ಬೀಳು-ಬೇರು

ವೆಂಕ ಬಂದು ಪದೇಪದೇ ಪೀಡಿಸುತ್ತಿದ್ದಾನೆ.  ಒಳ್ಳಯದನ್ನು ನಾನು ಕೊಡಿಸಿದರೆ ಸೈಯಲ್ಲ?  ಅಂತಿಂತಹುದನ್ನೆಲ್ಲ ನಿಮಗೆ ತೋರಿಸುತ್ತೇನೆಯೆ?  ಅದರ ತಾಯಿಗೆ ಹತ್ತನೆಯ ಕರುವಾದರೂ ಇನ್ನೂ ಎರಡು ಸೇರು ಹಾಲು ಕೊಡುತ್ತಿದೆ.  ಅದರದೇ ಕರು ಇದು.  ಮೈಕೈ ತುಂಬಿಕೊಂಡು ಹೇಗಿದೆ ಅಂತೀರಿ!  ಎನ್ನುತ್ತಾನೆ.  ನೋಡಿ ಬರುವ ಅಂತ ಅನಿಸುತ್ತದೆ.  ದುಡ್ಡಿನ ವಿಷಯ ಮುಖ್ಯವಲ್ಲ.  ಹಾಗೆ ಸಾವಿರ ಎರಡು ಸಾವಿರವಾದರೆ ಅಡ್ಡಿಲ್ಲ.  ಮನೆಗೆ ಬೇಕು ಎಂದ ಮೇಲೆ ತರುವುದೇ.  ಆದರೆ ಈ ವರ್ಷ ಬಹುಶಃ ಎಮ್ಮೆಕೊಳ್ಳುವ ಯೋಗವೇ ಇಲ್ಲವೇನೋ.  ಐದಾರು ನೋಡಿದರೂ ಯಾವುದೂ ಮನಸ್ಸಿಗೆ ಬರುತ್ತಿಲ್ಲ.
ಮನೆಯಲ್ಲಿ ಈಗಿರುವ ಎಮ್ಮೆ ಬತ್ತಗಂದಿ.  ಮೇಲುವಾಸಿ ದುಡ್ಡು ಕೊಟ್ಟು ಅದಕ್ಕೆ ಅದಲು ಬದಲು ಮಾಡಿಕೊಳ್ಳವ ಯೋಚನೆಯೂ ಉಂಟು.  ಯಾವುದಕ್ಕೂ ಸರಿಯಾದದ್ದು ಸಿಗಬೇಕಲ್ಲ.  ಒಂದು ಹಾಯುತ್ತದೆ.  ಕಾಲುಕಟ್ಟಿ ಕರೆಯಬೇಕು.  ಇನ್ನೊಂದು ಬಿಳಿ ಎಮ್ಮೆ.  ಇದು ನಮ್ಮ ಕೊಟ್ಟಿಗೆಗೆ ಆಗುವುದಿಲ್ಲ.  ಹಾಯ್ಗುಳಿ ದೈವ ಕಣ್ಣು ಹಾಕುತ್ತದೆ ಎನ್ನುತ್ತಾಳೆ ಇವಳು.  ಇನ್ನೊಂದು ಒಳ್ಳೇ ಎತ್ತರವಾಗಿ ಚೆನ್ನಾಗಿತ್ತು.  ಕೆಚ್ಚಲೂ ದೊಡ್ಡಕಿತ್ತು.  ಹಾಲು ಕೊಟ್ಟೀತು ಎಂತ ಅನಿಸಿತ್ತು.  ಆದರೆ ಇವಳು ಯಾಕೋ ಮನಸ್ಸು ಮಾಡಲಿಲ್ಲ.  ಬೇಡವೆ ಬೇಡ ಎಂದಳು.  ಅದರ ಕಾಲಡಿ ಕೂತು ಹಾಲು ಕರೆಯುವಾಗ ಅದು ಕೊಂಬಿನ ಮೂತಿಯಿಂದಲೇ ನನ್ನನ್ನ ಎತ್ತಿ ಹಾರಿಸಿಬಿಟ್ಟೀತು.  ಒಂದೇ ಸಲ ಜೀವ ಹೋಯಿತೆಂದರೆ ಅಡ್ಡಿಲ್ಲ.  ಬದಲು ಕೈಕಾಲು ಮುರಿದುಕೊಂಡು ಮೂಲೆ ಸೇರಿದರೆ ಕಡೆಗೆ ಕಾಲು ಮುರಿದ ಕೋಳಿ ಒರಳಕ್ಕಿ ಮಾರಿ ಎಂಬ ಗಾದೆಯಂತಾದೀತು.  ಈಗ ಎಲ್ಲ ಸರಿ ಇದ್ದೇ ಉಂಡೆಯಾ ತಿಂದೆಯಾ ಎನ್ನುವವರು ಗತಿಯಿಲ್ಲ ಎಂತ ಮುಖ ಬೀಗಿಸಿಕೊಂಡು ಅವಳು ನುಡಿದಾಗ ನಮ್ಮ ತಮ್ಮಣ್ಣನ ಹೆಂಡತಿ ಮುಖ ಕೆಳಗೆ ಹಾಕಿಕೊಂಡು ಸುಮ್ಮನೆ ಹೋದದ್ದು ಕಂಡು ನನಗೇ ಮನಸ್ಸು ಚುರುಗುಟ್ಟಿತು.  ‘ಬಿದ್ದರೆ ಕಷ್ಟ ಎನ್ನು, ಯಾರು ನೋಡಿಕೊಳ್ಳುತ್ತಾರೆ ಎಂಬ ಮಾತು ಯಾಕೆ?  ಅದೆಲ್ಲ ಮುರಿದುಕೊಂಡಾದ ಮೇಲಿನ ಮಾತಲ್ಲ?’-ಎಂದು ಅಲ್ಲಿ ನಿಲ್ಲದೆ ಸೀದ ಚಾವಡಿಗೆ ಬಂದಿದ್ದೆ.  ಮನಸ್ಸಿನ ತಳದಲ್ಲಿ ಬಹುಶಃ ಅದರ ಆಕಾರ ದಂಗುಪಡಿಸಿರಬೇಕು.  ಅದನ್ನು ಬಿಟ್ಟೆ.  ಗಬ್ಬದ ಒಂದು ಎಮ್ಮೆಯನ್ನು ಕಂಡಿದ್ದೆವು.  ರಾಣಿಯಂತಿತ್ತು.  ಕೊಟ್ಟಿಗೆ ತುಂಬುವಂತಿತ್ತು.  ಆತ ಕಂಡಾಪಟ್ಟೆ ದರ ಹೇಳಿದ, ಮೂರೂವರೆ ಸಾವಿರವೆಂದ.  ಅರ್ಥವಿಲ್ಲ ಎನಿಸಿತು.  ಇವಳು ಹೇಳಿದ್ದೂ ಸರಿಯೇ.  ‘ಚೊಚ್ಚಲ ಗಬ್ಬದ್ದು.  ಕರು ಹಾಕಿದ ಮೇಲೆಯೇ ಕೊಳ್ಳುವುದು ಸಮ’ ಎಂತ.  ಅದನ್ನು ಬಿಟ್ಟಾಯಿತು.
