ಸಣ್ಣನಾತಕ್ಕೂ ಎಲ್ಲರೂ ಮೂಗು ಮುಚ್ಚಿಕೊಂಡು ಬಿಡುವ ನೂರೆಪ್ಪತ್ತು ಮನೆಗಳ ಆ ಪುಟ್ಟ ಗ್ರಾಮದಲ್ಲಿ ಕಥೆ ಹೇಳೋ ಕರಿಯಜ್ಜ ಕಥೆ ಹೇಳುವುದನ್ನು ಬಿಟ್ಟು ಬಿಟ್ಟಿರುವನೆಂಬ ಸುದ್ದಿ ಬಗ್ಗೆ, ತಲಾ ಒಂದೊಂದು ಮಾತಾಡಿಕೊಳ್ಳುವುದು ತಡವಾಗಲಿಲ್ಲ. ಮುದ್ಯಾ ಯಾಕಿಂಗ ಮಾಡಲಾಕತ್ಯಾನ ಅವ್ನೀಗೆ ಬುದ್ಧಿ ನೆಟ್ಟಿಗೈತೋ ಇಲ್ಲೋ ಅಂತ ಕುಂತಲ್ಲಿ ನಿಂತಲ್ಲಿ ತರಾವರಿ ಮಾತಾಡಿಕೊಳ್ಳುವವರೆ, ಕಾಲ ಕೆಟ್ಟೋಯ್ತು ಅಂತ ಒಬ್ಬರು, ಈ ಸಾರಿ ಮಳಿ ಬೆಳಿ ನೆಟ್ಟಗಾಕಲಾಕಿಲ್ಲಂತ ಇನ್ನೊಬ್ಬರು; ಪಾಪ ವಯಸ್ಸಾಯ್ತು… ಊರು ವೋಗಂತಾದೆ ಕಾಡು ಬಾ ಅಂತಾದೆ ಅಂತ ಮಗುದೊಬ್ಬರು. ವಯಸ್ಸಾಗದಂಗಿರೋದಾದ್ರೂ ಯಾರು… ವಯಸ್ಸಾಗೋದಂದ್ರೆ ಹೆಣ್ಣಿನಂಗೆ ಮಾಗೋದು ಕಣಪ್ಪಾ… ಮೈ ಹಣ್ಣಾದಂಗೆಲ್ಲ ಕಥೆಗಳು ಪಟ್‌ಪಟಾಂತ ಹುಟ್ಕೊಂಡು ಬರ್ಬೇಕಪ್ಪಾ ಅಂತ ಮತ್ತೊಬ್ಬರು. ಹೀಗೆ ತಲಾಕೊಂದೊಂದು ಗೊಣಗುವವರೆ. ಕೆಲವರಂತೂ ಆತ ಹೆಂಗ ಕಥಿ ಹೇಳೋದಿಲ್ಲ? ತಾವೊಂದು ಕೈಯಿ ನೋಡುಕೊಂಡೇ ಬಿಡುವುದಂತ ತಂತಮ್ಮ ತುರ್ತು ಅಗತ್ಯಗಳನ್ನು ಮರೆತು ಕೆಳಗೇರಿಯ ಮೂಲಿ ಮುರುಕಟ್ಟಿನಲ್ಲಿದ್ದ ತ್ರಿಕೋನಾಕೃತಿಯ ಝೋಪಡಿಗೆ ದೌಡಾಯಿಸಿ ಪಳುಗಟ್ಟೆಯ ಮೇಲೆ ಆಕಾಶವನ್ನೆಲ್ಲ ತಲೆಮೇಲೆ ಹೊತ್ತುಕೊಂಡವನಂತೆ ಮೊಂಕಾತಿ ಮಂಕಾಗಿ ಕೂತಿದ್ದ ಕಪ್ಪಾತಿ ಕಪ್ಪಗಿದ್ದ ಕರಿಯಜ್ಜನ ಮುಂದೆ ಅಲ್ಲಲ್ಲಿ ಕುಕ್ಕುರುಗಾಲಿಲೆ ಪಿಳಿ ಪಿಳಿ ಕಣ್ಣುಬಿಟ್ಟುಕೊಂಡು ಮಾತು ಹೊಂಡದಂತೆ ಕೂತುಬಿಟ್ಟಿದ್ದರು. ಮುಡುಪು ಗಟ್ಟಿದ್ದ ಕಣ್ಣಂಚಿನ ಸಿಳ್ಳಿನ ಮೇಲೆ ಘೋರಾಯಿಸುತ್ತಿದ್ದ ನೂರಾರು ನೊಣಗಳನ್ನು ಹೊಡೆದೋಡಿಸಲಿಕ್ಕೂ ಆಗದೆ ಶೂನ್ಯದೊಳಗೆ ದೃಷ್ಟಿನೆಟ್ಟು ಮುದುಕ ಕರಗಲ್ಲಂತೆ ಕೂತುಬಿಟ್ಟಿತ್ತು. ತಲೆ ಹಣೆಗಿಳಿಬಿದ್ದಿದ್ದರೆ, ಹಣೆ ಹುಬ್ಬಿಗಿಳಿಬಿದ್ದಿತ್ತು. ಹುಬ್ಬುಗಿಳಿಬಿದ್ದಿದ್ದರೆ ಕಣ್ಣು ಕೆನ್ನೆ ಮೇಲಿಳಿಬಿದ್ದಿದ್ದವು. ಕೆನ್ನೆ ಕುತ್ತಿಗೆಗಿಳಿಬಿದ್ದಿದ್ದರೆ ಕುತ್ತಿಗೆ ಎದೆಯ ಮೇಲಿಳಿಬಿದ್ದಿತ್ತು. ಹೊಟ್ಟೆ ಮೇಲಿಳಿಬಿದ್ದಿದ್ದ ಎದೆಯಾದರೋ ಪ್ರತಿ ಉಸಿರಾಟಕ್ಕೂ ಲಯಬದ್ಧವಾಗಿ ಏರಿಳಿಯತೊಡಗಿತ್ತು. ಒಂದೊಂದು ಮಗ್ಗುಲಿಂದ ನೋಡಿದರೂ ಒಂದೊಂದು ರೀತಿ ಕಾಂಬುತ್ತಿದ್ದ ಆ ಮುದೇದು ಯಾರಾದರೂ ಮಾತಾಡಿಸಿದಾಗ ಹ್ಹಾಂ ಹ್ಹೂ ಅಂತಿತ್ತು. ಗಂಟಲ ಕೊರಕಲಿನಲ್ಲಿ ತುಳುಕು ಹಾಕ್ಕೊಂಡಿದ್ದ ಮಾತೆಂಭೋ ಜೋತಿರ್ಲಿಂಗಗಳಿಂದ ಮುಕುತಿ ಪಡೆಯಲು ಆಗೊಮ್ಮೆ ಈಗೊಮ್ಮೆ ಬಾಯಿ ತೆರೆದು ಮುಚ್ಚುತ್ತಿತ್ತು. ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನವೆಂಬಿವೇ ಮೊದಲಾದ ಪಂಚಪ್ರಾಣಗಳು, ಜೀರ್ಣಾತಿ ಜೀರ್ಣಗೊಂಡು ಮೆತ್ತಗಾಗಿರುವ ನವರಂಧ್ರಗಳ ಮೂಲಕ ಪೃಥುವಿ, ಅಪ್, ತೇಜಸ್ಸು, ವಾಯು, ಆಕಾಶವೆಂಬಿವೇ ಮೊದಲಾದ ಪಂಚಭೂತಗಳಲ್ಲಿ ಚಾವತ್ತಿನಾಗ ಲೀನವಾಗಿ ಬಿಡುವವೋ ಎಂಬಂತೆ ಅದು ಒದ್ದಾಡುತ್ತಿತ್ತು. ಆದರೂ ಅದು ಕಥಾಸಕ್ತರಿಗಿಂತ ಹೆಚ್ಚು ಆರೋಗ್ಯದಿಂದಿತ್ತು. ಲವಲವಿಕೆಯಿಂದಿತ್ತು. ವಾಕ್ಯವಾಗದ ಕುಪ್ಪೆ ಕುಪ್ಪೆ ಅಕ್ಷರಗಳಂತೆ ಅಸಹಾಯಕತೆಯಿಂದ ಮಿಕಿ ಮಿಕಿ ನೋಡುತ್ತಿತ್ತು. ಪಳುಗಟ್ಟಿಯೇ ಅದನ್ನು ಹಿಡಿದುಕೊಂಡು ಬಿಟ್ಟಿತೋ ಅದರ ಅಂಡೇ ಪಳುಗಟ್ಟೆಯನ್ನು ಹಿಡಿದುಕೊಂಡು ಬಿಟ್ಟಿತೋ. ಅದರ ಪಳುಗಟ್ಟೆ ಬೇರೆ ಹಲುನರರಿಂದ ನಿರ್ಮಿತವಾದುದಾಗಿರಲಿಲ್ಲ. ಈ ನಾಡಿನ ಬೆಟ್ಟ ಗುಡ್ದಗಳಂತೆ ಅದು ಕೂಡ ನೆಲದೊಡಲಿನಿಂದ ಒಡಮೂಡಿತ್ತು. ಕಳೆದ ತಲೆಮಾರಿನವರೆಗೆ ಯವುದೋ ಹೆಣ್ಣು ದೇವತೆ ಹೆಸರಿನಿಂದ ಪೂಜಿಸಿಕೊಳ್ಳುತ್ತಿತ್ತು. ಕೆಳಗೇರಿಯ ಬಹುಪಾಲು ಮಂದಿ ಅದಕ್ಕೆ ಒಂದಲ್ಲಾ ಒಂದು ರೀತಿಯಿಂದ ನಡೆದುಕೊಳ್ಳುತ್ತಿದ್ದರು. ಅದು ನಡೆದು ಕೊಂಡವರಿಗೆಲ್ಲ ಒಳ್ಳೇದು ಮಾಡಿತ್ತು ಪಿಲೇಗು ಬಂದು ಊರಿಗೆ ಊರೇ ಗೂಳೇ ಕಿತ್ತಾಗ, ಪಿಲೇಗಮ್ಮನ ಬಗ್ಗೆ ಹತ್ತಾರು ಕಥೆ ಹೇಳುತ್ತ ಕರಿಯ ಊರುಮಂದಿಯ ಜತೆ ಹೆಂಗೋ ಸೇರಿಕೊಂಡುಬಿಟ್ಟಿದ್ದ. ಪಿಲೇಗಮ್ಮಗೆ ಹೆದರಿ ತತ್ತರಿಸುತ್ತಿದ್ದ ಮಂದಿಗೆ ಬಗೆ ಬಗೆ ಕಥೆ ಹೇಳುತ್ತ… ಹೇಳುತ್ತ ಅವರಲ್ಲಿ ಬದುಕುವ ಉತ್ಸಾಹ ತುಂಬಿ ಅವರೆಲ್ಲರಿಗೆ ಹತ್ತಿರದವನಾಗಿದ್ದ.