋ ಬಿಡಲೋ ಎಂದು ಅನುಮಾನಿಸುತ್ತ ಬಂದಂತೆ ಬಂದ ಬೆಳಕು ಒಳಗಿನ ನೆಲದ ಮೇಲೆ ಮಸುಕುಬಣ್ಣದ ಕಲೆ ಮೂಡಿಸಿತ್ತು. ನೆಲದ ಮೇಲಿನ ಹಾಸಿಗೆಯಲ್ಲಿ ಕಳೆದ ಮೂರು ದಿನಗಳಿಂದ ಜ್ವರ ಬರುತ್ತಿದ್ದ ಹನ್ನೆರಡು ವರುಷದ ನಿಲಕಂಠನೀಲಕಂಠ ಅಟ್ಟದ ಜಂತೆ-ಹಲಗೆಗಳ ಮೇಲೆ, ಸುತ್ತಲಿನ ಗೋಡೆಗಳ ಮೇಲೆ ಕಣ್ಣು ಹಾಯಿಸುತ್ತ ಮಲಗಿದ್ದ. ಮೂರು ದಿನ ಸತತವಾಗಿ ಮಲಗಿ ಮಲಗಿ ಕೋಣೆಯ ಮಬ್ಬುಗತ್ತಲೆಗೆ ಹೊಂದಿಕೊಂಡ ಕಣ್ಣುಗಳು ಗೋಡೆಯ ಮೇಲೆ, ಮೇಲಿನ ಜಂತೆ ಹಲಗೆಗಳ ಮೆಲೆಮೇಲೆ, ಅಲ್ಲಿ ಇಲ್ಲಿ, ಕಾಣುವ ಹಳೆಯ ಕಲೆಗಳಿಗೂ ಆಕಾರ, ಅರ್ಥ ಹುಡುಕುತ್ತಿದ್ದವು. ಹೊರಜಗತ್ತಿನ ಸಂಪರ್ಕದಿಂದ ದೂರ ಉಳಿದು ಬೇಸರಗೊಂಡ ಜೀವ ತನ್ನ ಕಿವಿಗಳ ಮೂಲಕ ಆ ಜಗತ್ತಿನೊಡನೆ ಸಂಬಂಧ ಬೆಳೆಸಿತ್ತು: ಜಗಲಿ, ಅಂಗಳ, ಆಚೆಯ ಹಿತ್ತಿಲು ಗದ್ದೆಗಳು, ಸುತ್ತಲಿನ ಕೇರಿ, ಕೇರಿಯ ಅಂಚಿನಲ್ಲಿ ನಿಂತ ಚಕ್ರಖಂಡೇಶ್ವರ ದೇವಸ್ಥಾನ, ಮಾದನ ಚಿಟ್ಟೆ, ಗುಡ್ಡದ ಮೇಲಿನ ಇಗರ್ಜಿ, ಮುರ್ಕುಂಡೀ ದೇವಸ್ಥಾನ-ದೂರದಿಂದ ಬರುವ ಸಣ್ಣ ಸದ್ದಿಗೂ ಕಿವಿ ನಿಗುರಿಸುತ್ತಿತ್ತು: ದೃಷ್ಟಿಯಾಚೆಯ ಬದುಕು ಶಬ್ದವಾಗಿತ್ತು. ಸುದ್ದಿಯಾಗಿತ್ತು…

ಮೂಲೆಯಲ್ಲೆಲ್ಲೋ ಹಲ್ಲಿ ಲೊಚಗುಟ್ಟಿತು. ದೇವರ ಕೋಣೆಗೆ ಹೋಗುವ ಬಾಗಿಲ ಮೇಲ್ಬದಿಯಲ್ಲಿ ಮಸುಕುಮಸುಕಾಗಿ ತೋರುವ ಎಂತಹುದೋ ಬಿಳಿಯ ಕಲೆಯಲ್ಲಿ ಮೊನ್ನೆಮೊನ್ನೆ ಸತ್ತುಹೋದ ಅಜ್ಜನ ಮೋರೆ ಅಸ್ಪಸ್ಟವಾಗಿಅಸ್ಪಷ್ಟವಾಗಿ ಕಂಡಂತಾಯಿತು. ಹೆದರಬೇಕೋ ಬಾರದೋ ತಿಳಿಯಲಿಲ್ಲ. ಅಜ್ಜ ಅವನಿಗೆ ಬಹಳ ಸೇರುತ್ತಿದ್ದ. ಆದರೆ ಸತ್ತ ಅಜ್ಜನ ಮೋರೆ…ಹೊರಗೆ ಹಿತ್ತಿಲ ದಣಪೆಯಲ್ಲಿ ನಿಂತೇ, “ನೀಲಕಂಠೋ” ಎಂದು ಗೆಳೆಯ ಪೊಕ್ಕ ಒದರಿ ಕರೆದದ್ದು ಕೇಳಿಸಿತು. ಪೊಕ್ಕನ ದನಿಯಲ್ಲಿ ಎಂತಹುದೋ ಉತ್ಸಾಹ, ಆತುರ, ಓಡೋಡುತ್ತ ಬರುತ್ತಿರಬೇಕು, ಅನ್ನಿಸಿತು. ಓಡೋಡುತ್ತ ಬಂದವನ ಹೆಜ್ಜೆಗಳು ಅಂಗಳ ಸೇರಿದ್ದೇ, ಜಗಲಿಯ ಮೇಲಿದ್ದ ಅಮ್ಮನ ದನಿ: “ಅರೆ ಅರೇ ಸಾವಕಾಶ, ಬಿದ್ದಿಯೋ, ಹಾಗೇನು ಓಡೋಡಿ ಬರುತ್ತಿದ್ದೀ, ಅಂತಹ ತರಾತುರಿಯ ಸುದ್ದಿ ಎಂತಹದೋ?” ಜಗಲಿ ಏರಿ ಬಂದ ಪೊಕ್ಕನಿಂದ ಕೂಡಲೇ ಮಾತನಾಡುವುದಾಗಲಿಲ್ಲ. ಓಡಿ ಬಂದದ್ದರಿಂದ ಹತ್ತಿದ ಮೇಲುಸಿರಿನಿಂದಾಗಿ ಬಾಯಿಂದ ಶಬ್ದಗಳೇ ಸರಿಯಾಗಿ ಹೊರಗೆ ಬರುತ್ತಿರಲಿಲ್ಲ:
“ಅ-ಣ್ಣ ಬಂ-ದಾ-ನೆ.”
“ಯಾವ ಅಣ್ಣನೋ? ಶಿನ್ನಣ್ಣಾ?”
“ಅಲ್ಲ, ಬೇರೆ ಅಣ್ಣಾ…”
“ಯಾರು ಜನ್ನಣ್ಣ?”
“ಅಲ್ಲ ಹೊಸಾ ಅಣ್ಣ. ಇವನು ಬೇರೆ ಅಣ್ಣನಂತೆ. ನಮ್ಮ ಅಣ್ಣನೇ ಅಂತೆ ದೊಡ್ಡಣ್ಣ. ಇದೇ ಈಗ ಬಂದ” ಎಂದವನೇ ಒಳಗಿನ ಕೋಣೆಗೆ ಧಾವಿಸಿದ. ನೀಲಕಂಠನನ್ನು ಹುಡುಕಿಕೊಂಡು. ಹೊರಗಿನಿಂದ ಬಂದವನ ಕಣ್ಣಿಗೆ ನೀಲಕಂಠನ ಕೋಣೆಯಲ್ಲಿ ಏನೇನೂ ಕಾಣಲಿಲ್ಲ. “ಯಾರು ಪೊಕ್ಕನೋ” ಎಂದು ಕೇಳಿದಾಗ ದನಿ ಬಂದ ದಿಕ್ಕಿನಲ್ಲಿ ದೃಷ್ಟಿ ನೆಟ್ಟಾಗ ಕಿಟಕಿಯಿಂದ ಬರುತ್ತಿದ್ದ ಮಸಕು ಬೆಳಕಿನಲ್ಲಿ ನೀಲಕಂಠನ ಆಕೃತಿ ಅಸ್ಪಷ್ಟವಾಗಿ ಮೂಡಹತ್ತಿತು, ನೀಲಕಂಠನಿಗೆ ತಾನು ಸರಿಯಾಗಿ ಕಾಣುತ್ತೇನೋ ಇಲ್ಲವೋ ಎಂಬುದರ ಪರಿವೆ ಕೂಡ ಇಲ್ಲದೇನೇ ಹೊಸ ಅಣ್ಣ ಬಂದು ತಲುಪಿದ ಸನ್ನಿವೇಶವನ್ನು ನಟಿಸಿ ಬಣ್ಣಿಸಹತ್ತಿದ. ಕೋಣೆಯ ಕತ್ತಲೆಯಲ್ಲಿ ನೀಲಕಂಠನಿಗೆ ಅವನ ಮಾತಷ್ಟೇ ಸ್ಪಷ್ಟವಾಗಿ ಕೇಳಿಸುತ್ತಿತ್ತು; ಪರಿಚಯದ ದನಿಯಲ್ಲಿ ಅಪರಿಚಿತ ಲೋಕವೊಂದು ಮೆಲ್ಲನೆ ಕಣ್ತೆರೆಯಹತ್ತಿತು:

“ಆಗ ಅಪ್ಪ ಚಾ-ಅಂಗಡಿಯಲ್ಲಿ, ಒಲೆಯ ಮುಂದೆ ಹೀಗೆ ಕೈಕಟ್ಟಿ ಕೂತಿದ್ದ. ನಾನು ಗಲ್ಲೆಯ ಮೇಲೆ ಕೂತಿದ್ದೆ. ಅಂಗಡಿಯಲ್ಲಿ ಕುಪ್ಪಗೌಡ ಕಾನೂಗೌಡ ಇದ್ದರು. ಮತ್ಯಾವ ಗಿರಾಕಿಯೂ ಇದ್ದಿರಲಿಲ್ಲ. ಅವನು ಬಂದ. ಬಂದವನೇ ಬಾಂಕಿನ ಮೇಲೆ ಹೋಗಿ ಕೂತ. ನನ್ನನ್ನು ನೋಡಿದ: ಒಮ್ಮೆ ನಕ್ಕ. ಅಪ್ಪನನ್ನು ನೋಡಿದ: ನಗಲಿಲ್ಲ. ಕಾನೂಗೌಡ ಕುಪ್ಪಗೌಡರನ್ನು ನೋಡಿದ. ಮತ್ತೆ ಅಪ್ಪನತ್ತ ತಿರುಗಿದ. ಅಪ್ಪ, ನಿಮಗೆ ಏನು ಬೇಕೂ ಎಂದು ಕೇಳಿದ. ಇವನು ಮಾತನಾಡಲಿಲ್ಲ. ಅಪ್ಪನನ್ನೇ ಹೀಗೆ-ಮಿಕಿಮಿಕಿ ನೋಡುತ್ತ ಕುಳಿತುಬಿಟ್ಟ. ಅಪ್ಪ ಇನ್ನೊಮ್ಮೆ ನಿಮಗೆ ಏನು ಬೇಕೂ ಎಂದು ಕೇಳಿದ. ಆಗಲೂ ಮಾತನಾಡಲಿಲ್ಲ. ಅಪ್ಪ ಎದ್ದ. ಅವನ ಹತ್ತಿರ ಹೋಗಿ ನಿಂತ. ತೀರ ಹತ್ತಿರ ಹೋಗಿ ನೀವು ಯಾರು? ಎಲ್ಲಿಂದ ಬಂದದ್ದು? ಎಂದು ಕೇಳಿದ. ಅವನು ನೋಡುತ್ತಾ ಕುಳಿತುಬಿಟ್ಟ. ಕೊನೆಗೆ ಅಪ್ಪಾ‌ಎಂದ. ಅಪ್ಪ, ನೋಡುತ್ತಾ ನೋಡುತ್ತಾ, ನೀನೂ ಎಂದ. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡುಬಿಟ್ಟರು. ಅಪ್ಪನ ಕಣ್ಣಲ್ಲಿ ನೀರು ಬಂದುಬಿಟ್ಟಿತು. ಅವನ ಕಣ್ಣಿನಲ್ಲೂ. ನನಗೆ ಗೊತ್ತಾಯಿತು ಕಡೆಗೆ. ಅವನು ನಮ್ಮ ಅಣ್ಣನಂತೆ. ದೊಡ್ಡ ಅಣ್ಣನಂತೆ. ಹೊಸಾ ಅಣ್ಣನಂತೆ. ಕಡೆಗೆ ಸಂಜೆ ಇಲ್ಲೂ ಬರ್ತಾನೆ. ಈಗ ಜಳಕ ಮಾಡಲಿಕ್ಕೆ ಹೋಗಿದ್ದಾನೆ” ಎಂದವನೇ ತಿರುಗಿ ಏನೋ ಉತ್ಸಾಹ ಬಂದವನಂತೆ, ಕಿವಿಯಲ್ಲಿ ಗಾಳಿ ಹೊಕ್ಕ ಕರುವಿನಂತೆ ಅಲ್ಲಿಂದ ಓಟ ಕಿತ್ತ. ಅಂಗಳ ಸೇರಿ “ಸಂಜೆ ಅಣ್ಣನ ಜೊತೆ ಬರ್ತೇನೋ” ಎಂದು ಮನೆಯ ಹಾದಿ ಹಿಡಿದ, ಪೊಕ್ಕ.

ನೀಲಕಂಠನಿಗೆ ಏನೊಂದೂ ತಿಳಿಯಲಿಲ್ಲ. ಅಮ್ಮನನ್ನು ಕರೆದು ಕೇಳೋಣವೆಂದರೆ ಅಮ್ಮ ಜಗಲಿಯ ಮೇಲಿರಲಿಲ್ಲ. ಹೀಗೆ ಒಮ್ಮಿಂದೊಮ್ಮೆಲೇ ಬಂದ ಪೊಕ್ಕನ ಹೊಸ ಅಣ್ಣ ಯಾರು? ಎಲ್ಲಿಂದ ಬಂದ? ಹ್ಯಾಗೆ ಬಂದ? ಪೊಕ್ಕನಿಗೆ ಇಬ್ಬರೇ ಇಬ್ಬರು ಅಣ್ಣಂದಿರು. ಈ ಮೂರನೆಯವ ಯಾರು? ಅಮ್ಮ ಬಂದ ಮೇಲೆ ಕೇಳಬೇಕು… ತಿರುಗಿ ಲಕ್ಷ್ಯ ಗೋಡೆಯ ಮೇಲಿನ ಕಲೆಯತ್ತ ಹೋಗಿತ್ತು. ಆದರೆ ಅದರಲ್ಲೀಗ ಅಜ್ಜನ ಮೋರೆಯ ಛಾಯೆ ಕಾಣಲಿಲ್ಲ. ನೋಡುತ್ತ ಮಲಗಿದಲ್ಲೇ ಅವನಿಗೆ ನಿದ್ದೆ ಬರುತ್ತಿದ್ದಂತೆನಿಸಿತು. ಜ್ವರವೂ ತುಸು ಹೆಚ್ಚಿರಬೇಕು. ಹೊಸತಾಗಿ ಹುಟ್ಟಿಬಂದ ಪೊಕ್ಕನ ಅಣ್ಣನ ರೂಪ ಊಹಿಸುತ್ತಿದ್ದಂತೆ ಅವನು ನಿದ್ದೆಹೋದ.

ಮಧ್ಯಾಹ್ನ, ನೀಲಕಂಠನ ಜ್ವರ ಒಮ್ಮೆಲೇ ಏರಿದ್ದರಿಂದ ಹಳ್ಳಿಯ ವೈದ್ಯರಾದ ಅನಂತರಾಯರನ್ನು ಕರೆಯಿಸಬೇಕಾಯಿತು. ಊರಲ್ಲೆಲ್ಲಾ ಮೈಲಿಯ ಹಾವಳಿಯಿದ್ದರಿಂದ ಜ್ವರ ಬಂದಾಗಲೇ ಭಯಪಟ್ಟದ್ದೇ ಆಗುವ ಲಕ್ಷಣ ಕಂಡುಬಂದು ಅಮ್ಮ ಅಪ್ಪ ಆಗಲೇ ಹೆದರಿದ್ದರು. ಜಗಲಿಯ ಮೇಲೆ ಅನಂತರಾಯರೊಂದಿಗೆ ಅಮ್ಮ ಅಪ್ಪ ಗುಜುಗುಜು ಮಾತನಾಡಿದ್ದು ನೀಲಕಂಠ ಕೇಳಿದ್ದ: ಕಾರವಾರ, ಅಂಕೋಲೆಗಳಲ್ಲಿ ಉಗ್ರರೂಪ ತಾಳಿ ಈಗ ತುಸು ತಣ್ಣಗಾಗುತ್ತಲಿಲ್ಲ ಉಪದ್ರವ ಈಗ ಮೆಲ್ಲನೆ ಇತ್ತಕಡೆ ಹಬ್ಬಲು ಹತ್ತಿತ್ತಂತೆ. ಗೋಕರ್ಣದಲ್ಲಿ ಈಗಾಗಲೇ ಕಂಡಾಪಟ್ಟೆ ಜನ ಸತ್ತರಂತೆ. ಮಾಸ್ಕೇರಿ ಆಡಿಗೋಣಗಳಲ್ಲೂ…
ಜಗಲಿಯ ಮೇಲೆ ಯಾರೋ ಬಂದ ಹೆಜ್ಜೆಗಳ ಸದ್ದು. ಅಮ್ಮನ ಹತ್ತಿರ ಗುಜುಗುಜು ಮಾತು. ಕಿವಿ ನೆಟ್ಟಗಾದುವು:
“ಕೇಳಿದೆಯಾ? ಅವರ ಮನೆಯಲ್ಲಿ ಪೋಲೀಸರು ಬಂದಿದ್ದರಂತೆ, ಝಡತಿ ಮಾಡಿ ಹೋದರಂತೆ!”
ನೆರೆಮನೆಯ ಪಾರ್ವತಕ್ಕನ ದನಿಯಲ್ಲವೆ? ಹೀಗೇಕೆ ಗುಟ್ಟಾಗಿ ಮಾತನಾಡುತ್ತಾಳೆ?