ವೆಂಕ ಈಗ ನಿಂತಲ್ಲಿ ಕೂತಲ್ಲಿ ಪೀಡಿಸುತ್ತಿದ್ದಾನೆ.  ಯಾವುದೋ ಸಾಬನ ಮನೆಯಲ್ಲಿ ಏ ಒನ್ ಎಮ್ಮೆ ಇದೆಯಂತೆ.  ‘ಅದನ್ನ ಈ ಬ್ರಾಹ್ಮಣನ ಮನೆಗೆ ಕಟ್ಟ ಬೇಕಂತ ನಿನ್ನ ಬಯಕೆಯ?’ ಎಂದಾಗ ಕರಿ ಮುಖದ ತುಂಬ ಬಿಳಿ ಹಲ್ಲುಗಳನ್ನು ಝಳಪಿಸಿದ.  ‘ಹೋಗು ಮಾರಾಯ, ಈಗ ಬೇಡ ನನಗೆ.  ಸಧ್ಯ ಬೇಕಾದಷ್ಟು ಖರ್ಚು ಇದೆ.  ನಮ್ಮ ಇಂದಿಗೆ ಈ ವರ್ಷ ಮದುವೆ ಮಾಡಬೇಕು ಎಂದಾಗ ನನ್ನೊಂದಿಗೆ ತಾನೂ ದನಿಗೂಡಿಸಿ ‘ಇಲ್ಲವೆ ಮತ್ತೆ!  ಇಂದಮ್ಮ ದೊಡ್ಡವರಾಗಿಬಿಟ್ಟರು.  ನೋಡು ನೋಡುತ್ತಿದ್ದಂತೆ ಹ್ಹ?  ಎಲ್ಲಿಯಾದರೂ ಗಂಡು ಬಂದಿದೆಯಾ?’ ಎಂತ ಕೇಳಿದ.
ಹನುಮಂತನಂತೆ ಕುಳಿತು ಕೇಳಿದ ಅವನ ಪ್ರಶ್ನೆಗೆ ರಾಮನಂತೆ ಶಾಂತ ಚಿತ್ತದಿಂದ ಉತ್ತರಿಸುವ ಅಂತ ಅನಿಸುತ್ತದೆ.  ಒಂದು ರೀತಿಯ ಆತ್ಮೀಯತೆ ಬರುತ್ತದೆ.  ಇವಳು ‘ನಿಮಗೆ ದೊಡ್ಡ ಮನುಷ್ಯರ ಬಳಿ ಮಾತುಬೇಡ.  ಎಸರಿಟ್ಟು ಅಕ್ಕಿಗೆ ಅಂಗಡಿಗೆ ಓಡುವಂತಹವರ ಹತ್ತಿರ ಗಂಟೆಗಟ್ಟಲೆ ಮಾತನಾಡುತ್ತ ಕುಳಿತುಬಿಡುತ್ತೀರಿ.  ಹೀಗೆ ಮಾಡಿದರೆ ಹೆತ್ತ ನಾಲ್ಕು ಮಕ್ಕಳನ್ನು ದಡ ಮುಟ್ಟಿಸುವುದು ಉಂಟ?’-ಎಂದದ್ದು ನೆನಪಾಗಿ ‘ಹೌದು, ನನಗೆ ಇಂತವರೊಂದಿಗೇ ಮಾತು.  ನನಗೆ ಹನುಮಂತನಂತಹವರೇ ಬೇಕು.  ನನ್ನನ್ನು ಹನುಮಂತನನ್ನಾಗಿ ಮಾಡುವವರು ಬೇಡ’ ಎಂತ ಉತತರವನ್ನ ಒರಟಾಗಿ ನನ್ನೊಳಗೇ ಎಸೆದುಕೊಂಡು ಮೀಸೆಯ ಮೇಲೆ ಕೈಯಾಡಿಸುತ್ತ ಹೇಳಿದೆ.  ‘ಹೌದು, ದೇವರು ಕಣ್ಣು ತೆರೆದರೆ ಆಗುತ್ತದೆ.’
‘ಯಾರು? ಯಾರು?’-ಕೆಸುವಿನ ಸೊಪ್ಪು ತಿಂದ ತುರಿಕೆ ನಾಲಗೆಯವ ಈ ವೆಂಕ, ಸರಸರ ಕೇಳಿದ.  ನೂರು ಮನೆಗೆ ಈ ಸುದ್ದಿ ಹಂಚುವ ಅಸಾಧ್ಯ ತವಕ ಅವನದು.  ಹೇಳಲೆ ಬೇಡವೆ ಅನಿಸಿದರೂ ಹೇಳಿದೆ.  ‘ಆಗಲಪ್ಪ ಒಳ್ಳೆಯದಾಗಲಿ’-ಎಂದ.  ‘ಒಳ್ಳೆಯ ಸಮಯದಲ್ಲಿ ಒಂದು ಎಮ್ಮೆಯನ್ನು ಮನೆಗೆ ತಂದುಕೊಳ್ಳಿ’ ಎಂದು ಮತ್ತೆ ಅದೇ ಬುಡಕ್ಕೆ ಬಂದ.  ‘ಹೂಂ, ಹೋಗು, ನೋಡೋಣ’ ಎಂದರೆ ‘ಇಲ್ಲ ನಾಳೆಯೇ ಬರಬೇಕು.  ಮಾಲು ಕೊನೆಗೆ ಬೇರೆ ಯಾರಿಗಾದರೂ ಆದೀತು’ ಎಂದ.  ‘ನಾಳೆ ಎಂದರೆ ಎಷ್ಟು ಹೊತ್ತಿಗೆ?’ ‘ಬೆಳಿಗ್ಗೆ ಮುಂಚೆ, ಹಾಲು ಕರೆಯುವ ಮೊದಲೇ.  ನಮ್ಮೆದುರೇ ಹಾಲು ಕರೆದು ತೋರಿಸಲಿ ಅವ’ ಎಂದ.
