ಹಳೆಮನೆಯ ಮಂದಿ

ರಾಜಮಾರ್ಗದ ಮೇಲೆಯೇ ಸುಪ್ರಸಿದ್ಧ ಮನೆ.
ಕಾಡ ಕುಡುಬಿಯು ಕೂಡ ಬಲ್ಲ ಇದರ ವಿಳಾಸ,
೧೯೨೦ ರದ್ದು ಮಾದರಿ
ಭದ್ರ ಬುನಾದಿ – ಕಾಂಕ್ರೀಟು.
ಗೋಡೆ, ಮಹಡಿ ಮಾತ್ರ ಕಾಲಾವಧಿಯ ಕಂತ್ರಾಟು.
ದೊಡ್ಡ ಲಾಂದ್ರದ ಕಂಭದೆದುರಿಗೇ ಇದೆ ಹೆಸರುಹಲಗೆ.
ಪ್ರತಿದಿನ ಹೊಸತು ಬಣ್ಣ, ಹೊಸ ಘಾಟು.
ಅಲ್ಲೆ ಚಕ್ರವ್ಯೂಹದಿನದ ಸಂಜೆಯ ಜಯದ್ರಥ ಮಹೋನ್ನತ ಗೇಟು.
ಎದೆಯ, ಕರುಳಿನ ಚಿತ್ರವೈಚಿತ್ರ್ಯ ಕೆತ್ತಿರುವ
ಕಿಸುಬಾಯಿ ಪಾಗಾರ. || ೧೦ ||
ಒಳಗೆ ಹೂದೋಟದೊಳತೋಟಿ,
ಗಿಡಗಿಡಕು ಪೈಪೋಟಿ:
– ಮುಗುಳಾಗಲೋ, ಇಲ್ಲ, ಅರಳಾಗಲೋ?
ಹಣ್ಣಾಗಲಿಕ್ಕೆ ಇಲ್ಲ ರವಷ್ಟು ಪುರುಸೊತ್ತು.
ಗಾಳಿಯಲೆಲ್ಲ ದುಂಬಿಗಳ ಸತತ ಕವಾತು;
ಕೋಗಿಲೆಯ ಕಹಳೆ, ತುತ್ತೂರಿ, ನೌಬತ್ತು.
ತೋಟದ ನಡುವಿನಲ್ಲಿ ಅಪರಂಜಿ ಪಂಜರದಿ
ಅನ್ನ ತಿನ್ನುವ, ಮಂಜನುಗಿವ ಅನುಭಾವದರಗಿಣಿ:
“ಮಾತಾಡೋ ರಾಮಪ್ಪಾ, ರಾಮಪಾ, ರಾಮಪ್ಪಾ”
ಕೇಳಿದ್ದೆ ಈ ಮನೆಯ ಬಗೆಗೆ ನೂರಾರು ಕತೆ: || ೨೦ ||
ಹಳೆಮನೆಯ ವಹಿವಾಟು ಎಲ್ಲ ಬಹಳ ಸಲೀಸು,
ಹಳೆಗಂಡಹೆಂಡಿರೊಡನಾಟ ಕೂಟದ ಚಟದ ಚುರುಕು, ತುರುಸು.
ಬಿಗಿತತ್ತಿಕಾಟಸುಖ ಸೊನ್ನೆ. ಆದರೂ
ಸಾರಿಗೆ ಸುಸೂತ್ರ; ಹಾಗೂ ಸರಳ ನಿರಪಾಯ
ಟಪ್ಪಾಲು ಪೆಟ್ಟಿಗೆಗೆ ತುರುಕಿದ ಲಕ್ಕೋಟೆ ಚಕ್‌ಚಕ್ ಎಂದು,
ಭೋಂ ಬೋಂ ಎಂದು, ಜುಗುಜುಗು ಎಂದು,
ನೂರಾರು ಮೈಲಿ ನಡೆಯಿಸಿ ಕೂಚು ಗುರಿಮುಟ್ಟಿ ಹೊಡೆವುದು ಸಲಾಮು!