“ಹೌದು. ನಿನಗೆ ಗೊತ್ತಿದೆಯೋ ಇಲ್ಲವೋ.ನೀನು ಲಗ್ನವಾಗಿ ಬರುವ ಮೊದಲೇ ನಡೆದ ಸಂಗತಿಯಿದು. ಊರಲ್ಲೂ ಬಹಳ ಜನರಿಗೆ ಗೊತ್ತಿದ್ದಂತಿಲ್ಲ ಈ ಸಂಗತಿ. ಆಗ ಪೊಕ್ಕ ಬಂದಿದ್ದ. ಅವನಿಗೆ ತನಗೆ ಈ ಅಣ್ಣನಿದ್ದಾನೆಂಬುದೇ ಗೊತ್ತಿರಲಿಲ್ಲ. ಅವನು ಹುಟ್ಟುವ ಮೊದಲೇ ನಡೆದದ್ದು-ಗೋವೆಯಲ್ಲಿ ಯಾವನೋ ಒಬ್ಬ ಸಾಹುಕಾರನ ಮನೆಯಲ್ಲಿ ಕೆಲಸಕ್ಕಿದ್ದ. ಯಾವುದೋ ಒಂದು ದೊಡ್ಡ ಗುನ್ನೆಯಲ್ಲಿ ಸಿಕ್ಕಿಕೊಂಡು ‘ಜನ್ಮಠೇಪಿ’ಯಾಗಿತ್ತು ಗೋವೆಯ ಸರ್ಕಾರ ಅಲ್ಲವೇ ಅದು. ಹುಡುಗನ ವಯಸ್ಸು ದೊಡ್ಡದಲ್ಲ ಎಂಬುದನ್ನು ಕೂಡ ಲೆಕ್ಕಿಸದೆ ಯಾವುದೋ ದೂರದ ದ್ವೀಪಕ್ಕೆ ಕಳಿಸಿಬಿಟ್ಟರು. ತಂದೆತಾಯಿಗಳಿಗೆ ಊರಲ್ಲಿ ಮೋರೆ ತೋರಿಸುವುದು ಕಠಿಣವಾಗಿತ್ತು. ಹುಡುಗ ಮಾಡಿದ್ದು ಅಲ್ಲವೇ ಅಲ್ಲವಂತೆ. ಪಾಪ, ಯಾರೋ ಮಾಡಿದ ತಪ್ಪಿಗೆ ಇವನು ಶಿಕ್ಷೆ ಭೋಗಿಸಿದ. ಅಡ್ಡಿಯಿಲ್ಲ. ಹದಿನಾಲ್ಕು ವರುಷಗಳ ಮೇಲೇ ಆದರೂ-ಈಗವನಿಗೆ ಮೂವತ್ತೆರಡೋ ಮೂವತ್ನಾಲ್ಕೋ-ಬಿಡುಗಡೆಯಾಗಿ ಬಂದನಲ್ಲ. ‘ಜನ್ಮಠೇಪಿ’ಅಂದರೆ ಏನೋ; ಕಳಿಸಿದ್ದು ಯಾವ ಸುಡುಗಾಡು ದ್ವೀಪಕ್ಕೋ; ತಾವು ಕಣ್ಣು ಮುಚ್ಚುವ ಮೊದಲು ತಿರುಗಿ ನೋಡಲು ಸಿಗುತ್ತಾನೋ ಇಲ್ಲವೋ ಎಂದುಕೊಂಡ ತಂದೆತಾಯಿಗಳಿಗೆ ಮುದಿವಯಸ್ಸಿನಲ್ಲಾದರೂ ದೊರಕಿದನಲ್ಲ-ಅಷ್ಟೇ ಸಮಾಧಾನ. ಭಾಗೀರತಕ್ಕ ಆಗ ಸುದ್ದಿ ಹೇಳಲು ಬಂದಿದ್ದಳು. ಹೇಳುತ್ತ ಹೇಳುತ್ತ ಮುಳುಮುಳು ಅತ್ತಳು ಪಾಪ, ಮುದುಕಿ, ಮಗ ಅಲ್ಲಿದ್ದಾಗ ಪಟ್ಟ ಕಷ್ಟಗಳನ್ನು ನೆನಸುತ್ತ. ಈಗ ತಿರುಗು ಪೋಲೀಸರು ಯಾಕೆ ಬಂದರೋ…” ಮುಂದೆ ಅಮ್ಮನ ದನಿ ಏಕೋ ಒಮ್ಮೆಲೇ ತಗ್ಗಿತು. ಪಾರ್ವತಕ್ಕ ತನ್ನ ಬಗ್ಗೆ ಏನನ್ನೋ ಕೇಳಿರಬೇಕು. ಅಮ್ಮನ ದನಿಯಲ್ಲಿ ಕಾತರವಿತ್ತು. “ಮೋರೆ ಕೆಂಪು ಕೆಂಪು ಕಾಣಿಸುತ್ತಿದೆ” ಎಂದಂತೆ ಕೇಳಿಸಿತು. ಮುಂದೇನು ಕೇಳಿಸಲಿಲ್ಲ. ಆದರೆ ಅವರಿಬ್ಬರೂ ಇನ್ನೂ ಮಾತನಾಡುತ್ತಲೇ ಇದ್ದಾರೆ ಎಂಬುದರ ಅರಿವು ಬರದೇ ಇರಲಿಲ್ಲ. ದೇವರ ಕೋಣೆಯ ಬಾಗಿಲ ಮೇಲಿನ ಆ ಕಲೆ ಈಗ ತುಸು ಕೆಂಪಗಾದಂತೆ ಕಂಡಿತು. ಅಮ್ಮನನ್ನು ಕರೆದು ತೋರಿಸಲೇ?-ಅನ್ನಿಸಿತು. ಆದರೆ ಹಾಗೆ ಕರೆಯುವ ತ್ರಾಣ ಇಲ್ಲವೆನಿಸಿತು. ತಿರುಗಿ ನಿದ್ದೆ ಬರುತ್ತಿದ್ದಂತೆ ಅನ್ನಿಸಿತು. ಜ್ವರ ಇನ್ನೂ ಹೆಚ್ಚಿರಬೇಕು. ಕಣ್ಣ ಮುಂದೆ ಯಾರದೋ ಮಸಕುಮಸಕು ರೂಪ. ಪೊಕ್ಕನ ಹೊಸ ಅಣ್ಣನದೇ ಇರಬೇಕು. ಹೌದೋ ಅಲ್ಲವೋ ಎಂದು ತಿಳಿಯುವ ಮೊದಲೇ ಅವನಿಗೆ ತಿರುಗಿ ನಿದ್ದೆ ಹತ್ತಿತು.

ನಿದ್ದೆಯಿಂದ ಎಚ್ಚರವಾದಾಗ, ನೀಲಕಂಠನಿಗೆ ಕೆಲಹೊತ್ತು ತಾನು ಎಲ್ಲಿದ್ದೇನೆ ಎಂಬುದೇ ತಿಳಿಯಲಿಲ್ಲ. ಕೈಕಾಲು ಅಲುಗಾಡಿಸುವ ತಾಕತ್ತೇ ಇರಲಿಲ್ಲ. ಎಲ್ಲವೂ ಭಾರ ಭಾರವಾದಂತೆ. ಮೋರೆ ದಪ್ಪದಪ್ಪವಾದಂತೆ. ಸೂರ್ಯ ಅದಾಗಲೇ ಪಶ್ಚಿಮಕ್ಕೆ ತಿರುಗಿದ್ದರಿಂದ ಕೋಣೆಯಲ್ಲಿಯ ಕತ್ತಲೆ ಇನ್ನೂ ಹೆಚ್ಚಿತ್ತು. ಆದರೆ ಆ ಕತ್ತಲೆಯಲ್ಲೂ ಕನ್ಣಕಣ್ಣಮುಂದೆ ಬಣ್ಣಬಣ್ಣದ ಚಕ್ರಗಳು ತಿರುಗಿದಂತೆ ಅನಿಸಹತ್ತಿತು-ನೀಲಿ, ಕೆಂಪು, ನೇರಿಲ! ಅಮ್ಮ ಹಾಲು ಕರೆಯಲು ಕೊಟ್ಟಿಗೆಗೆ ಹೋಗಿರಬೇಕು, ಅಮ್ಮ ‘ಕಾಳೀ’ಎಂದು ದನಕ್ಕೆ ಗದರಿಸಿದ್ದರ ದನಿಯೊಂದಿಗೆ ಕೊಟ್ಟಿಗೆಯಲ್ಲಿಯ ಕರು ‘ಅಂಬಾ’ ಎಂದದ್ದೂ ಕೇಳಿಸಿತು. ಆಗೇರ ಎಂಕೂನ ಮನೆಯಲ್ಲಿ ಗಾಡಿಗತನ ‘ಓ ಹೋ ಹೋ ಹಾಹಕ್’ ಶುರುವಾಗಿತ್ತು. ದೂರ, ಗಣಪಯ್ಯಶೆಟ್ಟರ ಅಂಗಡಿಯಲ್ಲಿ ಗಣಪಯ್ಯಶೆಟ್ಟರು ಗಲ್ಲೆಯ ಮೇಲೆ ಕುಳಿತೇ “ಥತ್ ಸೂಳೇ ಮಗನೇ” ಎಂದು ಯಾರನ್ನೋ ಬೈದರು. ಅದಕ್ಕೂ ಆಚೆಯ ಚಕ್ರಖಂಡೇಶ್ವರ ದೇವಸ್ಥಾನದಲ್ಲಿ ಗಂಟೆ‘ಘಣ್’ ಎಂದಿತು: ಹೊರಗಿನ ಸೃಷ್ಟಿಯೆಲ್ಲ ಧ್ವನಿಯಾಗಿತ್ತು. ಆದರೆ ಈ ಧ್ವನಿಯೆಲ್ಲ ಎಲ್ಲಿಂದ ಬರುತ್ತಿದೆ ಎನ್ನುವುದು ಮಾತ್ರ ಸರಿಯಾಗಿ ತಿಳಿಯುತ್ತಿರಲಿಲ್ಲ. ಕಣ್ಣಮುಂದೆ ಬಣ್ಣಬಣ್ಣದ ಚಕ್ರಗಳು. ಕಿವಿಯಲ್ಲಿ, ಉಗಮ ಗೊತ್ತಾಗದ ಧ್ವಾಣೀಯಾ ಟೇರೇಘಾಲೂ…