‘ಇವಳೇ’-ಕೂಗಿದೆ.
ಬಾಗಿಲ ಬಳಿಯಲ್ಲಿ ನಿಂತು ‘ಯಾಕೆ ಅಷ್ಟು ಅವಸರ ಮಾಡುವುದು?  ಸರಿಯಾಗಿ ವಿಚಾರಿಸಿ ಆಮೇಲೆ ಹೋದರಾಗದೆ?’-ಎಂದಳು.
‘ಏನಮ್ಮ, ನೀವು ಹೇಳುವುದು?  ನನ್ನ ಮೇಲೆ ನಂಬಿಕೆ ಇಲ್ಲವ?  ಅಂಥಾ ಪೊಟ್ಟು ಮಾಲನ್ನ ನಾನು ನಿಮಗೆ ಹೇಳುತ್ತೇನ?  ಎಮ್ಮೆ ಹೇಗಿದೆ ಅಂತೀರಿ?  ಹರಾ ಬೆನ್ನು, ಸುರುಟಿ ಕೋಡು, ಸುರುಟಿ ಎಮ್ಮೆ ಮಸ್ತು ಹಾಲು ಕೊಡುತ್ತದೆ, ಗೊತ್ತಿದೆಯಾ?  ಗಿಡ್ಡ ಕಾಲು, ಕಂಡರೆ ಹೊಟ್ಟೆ ತುಂಬುತ್ತದೆ.’
‘ಇರಲಿ, ನಾಳೆ ಬೆಳಿಗ್ಗೆ ಬರುತ್ತೇನೆ.  ಸರಿಕಂಡರೆ ಕೊಳ್ಳುವ ಅದಕ್ಕೇನು?’-ಎಂದೆ.  ವೆಂಕ ಹೋದ.
ಒಳಗಿನಿಂದ ‘ತಮಗೆ ಮನಸ್ಸು ಬಂದರೆ ಸರಿ, ಎಂತದನ್ನಾದರೂ ಕೊಂಡೇ ಬಿಡುವುದು, ಅದನ್ನೇ ಈಗ ನಾನು ಹೇಳಿದರೆ ಖಂಡಿತಾ ಒಪ್ಪುತ್ತಿರಲಿಲ್ಲ.  ಇಷ್ಟು ವರ್ಷವಾದರೂ ತನ್ನ ಮೂಗಿನ ಸರ್ತಕ್ಕೇ ಎಲ್ಲ ನಡೆಯಬೇಕೆಂದರೆ!  ದುಡ್ಡೇನು ಹುಣಸೇ ಬೀಜವ?  ನೋಡಲು ಹೋಗುವುದು, ದಾಕ್ಷಿಣ್ಯಕ್ಕೆ ಬೀಳುವುದು.  ಆ ವೆಂಕ ನಫೆ ಇಲ್ಲದೆ ಇಲ್ಲಿ ಬಳಿಯುತ್ತಾನ?’-ಎಂತ ಗಟ್ಟಿಯಾಗಿ ನನಗೆ ಕೇಳುವಂತೆ ಇವಳು ಕೂಗುತ್ತಲೇ ಇದ್ದಳು.  ಈಗ ಉತ್ತರ ಕೊಡಲು ಹೋದರೆ ಹಂಚು ಹೊಟ್ಟಿ ಹಾರೀತು ಎಂತ ಸುಮ್ಮನಾದೆ.
ರಾತ್ರಿ ಊಟಕ್ಕೆ ಬಡಿಸುವಾಗ ಊಟದ ತಟ್ಟೆಗೋ ಎಂಬಂತೆ ಅವಳು ಹೇಳುತ್ತಲೇ ಇದ್ದಳು.  “ಇನ್ನು ಖರ್ಚಿಲ್ಲವ?  ದೇವರು ಮನಸ್ಸು ಮಾಡಿದರೆ, ಬಂದವ ಒಪ್ಪಿದರೆ, ಇಂದಿಗೆ ಮದುವೆ ಮಾಡಬೇಡವ?  ಇನ್ನೂ ಎಷ್ಟು ವರ್ಷ ಅಂತ ಮನೆಯಲ್ಲಿ ಕೂಡಿಸಿಕೊಳ್ಳುವುದು?  ಚೌಕಾಸಿ ಮಾಡಿಮಾಡಿ ಮೂರು ನಾಲ್ಕು ಗಂಡುಗಳನ್ನು ಕಳೆದಾಯಿತಲ್ಲ.  ಈ ಸಲ ಹೆಚ್ಚೊ ಕಡಮೆಯೋ ಒಪ್ಪಿಯೇ ಬಿಡುವುದು.  ಇನ್ನೂ ಇನ್ನೂ ಹುಡುಗಾಟಮಾಡಿದರೆ ಕುತ್ತಿಗೆಗೆ ಬಂದೀತು.”
ಯಾರೂ ಮಾತಾಡಲಿಲ್ಲ.  ಇಂದಿಯ ಕಣ್ಣು ಮಾತ್ರ ನೀರು ತುಂಬಿಕೊಂಡ ಹಾಗೆ ಕಂಡಿತು.  ‘ಸ್ವಲ್ಪ ಸುಮ್ಮನಾಗುತ್ತೀಯ?-ಎಂದೆ.  ಯಾಕೆ ಸುಮ್ಮನಾಗುವುದು?  ಜೀವಮಾನವಿಡೀ  ಸುಮ್ಮನಾಗಿ ಆಗಿಯೇ ನನಗೆ ಈಗ ಬೆಲೆ ಇಲ್ಲದಂತಿರುವುದು’-ಎಂದಳು.  ಅವಳ ಜೊತೆಗೇ ಬಡಿಸುತ್ತಿದ್ದ ತಮ್ಮಣ್ಣನ ಹೆಂಡತಿ ಯಾವಾಗಿನಂತೆಯೇ ಮೌನವಾಗಿದ್ದರೂ ಆ ಮೌನ ಈಗ ತುಸು ಒದ್ದೆಯಾದಂತೆ ಕಾಣಿಸಿತು.
‘ಏನು ಮಗ ಇಂದಿ, ಅಂತೂ ನಿನ್ನನ್ನು ಕಳಿಸಿಯೇ ಬಿಡುವುದರಲ್ಲಿ ಇದ್ದಾಳೆ ಅಮ್ಮ’- ಎಂತ ದೊಡ್ಡದಾಗಿ ನಕ್ಕೆ.  ಬಲವಂತದಿಂದ ಎಂಬಂತೆ ನಕ್ಕಳು ಇಂದಿ.  ತಮ್ಮಣ್ಣ ಯಾವ ಪರಿವೆಯೂ ಇಲ್ಲದವರಂತೆ ಉಣ್ಣುತ್ತಿದ್ದ.  ತಲೆಯ ಮೇಲೆ ಆಕಾಶಬಿದ್ದರೂ ತಲೆ ಕೆಡಿಸಿಕೊಳ್ಳದವ.  ‘ಏನಪ್ಪ ನೀನು ಏನೆನ್ನುತ್ತಿ?  ಎಮ್ಮೆ ತರಲೆ? ಬೇಡವೆ?-ಎಂದೆ.  ‘ನಿನ್ನಿಷ್ಟ’-ಅಂತ ಬೇಕಾದಷ್ಟೇ ತುಟಿಯರಳಿಸಿದ.
ಎಲ್ಲರೂ ಯಂತ್ರಗಳಂತೆ ಕಂಡರು ನನಗೆ.  ಇವಳೊಂದು ಕೂಗುವ ಯಂತ್ರದಂತೆ.  ಇವರೆಲ್ಲ ಒಳಗೆ ಆಗುವ ಗದ್ದಲವನ್ನು ಹೊರಗೆಡವದೆ ಒತ್ತಿಡುವ ಯಂತ್ರಗಳಂತೆ.  ಇವರಿಗೆ ಔಷಧಿ ಯಾವುದು?  ಇವರು ಸೀದ ಮಾತನಾಡುವುದನ್ನು ಸೀದ ನಡೆಯುವುದನ್ನು ಕಲಿಯುವುದು ಯಾವಾಗ?  ಇಂದಿಗೆ ಯಾಕೆ ಕಣೀರು ಗುಟ್ಟಿನಲ್ಲಿ?  ಅಪ್ಪ ನನಗೆ ಹೀಗೆ ಹೀಗೆ ಅನಿಸುತ್ತದೆ ಎಂತ ಹೇಳಬಾರದ?  ನನಗೆ ನೆನಪಿದ್ದ ಹಾಗೆ ಅವಳು ಬಾಯಿ ಸರಿಯಾಗಿ ಬಿಟ್ಟದ್ದು ಒಂದೇ ಸಲ.  ಹೋದ ಸಲದ ಹುಡುಗ ಬಂದಾಗ.  ಅವ ಹೋದಕೂಡಲೆ ಇಸ್ಸಿ ನಾನು ಇನ್ನು ಮೇಲೆ ಹಾಗೆ ಕೂಡುವುದಿಲ್ಲ, ನಾನೇನು ವಸ್ತುವಲ್ಲ, ಪ್ರಾಣಿಯಲ್ಲ-ಎಂತ ಜೀವ ಹೋದವರಂತೆ ಅತ್ತಿದ್ದಳು ಇಂದಿ.  ಮೌನವಾಗಿದ್ದವರ ಯೋಚನೆಯೆಲ್ಲ ಹೀಗೇ.  ಮಿಣ್ಣಗಿದ್ದವರ ಬಣ್ಣ ಬೇರೆ ಎಂತ ಸುಮ್ಮನೆ ಹೇಳುತ್ತಾರ?  ನೀನು ಹೀಗೆ ಮಾಡಿದರೆ ನಾನೇನು ಮಾಡಲ್ಲಮ.  ಮದುವೆ ಆಗಬೇಕಾದರೆ ಇದೆಲ್ಲ ಬೇಕೇಬೇಕು ಎಂದು ಅವಳ ಬಾಯಿ ಮುಚ್ಚಿಸಿದ್ದೆ.  ಅಂದು ಮುಚ್ಚಿದ ಬಾಯಿ ಮತ್ತೆ ತೆರೆದೇ ಇಲ್ಲ.  ಈಗಿನ ಮಕ್ಕಳು ಹೇಳಿದ ಒಂದು ಮಾತನ್ನೇ ಸೆಂಟಿಮೆಂಟಲ್ ಆಗಿ ಜಗಿದುಜಗಿದು ನುಂಗಿ ನೇತಾಡುವವರು!  ಮಾತಾಡುವುದೇ ಕಷ್ಟ.  ತಮ್ಮಣ್ಣನಾದರೂ ಒಂದು ದಿನ ‘ಅಪ್ಪ ಹಾಗಲ್ಲ ಹೀಗೆ.  ಹೀಗೆ ಮಾಡಿದರೆ ಹೇಗೆ?’ ಎಂತ ಕೇಳಿದವನಲ್ಲ.  ‘ಹೌದಪ್ಪ, ನಮ್ಮ ಮನೆಗೆ ಎಮ್ಮೆ ಬೇಕು’ ಎಂತ ಒಡೆದು ಹೇಳಿದರೆ ಏನೀಗ?  ನಾಳೆ ಎಮ್ಮೆ ಕಟ್ಟೆದ ಮೇಲೆ ಹಾಲು ಬೆಣ್ಣೆ ಎಲ್ಲರಿಗೂ ಬೇಕು.  ಎಮ್ಮೆ ಹೇಗಿದೆ ಎಂತ ನೋಡದೆ ಇದ್ದರೂ ಕೊಟ್ಟಿಗೆಯಿಂದ ಎಷ್ಟು ತಂಬಿಗೆ ಹಾಲು ಒಳಗೆ ಬಂದಿದೆ ಎಂಬುದು ಮಾತ್ರ ಬೇಕು.  ಅವಳು ತಮ್ಮಣ್ಣನ ಹೆಂಡತಿ ಒಂದು ಸಲವಾದರೂ ಅತ್ತೆಗೆ ಎದುರು ನಿಂತು ಕೂಗಿ ಹಾರಾಡಿ ಜಗಳ ಮಾಡಿದ್ದರೆ ಎಷ್ಟೋ ಹಾಯೆನಿಸುತ್ತಿತ್ತು.  ಅದೊಂದು ಮೂಕು ದೆವ್ವ ಎಂತ ಅಂದುಕೊಳ್ಳುತ್ತಿರುವಾಗಲೇ ನಾನೂ ಇವಳಿಗೆ ಚೆನ್ನಾಗಿ ಬೈದು ಹಗುರಾಗಬಾರದ ಎಂತ ಅನಿಸಿ ಹಾಗೆ ಎದುರಾದರೆ ಇವಳು ಇನ್ನಷ್ಟು ಜೋರಾದಾಳೆ?  ಅಥವ ಮುದುಡಿಕೊಂಡಾಳೆ?  ಎಂದು ತರ್ಕಿಸುವಾಗ, ಇಷ್ಟೆಲ್ಲ ಯಂತ್ರಗಳ ಮಧ್ಯೆ ತುಸುವಾದರೂ ಜೀವವಿರುವವಳು ಬಹುಶಃ ಇವಳೊಬ್ಬಳೇ ಅನಿಸಿ, ತಲೆ ಬಿಸಿಯಾಗಿ ಥತ್, ನನಗೆ ವರ್ಷ ಆದದ್ದು ದಂಡ ಅಂದುಕೊಂಡೆ.
