ಹಳಕಟ್ಟಿಯವರು

ಯಾವುದೋ ಅಮೃತಗಳಿಗೆ, ನಿಮ್ಮ ದೃಷ್ಟಿಗೆ ಬಿತ್ತು
ಹೂತಿಟ್ಟ ಹೊನ್ನಗಣಿ! ತೋಡಿದಿರಿ ಹಗಲಿರುಳು
ಮೈಮರೆತು; ಹೊರದೆಗೆದು ಹೇರಿದಿರಿ ಬಂಡಿ ಬಂಡಿ
ಚಿನ್ನದ ಅದಿರು; ಹಿಂಗಿತು ಹಸಿವು ನೀರಡಿಕೆ.
ತಾಳೆಗರಿ ಗರಿಯೊಡೆದು ಮರಮರವೇರಿ ಕುಕಿಲಿ
ಬೆಳಕನೆಚ್ಚರಿಸಿದವು; ನಡುವೆ ಮೂಡಿತು ಶರಣ-
ರನುಭಾವ ಮಂಟಪದ ಮಾಣಿಕ್ಯದೀಪ್ತಿ, ನಡೆ-
ನುಡಿಯ ಜ್ಯೋತಿರ್‍ಲಿಂಗ! ‘ತನ್ನರಿವೆ ಗುರು’ ಎಂಬ
ವಚನ ಕೊಟ್ಟಿರಿ. ನಿಮಗೋ? ಶೂನ್ಯ-ಸಂಪಾದನೆ.
ರೂಮಾಲದ ಕಟ್ಟು ಬಿಚ್ಚಿಲ್ಲ. ತೆಗೆದಿಲ್ಲ ಇಟ್ಟ
ಕನ್ನಡಕ. ಉಡುಗಿಲ್ಲ ಉಟ್ಟ ಧೋತರ ಮಡಿಯು.
ಮೆಲುದನಿ-ಮಾತು ಭಕುತಿ ಬಳ್ಳಿಗೆ ಬಿಟ್ಟ ಕುಡಿಯು.
ಗೋಳ-ಗುಮ್ಮಟ ತಾನೆ ತಲೆ ಬಾಗಿಸಿತು ನಿಮಗೆ,
ಏಳು ಸಲ ಕರೆದರೂ ಎಚ್ಚರಾಗದು ನಮಗೆ.
*****