“ಎ ಎ ಎ! ಓಳಗೆಒಳಗೆ ಹೋಗಬೇಡ-ಹೋಗಬೇಡ. ಅಲ್ಲೇ ನಿಲ್ಲು” ಅಮ್ಮ ದನಿಯೆ? ಇರಬೇಕು. ಅಬ್ಬಾ! ಎದೆ ಧಸ್ ಎಂದಿತು. ಅಮ್ಮ ಅಂಗಳಕ್ಕೆ ಬಂದಿರಬೇಕು. ದೀಪವನ್ನಾದರೂ ಹಚ್ಚಿದರೆ ಆಗುತ್ತಿತ್ತಲ್ಲ. ಅಮ್ಮ ಮಾತನಾಡಿದ್ದು ಯಾರೊಂದಿಗೆ? ಓ! ಪೊಕ್ಕನ ದನಿಯಲ್ಲವೆ? ಹೌದು, ಅಮ್ಮ ಪೊಕ್ಕ ಜಗಲಿಯ ಮೇಲೆ ನಿಂತೇ ಮಾತನಾಡುತ್ತಿದ್ದಾರೆ. ಕತ್ತಲೆ ತುಂಬಿದ ಬಾವಿಯ ತಳದಿಂದ ಬರುತ್ತಿದೆಯೇನೋ ಎಂಬಂತೆ ಒಂದೊಂದೇ ಶಬ್ದ ಒಳಗೆ ಬರುತ್ತಿದೆ:
“ನನಗೆ ಹೋದ ವರ್ಷವೇ ಮೈಲಿ ಬಂದು ಹೋಗಿದ್ದರಿಂದ ಈ ವರ್ಷ ತಿರುಗಿ ಬರುವ ಭಯವಿಲ್ಲವಂತೆ.”
“ಆದರೂ ಒಳಗೆ ಹೋಗುವುದು ಬೇಡ. ಇಲ್ಲಿಯೇ, ನನ್ನ ಹತ್ತಿರ ಹೇಳು. ಅವನು ಅಲ್ಲಿಂದಲೇ ಕೇಳಲಿ.”

ಪೊಕ್ಕ ಏನೇನೋ ಹೇಳುತ್ತಿದ್ದ: ಅವನ ಅಣ್ಣ ಹೋದಲ್ಲಿಯ ಜನ ತಮ್ಮ ಅಡಿಗೆಯನ್ನು ತಾವೇ ಮಾಡಿಕೊಳ್ಳುತ್ತಿದ್ದರಂತೆ. ಪೋಲೀಸರ ಕಾವಲಿನಲ್ಲಿ ದಿನವಿಡೀ ದುಡಿಯುತ್ತಿದ್ದರಂತೆ. ಮಲಗಲಿಕ್ಕೆ ಸರಿಯಾಗಿ ಹಾಸಿಗೆ ಇರಲಿಲ್ಲವಂತೆ. ಎಲಾ ಇವನ! ಪೊಕ್ಕನ ದನಿಯಲ್ಲಿ ಒಮ್ಮೆಲೇ ಹುರುಪು ಬಂದಿತಲ್ಲ! ಅಮ್ಮನ ಮುಂದೆ ಎಂತಹುದೋ ನಾಟಕ ಮಾಡಿ ತೋರಿಸುತ್ತಿರಬೇಕು…ಆ ದ್ವೀಪದ ಮೇಲಿನ ಸಿದ್ಧೀ ಜನರಿಗೆ ಪರಕಾಯಪ್ರವೇಶದ ವಿದ್ಯೆ ಬರುತ್ತಿತ್ತಂತೆ. ಒಮ್ಮೆ ಒಬ್ಬ ಸಿದ್ದಿ ಹುಲಿಯ ವೇಷ ಧರಿಸಿ ಇವನ ಅಣ್ಣನ ಮುಂದೆ ಬಂದನಂತೆ. ಅರೆ! ಅರೆ!ಅರೆ! ಬಣ್ಣ ಬಣ್ಣ ಬಣ್ಣ! ಹುಲಿಯ ಪಟ್ಟೆಗಳಲ್ಲವೆ ಅವು! ಹುಲಿಯ ಹಾಗೆ ಗರ್ಜಿಸುತ್ತಾನಲ್ಲ, ಪೊಕ್ಕ! ಪೊಕ್ಕನದೇ ದನಿಯೇ ಅದು? ಎಲಾ ಇವನ…ನೀಲಕಂಠನಿಗೆ ತಲೆ ಗಿಮ್ ಎನ್ನಹತ್ತಿತು. ಅಮ್ಮನನ್ನು ಕರೆಯಲೆ? ಎನ್ನಿಸಿತು. ಆದರೆ ಕರೆಯಲು ದನಿ ಏಳದಾಯಿತು. ಹೌದು ಪೊಕ್ಕನದೇ ದನಿ. ಪೊಕ್ಕ ತಿರುಗಿ ಮನುಷ್ಯನಾಗಿದ್ದ: “ಅಣ್ಣ ಸಂಜೆ ಎಲ್ಲೂ ಹೊರಗೆ ಹೋಗಲಿಲ್ಲ. ಸ್ವಲ್ಪ ತಲೆನೋವು ಎಂದು ಮಲಗಿದ್ದ…”

ಪೊಕ್ಕ ಹೊದನೆಂದುಹೋದನೆಂದು ತೋರುತ್ತದೆ. ಅಮ್ಮ ಒಳಗೆ ಬಂದಳು. “ಎಚ್ಚರವಾಗಿದಿಯೇನೋ?” ಎಂದು ಕೇಳಿದಳು. ಅಡಿಗೆಮನೆಯತ್ತ ಹೋಗುತ್ತ “ದೀಪ ಹಚ್ಚಿ ತರುತ್ತೇನೆ” ಎಂದಳು. ಕಂದೀಲನ್ನು ಹಚ್ಚಿ ತಂದು ಹತ್ತಿರ ಬಂದು ಮೋರೆ, ಮೈ ನೋಡಿದಳು. ಅವಳ ಮೈ ‘ಶಿರ್’ ಅಂದಿರಬೇಕು, ಅನ್ನಿಸಿತು. ಅವಳ ಬಾಯಿಂದ ಸುಸ್ಕಾರ ಹೊರಟಿತು. ಗೋಡೆಯ ಗೂಟಕ್ಕೆ ಲಾಟನವನ್ನು ತೂಗುಹಾಕಿ ಅಮ್ಮ ದೇವರ ಕೋಣೆಗೆ ನಡೆದಳು. ದೇವರ ಮೂರ್ತಿಯ ಮುಂದೆ ನಿಂತು ಏನೋ ಹೇಳಿಕೊಳ್ಳುತ್ತಿದ್ದಳು. ದೇವರ ಕೋಣೆಯಿಂದ ಹೊರಬಂದಳು. ಬರುವಾಗ ತಂದ ಪ್ರಸಾದವನ್ನು ಅವನ ತಲೆಯ ಮೇಲೆ ಹಾಕಿದಳು. “ಸ್ವಲ್ಪ ಗಂಜಿ-ನೀರು ಕುಡಿಯುವಿಯಾ?” ಎಂದು ಕೇಳಿದಳು. ಇವನು ‘ಇಲ್ಲ’ ಎನ್ನುವಂತೆ ತಲೆಯಲ್ಲಾಡಿಸಿದ. ಮಾತನಾಡೋಣ ಅಂದರೆ ನಾಲಿಗೆ ಅಲ್ಲಾಡಿಸಲೂ ಆಗುತ್ತಿರಲಿಲ್ಲ. ಎಲ್ಲವೂ ದಪ್ಪದಪ್ಪ. ಅಮ್ಮ ಅಂಗಳಕ್ಕೆ ಹೋಗಿ ಯಾರನ್ನೋ ಕರೆದಂತಾಯಿತು. ಪಾರ್ವತಕ್ಕನನ್ನು ಕರೆದಿರಬೆಕು. ಕಾತರ ತುಂಬಿದ ದನಿಯಲ್ಲಿ ಮಾತನಾಡುತ್ತಿದ್ದಂತೆ ಕೇಳಿಸಿತು. ತನ್ನ ಬಗ್ಗೇ ಮಾತನಾಡುತ್ತಿರಬೇಕು: “ನೀನು ಹೆದರಬೇದ, ಗೋಕರ್ಣದ ಮ್ಹಂಕಾಳಮ್ಮ, ಬಾಡದ ಅಮ್ಮ ಕಾಯುತ್ತಾರೆ. ಗುಣವಾದದ್ದೆ ಒಮ್ಮೆ ಅಲ್ಲಿ ಹೋಗಿ ಪೂಜೆ ಮಾಡಿಸಿ ಬಂದರಾಯಿತು…”