ವೆಂಕ ಆರುಗಂಟೆಗೇ ಬಂದ.
‘ಬೇಗ ಹೊರಡಿ ಸ್ವಾಮಿ’-ಎಂದ.
‘ತಡಿ’ ಎಂತ ಒಳಗೆ ಬಂದು ‘ಹೊರಡು’-ಎಂದೆ.
‘ನಾನು ಬರುವುದಿಲ್ಲ’-ಎಂದಳು.
‘ಬರುವುದಿಲ್ಲವೆಂದರೆ ಆಗುವುದಿಲ್ಲ’-ಎಂದೆ.
‘ಆಗದೆ ಏನು?  ನೀವೋ ನಿಮ್ಮ ಎಮ್ಮೆಯೋ ನನಗೆ ಯಾವುದೂ ಬೇಡ’/
‘ನಿನಗೆ ಬೇಕೆಂತ ನಾನು ತರುತ್ತಿಲ್ಲ.  ನನಗೆ ಬೇಕು’.
‘ನೀವು ಹೋಗಿ’.
‘ನೀನು ಬರುತ್ತೀಯಾ ಇಲ್ಲವ?’-ಸೀರೆ ಸುತ್ತಿಕೊಂಡು ಬಂದಳು.
‘ತಮ್ಮಣ್ಣ ಬಾರಪ್ಪ’-ಎಂದೆ.
ಇವಳು ‘ಎಮ್ಮೆ ನೋಡಲು ಎಷ್ಟು ಜನ?’-ಎಂದಳು.
‘ಇರಲಿ.  ಆಮೇಲೆ ಹಾಗೆ ಹೀಗೆ ಎಂತ ನೀವು ಯಾರೂ ಹೇಳಬಾರದು’-ಎಂದೆ.  ಇಂದಿ ನಕ್ಕಳು.  ತಮ್ಮಣ್ಣನ ಹೆಂಡತಿಯೂ ತುಟಿ ಅಡಿಯಲ್ಲಿ ನಗೆ ಹಣಿಕಿಸಿದಳು.  ತಮ್ಮಣ್ಣ ಶರ್ಟು ಏರಿಸಿಕೊಂಡು ಬಂದ.  ‘ಹೋಗೋಣ ಜಲ್ದಿ’-ಎಂದ ವೆಂಕ.
ಎಮ್ಮೆಯವನ ಮನೆಯಲ್ಲಿ ಅದರ ಗುಣಗಾನವಾಯಿತು.  ಕೊಟ್ಟಿಗೆಗೇ ಕರೆದುಕೊಂಡು ಹೋಗಿ ಎಮ್ಮೆ ತೋರಿಸಿದ.  ಆಲಸಿಯಂತೆ ನಿಂತಿತ್ತು ಅದು.  ಎಮ್ಮೆ ಕರು ಬಡ್ಡು ಬಡ್ಡಾಗಿ ನಿಮತು ನಮ್ಮನ್ನ ನೋಡುತ್ತಿತ್ತು.
‘ಹೆಂಗರುವ?’ ಎಂದು ಕೇಳಿದೆ.
‘ಅಲ್ಲ, ಗುಡ್ಡ’-ಎಂದ.
ಹಾಲು ಕರೆದ, ವೆಂಕ ಹೇಳಿದಷ್ಟಿರಲಿಲ್ಲ.
“ನಾನು ಬಡವ ಸ್ವಾಮಿ.  ನಿಮ್ಮಂತಹವರ ಮನೆ ಸೇರಿ ಹೊಟ್ಟೆ ತುಂಬ ತಿಂದರೆ ಇದರ ಎರಡರಷ್ಟು ಹಾಲು ಕೊಟ್ಟೀತು”-ಎಂಬ ಸಾಬನ ಮಾತಿಗೆ ‘ಹಾಗೆ ಕೊಡದಿದ್ದರೆ ನನ್ನನ್ನ ಚಿಟಿಕೆ ಹಾಕಿ ಕರೆಯಿರಿ’-ಎಂದ ವೆಂಕ.
ಎಮ್ಮೆ ಗಿಡ್ಡವಾಗಿ ಗುಜ್ಜುಗುಜ್ಜಾಗಿತ್ತು.
‘ಗುದ್ದುತ್ತದ?’
“ಇಲ್ಲ.  ಎದುರು ಹೋಗಿ ನೋಡಿ.  ಸಾಧು ಎಂದರೆ ಸಾಧು.”
“ಅವ ಹೇಳಿದ ಎಂತ ನೀವು ಎದುರು ಹೋಗುವುದು ಬೇಡವಿನ್ನು” ಎಂತ ಮುಖದ ತುಂಬ ಸಿಡುಕು ಹರಿಸಿದಳು ಇವಳು.