ಪಿಲೇಗಮ್ಮ್ ಕಥೆ ಕೇಳಿಸಿಕೊಂಡವರ ಕುಟುಂಬದ ಸದಸ್ಯೆಯಾಗಿದ್ದಳು. ಅಜ್ಜಿ, ಅಮ್ಮ, ಅಕ್ಕ, ತಂಗಿ, ಅತ್ತೆ, ಸೊಸೆ ಹೀಗೆ ಏನಾದರೊಂದು, ಆಕೆಗೂ ಹೊಟ್ಟೆ ಎಂಬುದು ಇರುವುದು, ಅದನ್ನು ಹೊರೆದುಕೊಳ್ಳಲಿಕ್ಕೆ ಬಂದಿರುವಳು, ಹೊಟ್ಟೆ ತುಂಬಿದ ಮರುಗಳಿಗೆ ಆಕೆ ಇರವ್ವಾ ಅಂದರೆ ಇರೋಪೈಕಿಯಲ್ಲ… ಕಥೆಗಳ ಮೂಲ ಪಿಲೇಗಮ್ಮನನ್ನು ಹಿಂಗ ಮಾಡಿದ್ದ ಕರಿಯನನ್ನು ಅವರಾರೂ ಬಿಟ್ಟುಕೊಟ್ಟಿರಲಿಲ್ಲ. ತಾವು ಉಂಡರೆ ಉಣ್ಣು, ಉಪವಾಸ ಇದ್ದರೆ ಇರು, ಇಡೀ ಊರಿಗೆ ಒಂದು ಹೊಟ್ಟೆ ಭಾರವಾದೀತೇನು! ಅಂತ ಉದಾರವಾಗಿ ಭಾವಿಸಿ ಇರಲು ಒಂಚೂರು ಜಾಗ ಮಾಡಿಕೊಟ್ಟರು. ಕಾಲು ಸೊಟ್ಟಿದ್ದ ಅವನು ಮೈ ಬಗ್ಗಿಸಿ ದುಡಿಯುವಂತಿರಲಿಲ್ಲ. ಎಲ್ಲರ ನಾಲಿಗೆಯ ಕಸುವನ್ನು ಎರಕ ಹೊಯ್ದ ಆ ಬ್ರಹ್ಮ ವಿಶೇಷವಾಗಿ ಮಾಡಿದಂತಿತ್ತು ಅವನ ನಾಲಗೆ. ಸಾರಿವ ಸಾವಿರ ಕಥೆ ಹೇಳಿದರೂ ಅದಕ್ಕೆ ಆಯಾಸವಾಗುತ್ತಿರಲಿಲ್ಲ. ಕೇಳುವವರ ಅಂಡಿಗೆ ಗೆದ್ದಲು ಹತ್ತೋಮಟ ಅವನು ಒಂದರ ಮ್ಯಾಗೊಂದು ಕಥೆ ಹೇಳೇ ಹೇಳುತ್ತಿದ್ದನು. ಸಾವಿರ ಕಥೆಗಳ ಸರದಾರನನ್ನು ಅವರು ಹೇಗೆ ಬಿಟ್ಟುಕೊಟ್ಟಾರು! ಹಿಂಗೇ ಅನತಿ ಕಾಲದಲ್ಲಿ ಊರೊಟ್ಟಿಗಿನ ಅವನ ಸಂಬಂಧ ಸೋಜಿಗದ ರೀತಿಯಲ್ಲಿ ಕುದುರುತ್ತಿರುವಾಗಲೇ ಪಿಲೇಗಮ್ಮ ಬಹು ಸೋಜಿಗದ ರೀತಿಯಲ್ಲಿ ಎರಡು ಮಾರಗಲದ, ಏಳು ಮಾರುದ್ದದ ಪಾದ ಮುದ್ರೆಗಳನ್ನು ಅಲ್ಲೊಂದಿಲ್ಲೊಂದು ಒತ್ತಿ ಒತ್ತೀ ನಡೆದೂ, ನಡೆದೂ ಊರ ಕರಗಲ್ಲ ಸನೀಕೆ ಎರಡು ಬಂಡಿಗೇರುವಷ್ಟು ಕಡ್ಡಿ ಪುಡಿ ತೊಂಬುಲದ ರಾಶು ಉಗುಳಿ ಹೋಗಿದ್ದಳು. ಅದು ಮಹಾಪ್ರಸಾದ, ಅದನ್ನು ಹಗೇ ಬಿಟ್ಟರಾಗುವುದೇ; ಕರಿಯನ ಸಲಹೆ ಮೇರೆಗೆ ಗೋಡರು ಆ ತೊಂಬುಲದ ರಾಶಿಯನ್ನೇರಿಸಿ ಊರ ಮುಂದಿನ ಗದ್ದೆ ಚಲ್ಲಿದರು. ಮಾರನೆಯ ವರುಷವೇ ಯಕರೆಗೆ ಮೂರು ಮೂರು ಖಂಡುಗ ನೆಲ್ಲು ಒಕ್ಕಿದರಂತೆ.
ಆ ಕಲ್ಲು ತಲೆಮಾರಿಂದ ತಲೆಮಾರಿಗೆ ಬೆಳೀತದೆ ಎಂದೂ, ನಡೆದುಕೊಳ್ಳದವರಿಗೆ ಹಗೆ ಹಿಂಗೆ ಮಾಡುತ್ತದೆ ಎಂದೂ ಅವರಿವರು ನಗ್ಗ ಹೇಳಿ ನೋಡಿದರು. ಎಲ್ಲರೂ ಕಣ್ಣಿಗೆ ನಿದ್ದೆ ಏರಿಸಿದೊಡನೆ ಆ ಕಲ್ಲು ಗ್ರಾಮದ ಬೀದಿ ಬೀದಿಗಳಲ್ಲಿ ತಾನೊಂದೇ ಅಡ್ಡಾಡುವುದೆಂದೂ; ನಡಕೋತ ನಡಕೋತ ಮಲಗಿಕೊಂಡವರ ಮನಸ್ಸಿನಾಗೇನೈತೆಂಬುದನ್ನು ತಿಳಿದುಕೊಳ್ಳುವುದೆಂದೂ, ಸಣ ಮಾಡಿದವರೊಂದಿಗೆ ಮಾತಾಡುವುದೆಂದೂ ಅವರಿವರು ಪರಿಪರಿಯಾಗಿ ಹೇಳಿದ್ದನ್ನು ಕಿವೀಲಿ ಹಾಕ್ಕೊಳ್ಳದೆ ಕಥೆ ಹೇಳೋ ಕರಿಯನು ಆ ಕಲ್ಲಿಗೆ ಬೆನ್ನಲ್ಲಿ ಝೋಪಡಿ ಹಾಕಿಕೊಂಡು ಬಿಡುವುದೆಂದರೇನು? ಆ ಕಲ್ಲನ್ನು ಒಳಗೊಂಡಂತೆ ಒಂದು ಮಟ್ಟಸ ಪಳುಗಟ್ಟೆ ಮಾಡಿ ಅದರ ಮೇಲೆ ಕೂತು ಎಕ್ಕೆ ಚಿಲುಮೆಯನ್ನು ಕೈಯಲ್ಲಿ ಹಿಡಿದುಕೊಂಡು ಪುಸು ಪುಸು ಹೊಗೆ ಬಿಡುವುದೆಂದರೇನು? ಇವನು ಮನುಷ್ಯರ ಪೈಕಿ ಇರಲಿಕ್ಕಿಲ್ಲ ಎಂದುಕೊಂಡು ಬಿಟ್ಟರು ಮಂದಿ. ಅವನು ಎಂದು ಅದರ ಮೇಲೆ ಕುಂಡ್ರಲಿಕ್ಕೆ ಶುರು ಮಾಡಿದನೋ ಅಂದೇ ಅದು ಊರ್ಧ್ವಮುಖಮಾಡಿ ಬೆಳೆಯೋದು ಗಪ್ಪಂತ ನಿಂತುಬಿಟ್ಟಿತು. ಆ ಕಾಲು ತಾನೂ ಒಂದು ಕಥೆಯಾಗಿ ಅವನ ಎದೆಯೊಳಗೆ ಒಂದು ಜಾಗ ಪಡೆದುಕೊಂಡಿದ್ದೆಂಥ ಸೋಜಿಗ! ಅಷ್ಟೇ ಸೋಜಿಗವೆಂದರೆ ಬೇರನಳ್ಳಿ ತಳವಾರ ಚಂದ್ರನ ಮಗಳು ಕೊಟ್ರಿ ಅವನು ಕಥೆ ಹೇಳೋ ಮಳ್ಳಾಗಿ ಅವನ ಕೈಹಿಡಿದದ್ದು. ಬಿಳಿ ಜೋಳದ ರೊಟ್ಟಿಮ್ಯಾಲ ಗುರೆಳ್ಳು ಚಟ್ನಿಯಂಗೆ ಅವರಿಬ್ಬರು ಸಂಸಾರ ನಡೆಸತೊಡಗಿದರು. ಹೆಂಡತಿಯ ಮುಖದ ಬೆಳದಿಂಗಳನ್ನು ಕುಡಿದು ಅವನು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದನು. ಗಂಡನ ಬಾಯಿಂದ ಕಥೆಗಳನ್ನು ಕೇಳೋ ಮೂಲಕ ಆಕೆ ಹೊಟ್ಟೆ ತುಂಬಿಸಿಕೊಂಡು ಹೋಬ್ಬಿ ಎಂದು ಡೇಗುತ್ತಿದ್ದಳು. ಆ ಪಳುಗಟ್ಟೆ ಮ್ಯಾಲೆ ಅವರಿಬ್ಬರು ಒಬ್ಬರನ್ನೊಬ್ಬರು ಅವುಚಿಕೊಂಡು ಮಕ್ಕಂತಿದ್ದ ಕಾರಣದಿಂದಾಗಿಯೋ ಏನೋ ಝೋಪಡಿಯೊಳಗೆ ತೊಟ್ಟಿಲು ಕಟ್ಟಲಾಗಲಿಲ್ಲ. ದಮ್ಮಡಿದುರುಗವ್ವನಂಥೋರು ತೊಡೆ ಬದಲಾಯಿಸಿದರೆ ಹೊಟ್ಟೀಲೊಂದು ಬೀಜ ಕಂಡೀತೆಂದು ದೊಡ್ಡಿಗೆ ಹೋದಾಗಲೆಲ್ಲ ತೀಡಿದ್ದುಂಟು. ಬಿಳಿ ಜೋಳದ ರೊಟ್ಟಿಯಂಥೋಳಿಗೆ ತೊಡೆ ನೀಡಿದರೆ ಏಳುಕೋಟೆ ಪುಣ್ಯ ಬರುವುದೆಂದು ಊರ ಹಲವರು ನಾ ಮುಂದು ತಾ ಮುಂದೂಂತ ಸಂಸಿದ್ದರಿದ್ದುದುಂಟು. ಆದರೆ ಸಾವಿರ ಕಥೆಗಳ ಸರದಾರನ ಹೆಂಡತಿಯಾದ ತಾನು ತಾಯಿಯಾಗದಿದ್ದರೇನಾಯಿತು! ಗಂಡನ ಒಡಲಲಿರುವ ಕಥೆಗಳು ಮಕ್ಕಳಿಗಿಂತ ಹೆಚ್ಚಲ್ಲವೆ ಎಂದು ಭಾವಿಸಿದ ಆ ಸಾದ್ವಿ, ಪರಪುರುಷರ ತೊಡೆಯನ್ನು ತನ್ನ ಟೊಂಕದ ಮೇಲೇರಿಸಿ ಕೊಳ್ಳಬೇಕೆಂದು ಕನಸು ಮನಸಿನಲ್ಲೂ ಊಹಿಸಿರಲಿಲ್ಲ. ಊರ ಛಪ್ಪನ್ನಾರು ಮಂದಿ ಹೆಂಗಸರ ಹಳೆಸೀರೆಗಳಿಂದ ಹೊಲಿಯಲ್ಪಟ್ಟ ಕವುದಿಯೊಳಗೆ ಗಂಡನೆದುರು ಲೋಕಗಳ ನೆತ್ತಿಮೇಲೆ ಕಾಲೂರಿ ಪ್ರಯಾಣ ಮಾಡುತ್ತಿದ್ದಳು. ಹಂಸಪಕ್ಷಿಯಂಥ ಹೆಂಡತಿಗೆ ದಿನಕ್ಕೊಂದೊಂದು ನಮೂನೆಯ ಕಥೆ ಹೇಳುತ್ತಿದ್ದ. ಪ್ರತಿಯೊಂದು ಕಥೆ ಮೂಲಕ ಸಂಭೋಗಕ್ಕಧಿಕಾದ ಸುಖ ನೀಡುತ್ತಿದ್ದ. ಸಂತಾನ ಭಾಗ್ಯದ ಬಗ್ಗೆ ಎಂದೂ ಯೋಚಿಸಿದವನಲ್ಲ. ಪ್ರತಿಯೊಂದು ಕಥೆಯನ್ನು ಹೆತ್ತ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಪ್ರತಿಯೊಂದು