ಚಿಗುರಿತು ಈ ಹುಲುಗಲ-
ಶಿವ-ಪಾರ್‍ವತಿ ಅಪ್ಪಿದಂತೆ,
ಹೊಸ ಸೃಷ್ಟಿಗೆ ಒಪ್ಪಿದಂತೆ,
ಚಿಗುರಿತು ಈ ಹುಲುಗಲ!
ಯಾ ವಿಮಾನದಿಂದ ಬಂದು ಇಳಿದನೇನೊ ಚೈತ್ರ
ಬೇರಿನಿಂದ ತುದಿಯವರೆಗು ಮೂಕ ತಂತಿ ಮಿಡಿತ.
ಒಂದು ಇರುಳು, ಒಂದು ಬೆಳಗು, ಒಂದು ಸಂಜೆ ಕಳೆಯಿತು
ಹೇಗೊ ಒಂದು ನಸುಕಿನಲ್ಲಿ ಇದರ ಕನಸು ಫಲಿಸಿತು.
ಚಿಗುರಿ ಚಿಗುರಿ ಚಿಗುರಿ ಎದೆಯ ರಸವನೆಲ್ಲ ಚಿಮ್ಮಿತು,
ಬೆಳಗು, ಬೈಗು ತೊಳಗೆ ತನ್ನ ಅಂಗೈಯಲಿ ಕುಣಿಸಿತು;
ಹಸುರು ತೊಂಗಲಲ್ಲಿ ನೆಲವ ತಂಪಾಗಿಸಿ ಬಾಗಿತು,
ಹೂವು-ಮುಳ್ಳು ಹಾದಿಯಲ್ಲಿ ‘ಶುಭಕೃತು’ವು ಸಾಗಿತು.
ಅದೇ ರಸ್ತೆ, ಅದೇ ಬಸ್ಸು, ಅದೇ ಧೂಳು ಇಂದಿಗು
ಅದೇ ಕೆರೆಯ ರಾಡಿನೀರು ಹಿತವಾಗಿದೆ ಮಂದೆಗು.
ಉರಿಯುತಿರುವ ಬಿಸಿಲಿನಲ್ಲಿ ತಣ್ಣಗಿಹುದು ಹುಲುಗಲ
ಮೈಯ ತುಂಬ ಹೂವಬಿಟ್ಟು ಕಾಯುತಿಹುದು ಹಂಬಲ.
ಗಾಳಿಯಲ್ಲಿ ಗಿಲಕು ಗಿಲಕು ಕಾಯಿಯಲ್ಲಿ ಬೀಜವು
‘ಸಂಭವಾಮಿ ಯುಗೇ ಯುಗೇ’ ಒಳಗಿನಮಲ ತೇಜವು.
ಈ ಮಣ್ಣಿನ ಮರೆಯೊಳೆಂಥ ಜೀವಸ್ಫೂರ್‍ತಿಯಡಗಿದೆ
ಇದರ ಒಂದು ಕಣ ಕಣವೂ ಹೊಸಸೃಷ್ಟಿಗೆ ತೊಡಗಿದೆ.!
*****