– ೨ –
ಮುಟ್ಟಿದರೆ ತೆರೆಯಬಹುದಿದರ ಬಾಗಿಲು;
ಬಾಗಿಲಾಚೆ ಬೆಳ್ದಿಂಗಳಿನ ಕುಕಿಲು; || ೩೦ ||
ಬೀಸುಬಗೆ, ಚಾಚುತೋಳಿನ ಸೂಜಿಗಲ್ಲ ಸೆಳೆ.
ಆರಾಮಖುರ್ಚಿ ಒಳಗಡೆ, ದಿಂಬು, ಸೋಫಾ, ತೂಗುಮಂಚ, ಕಾಫಿಕೊಳಾಯಿ;
ಮಿಂಚುಬೀಸಣಿಗೆ, ಹಿತಮಿತ ಗಾಳಿ;
ಮಾತು ಬ್ಯಾಡ್ಮಿಂಟನ್ನಿನಾಟ ಒಂದರೆ ತಾಸು,
ಮತ್ತೆ ಹೃದಯದ ಸುತ್ತಲೂ ಸುಖೋಷ್ಣಸ್ಪಂದ;
ಕೈಕುಲುಕು, ಎದೆಝಳಕು;
ಕಣ್ಣ ತುದಿಯಲ್ಲಿ ಕರುಳಿನೊಂದು ತಿರುಗಣಿತಿರುಪು;
ಮುಂಜಾವದೆಳತಳಿರ ಮೇಲೆ ಆಕಾಶರಾಯನ ಕಣ್ಣ ಹನಿಹೊಳಪು-
ಹೀಗೆ ತಿಳಿದದ್ದು ಅದು ನನ್ನ ಮೊದಲನೆ ತಪ್ಪು!
ಅಡೆಗಿಟ್ಟು ಜಡಿದರೆಂಥಾ ಕಾಯೆ ಇರಲಿ, ಕೊನೆಗಾದರೂ ಕಳಿತು, ಹುಳಿ ಹಿಂಗಿ
ಸಿಹಿಯಾದೀತೆಂದು ಭ್ರಮಿಸಿದ್ದೆ. || ೪೦ ||
ನೋಡಿದರೆ
ಈ ಎಲ್ಲ ಮಂದಿ ಈಜಿಫ್ತು ಮಮ್ಮಿಗಳಂತೆ ಮುರುಟಿ, ಸುರುಟಿ, ಉಪ್ಪೂರಿ
ಆಗಿವೆ ಗನಾದು ಉಪ್ಪಿನಕಾಯಿ.
ಹಿಳಿ, ಒಗರು, ಖಾರ- ಈ ಮೂರನ್ನು ಬಿಟ್ಟರಿನ್ನಾವ ರಸವಾದರೂ
ಈ ಮಂದಿಗಿರಬೇಡ?
ಮಿಡಿ ಹೊರಗೆ ಸೊನೆಯುಗುಳಿದರೆ ಇವಕ್ಕೆ ಒಳಗೆಲ್ಲ ಬರಿ ಸುಡು-ಸೊನೆಯೆ!
ಬಾಗಿಲ ಬಳಿಯೆ ಗಸ್ತು ಹೊಡೆಯುವವು ನಾಲ್ಕಾರು
ಮಂದಿ ಮಾಗಧ ನಾಯಿ.
ಬಾಗಿಲೊ? ಅಹಂಕಾರ ಸಂಧಿವಾತದ ಯಾತ.
ನಜರು ಹಿಡಿದರೆ ಮಾತ್ರ ಇಲ್ಲಿ ಯಾತಾಯಾತಾ. || ೫೦ ||
ಹಾಗೂ ಹೀಗೂ ಪಾಸು ಗಿಟ್ಟಿಸಿ ಒಳನುಗ್ಗಿದರೆ
ಹೂ, ಬೆಣ್ಣೆ, ಜೇನು – ಇವು ಕೊಂಚ ಹಳಸುವ ನಾತ;
ಲೋಭಾನ, ಪುನುಗು ಜಿವ್ವಾಜಿಗಳ ಮುಸುರೆಯಲ್ಲುಸುರು ಕಟ್ಟದ ಗಾಳಿ.