ಕಥೆಯನ್ನು ಹೇಳುವುದರ ಮೂಲಕ ಇನ್ನೊಬ್ಬರಿಗೆ ವರ್‍ಗಾಯಿಸಿ ಅದು ಅವರಲ್ಲಿ ಬೆಳೆಯುವ ಪರಿಯನ್ನು ನೋಡಿ ಸಂತೋಷಪಡುತ್ತಿದ್ದ. ಯಾವುದೇ ಕಥೆಯನ್ನು ಮನದ ಕೊಟ್ಟಿಗೆಯ ಗೂಟಕ್ಕೆ ಕಟ್ಟಿ ಮೇವು ಹಾಕಿ ಬೆಳೆಸದ ದೊಡ್ಡ ಮನಸ್ಸಿನವನಾಗಿದ್ದ. ಹೊಳೆದ ಕಥೆಯನ್ನು ಕೂಡಲೆ ಇನ್ನೊಬ್ಬರಿಗೆ ಹೇಳಿ ಆ ಮೂಲಕ ಅದನ್ನು ಗೂಳಿಯೋಪಾದಿಯಲ್ಲಿ ಬೀದಿ ಬೀದಿಲಿ ಅಡ್ಡಾಡಲು ಬಿಟ್ಟು ಅದು ಮುಸು ಮುಸು ಮೂಸುತ್ತ ಸಿಕ್ಕ ಸಿಕ್ಕಿದ್ದನ್ನು ನಮಲಿ ಕೊಬ್ಬಿ ಬೆಳೆಯುತ್ತಿದ್ದುದನ್ನು ದೂರದಿಂದಲೇ ನೋಡಿ ಹೆಮ್ಮೆ ಪಡುತ್ತಿದ್ದ. ದಿನಗಳೊಪ್ಪತ್ತಿನಲ್ಲಿ ತಾನು ಹೇಳಿದ ಕಥೆ ತನಗೇ ಗುರುತು ಸಿಗುತ್ತಿರಲಿಲ್ಲ. ಮೂಲ ಪಾತ್ರಗಳೊಂದಿಗೆ ಹಲವು ಪಾತ್ರಗಳು ಸೇರಿಕೊಂಡು, ಮೂಲ ಘಟನೆಗಳೊಂದಿಗೆ ಹಲವು ಘಟನೆಗಳು ಸೇರಿಕೊಂಡು ದಷ್ಟಪುಷ್ಟವಾಗಿ ಬೆಳೆದು ಡುರುಕಿ ಹಾಕುವಷ್ಟು ಬದಲಾಗಿ ಇದು ತಾನು ಹೇಳಿದ ಕಥೆಯೇ ಎಂದು ಸಂದೇಹ ಪಡುವಷ್ಟರಮಟ್ಟಿಗೆ ಬದಲಾಗಿ ಬಿಟ್ಟಿರುತ್ತಿದ್ದವು. ಗೂಳಿ ತರಹದ ಕಥೆಗಳು, ಹಸುವಿನ ತರಹದ ಕಥೆಗಳ ಮೇಲೆ ನಿರಂತರ ಆಕ್ರಮಣ ನಡೆಸುತ್ತಿದ್ದುದರ ಪರಿಣಾಮವಾಗಿ ಹುಟ್ಟಿದ ಸಂಕರ ತಳಿಯ ಕಥೆಗಳು ಗ್ರಾಮಾಂತರ ಉಲ್ಲಂಘನೆ ಮಾಡಿದರೆ, ಕೆಲವು ಕೋಮಲ ಸದೃಶ ಕಥೆಗಳಂತೂ ಕೆಲವೇ ದಿನಗಳಲ್ಲಿ ಷೋಡಶಪ್ರಾಯ ತಳೆದು ನಾಲಗೆಗಳಿಂದ ತರಾವರಿ ಭಾವನೆಗಳ, ಕಲ್ಪನೆಗಳ ಪ್ರಸಾಧನಗಳನ್ನು ಲೇಪಿಸಿಕೊಂಡು ಸುತ್ತಮುತ್ತುಲ ಹಳ್ಳಿಗಳಲ್ಲೆಲ್ಲ ಜನಪ್ರಿಯಗೊಂಡವು. ಆ ಪೈಕಿ ಕೆಲವು ಕಥೆಗಳಂತೂ ಅಚಾನಕ್ಕಾಗಿ ತಮ್ಮ ಕಥೆಗಾರನನ್ನು ಸಂಧಿಸಿ ‘ನಮಸ್ಕಾರ’ ಎಂದಾಗ ಕರಿಯ ಗುರುತಿಸಲಾಗದೆ ಸಂಕೋಚದಿಂದ ಮುದುಡಿ ಹೋಗುತ್ತಿದ್ದುದುಂಟು. ಅವುಗಳಿಗೆಲ್ಲ ಸಂವಹನ ಮಾಧ್ಯಮವಾಗಿದ್ದ ಜನ ಮೂಲ ಕಥೆಗಾರ ಕರಿಯನನ್ನು ಗುರುತಿಸದೆ ಇರುತ್ತಿರಲಿಲ್ಲ. ಸದರಿ ಗ್ರಾಮಕ್ಕೆ ಒಂದಲ್ಲಾ ಒಂದು ನೆಪ ಹುಡುಕಿಕೊಂಡು ಭಟ್ಟಿಕೊಡುತ್ತಿದ್ದ ಅವರು ಕರಿಯನನ್ನು ಕಾಣದೆ ಹೋಗುತ್ತಿರಲಿಲ್ಲ. ಕಾಣಲು ಬಂದವರನ್ನು ಕಥೆಗಾರ ಪ್ರೀತಿಯಿಂದ ಬರೆಮಾಡಿ. ಕೊಳ್ಳುತ್ತಿದ್ದ ಮಾತಾಡುತ್ತಿದ್ದ. ಆತ ಬಾಯಿಯಿಂದ ಉಪಚರಿಸುತ್ತಿದ್ದುದೇ ಕಥೆಯೋಪಾದಿಯಲ್ಲಿದ್ದು ಅತಿಥಿಗಳನ್ನು ಮಂತ್ರ ಮುಗ್ಧರನ್ನಾಗಿ ಮಾಡಿಬಿಡುತ್ತಿತ್ತು.
ಕರಿಯ, ಕರಿಯಜ್ಜನಾಗುವುದರೊಳಗೆ ಅದೆಷ್ಟು ಜನಪ್ರಿಯವಾಗಿಬಿಟ್ಟಿದ್ದನೆಂದರೆ ಆತ ಗ್ರಾಮದ ಮತ್ತು ಅಕ್ಕಪಕ್ಕದ ಗ್ರಾಮಗಳಲ್ಲೆಲ್ಲ ಪ್ರತಿಯೊಂದು ಗೃಹ ಕೃತ್ಯಕ್ಕೂ ಅನಿವಾರ್‍ಯನಾಗಿಬಿಟ್ಟಿದ್ದ, ಹ್ರಾಂ ಕ್ರೀಂ ಮಂತ್ರಗಳಿಗಿರುವಷ್ಟೇ ಶಕ್ತಿ ಆತ ಕಥೆ ಹೇಳೋ ಕ್ರಿಯೆಗೂ ಇತ್ತು. ಕಥೆ ಹೇಳೋ ಮೂಲಕ ಮೂರು ಆರು ಮಾಡುತ್ತಿದ್ದ, ಆರು ಮೂರು ಮಾಡುತ್ತಿದ್ದ. ಗ್ರಾಮದ ಪೆಕ್ಕಾದಿಗಳಲ್ಲೊಬ್ಬನಾದ ಉರುಕುಂದೆಪ್ಪನ ಮಗಳು ತನ್ನ ಕಣ್ರೆಪ್ಪೆಗಿಂತ ಕಪ್ಪಾಗಿರುವ ಸೋದರತ್ತೆಯ ಮಗನನ್ನು ಮದುವೆ ಯಾಗಲು ನಿರಾಕರಿಸಿ ಮೊಂಡು ಹಠ ಹಿಡಿದು ಕೂಳೂ, ನೀರೂ ಬಿಟ್ಟು ಕುಳಿತಳು. ಉರುಕುಂದಪ್ಪ ಕರಿಯನ ಬಳಿ ಹೆಣ್ಣುಹಡೆದವರ ಕಷ್ಟ ತೋಡಿಕೊಂಡ, ಕರಿಯ ಆ ಎಳೆಬಾಲೆಯನ್ನು ಎದುರಿಗೆ ಕೂಡ್ರಿಸಿಕೊಂಡು ಗುಬ್ಬಿ, ಕಾಗೆಯನ್ನು ಮದುವೆಯಾದ ಕಥೆಯನ್ನು ರಸವತ್ತಾಗಿ ಹೇಳಿದ. ಮರುದಿನವೇ ಆಕೆ ದುಸುರಾ ಮಾತೆತ್ತದೆ ಹಡೆದವರು ಸೂಚಿಸಿದ ವರನನ್ನು ಮದುವೆಯಾಗಿಬಿಟ್ಟಳು. ಕೋಮಟಿಗರು ಮಂಡಾ ಸಾಮಿಗಳಿಂದ ಸಾಲ ವಸೂಲಿ ಮಾಡಲು ಕರಿಯನ ನೆರವನ್ನು ಪಡೆಯುತ್ತಿದ್ದರು. ಹೊಸದಾಗಿ ಮದುವೆಯಾದವರು ತಮ್ಮ ದಾಂಪತ್ಯದ ಪ್ರಥಮ ರಾತ್ರಿಯನ್ನು ಯಶಸ್ವಿಯಾಗಿ ಮುಗಿಸಲು ಕರಿಯನ ಕಥೆಗಳಿಂದ ಸ್ಫೂರ್ತಿಪಡೆಯುತ್ತಿದ್ದರು. ಹಸಕಂದಮ್ಮಗಳ ಚಂಡಿ ಕಡಿಮೆ ಮಾಡಲು, ಹಾಯುವ ಎತ್ತುಗಳನ್ನು ಮಣಿಸಲು, ಅಚಾನಕ್ ಕವಿಯುವ ಮಂಕನ್ನು ಹೋಗಲಾಡಿಸಲು, ಕರಿಯನ ಕಥೆಗಳ ಮೊರೆ ಹೋಗುತ್ತಿದ್ದರು. ಕಾಲದಲ್ಲಿ, ಆ ಗ್ರಾಮದಲ್ಲಿ ಅಳಲೆಕಾಯಿ ಪಂಡಿತರು ಇರಲಿಲ್ಲವಾದ್ದರಿಂದ ಕರಿಯ ವೈದ್ಯನಂತಾಗಿಬಿಟ್ಟಿದ್ದ. ಅವನಿಂದ ಕಥೆ ಕೇಳಿದವರ ಎಲ್ಲ ದೈಹಿಕ ಸಮಸ್ಯೆಗಳು ಚಿಟಿಕೆ ಹೊಡೆವಷ್ಟರಲ್ಲಿ ದೂರಾಗಿ ಬಿಡುತ್ತಿದ್ದವು… ಕುಲಕರ್‍ಣಿ ರಾಘಪ್ಪನ ಹೆಂಡತಿ ರಿಂದಮ್ಮ ತನ್ನ ಒಂಬತ್ತನೆಯ ಪ್ರಸವ ವೇದನೆಯಿಂದ ಬದುಕುಳಿದದ್ದೇ ಕರಿಯನ ಕಥೆಯಿಂದಾಗಿ. ತಂತಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿಕ್ಕಾಗಿ ಅಕ್ಕಪಕ್ಕದ ಊರಿನವರು ಜೋಡೆತಿನ ಸವಾರಿ ಬಂಡಿಯಲಿ ಸದರಿಗ್ರಾಮಕ್ಕೆ ಬಂದು ಕರಿಯನನ್ನು ಕರೆದುಕೊಂಡು ಹೋಗಿ, ಅವನ ಬಾಯಿಯಿಂದ ಮನೆಮಂದಿ ಎಲ್ಲ ಕಥೆ ಕೇಳೋದು ಕೇಳಿ ಅವನ ಯೋಗ್ಯತೆಗೆ ತಕ್ಕಂತೆ ಸನ್ಮಾನ ಮಾಡಿ ಅಷ್ಟೇ ಗೌರವದಿಂದ ಊರಿಗೆ ಕಳಿಸಿ ಕೊಡುತ್ತಿದ್ದರು. ಹೀಗಾಗಿ ಬರ್‍ತಾ ಬರ್‍ತಾ ಕರಿಯ ಕೂಡ ತಾನು ಒಂದು ದಂತಕಥೆಯಾಗಿ ಪರಿವರ್‍ತನೆಗೊಂಡು ಬಿಟ್ಟಿದ್ದ. ಕೆಲವರು ಅವನಿಗೆ ರಾತ್ರಿ ಹೊತ್ತಿನಲ್ಲಿ ರೆಕ್ಕೆಗಳು ಬಂದು ಲೋಕಲೋಕಗಳಿಗೆಲ್ಲ ಪುತ್ರನೆ ಹಾರಿಹೋಗಿ ಕಥೆಗಳನ್ನು ಹೆಕ್ಕಿಕೊಂಡು ಬರುವನೆಂದೂ, ಆದ್ದರಿಂದಾಗಿಯೇ ಅವನಿಗೆ ಮಕ್ಕಳುಮರಿ ಆಗಿಲ್ಲವೆಂದೂ ಸುದ್ದಿ ಹಬ್ಬಿಸುತ್ತಿದ್ದರೆ, ಇನ್ನೂ ಕೆಲವರು ಅವನು ಮನುಷ್ಯನೇ ಅಲ್ಲವೆಂದೂ, ಯಾವುದೋ ಗತಕಾಲದ ಅಡುಗೊಲಜ್ಜಿಯ ಪ್ರೇತಾತ್ಮವೇ ಮಾನವ ವೇಷಧರಿಸಿ ಬಂದಿರುವುದೆಂದೂ, ಆದ್ದರಿಂದಾಗಿ ಅವನು ಕಕ್ಕಸಿಗೆ ಹೋಗುವುದನ್ನು ನೋಡಿದ ನರಮಾನವರೇ ಈ ಭೂಲೋಕದಲ್ಲಿಲ್ಲವೆಂದೂ ಆಡಿಕೊಳ್ಳುತ್ತಿದ್ದರು. ಇಂಥ ಸುದ್ದಿಗಳಲ್ಲಿ ಕರಿಯ ಪಕ್ಷಿಯಾಗಿದ್ದ, ಚತುಷ್ಪಾದಿಯಾಗಿದ್ದ, ಕೋರೆಹಲ್ಲು, ಗುಳಾಪು ಕಣ್ಣುಗಳ ರಾಕ್ಷಸನಾಗಿದ್ದ. ಅನುಮಾನ ಬಂದವರು ಒಂದಲ್ಲಾ ಒಂದು ರೀತಿಯಿಂದ ಅವನೊಂದಿಗೆ ಒಡನಾಡಿ ಓಹ್ ಇವನೂ ನಮ್ಮ ಹಾಗೆ ಮನುಷ್ಯ ಎಂದು ಸಮಾಧಾನದ ಉಸಿರುಬಿಡುತ್ತಿದ್ದರು. ಇಂಥ ಅಪರೂಪದ ಚರಾಸ್ತಿ, ಸ್ಥಿರಾಸ್ತಿಯನ್ನು ಅದರ ಪಾಡಿಗೆ ಅದನ್ನು ಬಿಟ್ಟು ಪಿಂಜರಾಪೋಲು ಮಾಡುವುದು ಸರಿಯಲ್ಲವೆಂದೋ; ಇಂಥದೊಂದು ಅನರ್‍ಘ್ಯರತ್ನ ತಮ್ಮ ಬಳಿ ಇದ್ದರೆ ತಮ್ಮ ಜಮೀನ್ದಾರಿಕೆಗೆ ವಿಶೇಷ ಗತ್ತು ಬರುವುದೆಂದೋ ಶಿವಪೂಜೆ ರುದ್ರಗೌಡರು ಆಲೋಚಿಸುತ್ತಿರುವಾಗಲೇ ಅವರ ಜೇಷ್ಠ ಪುತ್ರಿ ಮತಿಭ್ರಮಣೆಯಾಗಿ ಇಲಾಜಿಗೆಂದು ಗಂಡನ ಮನೆಯಿಂದ ತವರುಮನೆಗೆ ಬಂದಿದ್ದಳು. ಅದುವರೆಗೆ ನಿಮ್ನ ಜಾತಿಯವನ ಬಾಯಿಯಿಂದ ಕಾಕಾಳಿ ಕಥೆ ಕೇಳುವುದು ಮೈಲಿಗೆ ಎಂದು ಬಗೆದಿದ್ದ ಗೌಡರು ಇಡೀ ರಾತ್ರಿ ದಿನಮಾನ ಪುನರಾಲೋಚಿಸಿ ಬೆಳಗಾಗುತ್ತಲೇ ಕರಿಯನಿಗೆ ಬುಲಾವ್ ಕಳಿಸಿದರು. ಅದುವರೆಗೆ ತನ್ನನ್ನೂ, ತನ್ನ ಕಥೆಗಳನ್ನೂ ದೂರಾತಿದೂರವಿಟ್ಟಿದ್ದ ಉಪ್ಪರಿಗೆ ಮನೆ ಕಡೆ ಒಂದೊಂದು ಹೆಜ್ಜೆಗೆ ಒಂದೊಂದು ಕಥೆ ಹೊಳೆಯುತ್ತ, ಹೊಳೆದ ಒಂದೊಂದು ಕಥೆಯ ದುರ್‍ಬೀನಿನ ಮೂಲಕ ಗೌಡರ ಮನೆಯ ವಿದ್ಯಮಾನಗಳನ್ನು ಅರ್‍ಥಮಾಡಿಕೊಳ್ಳುತ್ತ; ಅರ್‍ಥವಾದ ಪ್ರತಿಯೊಂದು ವಿದ್ಯಮಾನವನ್ನು ಕಥೆಯ ಅಟ್ಟಣಿಗೆಯ ನಡುನಡುವೆ ಪೇರಿಸಿಡುತ್ತ ಹೋದ ಕರಿಯನಿಗೆ ಒಳ್ಳೆಯ ಸ್ವಾಗತವೇ ಸಿಕ್ಕಿತು. ತಿನ್ನಲು ಒಂದಿಷ್ಟು; ಕುಡಿಯಲು ಒಂದಿಷ್ಟು ಕೊಟ್ಟು ಸತ್ಕರಿಸದೆ ಇರಲಿಲ್ಲ ಗೌಡರು. ಒಂದು ನಿಡಿದಾದ ಉಸಿರೆಂಬುದನ್ನು ಬಿಟ್ಟು ಕಥೆಗಾರನನ್ನು ಕಣ್ಣ ಅಗ್ನಿಪಂಜರದಲ್ಲಿ ತುಂಬಿಕೊಳ್ಳದೆ ಇರಲಿಲ್ಲ ಗೌಡರು. ಮಾನವ ಸಮಾನತೆಯನ್ನು ಪುರಸ್ಕರಿಸುವವರೆಂಬಂತೆ ಅವನನ್ನು ಉಸಿರಳತೆಯಲ್ಲಿ ಕೂಡ್ರಿಸಿಕೊಂಡು “ಹ್ಯಾಂಗಾರ ಮಾಡಿ ನನ ಮಗಳ ಸಂಸಾರ ನಿಸೂರ ಮಾಡಿದೀ ಅಂದ್ರ ನಿನ್ನ ಮನಿ ಮಗನಂಗ ಇಟ್ಕೋತೀನಿ” ಎಂದು ಕೈ ಮುಟ್ಟಿ ವಾಗ್ದಾನ ಮಾಡಲು, ದೇವರ ಮೇಲೆ ಭಾರ ಹಾಕಿ ಉಬ್ಬಿ ಹೋದನು. ಅಂಥ ಎಷ್ಟೋ ಗೌಡಾದಿಗಳನ್ನು ಅಂತರಂಗದಲ್ಲಿಟ್ಟುಕೊಂಡಿದ್ದ ಕರಿಯನು ಸಜ್ಜು ಮಾಡಿದ್ದ ಕೋಣೆಯೊಳಗೆ ಹೋಗಲು, ನೀನೆ ನನಗಂಡ, ಇವತ್ತು ಈ ಮೂಳದ ನೆಪ್ಪಾಯ್ತೇನು ಅಂತ ಮೇಲೆಗರಿ ಬಂದಳು ಆ ಮಗಳು. ಆಕೆಯನ್ನು ಎರಡು ಮೊಳದ ಅಂತರದಲ್ಲಿ ಕುಂಡ್ರಿಸಿ ಸಮಸ್ತ ಕಸುವುಧಾರೆ ಎರೆದು ಸದಾ ಕಣ್ಣೀರು ಹಾಕುವ ಎರಡು ಮಾರುದ್ದದ ಮೊಸಳೆಯನ್ನು ಮದುವೆ ಮಾಡಿಕೊಂಡು ಸುಖವಾಗಿ ಬಾಳಿದ ಚಿನ್ನದ ಮೀನಿನ ಕಥೆಯನ್ನು ರಸವತ್ತಾಗಿ ಹೇಳಿದನು. ವಾರೊಪ್ಪತ್ತು ಕಥೆ ಮೆಲುಕು ಹಾಕಿಹಾಕಿ ಆಕೆ ನಿಸೂರಾದಳು. ಮುಂದೊಂದು ದಿನ ಕರೆಯಲು ಬಂದ ಗಂಡನ ಸಂಗಡ ಹೋಗಿ ಸುಖವಾಗಿ ಬಾಳತೊಡಗಿದಳು. ಮನಿ ಮಗನಂಗ ಇಟ್ಟುಕೊಳ್ಳುವುದಾಗಿ ಹೇಳಿದ್ದನಲ್ಲ ಗೌಡ. ಮನಿಮಗನಂಗೇ ಇರು ಅಂತ ಇಟ್ಟುಕೊಂಡ. ಮಾಡಿಕೊಂಡ ಗಂಡ ಮನೀ ಮಗನಾದ ಮೇಲೆ ಅವನ ಹೆಂಡತಿಯಾದ ತಾನು ಮನಿಸೊಸಿ ಆದಂತಾಯಿತಲ್ಲ; ಸೊಂಚುಗಾಲಿನ ಕರಿಯ ಹೊಲಮನಿಗಳಲ್ಲಿ ದುಡೀಲಿಕ್ಕಾದೀತೇನು! ಕಥೆ ಹೇಳಿ ಹೊಲಗಳಲ್ಲಿ ಬೆಳೆ ಬೆಳೆಸಲಿಕ್ಕಾದೀತೇನು! ಗೌಡ್ತಿಗೆ; ಅವರ ಮಕ್ಕಳು ಮೊಮ್ಮಕ್ಕಳಿಗೆ ಅವರವರ ಜಾಯಮಾನಕ್ಕನುಗುಣವಾಗಿ ಕಥೆ ಹೇಳುವ ದಗದಕ್ಕೆ ಮನಿಮಗನೂ, ಅನಾದಿಯೂ ಆದ ಕರಿಯ ಅಂಟಿಕೊಂಡರೆ, ಕಥೆ ಹೇಳಲಾರದ ಮನಿಸೋಸಿ ಕೊಟ್ರವ್ವ ತನ್ನ ಗಂಡನ ಕಥೆಗಳನ್ನು ಮೆಲುಕು ಹಾಕುತ್ತ ಮುಂಜಾನಿಂದ ಛಂಜೀ ತನಕ ಹೊಲಮನಿಗಳಲ್ಲಿ ದುಡೀಲಿಕತ್ತಿದಳು. ಇದಕ್ಕೆ ಪ್ರತಿಯಾಗಿ ಹೊಟ್ಟೆ ತುಂಬ ಕೂಳು, ಮೈ ತುಂಬಾ ಬಟ್ಟೆ ಸಿಕ್ಕತೊಡಗಿತೆಂದ ಮೇಲೆ ಕೇಳುವುದೇನಿದೆ? ಕರಿಯ ದಂಪತಿಗಳು ದಿನಕ್ಕೊಂದೊಂದು ಬಗೆಯಾಗಿ ನೆಮ್ಮದಿಯಿಂದಿದ್ದರು.