ನೀಲಕಂಠನಿಗೆ ತಿರುಗಿ ಕಣ್ಣ ಮುಂದೆ ಬಣ್ಣ ಕಟ್ಟಹತ್ತಿದವು- ನೀಲಿ, ನೇರಿಲ, ಕೆಂಪು. ಹೊರಗಿನ ಸದ್ದೆಲ್ಲ ಒಮ್ಮೆಗೆಲೇ ನಿಂತಿತ್ತು. ಎಲ್ಲ ಸ್ತಬ್ದ. ಎಲ್ಲ ನಿಶ್ಯಬ್ದ…ಆಗ ಪೊಕ್ಕ ಹೇಳಿದ ಅವನ ಅಣ್ಣನ ಕತೆ ತಿರುಗಿ ನೆನಪಾಗಹತ್ತಿತು. ಎಲ್ಲವೂ ಅಸ್ಪಶ್ಟಅಸ್ಪಷ್ಟ. ಕಂದೀಲಿನ ಬೆಳಕಿಗೋ ಏನೋ ಕಣ್ಣುಗಳು ಉರಿಯಹತ್ತಿದವು. ಬೆಳಕನ್ನು ತಪ್ಪಿಸಲು ಗೋಡೆಯ ಕಡೆಗೆ ಮೋರೆ ಮಾಡಲೆಂದು ಪಕ್ಕ ಬದಲಿಸಲು ಯತ್ನಿಸಿದ. ಆದರೆ ಆಗಲಿಲ್ಲ. ಅಂಗಳದಲ್ಲಿ “ಚರ್-ಮುರ್”ಎಂದು ಮೆಟ್ಟಿನ ಸದ್ದು. ಅಪ್ಪ ಬಂದಿರಬೇಕು. ಇಂದು ಅಂಗಡಿಯಿಂದ ಇಷ್ಟೇಕೆ ಬೇಗ ಬಂದ? ಅಮ್ಮ ಹೇಳಿಕಳಿಸಿರಬೇಕು. ಹೊರಗೆ ಜಗುಲಿಯ ಮೇಲೆ ಗುಜುಗುಜು ಮಾತು. “ಅನಂತರಾಯರನ್ನು ಕರೆಯಿಸಿ ಏನೂ ಉಪಯೋಗವಿಲ್ಲಾ. ಇದಕ್ಕೇನೂ ಔಷಧವಿಲ್ಲವಂತೆ. ಎಲ್ಲ ‘ದೈವೇಚ್ಛೆ’ ಎಂದರು. “ಹುಡುಗನಿಗೆ ನಿದ್ದೆ ಹತ್ತಿದೆಯೆ?” ಎಂದು ಕೇಳಿದರು. ತುಸು ಹೊತ್ತು ಎಲ್ಲ ಮೌನ. ಆಮೇಲೆ “ಭಾಗೀರತಕ್ಕನ ಮನೆಯಲ್ಲಿ ಪೋಲೀಸರು ಬಂದಿದ್ದರಂತಲ್ಲ? ಯಾಕೋ? ಅಮ್ಮ ಕೇಳಿದಳು. “ಅದೇನಿಲ್ಲ. ಕೈದಿ ಹೀಗೆ ಒಮ್ಮಿಂದೊಮ್ಮೆಲೇ ಬಂದಾಗ ಓಡಿ ಬಂದದ್ದೋ ಬಿಡುಗಡೆಯಾಗಿ ಬಂದದ್ದೋ ಎಂಬುದನ್ನು ತಪಾಸು ಮಾಡಿ ನೋಡುವುದು ವಾಡಿಕೆ. ತಪಾಸಣೆ ಮಾಡಿ ಹೋದರು. ಬಿಡುಗಡೆಯಾಗಿಯೇ ಬಂದಿದ್ದಂತೆ ಹುಡುಗ. ಅಡ್ಡಿಯಿಲ್ಲ, ಯಾರದೋ ತಪ್ಪಿಗೆ ಶಿಕ್ಷೆ ಭೋಗಿಸಿ, ಇಲ್ಲದ ಕಷ್ಟಪಟ್ಟು ತಂದೆತಾಯಿಗಳಿಗೆ ಮುದಿ ವಯಸ್ಸಿನಲ್ಲಾದರೂ ನೆರವಾಗಲು ಬಂದಂತಾಯಿತು. ಸುದ್ದಿ ಕೇಳಿ ಹೋಗಿದ್ದೆ. ಪದ್ಮನಾಭ ಖುಶಿಯಲ್ಲಿದ್ದ. ಹುಡುಗ ಮಾತನಾಡಲು ಸಿಗಲಿಲ್ಲ. ಮಲಗಿದ್ದನಂತೆ. ಪ್ರವಾಸದ ದಣಿವಿರಬೇಕು…ನೀನು ಏನೇ ಹೇಳು. ಹುಡುಗನ ನಶೀಬವೇ ಕೆಟ್ಟದ್ದು. ಇಲ್ಲವಾದರೆ ಗೋವೆಯ ಸರಕಾರದಿಂದ ಬಿಡುಗಡೆಯಾದ ಮೇಲೂ ತಿರುಗಿ ನಮ್ಮ ಸರಕಾರದ ಜೈಲು ಕಾಣಬೇಕೆ? ಗೋವೆಯ ಹದ್ದನ್ನು ದಾಟಿ ಕಾರವಾರ ತಲುಪುವುದರೊಳಗಾಗಿ ಜತೆಗೆ ತಂದ ಕಾಗದ-ಪತ್ರಗಳು ಕಳೆದುವಂತೆ. ತಿರುಗೆಲ್ಲ ತಪಾಸಣೆಯಾಗುವ ತನಕ ಎಂಟು ದಿನ ಕಾರವಾರದ ಜೈಲಿನಲ್ಲಿರಬೇಕಾಯಿತು. ಇಲ್ಲವಾದರೆ ಎಂಟು ದಿನ ಮೊದಲೇ ಇಲ್ಲಿರಬೇಕಾಗಿತ್ತು….ನಾಳೆ ಇತ್ತ ಕಡೆ ಬಂದಾನು. ಆದರೆ ಈಗಲೇ ಹೇಳಿಕಳಿಸಿದರೇ ಒಳ್ಳೆಯದೇನೋ-ಇಲ್ಲಿ ಬರದಿರುವಂತೆ…”
“ಇಲ್ಲ, ಅವನು ಬರಲಾರ. ಪೊಕ್ಕನಿಂದ ಸುದ್ದಿ ತಿಳಿಯುತ್ತದೆ. ನೀಲಕಂಠನಿಗೆ ಅಣ್ಣ ಹೇಳಿದ ಕತೆ ಹೇಳಲು ಬಂದಿದ್ದ ಪೊಕ್ಕ. ನಾನು ಒಳಗೆ ಹೋಗಲು ಬಿಡದೆ ಇಲ್ಲೇ ತಡೆದು ನಿಲ್ಲಿಸಿದೆ.”
“ಧಾರವಾಡ, ಕಮಟೆಗೂ ಪತ್ರ ಬರೆದಿದ್ದೇನೆ-ಮಾಧವ, ಸುರೇಶರಿಗೆ: ಇಲ್ಲಿಯ ಈ ಗಡಿಬಿಡಿ ಕಡಿಮೆಯಾಗುವ ತನಕ ಇಲ್ಲಿಗೆ ಬರಬೇಡಿರಿ ಎಂದು.”
“ಅಂದರೆ ರಜೆಯಲ್ಲಿ ಅಲ್ಲಿಯೇ”
“ಅದೇ ಒಳ್ಳೆಯದಲ್ಲವೇ?”
“ಅಹುದೇನೋ, ಅಲ್ಲಿದ್ದರೂ ಅಡ್ಡಿಯಿಲ್ಲ. ಸುಖವಾಗಿ ಇದ್ದಾರೆ ಎಂದು ಕೇಳಿದರೇ ಸಮಾಧಾನ. ಹುಡುಗ ಪಾಪ ನಿನ್ನೆ ಅಣ್ಣಂದಿರ ನೆನಪು ತೆಗೆದಿದ್ದ-”