“ಹೋದಲ್ಲಿವರೆಗೂ ನಿನ್ನದು ಸಿಟ್ಟುಸೆಡ”-ಎಂದೆ.  ಆದರೆ ನಾನು ಎದುರು ಹೋಗಲಿಲ್ಲ.
‘ಎಷ್ಟನೆಯ ಕರು?’-ವೆಂಕನ ಬಾಯಲ್ಲಿ ನೂರು ಸಲ ಕೇಳಿಕೋಂಡಿದ್ದರೂ ಇವಳ ಪ್ರಶ್ನೆ.
‘ಎರಡನೆಯದು’-ಎಂದ ಸಾಬ.
ವೆಂಕ ನಾನು ಹೇಳಲಿಲ್ಲವ ಮತ್ತೆ ಎಂಬಂತೆ ನೋಡುತ್ತಿದ್ದ.
‘ಹಲ್ಲು ನೋಡಿದರೆ ತಿಳಿಯುತ್ತದೆ’-ಎಂದಳು ಇವಳು.
‘ನೋಡಲ್ಲ’-ಎಂದೆ.  ಬಗ್ಗಿದಳು.  ವೆಂಕ ಅವರ ಬಾಯಿಗೆ ಕೈಹಾಕಿ ಕಿಸಿದು ತೋರಿಸಿದ.  ಏನು ಹೇಳದೆ ಇತ್ತ ಬಂದು-ಈ ತರಹೆ ಬಿಂಕ ಇವಳ ಬಳಿ ಕಲಿಯಬೆಕು.  ಎಮ್ಮೆಯ ಮೈನೋಡಿ ‘ಚರ್ಮವೇನೋ ತೆಳ್ಳಗಿದೆ’-ಎಂದಳು.
‘ಮತ್ತೆ!’-ಎಂದು ಲೊಚಗುಟ್ಟಿದ ವೆಂಕ.
‘ಹೋಗುವನ ಇನ್ನು?’-ಎಂತ ಕೇಳಿದೆ.
ಸಾಬನೊಡನೆ ‘ಮನೆಗೆ ಹೋಗಿ ಹೇಳುತ್ತೇನೆ, ಆಗದ?’-ಎಂದೆ.
‘ಅಡ್ಡಿಲ್ಲ ಅಡ್ಡಿಲ್ಲ.  ಎಮ್ಮೆ ಮಾತ್ರ ಬಿಟ್ಟರೆ ಸಿಕ್ಕಲಿಕ್ಕಿಲ್ಲ ಅಂತದ್ದು’ ಎಂದ.
ಬರುವಾಗ ಅವನ ಪಕ್ಕದ ಮನೆಯ ಕೊಟ್ಟಿಗೆ ಸಿಕ್ಕಿತು.  ಅದರೊಳಗೆ ಇಣಿಕಿ ಆಗ!  ಅ ಎಮ್ಮೆ ಬೇಕಾದರೆ ಕೊಳ್ಳಬಹುದು ತಮ್ಮಣ್ಣ.  ನೋಡು ಹೇಗಿದೆ’-ಎಂದಳು ಇವಳು.  ವೆಂಕ ಆ ಎಮ್ಮೆಯ ವೃತ್ತಾಂತವನ್ನು ಹೇಳಿ, ‘ಅದಿರಲಿ ಈಗ ನೋಡಿದ ಎಮ್ಮೆ ಹೇಗಿದೆ ಹೇಳಿ’-ಎಂದ.
“ವೆಂಕ ಎರಡು ದಿನ ಬಿಟ್ಟು ಬಾ.  ಯಾವುದಕ್ಕೂ ಆಲೋಚನೆ ಮಾಡಿ ಹೇಳುತ್ತೇನೆ”-ಎಂದೆ.  ಹೊರಟುಹೋದ.  ಎಮ್ಮೆ ನನಗೇನೋ ತೆಗೆದು ಹಾಕುವಂತಿಲ್ಲ ಎನಿಸಿತು.  ಹದವಾಗಿದೆ,  ಹೊಟ್ಟೆ ತುಂಬಿಸಿದರೆ ಹಾಲೂ ಕೊಟ್ಟೀತು ಅಂದುಕೊಳ್ಳುವಾಗ “ಅದಕ್ಕೆ ಹೊರ ಕೆಚ್ಚಲಿಲ್ಲ, ಒಳ ಕೆಚ್ಚಲು”-ಎಂದ ಸಾಬನ ಮಾತು ನೆನಸಿ ನಗೆ ಬಂತು.
ಸಂಜೆ ಸುಬ್ಭಣ್ಣಯ್ಯ ಬಂದಿದ್ದರು.  “ನಾಳೆ ಬರುತ್ತಾರಂತೆ ನೋಡಲು” ಎಂಬ ಒಲಗೆ ಹೊತ್ತುಕೊಂಡು.
“ನಾಲ್ಕಾರು ದಿನ ತಡೆದು ಬರುತ್ತಾರೆ ಎಂದಿರಿ ಮೊನ್ನೆ”
“ಅದಂದ್ದು ಹೌದು.  ಆದರೆ ಇತ್ತಕಡೆಯ ಮೂರು ನಾಲ್ಕು ಹುಡುಗಿಯರನ್ನ ಒಂದು ಸಲಕ್ಕೆ ನೋಡಿಕೊಂಡು ಹೋಗು ಅಂದಾಜು ಅವರದು.  ಇವತ್ತು ಬೆಳಿಗ್ಗೆಯೇ ಮನೆಯಿಂದ ಹೊರಟಿದ್ದರು.  ಬಹುಶಃ ಇವತ್ತು ಎರಡು ಹುಡುಗಿಯರನ್ನು ಕಂಡು ಆಗಿರಬಹುದು.  ನಾಳೆ ಬೆಳಿಗ್ಗೆ ನಿಮ್ಮಲ್ಲಿಗೆ ಬರುತ್ತಾರಂತೆ.  ಕನ್ಯಾನ್ವೇಷಣೆಯೂ ಕಷ್ಟ ನೋಡಿ.  ಎಲ್ಲ ಸರಿಯಾದದ್ದು ಸಿಗಬೇಕಲ್ಲ”-ಎಂದರು.  ಹೌದು ಹೌದಪ್ಪ ಎಂದೆ.