ಕರಿಯ ಯಾವ ಅಮೃತ ಘಳಿಗೇಲಿ ಮನಿಮಗನಾದನೋ! ಆವತ್ತಿನಿಂದಲೇ ಗೌಡರ ಮನೆಯಲ್ಲಿ ಚಿನ್ನದ ಹೊಗೆ ಹಾಯತೊಡಗಿತು. ಸದರೀ ಗ್ರಾಮದಲ್ಲಾಗಲೀ ಸುತ್ತಮುತ್ತಲ ಗ್ರಾಮದಲ್ಲಾಗಲೀ ಯಾರಾದರೂ ಎಂಥದಾದರೂ ಸಮಸ್ಯೆ ಪರಿಹಾರಾರ್ಥವಾಗಿಯೋ, ಮನೋರಂಜನೆಯಗಾಗಿಯೋ ಕರಿಯನಿಂದ ಕಥೆ ಹೇಳಿಸುವ ಮೊದಲು ಗೌಡನ ಪರವಾನಿಗೆ ಪಡೆಯುವುದು ಅನಿವಾರ್‍ಯವಾಯಿತು. ಪುಕ್ಕಟೆ ಕೇಳುವುದಾಗಲೀ, ಹೇಳುವುದಾಗಲೀ ಕಥೆಗಳಿಗೆ ಅವಮಾನ ಮಾಡಿದಂತೆಯೇ ಎಂದೂ, ಹೀಗೆ ಅವಮಾನಗೊಂಡ ಕಥೆಗಳು ಕುಪಿತಗೊಂಡು ಪುಕ್ಕಟೆ ಕೇಳುವವರಿಗೂ; ಹೇಳುವವರಿಗೂ ಕೇಡು ಮಾಡುವವೆಂದೂ ಯೋಚಿಸಿ, ವಿಶದಪಡಿಸಿ ಗೌಡ ಕಾರ್‍ಯಕಣ್ಣಿಗೆ ಅನುಗುಣವಾಗಿ ಒಂದೊಂದು ರೀತಿಯ ಕಥೆಗೆ ಒಂದೊಂದು ರೀತಿಯ ಪೊಗದಿ ಗೊತ್ತುಪಡಿಸಿದನು. ಕಂಟಕ, ಜಡ್ಡು-ಜಾಪತ್ತು, ಗ್ರಹಕಾಟ, ದೆವ್ವಪೀಡೆ ಇವೆ ಮೊದಲಾದ ಕಷ್ಟ-ಕಾರ್‍ಪಣ್ಯಗಳ ಪರಿಹಾರಾರ್‍ಥವಾಗಿ ಕರಿಯನ ಕಥೆಗಳ ಸಹಾಯ ಯಾಚಿಸುವ ಮಂದಿ ಗೊತ್ತುಪಡಿಸಿದ ಪೊಗದಿಯನ್ನು ಗೌಡಗೆ ಸಲ್ಲಿಸಿ ಕಥೆಗಾರನನ್ನು ಕರೆದೊಯ್ಯತೊಡಗಿ ಅದನ್ನೇ ಒಂದು ಅಭ್ಯಾಸ ಮಾಡಿಕೊಂಡರು. ಈ ಪ್ರಕಾರವಾಗಿ ಎಷ್ಟು ದಿನ ಮುಂದುವರಿಯಲಾದೀತು! ಗೌಡ ಪಡೆಯುತ್ತಿರೋ ಪೊಗದಿಯಲ್ಲಿ ಎಷ್ಟು ಭಾಗವನ್ನು ಕಥೆಗಾರನಿಗೆ ಕೊಡುತ್ತಿರುವನೆಂಬಂಥ ಪ್ರಶ್ನೆಗಳು, ಮನಿಮಗನೆಂಬುದು ದೇವರು ಮಾಡಿರೋ ನಶ್ವರ ಶರೀರಕ್ಕಾತು. ಮನಸ್ಸೆಂಬೋ ಹೆಜ್ಜೇನುಗೂಡಿನ ಸಾವಿರಾರು ಕೋಣೆಗಳೊಳಗೆ ಸಂಸಾರ ಹೂಡಿರೋ ಕಥೆಗಳಿಗೆ ಗೌಡ ಒಡೆಯ ಹೇಗಾದನು ಎಂಬಂಥ ಪ್ರಶ್ನೆಗಳು, ಪೊಗದಿ ತೆತ್ತೋರ ಕಿವಿ ತುಂಬುವಷ್ಟು ಕಥೆಗಳನ್ನು ಹೇಳೋದು ಬ್ಯಾಡವೇನು ಎಂಬಂಥ ತಕರಾರುಗಳು ಅಲ್ಲೊಂದು ಇಲ್ಲೊಂದು ಹುಟ್ಟಿಕೊಂಡು ಸೊಚ್ಚಿರೋ ಇನ್ನೊಂದು ಕಾಲಿಗೆ ತೊಡರುತ್ತಿರುವಾಗಲೇ ಕರಿಯ ಕರಿಯಜ್ಜನಾಗಿ ಬಿಟ್ಟಿದ್ದನೆಂಬುದು ಇತಿಹಾಸ. ಇತಿಹಾಸದ ಪ್ರತಿರೂಪವೇ ಕರಿಯಜ್ಜನಾಗಿದ್ದ.
ಯುಗ ಯುಗಗಳಿಂದ ಕುಂತಂತಿರೋ ಕರಿಯಜ್ಜ ಮಿಸುಕಾಡಲೊಲ್ಲ. ರಾಜ ಕುಮಾರಿಯ ತಿಕದ ಒಂಚೂರು ಭಾಗದ ದರ್ಶನ ಮಾತ್ರದಿಂದ ಜೀವಮಾನ ಪರ್‍ಯಂತರ ಪ್ರಪಂಚ ಜ್ಞಾನ ಕಳೆದುಕೊಂಡ ರಾಜಮನೆತನದ ಕಕ್ಕಸ್ಸು ಬಳಿಯುವವ ನಂತೆಯೆ ಈ ಮುದ್ಯಾ ಕೂಡ ಮೈತುರಿಕೆ ಕಡೆಗೂ ಒಲವಿಲ್ಲದವನಾಗಿಬಿಟ್ಟಿದ್ದ. ಕನಿಷ್ಠ ಜಾಗ ಬದಲಾಯಿಸಿದರೆ ಮುದ್ಯಾ ಮತ್ತೆ ಹೇಳುವಂತಾಗಬಹುದೆಂದು ಮರಿಯ ಭಾವಿಸಿದ. ಸಂಗ, ನಿಂಗರಂಥ ಬಲಿಷ್ಠ ಕಾಯದ ತರುಣರು ತಮ್ಮೆಲ್ಲ ಕಸುವುಕಿತ್ತು ಮುದ್ಯಾನನ್ನು ಪಳುಗಟ್ಟೆಯಿಂದ ಹಿರೇಗಟ್ಟೆಗೆ ವರ್ಗಾಯಿಸಲು ಮಾಡಿದ ಪ್ರಯತ್ನ ಭೀಮಸೇನ ಆಂಜನೇಯ ಬಾಲ ಮಿಸುಕಾಡಿಸಲಾಗದ ಪ್ರಯತ್ನದಂತೆಯೇ ವಿಫಲವಾಯಿತು.
ಹೆಂಗಾರ ಮಾಡಿ ಎತ್ತಿ ಆ ಕಡೆ ಇಡ್ರೆಪೋ… ಕೂಳು ನೀರು ಬಿಟ್ಟು ಕಲ್ಲಿನಂಗ ಕುಂತೈತೇ ನಮ್ ಮುದಿಯಾ… ಅದರಮ್ಯಾಗ ಕುಂಡರ ಬ್ಯಾಡಾಂತ ಬೊಡಕಂಡೆ… ಕ್ಯೋಳೀತಾ ನನ್ ಮಾತ್ನ. ಅದರಾಗಿರೋ ದೆವ್ವ ಯಿಡಕಂಡೈತೆಪೋ ಎಂದೊಮ್ಮೆ ದೈನಾಸಿ ಪಡುತ್ತಿದ್ದ ಮುದುಕಿ, ಮೈಮಾಂಸ ಉಂಡೆಮಾಡಿ ಎತ್ತ ಬಂದಣ್ಣಗಳಿಗಡ್ಡ ನಿಂತು ಅಯ್ಯೋ ಬ್ಯಾಡ್ರಪೋ ಬ್ಯಾಡ್ರೋ ಮದ್ಲೇ ಅಣ್ಣಾಗಿರೋ ಮೈಯಿ, ಯಲುಬು ಗಿಲುಬು ಮುರಕಂಡಾವು ಎಂದು ಬೇಡಿಕೊಳ್ತಿತ್ತು. ಶೂನ್ಯದಲ್ಲಿ ನೆಟ್ಟಿದ್ದ ದೃಷ್ಟಿಯನ್ನು ಕಿತ್ತು ಮುದುಕಿ ಕಡೆ ನೋಡಲಿಲ್ಲ ಮುದ್ಯಾ… ಆದರೆ ಅವನು ಪೂರ್‍ತಿ ನಿಷ್ಕ್ರಿಯಗೊಂಡಿರುವನೆನ್ನುವಂತಿರಲಿಲ್ಲ. ಅವನ ದೇಹದ ಯಾವುದೋ ಒಂದು ಇಂದ್ರಿಯ ಅಂತರಂಗಕ್ಕೂ, ಬಹಿರಂಗಕ್ಕೂ ಸಂಪರ್‍ಕ ಕಲ್ಪಿಸಿತ್ತು. ಆ ಸಂಪರ್‍ಕದ ಫಲವಾಗಿ ಮುದ್ಯಾ ಬಾಹ್ಯ ಪ್ರಪಂಚಕ್ಕೆ ಪ್ರತಿಕ್ರಿಯಿಸುವ ಪ್ರಯತ್ನ ಆಗಾಗ್ಗೆ ಮಾಡೀ ಮಾಡೀ ವಿಫಲನಾಗುತ್ತಿದ್ದ. ಅವನು ದೃಷ್ಟಿ ನೆಟ್ಟಿರೋ ಈಶಾನ್ಯ ದಿಕ್ಕಿನಲ್ಲಿ ಕಳೆದು ಹೋಗಿರುವ ಅರಮನೆ ಹುಡುಕಿ ಅದಕ್ಕೆ ವಾರಸುದಾರರು ತಾವಾಗಬೇಕೆಂದು ಸಾಕಷ್ಟು ವಯಸ್ಸಾದ ಒಂದಿಬ್ಬರು ಹೆಗಲಮೇಲೆ ಬುತ್ತಿಗಂಟು ಇಟ್ಟುಕೊಂಡು ನಿನ್ನೆಯೇ ಹೋದವರು ಮರಳುವ ಸೂಚನೆಯನ್ನು ನೀಡಿಲ್ಲ. ಮನಿಮಗನ ಸ್ಥಾವರಕ್ಕೆ ಭಂಗತರಲು ಖುದ್ದ ಶಿವಪೂಜೆ ಗೌಡರೇ ಎಡತಾಕಿ ಜಾಗಬಿಟ್ಟಿದ್ದು ಬಾರೋ ಮುದ್ದು ಮಗನೇ ಎಂದು ಬೇಡಿಕೊಂಡಿದ್ದುಂಟು, ಎದ್ದು ಬಂದೊಂದು ಕಥೆ ಹೇಳಿದಿ ಅಂದರೆ ಊರ ಮುಂದಿನೈದೆಕೆರೆ ಮಸಾರೆ ಹೊಲವನ್ನು ನಿನ್ನ ಹೆಸರಿಗೆ ಮಾಡಿಸುವುದಾಗಿ ಗೋಗರೆದದ್ದುಂಟು, ಆ ಮಾತನ್ನೇ ಪುನರುದ್ಧರಿಸಿದ ಹುಲಗ ಮುಂಡೇದಕ್ಕೆ ಮುದುಕಿ “ನಮಗೇ ಯಿಂದೈದಾರ ಮುಂದೈದಾರ… ವಲ ತಗಂಡು ಮಾಡಾದೇನೈತೆ…” ಎಂದು ಬಿಡುವುದೇನು! ಇಂಥಾಕೆಯನ್ನು ಮಾಡಿಕೊಂಡಿದ್ದಕ್ಕೂ ಸಾರ್ಥಕವಾಯಿತೆಂದುಕೊಳ್ಳುವಂತೆ ಮುದ್ಯಾ ಮೀಸೆ ಕೆಳಗೆ ನಗಾಡಿದಂತೆ ಕಂಡಿತೆಂಬುದೊಂದು ಬಿಟ್ಟರೆ… ತಮ್ಮೂರ ಕರುಮವೋ ಮುದ್ಯಾನ ಕರುಮವೋ ಎಂದು ಗೊಣಗುತ್ತ ಹೋಗುತ್ತಿದ್ದವರೆಷ್ಟೋ… ತಂತಮ್ಮ ಮನೆಗಳಿಂದ ಬರುತ್ತಿದ್ದವರೆಷ್ಟೋ!…
