ಈ ಮನಸಿನೊಳಗೊಬ್ಬ ಸೂರ್‍ಯ ಸುತ್ತಲು ಕಿರಣ
ತೂರಿಹನು. ಇಲ್ಲ ಉದಯಾಸ್ತಮಾನಗಳವಗೆ,
ಹೃದಯ ಕಮಲದಿ ಸದಾ ನಿಗಿನಿಗಿ ಕೆಂಡ ಸುರಿವ.
ಕೆಂಡವರಳಿದ ಹೂವು, ಮುಡಿದು ನಿಂತಿವೆ ಹರಣ.
ನೂರು ಗುಹೆಗಳ ಹೊಕ್ಕು ಹುಡುಕುತಿವೆ ಸಾವಿರದ
ಕಿರಣ. ದಾರಿಯುದ್ದಕು ಎಡವಿ ಬಿದ್ದಿದ ಸ್ಮರಣೆ.
ಅರಿವುಗೊಡದೊಲು ಎಲ್ಲೊ ತಾನೆ ಜಿನುಗಿದೆ ಕರುಣೆ.
ತರವಿಲ್ಲ, ತುಂಬಿಲ್ಲ, ತುಳುಕುತಿಹುದೆಲ್ಲಿಂದ?
ಹಗಲಿನಲಿ ಮುಳುಗು ಹಾಕಿದ ತಾರೆ ಮೇಲೆದ್ದು
ಬಹವು ಸಂಜೆ. ಕಿಡಿಹಾರಿಸುವವು ಕಾಡಿನಂಚಿ-
ನಲಿ ಮಿಂಚುಹುಳ, ಎಲ್ಲಿ ನಾರದ-ಹರಿ-ವಿರಿಂಚಿ?
[ಶಾಲೆ ತಪ್ಪಿಸಿ ಹೋದ ಧ್ರುವನ ಬೆನ್ನಿಗೆ ಗುದ್ದು]
ಇರುಳಾಗಲು ಬೆಳಕು ಸೋಸುವದು ಬಾನ ಜರಡಿ
ಹಗಲಿನಲು ಬಂದು ಮೂಸುವದು ಕತ್ತಲೆ-ಕರಡಿ.
*****