ನೀಲಕಂಠನಿಗೆ ಊರಲ್ಲಿಯ ಮೈಲಿಬೇನೆಯ ಉಪದ್ರವದಿಂದಾಗಿ ಅಣ್ಣಂದಿರು ರಜೆಯಲ್ಲಿ ಊರಿಗೆ ಬರುವುದಿಲ್ಲ ಎಂದು ತಿಳಿದು ಕೆಡುಕೆನಿಸಿತು. ಪೊಕ್ಕನ ಹೊಸ ಅಣ್ಣ ಬಂದ ಸುದ್ದಿ ಕೇಳಿ ಎಷ್ಟು ಖುಷಿಯಾಗುತ್ತಿದ್ದರೋ! ಅಪ್ಪನಿಗೆ ಹೇಳಬೇಕು-ಪತ್ರ ಬರೆದಾದರೂ ತಿಳಿಸೆಂದು. ಆದರೆ ಅಪ್ಪ ತನ್ನನ್ನು ನೋಡಲು ಒಳಗೆ ಬಂದಾಗ ಕಣ್ಣುಗಳನ್ನಾಗಲೀ ಬಾಯನ್ನಾಗಲೀ ತೆರೆಯುವುದು ಸಾಧ್ಯವಾಗಿ ತೋರಲಿಲ್ಲ. ಅಬ್ಬಾ! ಇದೆಂತಹ ನೋವು. ಮೈಯನ್ನೆಲ್ಲ ನೆಲಕ್ಕೆ ಕಟ್ಟಿಹಾಕಿದಂತೆ, ಎಂತಹ ಬಿಗಿತ!

ದೂರ ಕೇರಿಯ ಮನೆಯಲ್ಲೆಲ್ಲೋ ಭಜನೆ ಶುರುವಾಗಿರಬೇಕು. ತಾಳ ಢೋಲಕಗಳ ಆವಾಜಿನೊಂದಿಗೆ ಕೇಳಿಬರುತ್ತಿದ್ದ ಭಜನೆಯ ರಾಗ-“ನೀನ್ಯಾಕೋ ನಿನ್ನ ಹಂಗ್ಯಾಕೋ…”ಅಜ್ಜ ಸತ್ತ ರಾತ್ರಿಯ ನೆನಪನ್ನು ತರಹತ್ತಿತು. ಸಂಜೆಯಾಹುವಸಂಜೆಯಾಗುವ ಹೊತ್ತಿಗೇ ಅಜ್ಜನಿಗೆ ಮಾತು ನಿಂತಿತ್ತು. ಅಂದಿನ ರಾತ್ರಿ ಕಳೆಯುವುದು ಕಷ್ಟ ಎನ್ನುತ್ತಿದ್ದರು ಹಿರಿಯರು. ನಾನು, ನನ್ನ ಅಣ್ಣಂದಿರು ಆ ರಾತ್ರಿ ಮಲಗಲು ನೆರೆಮನೆಯ ಪಾರ್ವತಕ್ಕನ ಮನೆಗೆ ಹೋಗಿದ್ದೆವು. ಮಧ್ಯರಾತ್ರಿಯ ಹೊತ್ತಿಗೆ ಪಾರ್ವತಕ್ಕನ ಗಂಡ ಅವಸರ ಅವಸರವಾಗಿ ನಮ್ಮನ್ನೆಲ್ಲ ಎಬ್ಬಿಸಿ ನಮ್ಮ ಮನೆಗೆ ಕರೆದುಕೊಂಡು ಹೋದ. ಅಜ್ಜನ ಕೊನೆಯ ಗಳಿಗೆ ಹತ್ತಿರವಾಗಿತ್ತಂತೆ. ನಮ್ಮೆಲ್ಲರ ಕೈಯಿಂದ ದೇವರ ಕೋಣೆಯಲ್ಲಿಟ್ಟ ಚಂಬಿನಲ್ಲಿಯ ‘ಬಾಗೀರಥಿ’ಯನ್ನು ಚಮಚೆಯಿಂದ ಅಜ್ಜನ ಬಾಯಲ್ಲಿ ಹಾಕಿಸಿದರು. ಅಜ್ಜನ ಹಲ್ಲಿಲ್ಲದ ಬಾಯಿ ತೆರೆದೇ ಇತ್ತು. ನಾವು ಹಾಕಿದ ನೀರು ಗಂಟಲೊಳಗೆ ಹೋಗುವಾಗ ಗರ್‌ಗರ್ ಸದ್ದು ಮಾಡುತ್ತಿತ್ತು. ಕಣ್ಣುಗಳು ತೆರೆದೇ ಇದ್ದುವು. ಮುಂಜಾವಿನ ಕೋಳಿ ಕೂಗುವ ಹೊತ್ತಿಗೆ ಅಜ್ಜ ತೀರಿಕೊಂಡಿದ್ದ. ಮನೆಯವರೆಲ್ಲ- ಅಪ್ಪ ಅಮ್ಮ ಕೂದಕೂಡ ಅಳುತ್ತಿದ್ದರು. ನಾನೂ ಅತ್ತಿದ್ದೆ, ಹೆದರಿದ್ದೆ, ಬೆಳಿಗ್ಗೆ ಅಜ್ಜನ ಸತ್ತ ದೇಹಕ್ಕೆ ಸ್ನಾನ ಮಾಡಿಸಿ, ನಾಮ-ಮುದ್ರೆ ಹಚ್ಚಿ, ಬಿದಿರಿನ ಸಿದಿಗೆಯ ಮೇಲೆ ಮಲಗಿಸಿ, ಬೆಳ್ಳಗಿನ ಅರಿವೆ ಮುಚ್ಚಿ, ಹೆಗಲ ಮೇಲೆ ಹೊತ್ತ ಕೂಡಲೇ ಪೊಕ್ಕನ ಅಮ್ಮ ದೊಡ್ಡ ದನಿಯಲ್ಲಿ ‘ಮನೆಯ ಬೀಗದ ಹಾಗೆ ಇದ್ದಿರಿ; ಹೋಗಿಬಿಟ್ಟಿರಲ್ಲ” ಎಂದು ರಾಗ ತೆಗೆದು ಅಳುತ್ತಿದ್ದಳು. ಅಜ್ಜ ಸತ್ತು ಎಷ್ಟು ಕಾಲವಾಯಿತೋ? ನೀಲಕಂಠನಿಗೆ ನೆನಪಾಗಲಿಲ್ಲ. ಭಜನೆ ಸದ್ದು ಒಮ್ಮೆಗೆಲೇ ದೊಡ್ಡದಾಗಿತ್ತು: ತಲೆ ಸಿಡಿಯುತ್ತಿದ್ದಂತೆ ಅನಿಸಿತು. ಕೆಲಹೊತ್ತಿನ ಮೇಲೆ ನಿದ್ದೆ ಬರಹತ್ತಿತು. ಅಮ್ಮ ಅಪ್ಪ ಎಲ್ಲಿ? ಯಾರದೂ ಸುಳುವಿಲ್ಲವಲ್ಲ? ಅಡಿಗೆಮನೆಯಲ್ಲಿದ್ದಿರಬಹುದೆ? ಮೂಲೆಯಲ್ಲೆಲ್ಲೋ ಹಲ್ಲಿ ಲೊಚಗುಟ್ಟಿತು. ಕಣ್ಣು ತೆರೆದು ನೋಡಬೇಕು ಎಂದರೆ ಆಗಲಿಲ್ಲ ಹಾಗೇ ನಿದ್ದೆಹೋದ…