ಕಥೆ ಹೇಳೋ ಕರಿಯಜ್ಜ ಒಂದೇ ಏಟಿಗೆ ಹಾಗೆ ಕೂತವನಲ್ಲ. ಹೀಗೆ ತಾನು ಕಥೆ ಹೇಳದವನಾಗಿ ನೆಲದಿಂದುದ್ಭವಗೊಂಡವನಂತೆ ಕೂಡ್ರಬಹುದೆಂಬ ಮುನ್ಸೂಚನೆ ತನಗೂ ಸಿಕ್ಕಿರಲಿಲ್ಲ. ಒಂದೆರಡು ತಿಂಗಳಿಂದಲೇ ಕಥೆಗಳ ಬಗೆಗಿನ ನಿರಾಸಕ್ತಿತಂತಾನೆ ತಲೆದೋರಿತ್ತು ಕಥೆ ಬಯಸಿದವರೆದುರು ಮೇಲಿಂದ ಮೇಲೆ ಆಕಳಿಸುತ್ತಿದ್ದ. ಒಂದೂರಲ್ಲಿ ಒಬ್ಬ ಅಂತ ಹೇಳುತ್ತಿರುವಾಗಲೇ ಮೈಎಲ್ಲ ನವೆ ಕಾಣಿಸಿಕೊಂಡು ಬಿಡುತ್ತಿತ್ತು. ಹೇಳಬೇಕೆಂದಿದ್ದ ಕಥೆಯೊಳಗಿನ್ನೊಂದು ಕಥೆ ನುಗ್ಗಿಕೊಂಡು ಬಂದು ಬಿಡುತ್ತಿತ್ತು. ಅನೇಕ ಕಥೆಗಳ ಹೆಣಭಾರದಿಂದ ನಾಲಗೆ ನಲುಗಿ ಅಪ್ಪಚ್ಚಿಯಾಗಿ ಬಿಡುತ್ತಿತ್ತು. ಬರ್ತಾ ಬರ್ತಾ ಕಥೆಗಳ ಹತ್ತಾರು ಮೂಟೆಗಳನ್ನು ಹೊತ್ತವನಂತೆ ತನ್ನ ದೇಹ ತನಗೇ ಭಾರವಾಗಿ ಕಲಕಿ ಹೋದ ಅಂತರಂಗದ ಅವನನ್ನು ಪಳುಗಟ್ಟಿ ತಾಯಿಯಂತೆ ಕರೆದು…
* * *
ಬಗೆ ಬಗೆ ಕಥೆಗಳ ಏಳೂರು ಸಂತೆಯೇ ನೆರೆದಂತೆ ಕಥೆ ಹೇಳದ ಮುದಿಯನ ಅಂತರಂಗ ಕಲಕಿ ಹೋಗಿತ್ತು ಎಂಬುದು ಸಾಮಾನ್ಯ ಮಾನವರಿಗೆ ಅರ್ಥವಾಗುವುದು ಹೇಗೆ ಸಾಧ್ಯ? ಕಥೆಗಳೆಲ್ಲ ಒಂದರ ಮೇಲೆ ಒಂದು ಬಿದ್ದು ಒದ್ದಾಡುತ್ತಿರುವವೇ… ನವರಂಧ್ರಗಳೆಲ್ಲ ಕಿಲುಬಿ ಜಡ್ಡು ಹಿಡಿದು ಮುಚ್ಚಿದ್ದರಿಂದ ಯಾವ ಕಥೆಗೂ ಒಂದು ಹೆಜ್ಜೆ ಕಿತ್ತು ಇಡಲಾಗಲಿಲ್ಲ. ಅಂತರಂಗವೆಂಬೋ ಅಂತರಂಗ ಜಲಿಯನ್ ವಾಲಾಬಾಗ್‌ನಂತೆ… ಅದಕ್ಕಿದ್ದ ಒಂದೇ ದ್ವಾರದತುಂಬ ಜನರಲ್ ಡೈಯರ್ ಮಾರಕಾಸ್ತ್ರಗಳೊಂದಿಗೆ ನಿಂತಿರುವಂತೆ… ಯಾವ ಕ್ಷಣದಲ್ಲಿ ಏನಾಗಿಬಿಡುವುದೋ… ಆತಂಕದ ದಟ್ಟ ಛಾಯೆ… ವಿಚಿತ್ರ ಧಗೆ… ಸೆಕೆ… ಪ್ರಾಣವಾಯುವಿನ ಕೊರತೆ…ಸಾಮೂಹಿಕವಾಗಿ ಬೇಯುತ್ತಿರುವ ಕಥೆಗಳು, ಎಲ್ಲೆಲ್ಲೂ ರಾರಾಜಿಸುತ್ತಿರುವ ಪ್ರಶ್ನಾರ್ಥಕ ಚಿಹ್ನೆ… ದಾವಾನಲದ ಉಸಿರಾಟ… ಪರಸ್ಪರ ದುರುದುರು ನೋಟ… ಪ್ರತಿಯೊಂದರದು ಗುಗ್ಗುಳದಂಥ ಕಣ್ಣುಗಳು, ಸ್ವೇದರಂಧ್ರಗಳ ಮೂಲಕ ಪುಟಿಯುತ್ತಿರುವ ಆಕ್ರಮಣಕಾರಿ ಚಟುವಟಿಕೆ… ಒಂಚೂರು ಬದುಕುವ ತಹತಹಿಕೆ…ಒಟ್ಟಿನಲ್ಲಿ ಕರಿಯಜ್ಜನ ಅಂತರಂಗ ಸಾಮೂಹಿಕ ಕ್ರಾಂತಿಯ; ವಿನಾಕಾರಣ ರಕ್ತಪಾತದ ಸಮರಾಂಗಣವಾಗಿತ್ತು. ಪ್ರತಿಯೊಂದು ಕಥೆ ಆಕ್ರಮಣಕ್ಕೆ: ಅತ್ಯಾಚಾರಕ್ಕೆ ಭಾಷ್ಯ ಬರೆಯತೊಡಗಿದ್ದವು. ಗರ್ಭಧರಿಸಿದ ಮರುಕ್ಷಣದಲ್ಲಿ ಮೊಟ್ಟೆ ಇಡುತ್ತಿದ್ದ ಯಾವ ಕಥೆಯೂ ಸೊಳ್ಳೆಗಿಂತ ಕಡಿಮೆ ಇರಲಿಲ್ಲ. ಕಾವಿನ ಅಗತ್ಯವಿಲ್ಲದೆ ಫಕ್ಕನೆ ಇಬ್ಬಾಗವಾಗುತ್ತಿದ್ದ ಮೊಟ್ಟೆಗಳಿಂದ ನಿರ್ವಿರಾಮವಾಗಿ ಹೊರಬರುತ್ತಿದ್ದ ಕಥೆಗಳು ಆ ಕೂಡಲೇ ಅಂಬೆಗಾಲಿಟ್ಟು ಅಡ್ಡಾಡುತ್ತ; ಅಡ್ಡಾಡುತ್ತಲೆ ಬೆಳೆಯುತ್ತ, ಬೆಳೆಯುತ್ತಲೇ ನಿಗಿನಿಗಿ ಉರಿಯುತ್ತ, ಉರಿಯುತ್ತಲೇ ಹಸಿದು ಕಂಗಾಲಾಗುತ್ತ; ಕಂಗಾಲಾಗುತ್ತಲೇ ಎದುರಾದದ್ದನ್ನು ನಿರಾಯಾಸವಾಗಿ ಕಬಳಿಸುವ ವಿದ್ರಾವಕ ಪರಿಯಿಂದಾಗಿ ಇಡೀ ಅಂತರಂಗವೇ ತೋಳ್ಬಳದ ಕಣವಾಗಿ ಬಿಟ್ಟಿತ್ತು. ವಿಚಿತ್ರಾವೇಶದ ಆಭರಣವನ್ನು ತೊಟ್ಟು ಕುಣಿದು ಕುಪ್ಪಳಿಸುತ್ತಿದ್ದ ಸಾವಿರಾರು ಕಥೆಗಳ ದೈತ್ಯಪಾದಾಘಾತದಿಂದಾಗಿ ಎದ್ದ ಕೆಂಧೂಳು ರಾಚೀ ರಾಚೀ ನವರಂಧ್ರಗಳ ದಿಡ್ಡಿ ಬಾಗಿಲುಗಳು; ಪಂಚೇಂದ್ರಿಯಗಳ ಹೆಬ್ಬಾಗಿಲುಗಳು ತುಕ್ಕು ಹಿಡಿದು ಬಿಟ್ಟವು. ಎಷ್ಟೋ ಕಥೆಗಳು ಕೊನೆಯುಸಿರೆಳೆದು ನೆಲಕಚ್ಚಿದ ಮರುಕ್ಷಣದಲ್ಲಿ ಕೊಳೆತು ನಾರತೊಡಗಿ ಕಸಾಯಿಖಾನೆ ಯಂತಾದಂತ ರಂಗದ ಅತಂತ್ರ ವಾಸ್ತವಕ್ಕೆ ಒಂದು ನೆಮ್ಮದಿ ಹುಡುಕುವ ಪ್ರತಿ ಪ್ರಕ್ರಿಯೆ ಆರಂಭಗೊಂಡಿತ್ತು. ಅಲ್ಪಸ್ವಲ್ಪ ಬದುಕಿರುವ ತಾವಾದರೂ ಕೆಲಕಾಲ ನೆಮ್ಮದಿಯಿಂದ ಪ್ರಚ್ಛನ್ನವಾಗಿ ಬದುಕುವಂತಾಗಬೇಕೆಂದು ನಿರ್‍ಧರಿಸಿದ ಕಥೆಗಳೇ ಇಂಥದೊಂದು ಐತಿಹಾಸಿಕ ಪ್ರಯತ್ನಕ್ಕೆ ತೊಡಗಿದ್ದು, ಹೀಗೆಯೋಚಿಸುತ್ತ ಅನೇಕ ಕಥೆಗಳು ತಂತಮ್ಮ ಜಾಯಮಾನಕ್ಕನುಗುಣವಾಗಿ ಗುಂಪು ಗುಂಪಾಗಿ ಸೇರತೊಡಗಿದವು. ಪಕ್ಷಿ ಸಂಬಂಧಿತ ಕಥೆಗಳು, ರಣಹದ್ದುವಿನ ನೇತೃತ್ವದಲ್ಲಿ ಸಂಘಟಿತಗೊಂಡರೆ, ಬೇವಿನ ಮರದ ನೇತೃತ್ವವನ್ನು ತರುಲತೆ ಸಂಬಂಧೀ ಕಥೆಗಳು ಬೆಂಬಲಿಸಿದವು. ಚತುಷ್ಪಾದೀ ಕಥೆಗಳ ಸಂಘಟನಾಸಭೆಯಲ್ಲಿ ಮುಖಂಡತ್ವದ ಬಗ್ಗೆ ಗುಳ್ಳೆನರಿ ಮತ್ತು ಹೆಬ್ಬುಲಿ ನಡುವೆ ಸಾಕಷ್ಟು ವಾದವಿವಾದ ನಡೆದು ಕೊನೆಗೆ ಹೆಬ್ಬುಲಿ ಅಧ್ಯಕ್ಷನೆಂದೂ; ಗುಳ್ಳೆನರಿ ಉಪಾಧ್ಯಕ್ಷನೆಂದೂ ನೇಮಕಗೊಂಡವು. ಪ್ರೇತಪಿಶಾಚಿಗಳೆಲ್ಲ ಬ್ರಹ್ಮರಾಕ್ಷಸನನ್ನು ತಮ್ಮ ನೇತಾರನೆಂದು ಚುನಾಯಿಸಿದರೆ ಜಲಚರಗಳೆಲ್ಲ ಮೊಸಳೆಯನ್ನು ತಮ್ಮ ಮುಖಂಡನನ್ನಾಗಿ ಆರಿಸಿಕೊಂಡವು. ಏಳುಹೆಡೆಯ ಘಟಸರ್‍ಪದ ಮುಖಂಡತ್ವದಲ್ಲಿ ಜಮಾವಣೆಗೊಂಡ ಉರಗವೇ ಮೊದಲಾದ ಕ್ರಿಮೀಕೀಟಗಳೆಲ್ಲ ಒಂದು ದೊಡ್ಡ ಮೆರವಣಿಗೆಯನ್ನೇ ತೆಗೆದವು.