ಸುಬ್ಬಣ್ಣಯ್ಯ ಹೊರಟು ಹೋದ ಮೇಲೆ ಇಂದಿ ಮೂಲೆಯಲ್ಲಿ ಕುಳಿತು ಕಣ್ಣೊರೆಸಿಕೊಳ್ಳುವುದು ಕಾಣಿಸಿ
“ಯಾಕೆ ಮಗ, ಬೇಸರವ?  ಬಿಟ್ಟು ಹೋಗಬೇಕಂತಲ? ಅಥವಾ ಈ ಸಂಬಂಧ ನಿನಗೆ ಇಷ್ಟವಿಲ್ಲವ?  ಏನು ಎಂತ ಬಾಯಿಬಿಡದಿದ್ದರೆ ನನಗೆ ಹೇಗೆ ತಿಳಿಯಬೇಕು?”-ಎಂದೆ.  ಮಾತನಾಡಲಿಲ್ಲ.  ಕಣ್ಣೆತ್ತಿಯೂ ನೋಡಲಿಲ್ಲ.  ಇನ್ನಷ್ಟು ಬಿಕ್ಕಿದಳು….  ವಿಚಿತ್ರ ಎಲ್ಲೂ ಇಲ್ಲದ್ದು ಎನ್ನುತ್ತ ಬಂದಳು ಇವಳು.  ನನಗೆ ನಮ್ಮ ನಮ್ಮ ಸಂಬಂಧವೇ ವಿಚಿತ್ರ ಎನಿಸಿತು.  ಯಾಕೆ ವಿಚಿತ್ರ ಎಂತ ಹೊಳೆಯಲಿಲ್ಲ.
“ಅದಕ್ಕೆ ಮತ್ತೇನಿಲ್ಲ.  ನೋಡಲಿಕ್ಕೆ ಬರುತ್ತಾರೆ ಅಂತ ಅಳು.  ಅಲ್ಲ, ಇವಳನ್ನು ಮತ್ತೆ ಸಿನಿಮಾ ಥಿಯೇಟರಿನಲ್ಲಿ ತೋರಿಸಬೇಕ?  ಇದೊಳ್ಳೆ ಕತೆಯಾಯಿತು.  ನೋಡದೆ ಇವಳನ್ನು ಮದುವೆ ಆಗಲು ಅವನಿಗೆ ಪಳ್ಳ?  ಇದಕ್ಕೆಲ್ಲ ಬೇಜಾರು ಮಾಡಿಕೊಂಡರೆ ಆಯಿತು.  ಮದುವೆಗೆ ಮುಂಚೆ ನೂರು ಗಂಡಂದಿರು ಎಂತ ಹೇಳುತ್ತಾರಲ್ಲ.  ಸುಮ್ಮನೆ ಹೇಳುತ್ತಾರಾ?  ಇದೇ ಒಂದು ದೊಡ್ಡ ವಿಷಯವಾಯಿತು ಇವಳಿಗೆ.”
“ನಿನ್ನನ್ನ ಯಾರು ಕರೆಸಿದರು ಇಲ್ಲಿಗೆ ಈಗ?”-ಎನ್ನುತ್ತಾ ನಾನು ಹೊರ ಬಂದೆ.
ಬೆಳಗಿನ ಹತ್ತು ಗಂಟೆಯ ಹೊತ್ತಿಗೆ ಹುಡುಗನ ತಂದೆ ತಾಯಿ, ಸೋದರ ಮಾವ, ಅತ್ತೆ, ಸೋದರತ್ತೆ ಹುಡುಗನ ಗೆಳೆಯ-ಹುಡುಗ ಬಂದರು.
ಇಂದಿ ಎದುರು ಬಂದು ಕುಳಿತಳು.  ಅವರೆಲ್ಲ ಕಾಫಿ ಹೀರಿ ತಿಂಡಿ ತಿನ್ನುವಾಗ ಹುಡುಗನ ತಾಯಿ ಇಂದಿಯನ್ನು ನೋಡುತ್ತ ಇವಳನ್ನು ಕೇಳುತ್ತಿದ್ದಳು.
ಮನೆವಾರ್ತೆ ಬರುತ್ತದ?  ಬಿ.ಎ. ಈ ವರ್ಷ ಮುಗಿಯಿತಂತೆ.  ಅದೇನು ಅಷ್ಟು ತಡ?  ಹಾಡಲು ಬರುತ್ತದ?…ಇಂದಿಯ ಎದುರು ಇವಳು ಉತ್ತರವಿತ್ತಳು.
“ಅವಳನ್ನು ಶಾಲೆಗೆ ಸೇರಿಸಿದ್ದೇ ತಡ.  ಮತ್ತೆ ಎಸ್ಸೆಸೆಲ್ಸಿ ಪಬ್ಲಿಕ್ ಪರೀಕ್ಷೆ ಸಮಯದಲ್ಲಿಯೇ ಟೈಫಾಯಿಡ್ ಬಂದು ಪರೀಕ್ಷೆಗೆ ಹೋಗದೆ ಒಂದು ವರ್ಷ ಹಾಳಾಯಿತು.  ಹೀಗೆ ಎರಡು ವರ್ಷ ತಡವಾಯಿತು ಮಾರಾಯರೆ.  ಇಲ್ಲವಾದರೆ ಎಂದೋ ಮುಗಿಯುತ್ತಿತ್ತು.  ಮನೆವಾರ್ತೆ ಕಲಿಸದೆ ಬಿಡುತ್ತೇನಾ  ನಾನು?  ನನಗೆ ಹೆಣ್ಣು ಮಕ್ಕಳು ಕೂತುಕೊಳ್ಳುವುದೆಂದರೆ ಆಗುವುದಿಲ್ಲ.  ಒಮ್ಮೊಮ್ಮೆ ನಾನೂ ತಮ್ಮಣ್ಣನ ಹೆಂಡತಿಯೂ ಇಬ್ಬರೂ ಹೊರಗಾದಾಗ ಇವಳು ನಮಗಿಂತಲೂ ಚೆಂದವಾಗಿ ಮನೆಗೆಲಸ ಮಾಡಿಟ್ಟು ಕಾಲೇಜಿಗೆ ಹೋಗುತ್ತಿದ್ದಳು.  ಗೊತ್ತುಂಟ?  ನೀವು ನಂಬಲಿಕ್ಕಿಲ್ಲ.”