ಗೋಡೆ ಮೇಲೆಲ್ಲ ಮಾಸಿದ ಪ್ರಕೃತಿಚಿತ್ರಗಳ ಪಟಪಟದ ಪರದಾಟ,
ಒಳಗೆಲ್ಲೊ ದರ್ಶನದ ಗಣೆಕುಣಿದು ಮಲಕುತಿದೆ
ಒಡಕು ಗ್ರಾಮಾಫೋನ್.

– ೩ –
ಬಂದರಲ್ಲಾ ಕೊನೆಗು ಯಜಮಾನರು!
ಬ್ಯಾಂಕಿನಲ್ಲಿ ಹಿರಿಹೆಸರ ಬಡ್ಡಿ ಬೆಳೆಯುತ್ತಿದ್ದರೂ ಹೊಸತು
ಗಳಿಗಾಕ್ರೋಶಿಸುವ, ಕುದಿವ ಜೀವ,
ಹಾಲು ತೀರಿದ ಬತ್ತುಗೆಚ್ಚಲಿನ ಸುರಧೇನು;
ನೂಲಿಲ್ಲದೇ ಅರಿವೆ ನೇಯುವಾತ್ಮದ ಮಗ್ಗ; || ೬೦ ||
ಅರ್ಧ ಹೊತ್ತಿದ್ದರೂ ಕೆಸರಲ್ಲಿ ಆಕಾಶಯಾನ ನಟಿಸುವ
ಅಧಟ, ಕವಿಭಟ!
ತಿoಡಿಜs, ತಿoಡಿಜs, ತಿoಡಿಜs
ಚೆಂಡನೆರಡೂ ಕೈಲಿ ಹಿಡಿದು ಮೇಲಕ್ಕೆಸೆದು ತಾನೆ ಹಿಡಿವುದು,
ಹಿಡಿದು ಚಪ್ಪಾಳೆ ತಟ್ಟುವುದು.
ತಾನೆ ನಗುವುದು, ನಕ್ಕು ಮತ್ತೆ ಮೇಲಕ್ಕೆಸೆದು ಹಿಡಿದು
ಗಹಗಹಿಸುವುದು.
ಕೈ ಚಾಚುವಷ್ಟರಲ್ಲೆ ನೀವು, ಅದ ಹಿಡಿದು
ಎದೆಗವಚಿ, ಕಣ್ಮುಚ್ಚಿ || ೭೦ ||
ರಸಲೀನನಾಗುವುದು!
ವ್ಹಾರೆವಾ, ಕವಿಭೂಪ!
ಹಳಬ, ವಿದ್ಯಾವಿನೀತ, ಅನುಭವದಾಟಿ ಅನಿಭಾವಕೇರಿದವ,
ನಿರಹಂಕಾರಿ, ಆತ್ಮರೂಪಿ!
ಇದ್ದಷ್ಟು ಕಾಲ ಭೂಗತನಗರದಲ್ಲೇಕಾಂಗಿಯಾಗಿ
ಸಪ್ರೇತ ತೊಳಲಿದ ಹಾಗೆ.
ನೀರು ತುಂಬಿದ್ದಂತೆ ಕಂಡ ಕೆರೆಯಲ್ಲೀಜುಬಿದ್ದ ಕೂಡಲೆ ಇದ್ದ
ನೀರೆಲ್ಲವೂ ಬತ್ತಿ ಕಾಲು ಕೆಸರಲ್ಲಿ ಸಿಕ್ಕಿದ ಹಾಗೆ.
ಹೊಟ್ಟೆತುಂಬಾ ಸತ್ಯಶಿವಸುಂದರದ ಜಳ್ಳಿನುಪ್ಪಿಟ್ಟು ತಿಂದು,
ಮಂತ್ರಪೂತ ನಲ್ಲಿಯ ನೀರನೆರಡು ಲೋಟಾ ಹೀರಿ || ೮೦ ||
ಹೊರಬಿದ್ದೆ.
ಅಪ್ಪಟ ಯೂರೋಪು ಮಾದರಿ ಹೋಟೆಲಿಗೆ ಚಿಮ್ಮಿ
ಸೋಫಾದ ಮೇಲಕ್ಕೆ ಬಿದ್ದೆ. || ೮೨ ||
*****
ಡಿಸೆಂಬರ್ ೧೯೫೨

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