ಅರೆನಿದ್ದೆಯಲ್ಲಿರುವಾಗ ಕಣ್ಣಮುಂದೆ ಯಾರದೋ ಮೋರೆ, ಮೋರೆ ಮಾತ್ರ: ಕತ್ತಲೆಯ ಹೊಟ್ಟೆಯೊಳಗಿಂದ ಮೆಲ್ಲನೆ ಹೊರಬರಹತ್ತಿತು. ಅಜ್ಜನದಿರಬಹುದೇ? ಇರಬೇಕು: ಅಂತಹದೇ ಹಲ್ಲಿಲ್ಲದ ಬಾಯಿ. ತೆರೆದೇ ಇತ್ತು. ಎವೆ ಅಲುಗಾಡದ, ತೆರೆದೇ ಇದ್ದ ಕಣ್ಣುಗಳು. ಇಷ್ಟಗಲವಾಗಿ ಇಲಿಯ ಬಿಲಗಳ ಹಾಗೆ ಅರಳಿದ ಮೂಗಿನ ಹೊರಳೆಗಳು. ಅಲ್ಲ ಅಲ್ಲ. ಅಜ್ಜನ ಮೋರೆ ಅಲ್ಲವೇ ಅಲ್ಲ. ಮೋರೆ ಹತ್ತಿರ ಹತ್ತಿರವಾಗಹತ್ತಿತು. ಕೊನೆಗೆ ತೀರ ಹತ್ತಿರ ಬಂದು ನಿಂತಿತು. ನೀಲಕಂಠ ಹೆದರಿ ಚೀರಿಕೊಂಡ. ಅಡಿಗೆಮನೆಯಿಂದ ಅಮ್ಮ ಅಪ್ಪ ಓಡಿ ಬಂದರು. ಸಣ್ಣದು ಮಾಡಿಟ್ಟ ಕಂದೀಲಿನ ದೀಪವನ್ನು ದೊಡ್ಡದು ಮಾಡಿದರು. “ಕನಸು ಬಿತ್ತೇನೋ” ಎಂದು ಕೇಳಿದರು. ಹೆದರಿಕೆಯಿಂದ ನಡುಗುವ ತುಟಿಗಳಿಂದ ಮಾತು ಹೊರಗೆ ಬರಲ್ಲಿಲ್ಲಬರಲಿಲ್ಲ. ತುಸು ಹೊತ್ತಿನ ಮೇಲೆ ತನ್ನಷ್ಟಕ್ಕೇ ಎಂಬಂತೆ “ಪೊಕ್ಕನ ಅಣ್ಣ ಬಂದಿದ್ದ,: ಎಂದ. ” ಪೊಕ್ಕನ ಅಣ್ಣ ಬಂದರೆ ಹೆದರಬೇಕೇನೋ ನಿನಗೆ ತುಸು “ಹುಷಾರಾದ ಮೇಲೆ ನಿನ್ನನ್ನೂ ನೋಡಲು ಬಂದಾನು” ಎಂದ ಅಪ್ಪ. ಇವನು ಇನ್ನೊಮೆಇನ್ನೊಮ್ಮೆ ಹೆದರಿ “ಬೇಡ ಬೇಡ ಬೇಡಾ” ಎಂದ. ಅವನು ಇನ್ನೂ ನಿದ್ದೆಯಲ್ಲೇ ಇದ್ದುದನ್ನು ತಿಳಿದು, ‘ನೀಲಕಂಠಾ…. ಎಚ್ಚರಾಗು, ಈಗಲಾದರೂ ಸ್ವಲ್ಪ ಗಂಜಿಯ ತಿಳಿ ಕುಡಿ” ಎಂದಳು, ಅವನ ತಾಯಿ. ನೀಲಕಂಠನಿಗೆ ಎಚ್ಚರವಾಗಿ ಕಣ್ತೆರೆದ. ಆದರೆ ಕಂದೀಲಿನ ಬೆಳಕನ್ನು ನೋಡಲಾಗದೇ ತಿರುಗಿ ಮುಚ್ಚಿದ. “ಗಂಜೀ ತಿಳಿ ಕುಡಿಯುತ್ತೀಯೋ?” ಎಂದು ಅಮ್ಮ ಇನ್ನೊಮ್ಮೆ ಕೇಳಿದಾಗ ತಲೆ ಅಲ್ಲಾಡಿಸಿದ. “ಬೇಡವಾದರೆ ಬೇಡ. ಉಪವಾಸ ಮಾಡಿದರೇನೇ ಒಳ್ಳೆಯದು,” ಎನ್ನುತ್ತ ಅವನ ಅಪ್ಪ ಕಂದೀಲನ್ನು ತಿರುಗಿ ಗೂಟಕ್ಕೆ ತೂಗಕಾಕಿತೂಗಹಾಕಿ ದೀಪವನ್ನು ಸಣ್ಣದು ಮಾಡುವಾಗ ನೀಲಕಂಠನ ತಾಯಿ, “ದೀಪ ದೊಡ್ಡದೇ ಇರಲಿ, ಅಂದರಾದರೂ ಹೆದರಿಕೆ ಆಗಲಿಕ್ಕಿಲ್ಲ” ಎಂದಳು….

ಮುಂದೆ, ತಾನು ಯಾವಾಗ ನಿದ್ದೆಹೋದನೋ ನೀಲಕಂಠನಿಗೆ ತಿಳಿಯಲಿಲ್ಲ. ಎಚ್ಚರವಾದಾಗ ಅವನಿಗೆ ಮೈಯೆಲ್ಲ ತುಸು ಹಗುರಾದಂತೆ ಅನಿಸಿತು. ಈ ನಡುವೆ ಮೈತುಂಬ ಎದ್ದ ಮೈಲಿಯ ಬೊಕ್ಕೆ ಹಾಗೂ ತಲೆಗೇರಿದ ಜ್ವರ ಇವುಗಳಿಂದಾಗಿ ಐದು ದಿನಗಳು ಕಳೆದುಹೋದದ್ದೇ ತಿಳಿಯಲಿಲ್ಲ. ಎಚ್ಚರವಾಗಿ ಕಣ್ತೆರೆದಾಗ ಅವನ ಜ್ವರ ಕಡಿಮೆಯಾಗಿತ್ತು. ಮಬ್ಬುಗತ್ತಲೆ ತುಂಬಿದ ಕೋಣೆ ತಿರುಗಿ ಕಣ್ಣಿಗೆ ಬಿದ್ದಿತ್ತು. ನಾಲ್ಕು ದಿನ ಮರೆಯಾದ ಹೊರಗಿನ ಸೃಷ್ಟಿಯೂ ಈಗ ಕರ್ಣಗೋಚರವಾಗುತ್ತಿತ್ತು. ಮೈಯನ್ನು ತುಂಬಿದ ಬೊಕ್ಕೆಗಳನ್ನು ನೋಡುವ ಧೈರ್ಯವಾಗದಿದ್ದರೂ ಮನಸ್ಸು ತುಸು ಗೆಲುವಾಗಿತ್ತು. ಅಪ್ಪ ಅಮ್ಮಂದಿರ ಹತ್ತಿರ ಮಾತನಾಡಲು ಜೀವ ತವಕಗೊಂಡಿತ್ತು. ಅಪ್ಪ ಅಮ್ಮ ಎಲ್ಲಿರಬಹುದು? ಹೊತ್ತು ಎಷ್ಟಾಗಿರಬಹುದು? ಇದೇಕೆ ಮನೆಯಲ್ಲಿ ಯಾರದೂ ಸುಳುವಿಲ್ಲ? ಪೊಕ್ಕ ತಿರುಗಿ ಬಂದಿದ್ದನೆ? ಅಂಗಳದಲ್ಲಿ ಯಾರೋ ಮಾತನಾಡುತ್ತಿದ್ದ ಸದ್ದಲ್ಲವೆ? ಅರೆ! ಎಷ್ಟೆಲ್ಲ ಮಂದಿ ಕೂಡಿದ್ದಾರೋ, ಹೀಗೇಕೆ ಗುಜುಗುಜು ಮಾತನಾಡುತ್ತಿದ್ದಾರೆ?
“ರಾಮರಾಮಾ! ಹೀಗೂ ಆಗಬೇಕಿತ್ತೇ? ಎಲ್ಲ ಬಿಟ್ಟು ಇಲ್ಲಿ, ತಂದೆತಾಯಿಗಳ ಇದಿರಿನಲ್ಲಿ? ಈ ಮುದಿವಯಸ್ಸಿನಲ್ಲಿ ಇದನ್ನೂ ನೋಡುವುದಿತ್ತೇ?”
“ಹೇಗೂ ಈ ಮಗ ತಮ್ಮ ಪಾಲಿಗೆ ಇಲ್ಲವೆಂದು ಬಗೆದು ಅವನು ತಿರುಗಿ ಬರುವ ಆಸೆ ಬಿಟ್ಟು ಕುಳಿತಿರುವಾಗ? ಊರಿಗೆ ಬಂದ ಮೇಲೆ ಒಬ್ಬರಿಗೂ ಮೋರೆ ತೋರಿಸಿ ಗೊತ್ತಿಲ್ಲ. ಬಂದ ಸಂಜೆಯೇ ತಲೆನೋವು ಎಂದು ಮಲಗಿದ.”
“ಅನಂತರಾಯರು ಹೇಳುತ್ತಿದ್ದರು, ಅವನಿಗೆ ಬೇನೆ ತಗುಲಿದ್ದು ಇಲ್ಲಿ ಅಲ್ಲವೇ ಅಲ್ಲವೆಂದು. ಕಾರವಾರದ ಜೈಲಿನಲ್ಲಿರುವಾಗಲೇ ತಗಲಿರಬೇಕಂತೆ. ಜೈಲಿನಲ್ಲೂ ಆಮೇಲೆ ಇಬ್ಬರು ಸತ್ತರಂತೆ.”
“ಅದೆ! ಸಾವನ್ನು ಹೊಟ್ಟೆಯೊಳಗಿಟ್ಟುಕೊಂಡೇ ಬಂದಿರಬೇಕು.”
ಹೀಗೇಕೆ ಇವರೆಲ್ಲ ಗುಂಪುಗಟ್ಟಿ ಮಾತನಾಡುತ್ತಿದ್ದಾರೆ? ಯಾರ ಬಗ್ಗೆ ಮಾತನಾಡುತ್ತಿದ್ದಾರೆ? ನೀಲಕಂಠನಿಗೆ ಏನೊಂದೂ ತಿಳಿಯಲಿಲ್ಲ. ಕೇಳೋಣವೆಂದರೆ ಒಳಗೆ ಬಂದ ಅಮ್ಮ ತನ್ನನ್ನು ಮಾತನಾಡಿಸುವ ಮೊದಲೇ ಅಡುಗೆ ಮನೆಗೆ ನಡೆದುಬಿಟ್ಟಳು…