ಹಾಡಿನ ಸುದ್ದಿಗೇ ಹೋಗದೆ ಮರೆಸಿ ಮಾತನಾಡಿದ ಇವಳನ್ನು ನಾನು ರೆಪ್ಪೆ ಹೊಡೆಯದೆ ನೋಡುತ್ತಲೇ ಇದ್ದೆ.  ಇಂದಿಯನ್ನು ನೋಡಿದೆ.  ಮೂಗಿನ ತುದಿ ಕೆಂಪು ಮಾಡಿಕೊಂಡು ಕುಳಿತಿತ್ತು.  ಎದ್ದು ಒಳಬರುವವರೆಗೂ ಕೂತಲ್ಲಿಂದ ಕದಲಲಿಲ್ಲ ಹುಡುಗಿ.
ನಿಮಿಷ ಒಳಗೆ ಬಂದ ಸುಬ್ಬಣ್ಣಯ್ಯ ಟವಲಿನಿಮದ ಗಾಳಿಬೀಸಿಕೊಳ್ಳುತ್ತ “ಅವ ಒಪ್ಪಿದರೆ ಸಾಕು ಇಂದಿಗೆ ಲಾಟರಿ ಟಿಕೆಟು ಎದ್ದಂತೆ” ಎಂದರು.  “ಅಷ್ಟಾದರೆ ಸೈ”-ಎಂದಳು ಇವಳು.  “ಸುಬ್ಬಣ್ಣಯ್ಯ, ಆನೆಗುಡ್ಡೆ ಮಹಾಗಣಪತಿಗೆ ಮೂಡುಗಣಪತಿ ಮಾಡಿಸುತ್ತೇನೆ ಈ ಮದುವೆ ಆದರೆ”-ಎಂದೆ ನಾನು ಕಣ್ಣುಮುಚ್ಚಿ.
ಅವರನ್ನು ಕಳಿಸಿ ಮತ್ತೆ ಬಂದ ಸುಬ್ಬಣ್ಣಯ್ಯ ತಗ್ಗಿದ ದನಿಯಲ್ಲಿ ಅಂದರು “ಋಣಾನುಬಂಧ ಇದ್ದಂತೆ ಕಾಣುವುದಿಲ್ಲ ಇವರೆ,  ಹುಡುಗನ ತಾಯಿಗೆ ಹುಡುಗಿ ಅಷ್ಟು ಹಿಡಿಸಿದ ಹಾಗಿಲ್ಲ.  ಅವನಿಗೆ ಹೇಗೋ.  ನಾನು ಈಗಲೇ ಹೇಗೆ ಹೇಳುವುದು.  ಮಾತಿನ ಮಟ್ಟು ನೋಡಿದರೆ ಅವರೆಲ್ಲ ಆ ಹೆಂಗಸು ಹೇಳಿದಂತೆಯೇ ಎಂತ ಕಾಣುತ್ತದೆ.  ಹುಡುಗ ತಾಯಿ ಮಾತನಾಡುವಾಗ ಕಂ ಕಿಂ ಅನ್ನಲಿಲ್ಲ.  ಈಗನ ಮಕ್ಕಳು ಬೇಕಾದಲ್ಲಿ ಮಾತೇ ಆಡುವುದಿಲ್ಲ.  ಬೇಡದಲ್ಲಿ ಬೇಕು ಸಾಕೆಂಬಷ್ಟು ಮಾತು.
“ಇಷ್ಟಕ್ಕೂ ಆ ಹೆಂಗಸಿಗೆ ಇಂದಿಯಲ್ಲಿ ಎಂತ ಊನ ಕಂಡಿತಂತೆ?”
“ಅದೆಲ್ಲ ಹೇಳಿ ಪ್ರಯೋಜನ ಉಂಟ ಅಮ್ಮ.  ಅವರವರ ಖಾಯಸ್ಸು.  ಉಳಿದ ಇಬ್ಬರನ್ನು ಕಂಡ ಮೇಲೆ ಇವಳೇ ಆದೀತು ಎಂತ ಬಂದರೂ ಬಂದರೆ.  ಪೂರಾ ಆಸೆಬಿಡುವುದು ಬೇಡ.  ಈ ವಸ್ತು ಅವರದಾದರೆ ಬೇಡವೆಂದರೂ ಅವರನ್ನು ಸೇರದಿದ್ದೀತೆ?”
ಅವರು ತರ್ಕ ವಿತರ್ಕ ಮಾಡುತ್ತಿದ್ದಂತೆ ನಾನೆದ್ದು ಒಳಗೆ ಬಂದೆ.
ಇಂದಿ ಮತ್ತೆ ಬಿಕ್ಕುತ್ತ ಮೂಲೆಯಲ್ಲಿ ಕುಳಿತಿತ್ತು.  ಹತ್ತಿರ ಬಂದು ತಲೆ ನೇವರಿಸಿ “ಯಾಕೆ ಮಗ?  ಇಷ್ಟಕ್ಕೆಲ್ಲ ಅಳುವುದ?  ಅದರಲ್ಲೇನಾಯಿತು?  ಅವ ನಿನ್ನ ಗಂಡನಲ್ಲ.  ಆದ್ದರಿಂದ ಹೀಗೆ.  ನಿನ್ನ ಗಂಡನಾಗುವವ ಬಂದರೆ ಒಪ್ಪಿಯೇ ಒಪ್ಪುತ್ತಾನೆ”  ಎಂದೆ.  ಅವಳ ಅಳು ಹೆಚ್ಚಿತು.
“ನನ್ನನ್ನು ನೋಡೀಗ.  ನಿನ್ನ ಅಮ್ಮ ನಾನು ನೋಡಿದ ಇಪ್ಪತ್ತನೆಯ ಹುಡುಗಿ ಗೊತ್ತಿದೆಯ?  ಬೇಕಾದ ವಸ್ತುವನ್ನು ಹುಡುಕಿದರೆ ಮಾತ್ರ ಅಲ್ಲವೆ ಅದು ಸಿಗುವುದು?”-ಎಂದೆ.
ಈ ಮಾತಿಗೆ ಇಂದಿ ನನ್ನನ್ನು ಸುಟ್ಟುಬಿಡುವಂತೆ ದುರುಗುಟ್ಟಿ ನೋಡಿದ ಹಾಗಾಯಿತು.
*****
ಕೀಲಿಕರಣ ತಪ್ಪು ತಿದ್ದುಪಡಿ : ರಾಮಚಂದ್ರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