ನಡುರಸ್ತೆಯಲ್ಲಿ ಕೈಕೊಟ್ಟೆನೆಂಬ ಚಿಂತೆ ಬೇಡ ಗೆಳೆಯ
ಈ ಪಯಣದಲ್ಲಿ ಇದು ಅನಿವಾರ್ಯ
ನಿನ್ನದೊಂದು ದಾರಿ ನನ್ನದೊಂದು ಕವಲು
ನಡೆಯುವುದೊಂದೇ ಗೊತ್ತು ಗುರಿ ಯಾರಿಗೆ?
ನಾ ನಿಂತ ರಸ್ತೆಯೋ ಬಲುದೊಡ್ಡ ಹೆದ್ದಾರಿ
ಆ ತುದಿಯು ಈ ತುದಿಯು ಒಂದೇ ರೀತಿ
ನಡೆಯುವವರು ಜೊತೆಗಿಲ್ಲ ಆಗಾಗ ಬಿರುಗಾಳಿ
ಬಂದವರೋ ನಿನ್ನತರ ಆಗಾಗ ಕವಲುದಾರಿ.
ನೀನು ಸರಿಯೋ, ನಾನೋ? ಚಿಂತೆ ಬೇಡ ಗೆಳೆಯ
ಯಾವ ಮರದಲಿ ಗೂಡು ಎಂದರಿಯದ ಹಕ್ಕಿಗಳು
ಹೀಗೆ ಸರಿಯೋ ಹಾಗೋ ಎಂದರಿಯದ ಮೇಲೆ
ಹೀಗೂ ಸರಿ ಹಾಗೂ ಸರಿ ನಡೆಯುವ ತ್ರಾಣವಿರುವ ಮೇಲೆ.
ಒಂದಾಗಿ ನಡೆವವರ ಬೇರ್ಪಡಿಸಲು ಹಲವು
ಬಿರುಗಾಳಿ ಸುಳಿಗಾಳಿ ನೆಪ ಮಾತ್ರ
ಬಾಲ್ಯದುತ್ಸಾಹದಲಿ ಕಣ್ಣಮುಚ್ಚಾಲೆಯಾಟ
ಅಡಗುವವರು ಹಲವರು. ನೀನೋ ಹುಡುಕುವವ ಮಾತ್ರ.
ನಾನೋ,
ಹರೆಯದ ಮೂಟೆಯಲಿ ಕನಸುಗಳ ಸರಕು ಕಟ್ಟಿ ಹೊತ್ತು
ನಡೆದು ನಡೆದು ಬಳಲಿದ ಮೇಲೆ
ಸೂರ್ಯನಿಳಿದು ಬೆಳಕಿನ ಹುಳಗಳು ಪಿಳಪಿಳ ಮಿಂಚಿದ ಮೇಲೆ
ಮರದ ಕೊಂಬೆಯ ಮೇಲೆ ಕುಳಿತು
ಟುವ್ವಿ ಹಕ್ಕಿಯಂತೆ ಹಾಡಲು ಕಲಿತೆ
ಇಂಪೋ,ತಂಪೋ
ದೈನ್ಯತೆಯೋ ವಿಷಾದವೋ ಒಂದೂ ತಿಳಿಯದು
ಹಾಡು ಮರವನು ದಾಟಿ
ನಿಶ್ಯಬ್ದಕ್ಕೆ ಹೊರಳಿದ ರಸ್ತೆಯ ದಾಟಿ
ಪೊದೆ ಕುರುಚಲುಗಳ ಮೀರಿ
ಅಡಗಿರುವವರ ಮುಟ್ಟೀತೆ! ಒಂದೇ ಆಸೆ ನನಗೆ.
*****