ಈ ಪ್ರಕಾರವಾಗಿ ಹುಟ್ಟಿಕೊಂಡ ಹತ್ತಾರು ಸಂಘಟನೆಗಳು ತಂತಮ್ಮ ಮುಖಂಡರ ನೇತೃತ್ವದಲ್ಲಿ ತಮ್ಮ ಜೀವಂತ ಅಸ್ತಿತ್ವಕ್ಕಾಗಿ ಸುದೀರ್ಘ ಚರ್ಚೆ ನಡೆಸಿದವು. ತಾವು ಬದುಕಿ ಉಳಿಯುವಂತಾಗಬೇಕಾದರೆ ತಮಗೆಲ್ಲ ತನ್ನ ಅಂತರಂಗದಲ್ಲಿ ಆಶ್ರಯ ನೀಡಿರುವ ಕರಿಯಜ್ಜ ಮೊದಲಿನಂತೆ ನಿರ್ವಿರಾಮವಾಗಿ ಕಥೆ ಹೇಳುವಂತಾಗಬೇಕು. ಹೊಟ್ಟೆಲಿರೋ ಕೂಸು ಬಯಸಿದೊಡನೆ ಸೊಗಸಾಗಿ ಕಥೆ ಹೇಳುತ್ತಿದ್ದ ಮುದುಕನಿಗೇನಾಯಿತು ಧಾಡಿ? ಇವನು ಯಾರು ಕೇಳಿದರೂ ಹೇಳುತ್ತಿಲ್ಲವಲ್ಲ! ದಾನ ಧರ್ಮ ಸಂಬಂಧೀ ಕಥೆಗಳು ನೀಡಿದ ಪ್ರೇರಣೆ ಯಿಂದಾಗಿಯೇ ಶಿವಪೂಜೆಗೌಡ ಐದೆಕೆರೆ ಹೊಲದ ಆಮಿಷ ಒಡ್ಡಿದ್ದು. ಕರಿಯಜ್ಜ ನನ್ನು ನಿರಂತರವಾಗಿ ಆಗೋಗ್ಯದಿಂದಿಟ್ಟಿರುವ ತಮ್ಮನ್ನೆಲ್ಲ ಅಂತರಂಗದಲ್ಲಿ ಬಂಧಿಸಿಟ್ಟಿರುವುದು ನ್ಯಾಯವೇನು? ದಿಕ್ಕುಗಳೆಲ್ಲ ಮುಚ್ಚಿಹೋಗಿರುವ ಅಂತರಂಗದ ನಿರ್ವಾತದೊಳಗೆ ಎಷ್ಟು ದಿನ ಬದುಕಿರಲಾದೀತು?
ಕಥೆಗಳೆಲ್ಲ ಒಟ್ಟಾಗಿ ಮುದುಕನ ದೇಹದ ನವರಂಧ್ರಗಳ ಕಡೆ ಒಟ್ಟಾಗಿ ನುಗ್ಗಿದವು. ನವರಸಗಳೆಲ್ಲ ಕೊಳೆದು ನಾರುತ್ತಿರುವ ಆ ದ್ವಾರಗಳನ್ನು ತೆರೆಯುವಲ್ಲಿ ಅವು ವಿಫಲಗೊಂಡವು. ಇಂಥ ತಮ್ಮ ಯಾವುದೇ ಪ್ರಯತ್ನ ಮುರಿದುಬಿದ್ದಾಗ ತಮ್ಮ ಅವಸಾನ ಸಮೀಪಿಸಿತೆಂದು ಕಥೆಗಳೆಲ್ಲ ಚಿಂತಾಗ್ನಿಯಲ್ಲಿ ಬೇಯುತ್ತ ತಲೆಗೆ ಕೈಹೊತ್ತು ಕೂತವು. ಅವುಗಳ ನಿಟ್ಟುಸಿರಿನಿಂದಾಗಿ ಕಥೆಗಾರನ ಅಂತರಂಗ ಮತ್ತಷ್ಟು ಮಲಿನಗೊಂಡಿತು.
ಆ ಅಂತರಂಗದ ಕವಿವ ಗರ್‍ಬೋಗೆಯೊಳಗಿಂದ ಒಂದೊಂದೆ ದಾಪುಗಾಲಿಡುತ್ತ ಪ್ರಕಟಗೊಂಡ ಬ್ರಹ್ಮರಾಕ್ಷಸನದು ಮೊದಲೇ ಮಹತ್ವಾಕಾಂಕ್ಷೆಯ ಜಾಯಮಾನ. ಸಹವರ್ತಿ ಕಥೆಗಳ ಅಸಹಾಯಕತೆಯನ್ನೇ ಮೂಲ ಬಂಡವಾಳ ವಾಗಿರಿಸಿಕೊಂಡ ಅದು ಸಜ್ಜನಿಕೆಯ ಮುಖವಾಡದೊಂದಿಗೆ ಪ್ರತಿಯೊಂದು ಕಥೆಯ ಬಳಿಗೆ ಮಿಂಚಿನಂತೆ ಸಂಚರಿಸತೊಡಗಿತು. ಅಲಂಕಾರ ಛಂದಸ್ಸಿನಿಂದ ಭಾಷೆಯನ್ನು ಮೋಹಪಾಶದಂತೆ ಬಳಸುತ್ತ ಪ್ರತಿಯೊಂದು ಕಥೆಯ ಅಂತಃಕರಣವನ್ನು ಸೂರೆಗೊಳ್ಳ ತೊಡಗಿತು. “ಸಹೋದರರೇ ಎಲ್ಲರೂ ಒಂದಾಗೋಣ… ಒಗ್ಗಟ್ಟಿನಿಂದ ಒತ್ತಡ ತಂದಾಗ ಮಾತ್ರ ಕರಿಯಜ್ಜನ ನವರಂಧ್ರಗಳು ತಾನೇತಾನಾಗಿ ಪಾರಿಜಾತ ಪುಷ್ಪ ಗಳಂತೆ ಅರಳುತ್ತವೆ” ಎಂದು ಮುಂತಾಗಿ ವ್ಯಾಖ್ಯಾನಿಸಿ ಎಲ್ಲ ಕಥೆಗಳ ಹೃದಯ ಗೆದ್ದಿತು.
ಮುಂದೊಂದು ದಿನ ಅದು ಕರೆದ ಮಹಾಧಿವೇಶನಕ್ಕೆ ಸಮಸ್ತ ಕಥೆಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹಾಜರಾದವು. ಅವೆಲ್ಲವುಗಳ ಮಹದೇಚ್ಛೆಯಂತೆ ಅಧಿವೇಶನದ ಅಧ್ಯಕ್ಷತೆ ವಹಿಸಿದ ಬ್ರಹ್ಮರಾಕ್ಷಸ ಸಮಸ್ತ ಕುಲಬಾಂಧವರನ್ನುದ್ದೇಶಿಸಿ ಅದ್ಭುತವಾದ ಭಾಷಣ ಮಾಡಿತು. ತಮ್ಮ ಹುಟ್ಟು, ಪರಂಪರೆಯಿಂದ ಹಿಡಿದು ಮಾನವನ ಬದುಕಿಗೆ ತಾವು ಅನಿವಾರ್ಯ ವಾದುದರವರೆಗೆ ಪಾಂಡಿತ್ಯಪೂರ್ಣವಾಗಿ ಮಾತಾಡಿತು. ತಾವು ಮನುಕುಲದ ಚಿತ್ತಸ್ವಾಸ್ಥ್ಯ ಕಾಪಾಡುವುದಕ್ಕಾಗಿ ಸಹಸ್ರ ಸಹಸ್ರ ವರ್ಷಗಳಿಂದ ನಿರ್ವಿರಾಮವಾಗಿ ದುಡಿದಿರುವ ಬಗ್ಗೆ, ಮಾನವ ತನ್ನ ಸಂತೋಷಕ್ಕಾಗಿ ತಮ್ಮ ಮುಖಗಳನ್ನು ತಿರುಚಿದ ಬಗ್ಗೆ; ಬಣ್ಣಗಳನ್ನು ಬದಲಿಸಿದ ಬಗ್ಗೆ; ತಾವು ಏನೆಲ್ಲ ಹಿಂಸೆ ಸಹಿಸಿಕೊಂಡಿರುವುದರ ಬಗ್ಗೆ ವಿವರಿಸುವಾಗ ಗದ್ಗದಗೊಂಡಿತು.
ಅಡುಗೂಲಜ್ಜಿ ಮನದ ಪಾಕಶಾಲೆಯಲ್ಲಿ ದಷ್ಟಪುಷ್ಟವಾಗಿ ಬೆಳೆದು ಆಕೆ ಸತ್ತಾಗ ಕಂಗಾಲಾಗಿದ್ದ ದೆವ್ವಕ್ಕೆ ಕರಿಯಜ್ಜ ತನ್ನ ಅಂತರಂಗದಲ್ಲಿ ಆಶ್ರಯನೀಡಿದ್ದ. ಪ್ರತಿಯೊಂದು ಕಥೆಯಲ್ಲಿ ಅದು ಅವರ ಮೈಯಿಂದ ಇವರ ಮೈಯಿಗೆ; ಇವರ ಮೈಯಿಂದ ಅವರ ಮೈಯಿಗೆ ಪರಕಾಯ ಪ್ರವೇಶಮಾಡುತ್ತ ಏನೆಲ್ಲ ಹಿಂಸೆ ಸಹಿಸಿ ಕೊಂಡಿತ್ತು. ಉಪಾಧ್ಯಕ್ಷ ಸ್ಥಾನದಿಂದ ಮಾತಾಡುವಾಗ ಡೆಮಾಕ್ರಸಿ ಬಗ್ಗೆ ಹೆಚ್ಚು ಒತ್ತು ಕೊಟ್ಟಿತು. ನೂರಾರು ವರ್‍ಷಗಳಿಂದ ಮಕ್ಕಳನ್ನು ರಂಜಿಸಿ ಖ್ಯಾತಿ ಪಡೆದಿದ್ದ ಕಳ್ಳಳ್ಳಿಬುವ್ವ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಮಾತಾಡುತ್ತ ಇಂಥ ಮರಣಾಂತಿಕ ಸಂದರ್ಭದಲ್ಲಿ ಮಾರ್ಕ್ಸ್‌ವಾದದ ಅನಿವಾರ್ಯತೆಯನ್ನು ಪ್ರಸ್ತಾವಿಸಿತು. ವೈಯಕ್ತಿಕ ತೆವಲುಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಮುನ್ನುಗ್ಗಿದಾಗ ಮಾತ್ರ ಕರಿಯಜ್ಜನ ನವರಂಧ್ರಗಳು ನುಚ್ಚು ನೂರಾಗುತ್ತವೆ ಎಂದು ಅದು ಮಾತಾಡಿದ್ದು ಬಹಳಷ್ಟು ಕಥೆಗಳಿಗೆ ಹಿಡಿಸಿತು. ತಂತಮ್ಮ ಸಂಘಟನೆಗಳ ಜಾಯಮಾನಕ್ಕನುಗುಣವಾಗಿ ಸಮವಸ್ತ್ರ ಧರಿಸಿ ಬಂದಿದ್ದ ಕಥೆಗಳು ‘ಮಾರ್ಕ್ಸ್‌ವಾದ ಚಿರಾಯುವಾಗಲಿ’ ಎಂದು ಕೂಗಿದ್ದು ಮುಗಿಲು ಮುಟ್ಟಿತು.