ನೀಲಕಂಠನಿಗೆ ಜ್ವರ ಪೂರ್ಣ ಇಳಿದು, ಜೀವಕ್ಕೆ ಇದ್ದ ಕುತ್ತನ್ನು ದಾಟಿ, ನೆಮ್ಮದಿಯ ಹಾದಿ ಹಿಡಿಯುವುದರೊಳಗೆ ಇನ್ನೂ ಐದಾರು ದಿನಗಳು ಸರಿದವು. ಎರಡು ವಾರಗಳವರೆಗೆ ಕತ್ತಲೆಯಲ್ಲೇ ಮಲಗಿ ಮಲಗಿ ಬೇಸರಗೊಂಡ ಜೀವ ಹೊರಗಿನ ಬೆಳಕಿಗೆ ಹೋಗಲು ತವಕ

ಪಟ್ಟಿತು ಅನಂತರಾಯರ ಸಲಹೆಯನ್ನು ಪಡೆದು ಅವನನ್ನಂದು ತುಸು ಹೆಚ್ಚು ಬೆಳಕಿದ್ದ, ಸುಣ್ಣ ಬಳಿದು ಸ್ವಚ್ಛಮಾಡಿದ, ಹೊರಗಿನ ಕೋಣೆಗೆ ಸಾಗಿಸಲಾಯಿತು. ಅಲ್ಲಿಯ ಬೆಳಕಿಗೆ ಜೀವ ಹರುಷಗೊಂಡಿತು. ಕಿಡಕಿಯ ಹೊರಗಿನ ಬಿಂಬಲಕಾಯ ಮರದ ಮೇಲೆ ಕಾಗೆಯೊಂದು ಕಾವ್‌ಗುಟ್ಟುತ್ತಿತ್ತು. ಏಕೋ ಪೊಕ್ಕನ ನೆನಪು ಅನಾವರವಾಗಹತ್ತಿತು. ಇದೇಕೆ ಪೊಕ್ಕ ತಿರುಗಿ ಬರಲೇ ಇಲ್ಲ? ಪೊಕ್ಕನ ಅಣ್ಣ ಕೂಡ? ಮನಸ್ಸಿನಲ್ಲಿ ಈ ವಿಚಾರ ಬರುತ್ತಿದ್ದಂತೆಯೇ ಜಗಲಿಯ ಮೆಟ್ಟಿಲುಗಳನ್ನು ಏರಿಬರುತ್ತಿದ್ದ ಪೊಕ್ಕನ ಕೆಮ್ಮಿನ ದನಿ ಕೇಳಿಬಂತು. ಇವನು ತನ್ನ ಉತ್ಸಾಹವನ್ನು ತಡೆಯಲಾಗದೇ, “ಪೊಕ್ಕನೇನೋ?ಇದೇ ಈಗ ನಿನ್ನ ನೆನಪು ಬಂದಿತ್ತು” ಎಂದು ಒದರಿ ಹೇಳಿದ. ಭಾರವಾದ ಹೆಜ್ಜೆ ಇಡುತ್ತ ಪೊಕ್ಕ ಒಳಗೆ ಬಂದ. ಅವನು ಯಾವಾಗ ಒಳಗೆ ಬಂದಾನು, ಅವನಿಗೆ ಯಾವಾಗ ತಾನು ಹೇಳೇನು ಎಂದು ಕಾಯುತ್ತ ಕುಳಿತವನಿಗೆ ಹಾಗೆ ನೀಲಕಂಠ, “ನೋಡು, ಮೊನ್ನೆ ರಾತ್ರಿ ಕನಸಿನಲ್ಲಿ ಯಾರದೋ ದೊಡ್ಡ ಮೋರೆ ಕಣ್ಣ ಮುಂದೆ ನಿಂತಂತಾಯಿತು. ನಾನು ಹೆದರಿ ಚೀರಿಬಿಟ್ಟೆನಂತೆ. ಅಮ್ಮ ಅಪ್ಪ ಕೇಳಿದಾಗ, ಪೊಕ್ಕನ ಹೊಸ ಅಣ್ಣ ಕನಸಿನಲ್ಲಿ ಬಂದಿದ್ದ ಎಂದು ಹೇಳಿದೆನಂತೆ” ಎಂದೊಮ್ಮೆ ನಕ್ಕ. ಪೊಕ್ಕ ನಗಲಿಲ್ಲ. ಮಾತನಾಡಲಿಲ್ಲ. ಇವನ ಹಾಸಿಗೆಯಿಂದ ದೂರ ಒಂದೆಡೆಯಲ್ಲಿ ಮೈಮುದುಡಿ ಕುಳಿತ. ನೀಲಕಂಠನೇ ಮುಂದುವರೆದು, “ಆ ದಿನ ನೀನು ನಿನ್ನ ಅಣ್ಣನನ್ನು ತಿನ್ನಲು ಬಂದ ಹುಲಿಯ ಕತೆ ಹೇಳಿದ್ದಿಯಲ್ಲ? ಹಾಗೆಂದೇ ಇರಬೇಕು, ಕನಸಿನಲ್ಲಿ ಹೆದರಿದ್ದು. ಅಲ್ಲವೇ? ನಿನ್ನಣ್ಣನೆಲ್ಲಿ? ಇಲ್ಲಿ ಬರಲೇ ಇಲ್ಲವಲ್ಲ?” ಎಂದು ಕೇಳಿದ, ಕುತೂಹಲದಿಂದ. ಪೊಕ್ಕ ಕೂಡಲೇ ಮಾತನಾಡಲಿಲ್ಲ. ನೆಲದ ಮೇಲೆ ಕಣ್ಣೂರಿ ಕುಳಿತ. ತುಸು ಹೊತ್ತಿನ ಮೇಲೆ ದೃಷ್ಟಿ ಕೀಳದೆ,
“ಅಣ್ಣ ಹೋದ” ಎಂದ.
“ಅರೇ! ಎಲ್ಲಿಗೆ? ನಾನು ನೋಡಲೇ ಇಲ್ಲವಲ್ಲ? ತಿರುಗಿ ಯಾವಾಗ ಬರುತ್ತಾನಂತೆ?”
“ಅವನು ತಿರುಗಿ ಬರುವುದಿಲ್ಲವಂತೆ.”
ಪೊಕ್ಕ ಒಮ್ಮೆಲೇ ಅಳಹತ್ತಿದ. ಅದಾಗ ಅಲ್ಲಿಗೆ ಬಂದ ನೀಲಕಂಠನ ತಾಯಿ ಅವನನ್ನು ನೋಡಿ, “ಅರೆ ನೀನು? ಯಾವಾಗ ಬಂದೆ?” ಎಂದು ಅವನ ಮೈದಡವುತ್ತ ಒಳಗೆ ಕರೆದೊಯ್ದಳು.
ನೀಲಕಂಠ ಕಕ್ಕಾವಿಕ್ಕಿಯಾದ.
ಎಂದೂ ಕಂಡಿರದ ಪೊಕ್ಕನ ಹೊಸ ಅಣ್ಣ ಹೀಗೆ ಒಮ್ಮಿಂದೊಮ್ಮೆಲೇ ಬಂದುದೇಕೆ? ಒಮ್ಮಿಂದೊಮ್ಮೆಲೇ ಹೊರಟುಹೋದುದೇಕೆ? ಅರ್ಥವಾಗಲಿಲ್ಲ.
ಸುತ್ತಲಿನ ಗೋಡೆಗಳ ಮೇಲೆ, ಮೇಲಿನ ಜಂತೆ ಹಲಗೆಗಳ ಮೇಲೆ ಕಣ್ಣು ಹಾಯಿಸಿದ. ಮೊನ್ನೆ ಮೊನ್ನೆ ಸುಣ್ಣ ಬಳಿದ-ಸ್ವಚ್ಛ, ನಿಷ್ಕಲಂಕ-ಗೋಡೆಗಳನ್ನು ನೋಡುತ್ತ ಒಳಗೆ ಹೋದ ಅಮ್ಮ ಪೊಕ್ಕರು ಹೊರಗೆ ಬರುವುದನ್ನೇ ಇದಿರು ನೋಡಹತ್ತಿದ.
*****
(೧೯೬೪)

ಕೀಲಿಕರಣ ತಪ್ಪು ತಿದ್ದುಪಡಿ : ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