ಅಪ್ಪಟ ಎರೆಹೊಲದಂಥ ಕರಿಯನೆಂಬ ಒಳ್ಳೆಯ ಮನುಷ್ಯ ತನ್ನದೇ ಆದ ಕಲ್ಪನಾವಿಲಾಸದಿಂದ ತಮ್ಮನ್ನು ಉಳಿಸಿ ಬೆಳೆಸುತ್ತಾನೆಂದಲ್ಲವೆ ತಾವು ತಂಡೋಪತಂಡವಾಗಿ ಬಂದು ಆಶ್ರಯ ಪಡೆದದ್ದು! ಆದರೆ ತಮ್ಮ ಆಶ್ರಯದಾತನಾದ ಆ ಮಹಾಶಯ ತನ್ನ ಅಂತರಂಗದ ಸಮಸ್ತ ರಹದಾರಿಗಳನ್ನು ಯಾವ ಷೋಕಾಸ್ ನೋಟೀಸ್ ನೀಡದೆ ಮುಚ್ಚಿಬಿಡುವುದೆಂದರೇನು? ಮನಸ್ಸೆಂಬ ಸೆರೆಮನೆಯೊಳಗೆ ಬಂಧಿಸಿಡುವುದೆಂದರೇನು? ತಮ್ಮಂಥ ಇಳಿವಯಸ್ಸಿನ ಕಥೆಗಳು ಪ್ರಾಣವಾಯು ಇಲ್ಲದ, ಜೀವ ಜಲವಿಲ್ಲದ ಈ ನಿರ್‍ವಾತ ಪ್ರದೇಶದಲ್ಲಿ ಬದುಕುಳಿಯುವುದು ಸಾಧ್ಯವೇನು?… ಗತ ವೈಭವವನ್ನು ಮೆಲುಕು ಹಾಕುತ್ತ ನಿರ್‍ಗತಿಕರಂತೆ ಸಾಯ ಬೇಕಾಗಿದೆಯಲ್ಲ ಎಂದು ತುಂಬ ವಯಸ್ಸಾದ ಕಥೆ ನುಡಿದದ್ದು ಕೇಳಿ ಅನೇಕ ಕಥೆಗಳು ಕಣ್ಣು ಒದ್ದೆ ಮಾಡಿಕೊಂಡವು. ಎಷ್ಟೋ ಕಥೆಗಳು ಬದ್ಧ ಭೈಕುಟಿಯಾದವು. ಕೇಳುಗರ ಕಿವಿಗೆ ತಮ್ಮನ್ನು ವರ್ಗಾಯಿಸದೆ ಪಂಚೇಂದ್ರಿಯಗಳನ್ನು ಮುಚ್ಚಿಕೊಂಡು ಕೂತಿರುವ ಕರಿಯಜ್ಜನನ್ನು ಕ್ಷಮಿಸಲಾದೀತೇನು? ತಾವು ಅವನಿಗೆ ಮಾಡಿರುವ ದ್ರೋಹವಾದರೂ ಏನು? ಸೇಡು ತೀರಿಸಿಕೊಳ್ಳದೆ ಬೇರೆ ದಾರಿಯೇ ಇಲ್ಲ… ಕಥೆಗಾರನ ವಿರುದ್ಧ ಅವುಗಳ ಧಿಕ್ಕಾರದ ಧ್ವನಿ ಮುಗಿಲು ಮುಟ್ಟಿತು. ಕಾದ ಹಂಚಿನ ಮೇಲಿನ ದ್ವಿದಳಧಾನ್ಯದಂತೆ ಚಡಪಡ ಉಂಟಾದ ಸದ್ದಿನಿಂದಾಗಿ ಮಹಾಸಭೆಗೆ ಕೆಲವು ಅರ್ಥಪೂರ್ಣ ಗೊತ್ತುವಳಿಗಳನ್ನು ಮಂಡಿಸಲಾಗಲಿಲ್ಲ. ಸ್ವೀಕರಿಸಿ ಚರ್ಚಿಸಲಾಗಲಿಲ್ಲ. ಅಧ್ಯಕ್ಷತೆವಹಿಸಿದ್ದ ಬ್ರಹ್ಮರಾಕ್ಷಸ ದಿಕ್ಕು ತೋಚದಂತಾಗಿ ತಲೆಗೆ ಕೈಹೊತ್ತು ಕೂತಿತು.
ಆಕಾಶಕ್ಕೂ, ಭೂಮಿಗೂ ಏಕಾಗಿರುವ ಅಧ್ಯಕ್ಷನೇ ಕೈಚೆಲ್ಲಿದ ಅನಂತರ ಕಥೆಗಳೆಲ್ಲ ಸೂತ್ರ ಕಳಚಿಕೊಂಡ ಪಟಗಳಂತಾದವು ಪ್ರತಿಕಥೆಯ ವಿಸ್ತರಿಸಿಕೊಂಡ ಅಂತರಂಗದಲ್ಲಿ ಹುಟ್ಟಿಕೊಂಡ ನೂರಾರು ಉಪಕಥೆಗಳು ಹಾಲುಕಾಣದ ಹಸುಳೆಗಳಂತೆ ಚೀರತೊಡಗಿದವು. ನಿರ್‍ವಾತ ಕೋಶದಿಂದ ಬಿಡುಗಡೆ ಪಡೆಯಲು ರೀತಿನೀತಿಗಳನ್ನು ಉಲ್ಲಂಘಿಸದಿರಲಾಗಲಿಲ್ಲ. ಪ್ರತಿಯೊಂದು ಕಥೆಯ ಜಾತ್ರೆ ಸಮಾನ ವರ್ತನೆಯಿಂದಾಗಿ ಮುದುಕನ ಅಂತರಂಗದ ಎಲ್ಲೆಗಳು ಕಂಪಿಸಲಾರಂಭಿಸಿದವು. ಕತೆಗಾರ ತನ್ನ ನೆರಳಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಾಗ ಕೊಂಬೆ ತುಂಡರಿಸಿ ಅವನ ಅಂಗ ನಷ್ಟ ಮಾಡುವ ಎಂದು ವಟವೃಕ್ಷ ಹೇಳಿದರೆ, ಒಳಹಾದಿಗುಂಟ ನಡೆಯುವಾಗ ಅವನ ಹಿಂಗಾಲು ಕಚ್ಚುವುದಾಗಿ ಕಾಳಿಂಗಸರ್ಪ ಹೇಳಿತು. ಕತ್ತೆಕಿರುಬದ ಚರ್ಮ ತೊಡಿಸಿ ಕಜ್ಜಾಯದ ಡಬ್ಬಿಯೊಳಗದುಮುವುದಾಗಿ ಗುಳ್ಳೆನರಿ ಹೇಳಿದರೆ, ಮೂಸಲು ಬರುವ ಕಥೆಗಾರನನ್ನು ನುಂಗೇ ಬಿಡುವುದಾಗಿ ಪಾರಿಜಾತಪುಷ್ಪ ಹೇಳಿತು. ಅವನನ್ನು ಏಳು ಸಮುದ್ರದಾಚೆ ಕೀಳುಸಮುದ್ರದ ನಟ್ಟನಡುಗಡ್ಡೆಯಲ್ಲಿ ಗವಿಯಲ್ಲಿರುವ ಗುಬ್ಬಿಯ ಕಣ್ಣೊಳಗೆ ಬಚ್ಚಿಡುವೆನೆಂದು ಮಾಯಾಮರಾಠಿ ಹೇಳಿದರೆ, ಆ ನಿರುಪದ್ರವಿ ಕಥೆಗಾರರನ್ನು ಸುಟ್ಟು ನಸ್ಸೆ ಮಾಡಿ ಮೂಗಿಗೇರಿಸಿಕೊಂಡು ಬಿಡುವುದಾಗಿ ಕಳ್ಳಳ್ಳಿ ಬುವ್ವ ಹೇಳಿತು. ಈ ಪ್ರಕಾರವಾಗಿ ಒಂದೊಂದು ಕಥೆ ತಂತಮ್ಮ ಸೇಡಿನ ನಮೂನೆಗಳನ್ನು ಒಂದರ ಮೇಲೋಂದರಂತೆ ಪ್ರಕಟಿಸಿದ್ದು… ಆದರೆ ಮಾತೃಸ್ವರೂಪನೂ, ಪಿತೃಸ್ವರೂಪನೂ, ಆಶ್ರಯದಾತನೂ ಆಗಿರುವ ಕಥೆಗಾರ ಕರಿಯಜ್ಜನ ಹಣ್ಣು ಹಣ್ಣು ಶರೀರದ ಮೇಲೆ ಆಕ್ರಮಣ ಮಾಡುವ ಧೈರ್‍ಯ ಯಾವ ಕಥೆಗೂ ಇರಲಿಲ್ಲ. ಅವಕ್ಕೂ ಹೃದಯವೆಂಬುದಿಲ್ಲದಿರಲಿಲ್ಲ. ಅದೂ ಅಲ್ಲದೆ ಉಗ್ರಗಾಮಿಧೋರಣೆ ಕಥೆಗಳಾದ ತಮಗೆ ಭೂಷಣವಲ್ಲ.
ಕಥೆಗಾರ ಎಂದೂ ಹೀಗೆ ವರ್ತಿಸಿದವನಲ್ಲ. ಶಾರೀರಿಕವಾಗಿ ತುಂಬ ಕೃಶಗೊಂಡಿರುವ ಅವನ ವಿರುದ್ಧ ಯಾವುದೇ ಪಂಚೇಂದ್ರಿಯಗಳೂ, ನವರಂಧ್ರಗಳೂ ಕ್ಯಾತೆ ತೆಗೆದಿರಬಹುದೆ ಎಂಬ ಸಂದೇಹ ವ್ಯಕ್ತಪಡಿಸಿದವು ಕೆಲವು. ಕಾಲಕ್ಕನುಗುಣವಾಗಿ ಅವೇನಾದರೂ ಸುಂಕ ಬಯಸಿ ಕರ್ತವ್ಯಕ್ಕೆ ಬೆನ್ನು ಮಾಡಿರಬಹುದೇ ಎಂದು ತರ್ಕಿಸಿದವು. ಮಾರ್ಗಗಳನ್ನೂ ಒಂದು ಕೈ ವಿಚಾರಿಸಿಕೊಂಡು ಬಿಡುವುದೆಂದು ನಿರ್ಧರಿಸಿ ಅವೆಲ್ಲ ಗುಂಪುಗುಂಪಾಗಿ ಕೆಲವು ಪಂಚೇಂದ್ರಿಯಗಳ ಕಡೆಗೂ; ಕೆಲವು ನವರಂಧ್ರಗಳ ಕಡೆಗೂ ಹೋದವು. ಯಾವ ಸಂಘಟನೆ ವ್ಯಾಪ್ತಿಯಲ್ಲಿರದಿದ್ದ ಚಿಲ್ಲರೆ ಪಲ್ಲರೆ ಕಥೆಗಳು ಕರಿಯಜ್ಜನ ಸ್ವೇದರಂಧ್ರಗಳ ಮೂಲಕ ಕನ್ನಕೊರೆಯುವ ಪ್ರಯತ್ನಕ್ಕಿಳಿದವು. ಅಂತರಂಗದ ಸಮಸ್ತಕಥೆಗಳ ನಿರ್ವಿರಾಮದ ಒತ್ತಡದಿಂದಾಗಿ ಕರಿಯಜ್ಜ ಕ್ಷಣದಿಂದ ಕ್ಷಣಕ್ಕೆ ಪಳುಗಟ್ಟೆಗೆ ಬೇರಿಳಿಬಿಡುತ್ತಲೇ ಇದ್ದ. ಶೂನ್ಯದ ದೃಷ್ಟಿ ನೆಟ್ಟಿರುವಂತೆಯೇ ಇತ್ತು. ಅವನು ಬದುಕಿದ್ದನೋ! ಸತ್ತಿದ್ದನೋ!
*****
